ಪ್ರೀತಿಯ ನಲವತ್ತು ರೀತಿ :ಶಾಮ್-ಎ-ತಬ್ರಿಜಿ : ಭಾಗ 2
ಈ ಲೇಖನದ ಹಿಂದಿನ ಭಾಗ ಇಲ್ಲಿದೆ : http://surahonne.com/?p=23529
- ದೇವರಲ್ಲಿ ಅನುರಕ್ತನಾದವ ಮದಿರಾ ಕೋಣೆಗೆ ಕಾಲಿಟ್ಟರೂ ಮಂದಿರವಾಗಿ ಮಾರ್ಪಡುತ್ತದೆ, ಮಂದಿರಕ್ಕೆ ಕಾಲಿಟ್ಟರೂ ಕುಡುಕನಿಗೆ ಅದು ಮದಿರಾ ಕೋಣೆಯಾಗಿ ಕಾಣುತ್ತದೆ. ಇದೆಲ್ಲವೂ ನಮ್ಮ ಅಂತರಾತ್ಮವನ್ನು ಅವಲಂಬಿಸಿದೆ. ಜ್ಞಾನಿ ಜನರು ಹೇಗೆ ಕಾಣುತ್ತಾರೆ ಮತ್ತು ಅವರು ಯಾರು ಎನ್ನುವುದನ್ನು ನಿರ್ಧರಿಸಲು ಹೋಗಲಾರ. ಆತ ಯಾರನ್ನೇ ಕಂಡರೂ ಬಾಹ್ಯದ ತನ್ನೆರಡೂ ಕಣ್ಣುಗಳನ್ನು ಮುಚ್ಚಿಕೊಂಡು, ಮೂರನೆಯ ತನ್ನ ಒಳಗಣ್ಣನ್ನು ತೆರೆದುಕೊಳ್ಳುತ್ತಾನೆ, ತನ್ನೊಳಗೇ ಇಳಿಯುತ್ತಾನೆ.
- ಬದುಕು ಒಂದು ತಾತ್ಕಾಲಿಕ ಸಾಲ. ಪ್ರಪಂಚ ಒಂದು ವಾಸ್ತವ. ಮಕ್ಕಳು ಇಲ್ಲಿ ಆಟಿಕೆಯ ವಸ್ತುಗಳನ್ನೇ ಸತ್ಯದ ವಸ್ತಗಳೆಂದು ತಪ್ಪಾಗಿ ಗ್ರಹಿಸುತ್ತಾರೆ. ಹೀಗಾಗಿ ಈ ಸುಳ್ಳು ವಸ್ತುಗಳೊಂದಿಗೆ ಕೆಲಕಾಲ ಮೋಹದಿಂದ ಆಟವಾಡಿ, ಹಠ ಬಂದಾಗ ಮುರಿದು, ಬೇಸರ ಬಂದಾಗ ಎತ್ತಿ ಎಸೆಯುತ್ತಾರೆ. ಈ ಅತಿರೇಕಗಳಿಂದ ದೂರಿರುವುದೇ ಬದುಕು. ಅತಿರೇಕಗಳು ನಿಮ್ಮ ಒಳ ಉಧ್ಯಾನದ ಅಂದಗೆಡಿಸುತ್ತವೆ. ಜಾಣ ಯಾವಾಗಲೂ ಮೃದುವಾಗಿರುತ್ತಾನೆ ಮತ್ತು ಮಧ್ಯದ ದಾರಿಯವನಾಗಿರುತ್ತಾನೆ.
- ದೇವರ ಸೃಷ್ಠಿಯಲ್ಲಿ ಮನುಷ್ಯನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವನೊಳಗೆ ‘ನಾನು ಚೈತನ್ಯದ ಉಸಿರು ಹಾಕಿದ್ದೇನೆ’ ಎನ್ನುತ್ತಾನೆ ದೇವರು. ಸೃಷ್ಠಿಯಾದ ನಾವೆಲ್ಲರೂ ಅವನ ಸಂದೇಶಗಳೆ. ಆದರೆ ಆತನ ಸಂದೇಶ ಸಾರುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡಿರುವೆನೇ? ಎಂದು ನಾವೆಂದಾದರೂ ಕೇಳಿಕೊಂಡಿರುವೆವೊ? ನಮ್ಮೊಳಗಿನ ಆ ಚಿತ್‍ಶಕ್ತಿಯನ್ನು ಕಾಣುವುದೇ ನಮ್ಮ ಗುರಿಯಾಗಬೇಕು.
- ನರಕ ಈ ಕ್ಷಣ ಇಲ್ಲೇ ಇದೆ. ಹಾಗೆಯೆ ಸ್ವರ್ಗವೂ. ನಾವು ಪ್ರೀತಿ ಮಾಡಿದ ಪ್ರತಿ ಕ್ಷಣವೂ ಸ್ವರ್ಗದಲ್ಲಿ ಕಾಲಿಟ್ಟಿದ್ದೇವೆ, ದ್ವೇಷಿಸಿದ ಮರುಕ್ಷಣ ನರಕದ ದಳ್ಳುರಿಗೆ ಬಿದ್ದು ಒದ್ದಾಡಿದ್ದೇವೆ.
- ಎಲ್ಲ ಧರ್ಮ ಗ್ರಂಥಗಳನ್ನು ನಮ್ಮ ಶಕ್ತಿಯನುಸಾರ ಗ್ರಹಿಸಿದ್ದೇವೆ. ಒಟ್ಟು ನಾಲ್ಕು ದೃಷ್ಠಿಕೋನಗಳಿವೆ. ಒಂದು ಅರ್ಥ ಇನ್ನೊಂದು ಒಳಾರ್ಥ ಮತ್ತೊಂದು ಮತಿತಾರ್ಥ ಹುಡುಕುವುದು. ನಾಲ್ಕನೇಯದು ಇವೆಲ್ಲಕ್ಕೂ ಮೀರಿ ಹೋಗಿ ಹಂಚಿಕೊಳ್ಳಲಾಗದ ಅನುಭೂತಿಗೆ ಮೌನಿಯಾಗುವುದು.
- ಪ್ರಪಂಚ ಒಂದೇ ಆಗಿರುವುದರಿಂದ ನಮ್ಮೆಲ್ಲರ ಕಥೆಗಳು ಒಂದು ಇನ್ನೊಂದರಲ್ಲಿ ಹಾಸುಹೊಕ್ಕಿವೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೊ ಒಂದೇ ಕಥೆಯನ್ನು ಪಿಸುಗುಡುತ್ತಿದ್ದೇವೆ. ತೊಂದರೆ ಇಲ್ಲ, ಪರಸ್ಪರ ಕಥೆ ಹೇಳುವುದರಲ್ಲಿ, ಕೇಳುವುದರಲ್ಲಿ ಮಾತ್ರ ಸಹಾನುಭೂತಿ ಇರಲಿ. ತಪ್ಪಿಯೂ ಅನ್ಯರ ಕುರಿತು ಅವರಿಲ್ಲದಾಗ ಮಾತನಾಡಬೇಡ. ಯಾಕೆಂದರೆ ನೀನಾಡಿದ ಮಾತುಗಳು ನಶಿಸಿಹೋಗುವುದಿಲ್ಲ. ಈ ಬಯಲೊಳಗೇ ಬಚ್ಚಿಟ್ಟುಕೊಂಡ ಅವುಗಳು ಒಂದು ದಿನ ಶಾಪಗಳಾಗಿ ನಿನಗೇ ಮರಳುತ್ತವೆ. ಒಬ್ಬನ ನೋವು ನಾವೆಲ್ಲರೂ ನರಳುವಂತೆ ಮಾಡುವ ಹಾಗೆಯೇ ಒಬ್ಬನ ಸಂತೋಷವೂ ನಾವೆಲ್ಲರೂ ನಗುವಂತೆ ಮಾಡುತ್ತದೆ.
- ನೀನಾಡುವ ಪ್ರತಿ ಒಳ್ಳೆಯ ಮತ್ತು ಕೆಟ್ಟ ಪದಗಳು ನಿನಗೇ ಮರಳುತ್ತವೆ. ಕೆಡುಕಾಡುವವರನ್ನು ದುಷ್ಟತನದ ಮೂಟೆಹೊತ್ತ ಹಡುಗಿನಂತೆ ತೇಲಲು ಬಿಡು. ಪ್ರತಿಯಾಡಿದರೆ ನೀನೂ ಅದೇ ಆಗುತ್ತಿಯ. ಬದಲಾಗಿ ನಲವತ್ತು ದಿನ ಮತ್ತು ನಲವತ್ತು ರಾತ್ರಿ ಆ ಪಾಪಿಯ ಕುರಿತು ಒಳಿತನ್ನೇ ನುಡಿ, ಆಲೋಚಿಸು. ನಲವತ್ತು ದಿನಗಳ ನಂತರ ಎಲ್ಲವೂ ಭಿನ್ನವಾಗಿರುತ್ತದೆ, ಯಾಕೆಂದರೆ ನಿನ್ನೊಳಗಿನದೇ ಭಿನ್ನವಾಗಿಬಿಟ್ಟಿರುತ್ತದೆ.
- ಭೂತಕಾಲ ಒಂದು ಅರ್ಥೈಸುವಿಕೆ ಅಷ್ಟೆ. ಭವಿಷ್ಯ ಮತ್ತೊಂದು ಭ್ರಮೆ. ಸಮಯದಂತೆ ಸರಳವಾಗಿ ಪ್ರಪಂಚ ಸಾಗುವುದಿಲ್ಲ. ಪ್ರಪಂಚದ ಮೂಲಕ, ನಿನ್ನ ಮೂಲಕ, ಸಾಗಿಹೋಗುವ ಸಮಯವೂ ಸೀಮಾತೀತ. ಹೀಗಾಗಿ, ಭೂತ ಮತ್ತು ಭವಿಷ್ಯದ ಹಂಗು ಹರಿದುಕೊಂಡು ವರ್ತಮಾನದ ಒಳಿತಿನಲ್ಲಿ ಇಳಿಯುವುದನ್ನು ಕಲಿ.
- ದೈವವೆಂದರೆ ಬದುಕು ಪೂರ್ವ ನಿರ್ಧಾರಿತ ಎಂದರ್ಥವಲ್ಲ. ಎಲ್ಲವನ್ನು ದೈವಕ್ಕೆ ಹೊರಸಿ ಜಗದ ಸಂಗೀತವನ್ನೇ ಆಲಿಸದೆ ಹೋಗುವುದು ಅಜ್ಞಾನವಲ್ಲದೆ ಮತ್ತೇನು? ಮಧುರ ಸಂಗೀತ ವಿಶ್ವವನ್ನೆಲ್ಲ ವ್ಯಾಪಿಸಿದೆ ಮತ್ತು ಇದಕ್ಕೆ ನಲವತ್ತು ಭಿನ್ನ ಸ್ಥರಗಳಿವೆ. ನಿನ್ನ ದೈವವೆನ್ನುವುದು ಇವುಗಳಲ್ಲಿ ಯಾವುದೊ ಒಂದು ಸ್ಥರ. ಇಲ್ಲಿ ನಿನಗೆ ನಿನ್ನ ವಾದ್ಯವನ್ನು ಬದಲಾಯಿಸುವ ಸ್ವಾತಂತ್ರ್ಯವಿಲ್ಲ. ಆದರೆ ಇರುವ ವಾದ್ಯವನ್ನು ಎಷ್ಟು ಚನ್ನಾಗಿ ನುಡಿಸಿದೆ ಎನ್ನುವುದು ನಿನ್ನ ದೈವವನ್ನು ನಿರ್ಧರಿಸುತ್ತದೆ.
- ಅನಾವಶ್ಯಕವಾಗಿ ಆಪಾದನೆಗೊಳಗಾಗಿ, ಹಲ್ಲೆಗೊಳಗಾಗಿ ಮತ್ತು ದಿಕ್ಕರಿಸಲ್ಪಟ್ಟವನಾಗಿ ಬದುಕಿಯೂ ಸುಮ್ಮನಿದ್ದವನೇ ಸಂತ. ಆತ ಪ್ರತಿ ನುಡಿಯುವುದಿಲ್ಲ, ಏಕೆಂದರೆ ಆತನಲ್ಲಿ ತಾನು ಮತ್ತು ಅನ್ಯ ಎನ್ನುವುದೇ ಇಲ್ಲ.
- ನಿನ್ನ ವಿಶ್ವಾಸವನ್ನು ದೃಢಗೊಳಿಸಿಕೊಳ್ಳಬೇಕೆನ್ನುವ ನೀನು, ನಿನ್ನೊಳಗನ್ನು ಮೃದುವಾಗಿಸಿಕೊಳ್ಳಬೇಕು. ಆತ್ಮ ಬೆಟ್ಟದಂತಾಗಬೇಕೆನ್ನುವವರು ಮನಸ್ಸನ್ನು ಹಂಸತೌಲಿಕೆಯಾಗಿಸಿಕೊಳ್ಳಬೇಕು. ರೋಗವಿರಲಿ, ಅನಾಹುತಗಳಿರಲಿ, ದುರಂತಗಳಾಗಲಿ ಅವುಗಳೆಲ್ಲ ಘಟಿಸುವುದು ನಮ್ಮನ್ನು ಮೃದುವಾಗಿಸಲು, ಉದಾರಿಯಾಗಿಸಲು ಮತ್ತು ಅನುಕಂಪಶೀಲರನ್ನಾಗಿಸಲು. ಆದರೆ ಕೆಲವರು ಮಾತ್ರ ಈ ಮಾರ್ಪಾಟಕ್ಕೊಳಗಾಗುತ್ತಾರೆ. ಉಳಿದವರು ಇದ್ದುದರಕ್ಕಿಂತಲು ಭಯಾನಕವಾಗಿ ಮಾರ್ಪಟ್ಟು ಹಾಳಾಗುತ್ತಾರೆ.
- ದೇವರು ಮತ್ತು ನಿನ್ನ ಮಧ್ಯ ಯಾರೂ ನಿಲ್ಲಲು ಸಾಧ್ಯವಿಲ್ಲ. ಇಮಾಮ್, ಪೂಜಾರಿ ಅಥವಾ ಸ್ವಾಮಿಗಳಿಗೆ ಯಾರೂ ಧರ್ಮದ ನಾಯಕತ್ವವನ್ನು ಕೊಡಲಿಲ್ಲ. ಯಾವ ಆಧ್ಯಾತ್ಮಿಕ ಗುರುವೂ ನಿಮ್ಮಿಬ್ಬರ ಮಧ್ಯದ ಮಧ್ಯವರ್ತಿಯಲ್ಲ. ನಿನ್ನ ಸ್ವನಿಯಮ, ಮೌಲ್ಯಗಳೇ ಪ್ರೇಮಸ್ವರೂಪಿ ದೇವರೆಡೆಗಿನ ಸೂತ್ರಗಳು. ಹೃದಯಗಳನ್ನು ಭಗ್ನಗೊಳಿಸುವ ಕುಕೃತ್ಯದಲ್ಲಿ ತೊಡಗಿರುವ ನೀನು ಎಷ್ಟೇ ಧಾರ್ಮಿಕನಾಗಿದ್ದರೂ ಅರ್ಥಹೀನ. ಎಲ್ಲ ದುಷ್ಟತನಗಳಿಂದ ದೂರವಿರು, ಇಲ್ಲದಿದ್ದಲ್ಲಿ ಅವು ನಿನ್ನ ಬುದ್ಧಿಗೆ ಮಂಕೆರಚುತ್ತವೆ. ದೇವರೊಬ್ಬನೇ ನಿನ್ನ ಮಾರ್ಗದರ್ಶಿಯಾಗಿರಲಿ. ಗೊತ್ತಿರಲಿ ಗೆಳೆಯನೆ, ಈ ಬದುಕಿಗೆ ಸತ್ಯ ಬೇಕು. ಆದರೆ ನಿನ್ನ ಸತ್ಯಕ್ಕೆ ವಂಚನೆಯ ಲೇಪನವಿರಬಾರದು.
- ನಾವೆಲ್ಲರೂ ಏನನ್ನೋ, ಯಾರನ್ನೋ ಪಡೆಯುವ ಹುಚ್ಚಿನಲ್ಲಿದ್ದೇವೆ, ನಿಧನಾನಂತರ ಅವರೆಲ್ಲರನ್ನು ಹೀಗೆಯೇ ಬಿಟ್ಟು ಹೋಗುತ್ತೇವೆ. ನಿನ್ನ ಗುರಿ ಶೂನ್ಯದೆಡೆಗಿರಲಿ. ಬೆಳಕಿನಂತೆ, ಖಾಲಿತನದಂತೆ ನಿರಾಳನಾಗಿರು, ಶೂನ್ಯನಾಗಿರು. ಮಡಕೆಯ ಬಾಹ್ಯ ಅದನ್ನು ಒಪ್ಪಗೊಳಿಸಿದಷ್ಟೇ ಅದರೊಳಗಿನ ಖಾಲಿತನವು ಅದಕ್ಕೊಂದು ಅರ್ಥ ತುಂಬಿದೆ. ನಾವು ಏನನ್ನು ಸಾಧಿಸಲು ಹಂಬಲಿಸುತ್ತೇವೆ ಎನ್ನುವಷ್ಟೇ ಮುಖ್ಯ, ಶೂನ್ಯದ ಪ್ರಜ್ಞೆ. ಯಾಕೆಂದರೆ ಅದೇ ನಮ್ಮನ್ನು ನಿರಂತರ ಚಲನಶೀಲರನ್ನಾಗಿರಿಸಿದ್ದು.
- ಸಮರ್ಪಣೆ ಎನ್ನುವುದು ದೌರ್ಬಲ್ಯದ ಲಕಣ್ಷವಲ್ಲ, ದುರ್ವಿಧಿಯ ಮಾತಲ್ಲ. ಈ ಸಮರ್ಪಣೆಯೇ ನಿಜವಾದ ಶಕ್ತಿ. ಅದು ನಮ್ಮ ಎದುರಾಳಿಗೆ ನಮ್ಮ ಅಂತರಂಗದ ಸೌಂದರ್ಯವನ್ನು ತೋರಿಸುತ್ತದೆ. ಬದುಕಿನ ದೈವಶಕ್ತಿಗೆ ತಲೆಬಾಗಿದವರು ಚಾಂಚಲ್ಯಗಳಿಂದ ಮುಕ್ತರಾಗಿ, ಶಾಂತಿಯಲ್ಲಿ ಸಾಮ್ರಾಜ್ಯ ಕಟ್ಟುತ್ತಾರೆ. ಇಡೀ ಪ್ರಪಂಚವೇ ಗಲಿಬಿಲಿಗೊಂಡಾಗಲೂ ಅವರು ದೃಢ ಚಿತ್ತಾಗಿರುತ್ತಾರೆ.
- ವೈರುದ್ಯಗಳೆನ್ನುವವವು ನಮ್ಮೊಳಗೇ ಇವೆ. ನನ್ನೊಳಗಿನ ವೈರುದ್ಯಕ್ಕಾಗಿ ಅನ್ಯರನ್ನು ಆಪಾದಿಸುವ ಬದಲು, ವಿರೋಧಿಯೇ ಆಗಿರಲಿ ಆತನನ್ನು ಬಲವಾಗಿ ನಂಬು, ಅಪನಂಬಿಕೆಯೇ ನಮ್ಮ ಮೊದಲ ವೈರಿ.
- ಈ ಪ್ರಪಂಚ ಕೊಡುಕೊಳ್ಳುವಿಕೆಯ ಸಿದ್ಧಾಂತದ ಮೇಲೆ ಸೃಷ್ಠಿಯಾಗಿದೆ. ಒಂದು ತೊಟ್ಟು ನೀರೇ ಆಗಲಿ, ಮಣ್ಣಿನ ಒಂದೊಂದು ಕಣವೇ ಆಗಿರಲಿ ಎಲ್ಲವೂ ಹಂಚಿಕೆಯೇ. ಇದನ್ನು ತಪ್ಪಿಸಲು ದುಷ್ಟವ್ಯೂಹಗಳನ್ನು, ಆಲೋಚನೆಗಳನ್ನು ರಚಿಸಬೇಡ. ನೀನು ಕುತಂತ್ರಿಯಾಗುವುದಾದರೆ ನಿನ್ನ ಸೃಷ್ಠಿಸಿದ ಭಗವಂತ ನಿನ್ನಗಿಂತಲೂ ಮಹಾ ತಂತ್ರಗಾರನೆನ್ನುವುದನ್ನು ಮರೆತು ಮುರ್ಖನಾಗುತ್ತೀಯ. ಆತನ ಅರಿವಿಗೆ ಬಾರದೆ ಒಂದು ಎಲೆಯೂ ಉದುರದು. ಇದನ್ನು ನಂಬು. ಆತನು ಏನು ಮಾಡುತ್ತಿರುವನೋ ಅದೆಲ್ಲವೂ ಸರಿಯಾಗಿಯೇ ಇದೆ ಎಂದು ಒಪ್ಪಿಕೊ.
- ದೇವರ ಗಡಿಯಾರವೇ ವಿಚಿತ್ರ. ಪ್ರಪಂಚದಲ್ಲಿ ಯಾವುದು? ಯಾವಾಗ? ಘಟಿಸಬೇಕೆನ್ನುವುದನ್ನೆಲ್ಲ ಆತ ಈ ಗಡಿಯಾರದೊಂದಿಗೆ ಹೊಂದಿಸಿಬಿಟ್ಟಿದ್ದಾನೆ. ಒಂದು ಕ್ಷಣವೂ ಈ ನಿಯಮ ತಪ್ಪುವುದಿಲ್ಲ. ಪ್ರಪಂಚದ ಪ್ರತಿ ಜೀವಿಗಾಗಿಯೂ ಅದು ಅಷ್ಟೇ ಕರಾರುವಕ್ಕಾಗಿ ಕ್ರಿಯಾಶೀಲವಾಗಿದೆ. ಹೀಗಾಗಿಯೇ ಪ್ರತಿಯೊಬ್ಬನ ಪ್ರೀತಿಗೆ ಮತ್ತು ಸಾವಿಗೆ ಇದೇ ಗಡಿಯಾರ ಘಂಟೆ ಬಾರಿಸುತ್ತದೆ.
- ನಾನು ಬದುಕುವ ಈ ಬದುಕನ್ನು ಬದಲಾಯಿಸಿಕೊಳ್ಳಲು ಸಿದ್ಧನಿರುವೆನೇ? ನನ್ನೊಳಗಿನ ನೀಚತನವನ್ನು ನಾನು ಬದಲಿಸಿಕೊಳ್ಳಬಲ್ಲೆನೇ? ಎಂದು ಪರೀಕ್ಷಿಸಿಕೊಳ್ಳಲು ಬಹಳ ತಡವಾಯಿತು ಎಂದು ಯಾವ ಕಾಲಕ್ಕೂ ಅಂದುಕೊಳ್ಳಬೇಡ. ಯಾವ ದಿನವೂ ಈ ಕಾರ್ಯಕ್ಕಾಗಿ ನಿನ್ನ ಹುಟ್ಟಿನ ದಿನದಷ್ಟೆ ಮುಖ್ಯ. ಪ್ರತಿ ಕ್ಷಣದೊಂದಿಗೆ ಮತ್ತು ಉಸಿರಿನೊಂದಿಗೆ ಹೊಸ ಹುಟ್ಟು ಪಡೆಯಲು ಸಾಧ್ಯವಿರುವ ವಿವೇಕದ ಏಕೈಕ ಪ್ರಾಣಿ ನೀನು. ಸಾವಿಗೂ ಮುಂಚೆ ಮರುಹುಟ್ಟುವ, ಅಮರನಾಗುವ ಭಾಗ್ಯ ನಿನಗೊಬ್ಬನಿಗೇ ಇದೆ.
