ನಿನ್ನಂಥ ಅಪ್ಪಾ ಇಲ್ಲಾ…..
ಅಪ್ಪ ಅಂದರೆ ನಂಬಿಕೆ, ಅಮ್ಮ ಅಂದರೆ ಸತ್ಯ ಎಂಬ ಹುರುಳಿರುವ ಆತ್ಮಸಾಕ್ಷಾತ್ಕಾರದಲ್ಲಿ ಬೆಳೆಯುತ್ತಿರುವ ನಮಗೆಲ್ಲಾ ಅಪ್ಪನೊಂದಿಗೆ ಹೇಳಿಕೊಳ್ಳಲಾಗದ ಅವಿನಾಭಾವ ಸಂಬಂಧ. ನಂಬಿಕೆಯ ಅಡಿಪಾಯದಲ್ಲಿ ಅಪ್ಪ ಜೀವನಪೂರ್ತಿ ಮಕ್ಕಳಿಗಾಗಿ ಅಹರ್ನಿಸಿ ದುಡಿದಿರುತ್ತಾನೆ. ಪಿಳಿಪಿಳಿ ಕಣ್ಣರಳಿಸಿ ಜಗತ್ತಿಗೆ ಆಗಮಿಸುವ ಪುಟಾಣಿಗೆ ಅಮ್ಮನೊಂದಿಗೆ ಆಗಾಗ್ಗೆ ಕಂಡು ಬರುವ ಪ್ರೀತಿ ತುಂಬಿದ ಮುಖದ ಮುಗ್ಧ ಜೀವಿಯೆಂದರೆ ಅದು ಅಪ್ಪ. ಆಗಲೇ ಮಗುವಿಗೆ ಒಮ್ಮೊಮ್ಮೆ ಕಾಣಸಿಗುವ ಅಪ್ಪನೆಂದರೆ ತಿಳಿಹೇಳಲಾಗದ ಭಾವನೆಗಳೊಂದಿಗೆ ಸೋಜಿಗವು ಮನಸನ್ನು ಆವರಿಸಿಕೊಳ್ಳುತ್ತದೆ. ಬೆಳೆಯುತ್ತಾ ಕೆತುಕಗೊಳ್ಳುವ ನಾವುಗಳು ಯಾವುದೋ ಒಂದು ಹಂತದಲ್ಲಿ ಅಪ್ಪನನ್ನು ಅತ್ಯಂತ ಆಪ್ತ ಗೆಳೆಯನನ್ನಾಗಿ ಮಾಡಿಕೊಂಡುಬಿಡುತ್ತೇವೆ. ಅಪ್ಪನೆಂಬ ಕಾಳಜಿಯ ಮೂಟೆ ನಮ್ಮನ್ನು ಬಾಲ್ಯದಿಂದ ಶುರುಹಚ್ಚಿ ದೊಡ್ಡವರಾದ ಮೇಲು ಬೆಚ್ಚಗಿರಿಸುತ್ತದೆ. ಇಂತಹ ಅಪ್ಪನಿಗೆ ತಿರುಗಿ ನಾವೇನು ಕಾಳಜಿ ತೋರಿಸಿದ್ದೇವೆ ಎಂಬುದೆ ಯಕ್ಷಪ್ರಶ್ನೆ! ಮಗುವಿನೊಂದಿಗೆ ನಾನು ಕಂಡ ಈಗಷ್ಟೆ ಜನಿಸಿದ ಅಪ್ಪ ಎಂಬ ಕುವೆಂಪುವಾಣಿ ಎಷ್ಟೊಂದು ಅರ್ಥಗರ್ಭಿತ. ಇದಕ್ಕೆ ಇರಬೇಕು. ಮಕ್ಕಳು ಬೆಳೆದು ದೊಡ್ಡವರಾದರು ನಾವು ಹಾಗೆ ಇರುವುದು.
