ಆಯ್ಕೊಂಡಿರುವ ಕೋಳಿ ಕಾಲು ಮುರುದಾಂಗೆ
ಸಿದ್ದಮ್ಮ ಒಂದು ದೊಣ್ಣೆಗೆ ಮಚ್ಚು ಸಿಕ್ಕಿಸಿ ನಮ್ಮ ಮನೆ ಅಂಗಳದ ಹಿಂದೆ ಮುಂದೆ ದಂಡಿಯಾಗಿ ಬೆಳೆದಿದ್ದ ಹುಲ್ಲು ಸವರುತ್ತಿದ್ದಳು. ಅದನ್ನು ನೋಡಿ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ. ಯಾವುದೇ ಕೆಲಸವನ್ನಾದರೂ ಅಷ್ಟೆ ಹೇಳದಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಸರಿಸದ ಸಿದ್ದಮ್ಮ ಇವತ್ತೇಕೆ ಇದ್ದಕ್ಕಿದ್ದಂತೆ ಈ ಕಾರ್ಯಕ್ಕೆ ಕೈ ಹಾಕಿದಳು? ಅದೂ ಯಾವತ್ತೂ ಇಂಥ ಕೆಲಸವನ್ನೆಲ್ಲ ಮಾಡದವಳು ಇವತ್ತು ಮಾಡುತ್ತಿದ್ದಾಳೆಂದರೆ ಸೂರ್ಯ ಏನಾದರೂ ಬೇರೆ ದಿಕ್ಕಿನಿಂದ ಉದಯಿಸಿದನಾ ಎಂಬ ಸೋಜಿಗದಿಂದ `ಏನು ಸಿದ್ದಮ್ಮ, ಇವತ್ತು ಯಾವ ಮಗ್ಗುಲಿಂದ ಎದ್ದು ಬಂದೆ? ಇದೇನು ಎಂದೂ ಮಾಡದ ಕೆಲಸ ಇಂದು ಮಾಡುತ್ತಿದ್ದೀಯಲ್ಲ? ‘ಎಂಬ ಪ್ರಶ್ನೆ ಹಾಕಿದೆ.
ಹೇಂಗೆ ಸತ್ತೆ ಬೆಳೆದಿದೆ ನೋಡಿ. ಹಾವುಗೀವು ಸೇರಿಕೊಂಡಿದ್ದೀತು. ನೀವು ಬೇರೆ ಎಲ್ಲೆಂದರಲ್ಲಿ ಬರೀಗಾಲಲ್ಲಿ ನುಗ್ಗುತ್ತೀರಿ ನನ್ನಂಗೇ. ಎಲ್ಲಾದರೂ ಹಾವು ಸೇರಿಕೊಂಡರೆ ಗೊತ್ತೇ ಆಗಾಕಿಲ್ಲ. ಅದೆಲ್ಲಾದರೂ ಕಚ್ಚಿದರೆ `ಆಯ್ಕೊಂಡಿರುವ ಕೋಳಿ ಕಾಲು ಮುರುದಾಂಗೆ ‘ ನನ್ನ ಸ್ಥಿತಿ ಆದೀತು. ನನಗೆ ಇರುವವನೊಬ್ಬ ಗಂಡು. ಮುಂಡೇದು ಪಾಪದ್ದು ಬೇರೆ. ಮೂಗನಾಂಗೆ ಇರ್ತದೆ. ಮನೆ ಸಾಲ ಸಿಕ್ಕಾಪಟ್ಟೆ ಇದೆಯಲ್ಲ. ಸಾಲ ತೀರಿಸಿ, ಮಗನ ಬಾಳು ನೇರ್ಪುಹೊಂದಿದಮೇಲೆ ಬೇಕಾದರೆ ನಾನು ಸತ್ರೆ ಪರವಾಗಿಲ್ಲ. ಇಲ್ಲೇ ಹಿಂದೆಮುಂದೆ ಮುಂಗುಸಿ ಓಡಾಡುತ್ತೆ ಹುಶಾರಾಗಿರು ಎಂದು ಹಿಂದಿನ ಮನೆಯವರು ಹೇಳಿದ್ದಾರೆ. ನೀವು ಬೇರೆ ಮೊನ್ನೆ ಮುಂಗುಸಿ ಓಡಾಡುವುದನ್ನು ಕಂಡಿದ್ದೀರಿ ಎಂದಿರುವಿರಿ. ಮುಂಗುಸಿ ಬರುವುದೇ ಹಾವು ಇದ್ದರೆ ಅಂತಲ್ವೆ? ಯಾರಿಗೆ ಗೊತ್ತು ಹಾವು ಸೇರಿಕೊಂಡಿದ್ದರೆ ಅಂತ ಸತ್ತೇನೆಲ್ಲ ಸವರುತ್ತಿದ್ದೇನೆ. ಅದಕ್ಕೆ ಉದ್ದ ದೊಣ್ಣೆ ತಕ್ಕೊಂಡಿರುವುದು ಎಂದು ತನ್ನ ಕೆಲಸದ ಕಾರಣ ವಿವರಿಸಿದಳು.
ಇಷ್ಟು ವರ್ಷ ಹೀಗೆ ಸತ್ತೆ ಬೆಳೆದಿದ್ದಾಗ ನಿನಗೆ ಹಾವು ಚೇಳಿನ ಹೆದರಿಕೆ ಇರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಹಾವಿನ ಭಯ ಹೇಗೆ ಬಂತು? ಎಂದು ಕೇಳಿದೆ.
‘ಅದಾ, ಅದಕ್ಕೆ ಕಾರಣವಿದೆ. ನಿನ್ನೆ ಒಬ್ಬರ ಮನೆಯಲ್ಲಿ ಸಂಪಿನ ಮುಚ್ಚಳ ತೆರೆಯುತ್ತೇನೆ. ನಾಗರಹಾವಿನ ಮರಿ ಆಟವಾಡುತ್ತಿತ್ತು. ಹೆದರಿ ಕೂಡಲೇ ಸಂಪಿನ ಮುಚ್ಚಳ ಹಾಕಿದೆ. ಮನೆಯವರಿಗೆ ವಿಷಯ ತಿಳಿಸಿದರೂ ನಂಬಲೊಲ್ಲರು ಅಂತೀನಿ. ಅವರೂ ಸಂಪು ತೆರೆದು ನೋಡಿ ಖಚಿತಪಡಿಸಿಕೊಳ್ಳುವವರೆಗೆ ನಾನು ಬಿಡಲಿಲ್ಲ. ಮತ್ತೆ ಹಾವು ಹಿಡಿಯುವವನಿಗೆ ಫೋನ್ ಮಾಡಿ ಕರೆಸಿ ಹಿಡಿಸಿದರು. ಸಂಪಿನ ನೀರು ಖಾಲಿ ಮಾಡಿ ತಾರಸಿ ಮೇಲಿದ್ದ ಟ್ಯಾಂಕ್ ತೊಳೆಸಿದರು. ಮಹಡಿಮನೆಯಲ್ಲೂ ಒಂದು ಸಂಸಾರ ಇದೆ. ಇವತ್ತು ಅಡುಗೆ ಮಾಡಿದ್ದನ್ನು ಊಟ ಮಾಡಬೇಡಿ ಎಂದು ಅವರಿಗೂ ಹೋಗಿ ಹೇಳಿದೆ. ನೀರೊಳಗೆ ಹಾವು ಇತ್ತು ಎಂದಮೇಲೆ ಆ ನೀರನ್ನು ಉಪಯೋಗಿಸುವುದು ಅಪಾಯ. ಆಲೂಗಡ್ಡೆಗೆ ಬದನೆಕಾಯಿ ಹಾಕಿ ಗಟ್ಟಿ ಹುಳಿ ಮಾಡಿದ್ದರು. ಅವನ್ನೆಲ್ಲ ಚೆಲ್ಲಿಸಿಬಿಟ್ಟೆ. ಎಷ್ಟು ಚೆನ್ನಾಗಿ ಮಂದವಾಗಿತ್ತೂ ಅಂತೀರಿ ನಂಗೇ ಹೊಟ್ಟೆ ಉರುದು ಹೋಯಿತು. ಆದರೂ ಬೇರೆ ಯೋಚ್ನೇನೆ ಮಾಡದೆ ಚೆಲ್ಲಿಸಿದೆ. ಮತ್ತೆ ಅವರು ದೋಸೆ ಮಾಡಿ ತಿಂದರು’ ಎಂದು ನಡೆದ ಘಟನೆಯನ್ನು ವಿವರಿಸಿದಳು.