- ಒಂದು ಭಾಗ ಬದಲಾಗುತ್ತದೆ ಅಷ್ಟೆ. ಇರುವುದೆಲ್ಲವೂ ಅಖಂಡವಾಗಿ ಯಥಾ ಪ್ರಕಾರವೇ ಉಳಿದುಕೊಳ್ಳುತ್ತದೆ. ಹಳೆಯ ಕಳ್ಳ ಹೋಗುತ್ತಾನೆ ಹೊಸಬ ಆಗಲೇ ಸಿದ್ಧನಾಗಿದ್ದಾನೆ. ಈತ ಆತನ ಬದಲಿ ವ್ಯವಸ್ಥೆ ಅಷ್ಟೆ. ಅಂತೆಯೇ ಹೇಳುವುದು, ಇಲ್ಲಿ ಯಾವುದೂ ಉಳಿಯುವುದೂ ಇಲ್ಲ, ಬದಲಾಗುವುದೂ ಇಲ್ಲ. ಜ್ಞಾನಿಯೊಬ್ಬ ಸಾಯುತ್ತಾನೆ, ಮತ್ತೊಬ್ಬ ಜ್ಞಾನಿ ಮರುಹುಟ್ಟುತ್ತಾನಷ್ಟೆ.
- ಪ್ರೀತಿ ಇಲ್ಲದ ಬದುಕು ಒಂದು ಖಾಲಿ ರಶೀದಿ. ನಿನಗೆ ಬೇಕಾಗಿರುವ ಪ್ರೀತಿ ಭೌತಿಕವಾದುದೊ? ಆಧ್ಯಾತ್ಮಿಕವಾದುದೊ? ಪೂರ್ವದ್ದೊ? ಪಶ್ಚಿಮದ್ದೊ? ಪ್ರಶ್ನಿಸಿಕೊಳ್ಳಲೇಬೇಡ. ಈ ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳನ್ನೇ ಹುಟ್ಟಿಸುತ್ತವೆ. ನೆನಪಿಡು, ಪ್ರೀತಿಗೆ ಯಾವುದೇ ಶೀರ್ಷಿಕೆ ಇಲ್ಲ, ವ್ಯಾಖ್ಯಾನವಿಲ್ಲ. ಅದು ಅತ್ಯಂತ ಸರಳ, ಶುದ್ಧ ಮತ್ತು ಮಾತೃಮಯಿ. ಅದು ಜೀವಜಲ, ಪ್ರೇಮ ಆತ್ಮದ ಕಿಚ್ಚು, ಈ ಕಿಚ್ಚು ನೀರನ್ನು ಪ್ರೀತಿಸಿದಾಗ ಪ್ರಪಂಚವೇ ಭಿನ್ನವಾಗಿಬಿಡುತ್ತದೆ.
ಮುಗಿಯಿತು
-ಡಾ.ರಾಜಶೇಖರ ಮಠಪತಿ (ರಾಗಂ)
ಇಡೀ ಬದುಕಿನ ರೀತಿ, ಚಿತ್ರಣ ಬಹಳ ಚೆನ್ನಾಗಿ , ಅನುಸರಿಸಬೇಕು ಅಂತ ಅನ್ನಿಸುವ ರೀತಿ ಅನಾವರಣಗೊಂಡಿದೆ .