ಕಷ್ಟಪಟ್ಟು ಹಳ್ಳಿಯಲ್ಲಿ ಗೇಯ್ದು ಪಟ್ಟಣದ ಹಾಸ್ಟೆಲ್‌ನಲ್ಲಿ ಉಳಿಸಿ ಮಗನನ್ನು ಓದಿಸುತ್ತಿರುವ ಅಪ್ಪ ಅಚಾನಕ್ಕಾಗಿ ಆತನನ್ನು ನೋಡಬೇಕೆಂಬ ಹಂಬಲದಿಂದ ಹಾಸ್ಟೆಲ್‌ಗೆ ಹೋದರೆ ಇವರ್ಯಾರೋ ನಮ್ಮ ಹಳ್ಳಿಯವರು ಎನ್ನುವ ಮಕ್ಕಳಿದ್ದಾರೆ, ನಮ್ಮ ಜನರೇಶನ್‌ಗೆ ಹೊಂದಿಕೊಳ್ಳುವುದಿಲ್ಲ, ಎಂಬುದಾಗಿ ಅಪ್ಪನನ್ನು ವೃದ್ಧಾಶ್ರಮದಲ್ಲಿ ಬಿಟ್ಟ ಮಕ್ಕಳಿದ್ದಾರೆ. ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಮಗ ಅಪ್ಪನ ದಿನಾಚರಣೆಯಂದು ಮಾತ್ರವೇ ಪೋನಾಯಿಸಿ ಶುಭಾಶಯ ಹೇಳುತ್ತಾನೆ. ಇಂತಹ ಅಪ್ಪನ ಕಣ್ಣಲ್ಲಿರುವ ವಿಷಾದದ ಛಾಯೆ ಹೇಗಿರಬಹುದೆಂದು ಊಹಿಸಿಕೊಳ್ಳಲು ಅಸಾಧ್ಯವಾಗುತ್ತದೆ. ಮೇಣದ ಬತ್ತಿ ತಾನು ಉರಿದು ಒಡಲು ಕರಗಿ ನೀರಾಗಿ ಕೊನೆಗೊಮ್ಮೆ ದೇಹ ಇಲ್ಲವಾದಂತೆ ಈ ಅಪ್ಪ ನಾವು ಆ ಬೆಳಕಿನಲ್ಲಿ ಎಲ್ಲವನ್ನು ಪಡೆದುಕೊಳ್ಳುವಾಗ ದೇಹ ಸೊರಗಿ ಇಲ್ಲವಾಗುವುದು ನಮ್ಮ ಅರಿವಿಗೆ ಬರುವುದಿಲ್ಲ.
ನಾವು ಓದಿ ಪ್ರತಿಷ್ಠಿತ ಹುದ್ದೆ ಗಿಟ್ಟಿಸಿಕೊಂಡರು ಅಪ್ಪ ಬದಲಾಗುವುದೇ ಇಲ್ಲ! ಅವರು ಕೆಲಸಕ್ಕೆ ಹೊರಟರೆಂದರೆ ನೆನಪುಗಳ ಗೂಡು ಎಂಬಂತೆ ಅದುವೆ ಹಳೆಯ ಕೊಡೆ, ಬಾಳಹಾದಿಯಲ್ಲಿ ಸವೆದ ಚಪ್ಪಲಿ, ಬುತ್ತಿ ಕೊಂಡುಹೋಗಿ ತಣ್ಣಗಾದ ಅನ್ನವನ್ನುಂಡು ದಿನಗಳೆಯುತ್ತಿರುತ್ತಾರೆ. ಇಲ್ಲವೆಂದರೆ ತೋಟ, ಗದ್ದೆಯಲ್ಲಿ ತನ್ನ ಕೈಲಾದಷ್ಟು ಮಟ್ಟಿಗೆ ಕೆಲಸ ಮಾಡುತ್ತಿರುತ್ತಾರೆ. ಅಮ್ಮನೊಂದಿಗೆ ಮಕ್ಕಳ ಬಗ್ಗೆ ವಿಚಾರಿಸುತ್ತಾರೆ. ವಿನಹ ಅವರಾಗಿ ಪೋನಾಯಿಸುವುದಿಲ್ಲ. ಆದರೆ ನಮಗೆ ಅಪ್ಪನಿಲ್ಲದೆ ಇಂತಹ ಹುದ್ದೆ ಸಿಗಲು ಸಾಧ್ಯವಿತ್ತೆ ಅಂತ ಒಂದು ಕ್ಷಣ ಊಹಿಸಿಕೊಳ್ಳಲು ಸಮಯವಿರುವುದಿಲ್ಲ. ಅಮ್ಮ ಬೆಳಗಾಗೆದ್ದು ಆಡುಗೆ ಕೆಲಸದಲ್ಲಿ ತೊಡಗಿಕೊಂಡರೆ ತಡವಾಗಿ ಏಳುವ ನಮ್ಮನ್ನು ಅಪ್ಪನೆ ಹಲ್ಲುಜ್ಜಿಸುತ್ತಾನೆ. ರಜೆ ಬಂತೆಂದರೆ ಜೋಕಾಲಿ ಕಟ್ಟಿ ಜಾಡುತ್ತಾನೆ, ಸೈಕಲ್ ತರಿಸಿ ಕಲಿಸಿಕೊಡುತ್ತಾನೆ, ಕಥೆ ಪುಸ್ತಕಗಳನ್ನು ಕೊಡಿಸುತ್ತಾನೆ. ಕೈ ಹಿಡಿದು ಶಾಲೆಗೆ ಕರೆದೊಯ್ಯುತ್ತಾನೆ. ಜ್ವರ ಬಂದರೆ ಹೆಗಲಿಗೇರಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಬೆನ್ನ ಮೇಲೆ ಕೂರಿಸಿ ಆನೆ ಮೇಲೆ ಅಂಬಾರಿ ಆಡಿಸುತ್ತಾನೆ. ಕೂಸುಮರಿ ಬೇಕಾ ಕೂಸುಮರಿ ಎಂದು ಎತ್ತಾಡಿಸಿದ್ದಾನೆ. ಅಪ್ಪನ ಎಣೆಯಿಲ್ಲದ ಮಮಕಾರ ಮುಗಿಯುವುದೆ ಇಲ್ಲ. ಇದರ ಮಧ್ಯದಲ್ಲಿ ತಪ್ಪು ಮಾಡಿದಾಗ ಗದರಿದ್ದಾನೆ, ಹೊಡೆದಿದ್ದಾನೆ. ಆದರೂ ಅಮ್ಮನಂತಹ ಮನಸ್ಸಿನ ಅಪ್ಪಂದಿರೇ ಇವರು ಕೂಡಾ……….
ಮಗಳ ಮೇಲೆ ವ್ಯಾಮೋಹ ಹೆಚ್ಚು ಎಂಬುದಾಗಿ ಸಿಟ್ಟಾಗುವ ಮಗನಿಗೆ ಹೆಗಲ ಮೇಲೆ ಕೈಯಿರಿಸಿ ಗೆಳೆಯನಾಗುತ್ತಾನೆ. ಇದು ನಿಜವು ಇರಬಹುದು. ಏಕೆಂದರೆ ಮದುವೆಯ ನಂತರ ಮಗಳು ಇನ್ನೊಂದು ಮನೆಗೆ ಹೋಗುತ್ತಾಳೆ ಎಂಬ ಕಾರಣಕ್ಕೆ ಹೆಣ್ಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ ತೋರಿಸುತ್ತಾನೆ. ಎಂದೂ ಅಳದ ನನ್ನಪ್ಪನು ನನ್ನನ್ನು ಮದುವೆ ಮಾಡಿ ಕಳುಹಿಸುವಾಗ ತುಂಬಾ ಅತ್ತುಬಿಟ್ಟರು. ಮನಶಾಸ್ತ್ರದಲ್ಲಿರುವ ಸೈಕೋ ಸೆಕ್ಷುವಲ್ ಸಿದ್ದಾಂತದ ಪ್ರಕಾರ ಬೆಳವಣಿಗೆಯ ಮೂರನೇ ಹಂತ ೬ ರಿಂದ ಹನ್ನೆರಡು ವಯಸ್ಸನ್ನು ‘ಒಡಿಪಸ್ ಕಾಂಪ್ಲೆಕ್ಸ್’ ಎನ್ನುತ್ತಾರೆ. ಈ ಹಂತದಲ್ಲಿ ವಿರುದ್ಧ ಸೆಕ್ಸ್‌ಗಳು ಆಕರ್ಷಣೆಗೆ ಒಳಗಾಗುತ್ತದೆ. ಅಂದರೆ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಾಗುತ್ತದೆ, ಮಗ ಅಮ್ಮನನ್ನು ಇಷ್ಟಪಡುತ್ತಾನೆ. ಮಕ್ಕಳು ಬೆಳೆದಂತೆ ಇದನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಕೆಲವು ಸಂದರ್ಭದಲ್ಲಿ ಮಗಳಿಗೆ ಅಮ್ಮನೆ ಗೆಳತಿಯಾಗುತ್ತಾಳೆ, ಮಗನಿಗೆ ಅಪ್ಪನೆ ಗೆಳೆಯನಾಗುತ್ತಾನೆ.
ಜಗತ್ತಿನ ನಂ 1 ಟೆನಿಸ್ ತಾರೆಗಳಾದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ರವರದು ಬಡತನದ ಬಾಲ್ಯವಾಗಿತ್ತು. ಕರಿ ಜನಾಂಗದ ಹುಡುಗಿಯರು ಟೆನಿಸ್ ಆಡುವುದಕ್ಕೆ ಬಿಳಿಯರ ವಿರೋಧವಿತ್ತು. ಆದರೆ ಅವರ ತಂದೆ ಮಕ್ಕಳ ಪ್ರತಿಭೆ ಮತ್ತು ಆಸಕ್ತಿಯನ್ನು ಅರ್ಥೈಸಿಕೊಂಡು ಗುಟ್ಟಾಗಿ ಅಭ್ಯಾಸ ಮಾಡಿಸುತ್ತಿದ್ದರು. ಬಿಳಿಯರು ಆಟವಾಡಿ ಬಿಸಾಕಿದ ಚೆಂಡನ್ನು ಆಯ್ದುತಂದು ಮಕ್ಕಳಿಗೆ ಆಟವಾಡಲು ನೀಡುತ್ತಿದ್ದರು. ತಂದೆಯ ಶ್ರಮದಿಂದಲೇ ನಾವು ಈ ಹಂತ ತಲುಪಿದ್ದೇವೆ. ಎನ್ನುತ್ತಾರೆ ಆ ಹೆಣ್ಮಕ್ಕಳು. ಜಗತ್ತಿನಲ್ಲಿ ಇಂತಹ ನಿಷ್ಕಲ್ಮಶ ಪ್ರೀತಿಯ ಅಪ್ಪಂದಿರು ಅದೆಷ್ಟೋ ಸಿಗುತ್ತಾರೆ. ಅದೃಷ್ಟ ಇದ್ದವನಿಗೆ ಮೊದಲು ಹೆಣ್ಣು ಮಗು ಜನಿಸುತ್ತದೆ. ಎಂಬುದೊಂದು ಪೂರ್ಚುಗೀಸ್ ಗಾದೆಯಿದೆ. ಈ ಮಾತಿನ ತಾತ್ಪರ್ಯದಲ್ಲೆ ಅಪ್ಪ ಮಗಳ ಅರ್ಥವಾಗುತ್ತದೆ.
ಅಪ್ಪನ ಜಗತ್ತಿನಲ್ಲಿ ಸಾವಿರಾರು ವ್ಯವಹಾರಗಳಿದ್ದರು ಅವರಿಗೆ ನಿಜವಾದ ಸಂತೋಷ ಕೊಡುವುದು ಮಕ್ಕಳ ಉನ್ನತಿ ಮಾತ್ರ. ಬಾಲ್ಯದಲ್ಲಿ ಪ್ರತಿಯೊಂದು ಕೆಲಸಕ್ಕು ಅಪ್ಪನನ್ನೆ ದುಂಬಾಲು ಬೀಳುತ್ತಿದ್ದ ನಾವುಗಳು ಏಕಾಏಕಿ ಸಂಪೂರ್ಣ ಗೆಳೆಯರೊಂದಿಗೆ ಕಳೆದುಹೋದಾಗ ಅಪ್ಪನಿಗದೆಷ್ಟು ನೋವಾಗಿರಬಹುದು. ಏಕೆಂದರೆ ನಾವು ಬದಲಾದರು ಅಪ್ಪ ಬದಲಾಗುವುದಿಲ್ಲ. ನಾವು ಅಪ್ಪ ಎನಿಸಿಕೊಂಡಾಗಲೂ ನಮ್ಮ ತಂದೆ ಬದಲಾಗುವುದಿಲ್ಲ. ನಾವು ಅಪ್ಪನಾಗಿ ಕರ್ತವ್ಯ ನಿರ್ವಹಿಸುವಾಗ ನಮ್ಮ ಬಾಲ್ಯವನ್ನು ನೆನೆಯುತ್ತೇವೆ ಹೊರತು ಅಪ್ಪನನ್ನಲ್ಲ. ಅಪ್ಪನೊಂದಿಗೆ ಎಷ್ಟೆ ನಿಷ್ಠೆಯಿದ್ದರು ವಿನಾಕಾರಣ ರೇಗುವುದು, ಸಿಡುಕು ಇವುಗಳನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಬದಲಾದ ಕಾಲಘಟ್ಟಕ್ಕೆ ತಕ್ಕುದಾಗಿ ಅಷ್ಟೆ ವೇಗವಾಗಿ ಧಾವಂತದ ಬದುಕಿಗೆ ಹೊಂದಿಕೊಳ್ಳಲು ಅಪ್ಪನಿಗೆ ಆಗುವುದಿಲ್ಲ ಎಂಬ ಅರಿವು ನಮಗಿರಬೇಕು.
ತಾಯ್ತನ ಇದ್ದಂತೆ ತಂದೆತನದ ಒಲವು ಅವರಲ್ಲಿ ಜಾಗೃತವಾಗಿರುತ್ತದೆ. ಬಿಪಿ ಮಾತ್ರೆ, ಶುಗರ್ ಮಾತ್ರೆ, ಮರೆಯದೆ ತಿನ್ನಿ ಎಂಬ ಒಂದು ಮಾತಿನಿಂದ ಆ ದೇಹಕ್ಕೆಷ್ಟು ಖುಷಿಯಾಗಬಹುದು. ನೀವಂದು ನಿದ್ರಿಸುವಾಗ ಮಂಚದಿಂದ ಕೆಳಗೆ ಬೀಳದಿರಲೆಂದು ದಿಂಬು ಅಡ್ಡ ಇಡುತ್ತಿದ್ದ ಅಪ್ಪನಿಗೊಂದು ಶುಭರಾತ್ರಿ ಹೇಳಿ, ಹಳತಾದ ಕನ್ನಡವನ್ನು ಬದಲಾಯಿಸಲು ಒತ್ತಾಯಿಸಿ ಇಂತಹ ಸಣ್ಣ ಸಣ್ಣ ಸಂತೋಷದಿಂದಲೆ ಅವರ ಜೀವನೋತ್ಸಾಹ ಇಮ್ಮಡಿಗೊಳ್ಳುತ್ತದೆ.
ನಿರ್ಭಾವುಕ, ಒರಟ, ಕುಡುಕ ಎಂದೆನಿಸಿದ ಅಪ್ಪನು ಮಕ್ಕಳು ಎಂದಾಕ್ಷಣ ತುಂಬಾ ಭಾವುಕ ವ್ಯಕ್ತಿಯಾಗುತ್ತಾನೆ. ನಿರ್ಲಿಪ್ತ ಮುಖಭಾವ ಹೊತ್ತ ಅಪ್ಪ ಪಡಸಾಲೆಯ ಕುರ್ಚಿಯೊಂದರಲ್ಲಿ ಪ್ರತಿದಿನ ನಿರುಮ್ಮಳವಾಗಿ ಕುಳಿತಿರುತ್ತಾನೆ. ಈಗ ಕಾಲ ಬದಲಾಗಿದೆ. ಮಗು ಬೆಳಗ್ಗೆ ಏಳುವ ಮೊದಲೆ ಆಫೀಸಿಗೆ ಹೊರಟ ಅಪ್ಪ ಸಂಜೆ ನಿದ್ರಿಸಿದ ನಂತರ ಬರುತ್ತಾನೆ. ರಜಾದಲ್ಲಿ ಕಂಡ ಅಪ್ಪನನ್ನು ಈ ಅಂಕಲ್ ಯಾರು ಎಂದು ಮಗು ಪ್ರಶ್ನಿಸಿತ್ತಂತೆ. ಈ ರೀತಿಯ ಮೊಬೈಲ್ ಚುಟುಕು ಸಂದೇಶದಲ್ಲಿ ಹರಿದಾಡುತ್ತುದ್ದ ಹಾಸ್ಯದಲ್ಲು ಪ್ರಸ್ತುತ ಜೀವನಕ್ಕೆ ಹಾಸುಹೊಕ್ಕಾಗಿರುವ ಸತ್ಯಾಂಶವಿದೆ ಅಲ್ಲವೇ?
ಎ.ಆರ್.ಮಣಿಕಾಂತ್ ಬರೆದ ಅಮ್ಮ ಹೇಳಿದ ಎಂಟು ಸುಳ್ಳುಗಳು ಮತ್ತು ಅಪ್ಪ ಅಂದ್ರೆ ಆಕಾಶ ಎಂಬೆರಡು ಕೃತಿಗಳಲ್ಲಿ ಹೆತ್ತವರು ಮತ್ತು ಮಕ್ಕಳ ಭಾಂದವ್ಯದ ಬಗೆಗಿನ ಹಲವಾರು ಸತ್ಯಘಟನೆಗಳಿವೆ. ಮನಸ್ಸು ಆರ್ದ್ರಗೊಳ್ಳುವ ಸನ್ನಿವೇಶಗಳ ನೈಜತೆಯ ಗುಚ್ಛವನ್ನು ಓದಿದರೆ ಜಗತ್ತಿನಲ್ಲಿ ಎಷ್ಟು ಮನುಷ್ಯರಿದ್ದಾರೊ ಅಷ್ಟು ಮನಸ್ಸುಗಳುಂಟು ಎಂದ ಇಂಗ್ಲೀಷ್ ಲೇಖಕ ಟೆರೆನ್ಸ್ ರವರ ಮಾತು ಅಕ್ಷರಶ: ಸತ್ಯವೆನಿಸುತ್ತದೆ.
– ಸಂಗೀತ ರವಿರಾಜ್, ಕೊಡಗು
ಬಹಳ ಅರ್ಥಪೂರ್ಣ ಹಾಗೂ ಸಾಂದರ್ಭಿಕ ಲೇಖನ.
nanna appa nenapadaru sangeetha.thumba chenda barediruve .ಅಭಿನಂದನೆಗಳು-ಸ್ಮಿತ .
Nice Article Sangeeta
Some lines are really true. I remembered my father after reading this article. We realise their values only when they are not around.
ತುಂಬಾ ಚೆನ್ನಾಗಿ ನಿಮ್ಮ ಲೇಖನ. ಅಪ್ಪನ ಬಗೆಗಿನ ಮಮತೆ, ನಾವು ಕೊಡುವ ಮತ್ತು ಕೊಡಬೇಕಾದ ಗೌರವ ನೀವು ಅರ್ಥಪೂರ್ಣವಾಗಿ ಹೇಳಿದ್ದಿರಿ. ಇನ್ನೂ ಬರೆಯುತ್ತಿರಿ.
Good one. Oduthha hodanthe baalyakke hoythu manasu.Appa illavagi 30 varshavaadaru appana nenapu aagaga marukalisuthhave. Thanks fr writing..