ಜಗಬೆಳಗುವ ಹಣತೆಗಳು…

Share Button

ತಾನು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ತನ್ನ ಸಮಾಜ ತನ್ನ ದೇಶ ಎಂಬ ವಿಶಾಲ ಕ್ಷೇತ್ರವನ್ನು ಕಾಣುವ ದೃಷ್ಠಿಯುಳ್ಳ ವ್ಯಕ್ತಿಗಳ ಸಮೂಹವನ್ನು ನಾವು ಸುಸಂಸ್ಕೃತ ಜನಾಂಗವೆಂದು ಕರೆಯಬಹುದು. ಇಂತ ಸುಸಂಸ್ಕೃತ ಜನಾಂಗವನ್ನು ನಿರ್ಮಾಣ ಮಾಡುವುದಕ್ಕೆ ರಾಷ್ಟ್ರ ನಿರ್ಮಾಣ ಎಂದು ಹೇಳಬಹುದಾಗಿದೆ.ಮನೆಯ ಅಸ್ತಿತ್ವವು ಅದರ ಒಂದೊಂದು ಮರಳಿನ ಕಣವನ್ನು ಅವಲಂಬಿಸಿರುವಂತೆ, ರಾಷ್ಟ್ರದ ಅಸ್ತಿತ್ವ ಪ್ರತಿಯೊಬ್ಬ ಪ್ರಜೆಯನ್ನು ಅವಲಂಭಿಸಿರುತ್ತದೆ. ಬಡವ, ಬಲ್ಲಿದ, ಅಕ್ಷರಸ್ಥ ಅನಕ್ಷರಸ್ಥ ವಿದ್ಯಾರ್ಥಿ ಗುರುಗಳು ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ. ಅವರರವರ ಕರ್ತವ್ಯ ಮರೆತರೆ ಅದು ಈ ದೇಶಕ್ಕೆ ಹಾನಿಯಾದಂತೆ.

ಹಾಗಾಗಿಯೇ ಈ ದೇಶದ ಪಾಲಿಗೆ ವಿದ್ಯಾರ್ಥಿಗಳ ಹೊಣೆಗಾರಿಕೆಯು ಅಷ್ಟೊಂದು ಮುಖ್ಯವಾಗಿರುತ್ತದೆ. ತೇರನ್ನೆಳೆವಾಗ ನೂರಾರು ಜನರು ಕೈಜೋಡಿಸುವಂತೆ, ಅನನುಭವಿಗಳು ಚಿಕ್ಕವರು ಆದ ವಿದ್ಯಾರ್ಥಿಗಳು ಸಹ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದರೆ ರಾಷ್ಟ್ರ ನಿರ್ಮಾಣದ ಕಾರ್ಯ ಸುಗಮವಾಗಿ ಸಾಗುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಬಗ್ಗೆ ತಾನು ಅರಿತುಕೊಂಡು ತನ್ನನ್ನು ತಾನು ಮೊದಲು ಸುಸಂಸ್ಕತರ ಪಂಕ್ತಿಯಲ್ಲಿ ಸೇರಿಸಿಕೊಂಡು, ತನ್ನ ನಡೆ ನುಡಿ ಕಾರ್ಯತತ್ಪರತೆಗಳ ಬಗ್ಗೆ ಯೋಚಿಸಿ ಸರಿಯಾದ ಕಾರ್ಯರೂಪಕ್ಕೆ ತರಬೇಕು. ಎಲ್ಲ ಮಕ್ಕಳು ನನ್ನಂತೆ ಎನ್ನುವ ವಿಶಾಲ ಮನೋಭಾವ ತಾಳಬೇಕು. ಆದಿಶೆಯಲ್ಲಿ ಮುನ್ನಡೆಯಬೇಕು. ಇದು ಅವನ ಮೊದಲ ಕರ್ತವ್ಯವಾಗಬೇಕು.

ವಿದ್ಯಾರ್ಥಿಗಳು ತನ್ನ ಸುತ್ತ ಮುತ್ತಲಿನ ವಾತಾವರಣವನ್ನು ದೇಶದ ಅಭಿವೃದ್ಧಿಗೆ ನೆರವಾಗುವಂತೆ ಹೊಂದಿಸಬೇಕು. ಜೊತೆಗೆ ಹಿಂದುಳಿದ ತನ್ನ ಊರಿನ ಜನರಿಗೆ ಸಮಾಜವೆಂದರೆ ಏನು, ಸಮಾಜದಿಂದಾಗುವ ಪ್ರಯೋಜನ ಇವುಗಳ ಬಗ್ಗೆ ತಿಳಿಸುವುದು. ವಿದ್ಯೆಯಿಲ್ಲದ ತನ್ನ ನೆರೆಹೊರೆಯವರಿಗೆ ವಿದ್ಯೆಯ ಪ್ರಯೋಜನವನ್ನು ಮನದಟ್ಟು ಮಾಡಿ ಅಕ್ಷರರನ್ನಾಗಿಸಲು ಪ್ರಯತ್ನಿಸುವುದು. ‘ಕಾರ್ಯ ನನ್ನದು ಸಫಲತೆ ನಿನ್ನದು’ ಎಂದು ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ದೇಶದ ಆಗುಹೋಗುಗಳ ಬಗ್ಗೆ ತನ್ನ ಸಮಾಜದ ಜನರಿಗೆ ತಿಳಿಸುತ್ತಾ ಬಂದರೆ ದೇಶದ ಅಭಿವೃದ್ಧಿ ಯೋಜನೆಗಳ ತಿಳುವಳಿಕೆ ಪರಿಚಯ ಎಲ್ಲರಲ್ಲಿಯೂ ಮೂಡುವಂತಾಗುವುದು.