ಅದೇ ನೀರು ಹಾಕಿ ಹಿಟ್ಟು ಮಾಡಿ ಆ ದೋಸೆ ಮಾಡಿದ್ದಲ್ವ? ಅದನ್ನು ತಿನ್ನಬಹುದೆ? ಎಂದು ಕಿಲಾಡಿ ಪ್ರಶ್ನೆ ಎಸೆದೆ.
‘ಅದೇನೂ ಪರವಾಗಿಲ್ಲ. ಹಿಟ್ಟು ನಿನ್ನೆ ಮಾಡಿದ್ದು. ಇವತ್ತು ತಾನೆ ಹಾವು ಇದ್ದದ್ದು?’ ಎಂದು ಸಮಜಾಯಿಸಿ ಕೊಟ್ಟಳು!
‘ನಮ್ಮ ಸಂಪನ್ನೂ ಮುಚ್ಚಳ ತೆರೆದು ನೋಡಬೇಕವ್ವ. ಎಲ್ಲಾದರೂ ಹಾವು ಸೇರಿಕೊಂಡರೆ ಅಪಾಯ. ಅದು ಪೈಪಿನಲ್ಲಿ ನೀರಿನೊಡನೆ ಬರುವುದಂತೆ. ನಿಮ್ಮ ಅಣ್ಣನ ಮನೆ ಸಂಪನ್ನೂ ತೆರೆದು ನೋಡಲು ಹೇಳಿ. ಅವರ ಸಂಪಿನ ಸುತ್ತ ಮಸ್ತಾಗಿ ಸತ್ತೆ ಬೆಳೆದಿದೆ. ಅಲ್ಲಿ ಎಲ್ಲ ಕ್ಲೀನ್ ಮಾಡಿಸಿ ಸಿಮೆಂಟು ಹಾಕಿಸಲು ಹೇಳಿ. ಬೇಕಾದರೆ ನಾನು ಹೇಳಿದ್ದೆಂದೇ ಹೇಳಿ. ಬೈದರೆ ಬೈಸಿಕೊಳ್ತೇನೆ ‘ಎಂದಳು.
ಆ ದಿನ ಸುಮ್ಮನೆ ಇದ್ದೆ. ಸಿದ್ದಮ್ಮ ಹೇಳಿದ್ದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ರಾತ್ರೆ ಎಲ್ಲ ಅದೇ ಯೋಚನೆ. ನಮ್ಮ ಸಂಪಿನೊಳಗೆ ಹಾವು ಇದ್ದಾಂಗೆ ಕನಸು! ಈ ಗೊಂದಲ ನಿವಾರಣೆಗೆ ಸಂಪು ಮುಚ್ಚಳ ತೆರೆದು ನೋಡುವುದೇ ಮದ್ದು ಎಂದು ಬೆಳಗ್ಗೆ ಎದ್ದು ಧೈರ್ಯ ಮಾಡಿ ಸಂಪಿನ ಮುಚ್ಚಳ ತೆರೆದು ನೋಡಿದೆ. ಹಾವು ಎಲ್ಲಿಯೂ ಕಾಣಲಿಲ್ಲ. ಸಿದ್ದಮ್ಮ ಬಂದಾಗ ಹೇಳಿದೆ ಹಾವು ಇರಲಿಲ್ಲ ಎಂದು. ಅವಳೋ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದೆ ಟಾರ್ಚ್ ಪಡೆದು ಮುಚ್ಚಳ ತೆರೆದು ಕೂಲಂಕಷವಾಗಿ ನೋಡಿಯೇ ಹಾವು ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡಳು.
-ರುಕ್ಮಿಣಿಮಾಲಾ. ಮೈಸೂರು
ಚೆನ್ನಾಗಿದೆ..