ಹೊರಗಿನ ಪ್ರಪಂಚದ ಗಂಧ ಗಾಳಿ ಅರಿಯದೆ ತಮ್ಮದೇ ಲೋಕದಲ್ಲಿ ಇದ್ದ ಮುಗ್ಧ ಜನರಿಗೆ ಈ ಸಮಾಜದ ಪರಿಚಯ ಮಾಡುತ್ತಾ ಬಂದರೆ, ಅನೇಕ ವಿಚಾರಗಳನ್ನು ಹಂಚುತ್ತಾ ಬಂದರೆ ಅವರೂ ಸಹ ಬದಲಾಗುತ್ತಿರುವ ಸಮಾಜದೊಡನೆ ತಾವು ಸಹಜವಾಗಿ ಬದಲಾವಣೆಗೆ ಯತ್ನಿಸುವರು.

 

ಇಂತ ಅಖಂಡ ಸಾಮರ್ಥವುಳ್ಳ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಕೇವಲ ಮೋಜು ಮಸ್ತಿ ಇನ್ನಾವುದೋ ಸಮಾಜ ಸ್ವಾಸ್ಥ್ಯ ಕೆಡಿಸುವ ಕಾರ್ಯದಲ್ಲಿ ಕಳೆಯದೆ, ತನ್ನೂರಿನ ಜನರಿಗೆ ರಾಷ್ಟ್ರ ನಿರ್ಮಾಣ ಮಾಡುವುದರ ಉದ್ದೇಶಗಳನ್ನೊ ಅಥವಾ ಒಳ್ಳೆಯ ವಿಚಾರಗಳನ್ನೋ ತಿಳಿಸಿದರೆ ಈ ರಾಷ್ಟ್ರ ನಿರ್ಮಾಣದ ಕಾರ್ಯ ಸುಗಮವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.  ದೀಪದಿಂದ ದೀಪ ಹಚ್ಚುವಂತೆ. ಒಂದು ಹಣತೆಯಿಂದ ಸಾವಿರಾರು ಹಣತೆಗಳು ಬೆಳಗಿ ಜಗವೆಲ್ಲ ಬೆಳಗುವಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಜಗಬೆಳಗುವ ದೀಪವಾಗಬೇಕು. ತನ್ನ ಬಿಡುವಿನ ಅವಧಿಯಲ್ಲಿ ಅನೇಕ ಮಹಾ ಪುರುಷರ ಈ ದೇಶದ ಮಹಿಮೆಯ ವಿಚಾರವನ್ನು ತಾನು ತಿಳಿದು ಹಳ್ಳಿಯ ಮೂಲೆ ಮೂಲೆಗೂ ತಲುಪಿಸಿ ಅದರ ತಿರುಳನ್ನು ಅವರಿಗೆ ತಿಳಿಸಿದರೆ ಈ ಕಾರ್ಯ ಯಶಸ್ವಿಯಾಗುತ್ತದೆ. ವಿದ್ಯಾರ್ಥಿ ಒಬ್ಬ ರಾಷ್ಟ್ರದ ಸಂದೇಶವಾಹಕನಾಗಬೇಕು.

ದೇಶವೆಂಬ ಮನೆಯ ಕೊಳ್ಗಂಬಮದಂತಿರುವ ವಿದ್ಯಾರ್ಥಿಗಳು ಮೊದಲು ತಾನು ಸದೃಡನಾಗಿ ಅನಂತರ ತಮ್ಮವರನ್ನೂ ಬಲಯುತರನ್ನಾಗಿ ಮಾಡಲು ಹೊರಟನೆಂದರೆ ದೇಶದ ಏಳಿಗೆಯಾಗುವುದು ಖಂಡಿತ. ವಿದ್ಯೆ ಕಲಿತ ವಿದ್ಯಾರ್ಥಿ ಕೇವಲ ಉದ್ಯೋಗಕ್ಕಾಗಿ ಮಾತ್ರ ತನ್ನನು ಸೀಮಿತವಾಗಿರಿಸಿಕೊಂಡು ಸ್ವಾರ್ಥಿಯಾಗದೆ ತಾನು ಈ ದೇಶದ ಏಳಿಗೆಯಲ್ಲಿ ಪಾಲುದಾರ ಎಂಬ ಮನೋಭಾವದಿಂದ ಅಭಿಮಾನದಿಂದ ದೇಶದ ಅಗತ್ಯವಾದ ಕಾರ್ಯದಲ್ಲಿ ತಾನು ತೊಡಗಿಸಿಕೊಂಡರೆ ಈ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿ ಸ್ವತಃ ತಾನೇ ತೊಡಗಿಕೊಂಡತಾಗುತ್ತದೆ.

ಇಂತಹ ವಿದ್ಯಾರ್ಥಿ ಸಮೂಹ, ಜಗಬೆಳಗುವ ದೀಪವಾಗುತ್ತಾರೆ…

-ಉಮೇಶ ಮುಂಡಳ್ಳಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: