ಪ್ರೋತ್ಸಾಹವೆಂಬ ಅಪೂರ್ವ ದಾನ..
ಮೊನ್ನೆ ಸಭೆಯೊಂದರಲ್ಲಿ ಮುಖ್ಯ ಭಾಷಣಕಾರರೊಬ್ಬರು ಮಾತಾಡುತ್ತಾ “ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ ಕೊಡುವುದಕ್ಕೆ ಸಂಸ್ಕಾರ ಬೇಕು” ಎಂದಿದ್ದರು. ಪ್ರೋತ್ಸಾಹಿಸಿದರೆ ಎಲ್ಲಿ ಏನನ್ನು ಕಳಕೊಳ್ಳುತ್ತೇವೋ ಎಂಬಂತೆ ಅದೇ ಅವರ ಸಹಜರೀತಿಯಾಗಿ ಬದುಕುವವರನ್ನು ನೋಡಿದರಂತೂ ಆ ಮಾತಿನಲ್ಲಿನ ಆಳವಾದ ಅರ್ಥವು ಹಲವು ಮಜಲುಗಳನ್ನು ಪಡೆದು ದಿಟವೆನಿಸುತ್ತದೆ. ಎಷ್ಟೋ ಬಾರಿ ಕೆಲ ವ್ಯಕ್ತಿಗಳನ್ನು ನೋಡಿದಾಗ, ಇವರಿಗೆ ಸಮಯಕ್ಕೆ ಸರಿಯಾಗಿ ಯಾರಾದರೂ ಬೆನ್ನು ತಟ್ಟಿ ಹುರಿದುಂಬಿಸಿದ್ದಿದ್ದರೆ ಇವತ್ತು ಬೇರೇನೋ ಆಗಿಬಿಡುತ್ತಿದ್ದರು ಎಂದೆನಿಸಿದ್ದಿದೆ.
ಭಗವದ್ಗೀತೆಯಲ್ಲಿ ಉಲ್ಲೇಖವಿರುವಂತೆ ಅದೊಮ್ಮೆ ಸೋತು ಸೊಪ್ಪಾಗಿ ಹಿಂಜರಿಕೆ, ಅಳುಕುಗಳಿಂದ ಕೂಡಿದ ಮನಸ್ಥಿತಿಯಲ್ಲಿ ಕುಳಿತಿದ್ದ ಅರ್ಜುನನಿಗೆ ಕೃಷ್ಣ ತನ್ನ ಮಾತಿನ ಮೂಲಕ ಅಪಾರ ಚೈತನ್ಯವನ್ನು ತುಂಬಿಸುತ್ತಾನೆ. ಚದುರಿ ಹೋಗಿದ್ದ ಅರ್ಜುನನ ಆತ್ಮಸ್ಥೈರ್ಯವನ್ನೆಲ್ಲಾ ಒಗ್ಗೂಡಿಸಿ ಕಾರ್ಯ ಸಾಧಿಸುತ್ತಾನೆ. ಹಾಗೆಯೇ ಸನ್ನಿವೇಶವೊಂದರಲ್ಲಿ ಅರ್ಜುನನಿಗೆ ಕೃಷ್ಣನಿಂದ ಪ್ರೋತ್ಸಾಹದ ಕುರಿತಂತೆ ಬಹುದೊಡ್ಡ ಉಪದೇಶವಾಗುತ್ತದೆ. ಪರರಿಗೆ ಮಾಡುವ ದಾನ ಧರ್ಮ ಬರಿಯ ಧನಕ್ಕೋ, ಧಾನ್ಯಕ್ಕೋ ಸಂಬಂಧಿಸಿದುದು ಮಾತ್ರವಲ್ಲ, ಯಾವುದೇ ರೀತಿಯಲ್ಲಿ ಯಾರಿಗೋ ತಿಳಿಯದಂತೆ ಒಳಿತನ್ನು ಮಾಡುವುದೂ ದಾನವಾಗುತ್ತದೆ ಎಂಬರ್ಥದಲ್ಲಿ ಮಾತನಾಡುತ್ತಾನೆ ಕೃಷ್ಣ. ಕೈಯ್ಯಲ್ಲಿ ದಾನಮಾಡುವಷ್ಟು ಧನವೋ ಚೈತನ್ಯವೋ ಇಲ್ಲದಿದ್ದರೂ ಕೂಡಾ ಅಮೂಲ್ಯವಾದ ಇನ್ನೂ ಕೆಲವು ವಿಷಯಗಳನ್ನು ದಾನಮಾಡಬಹುದೆಂದು ಅಂದು ಅರ್ಜುನನಿಗೆ ತಿಳಿಹೇಳುತ್ತಾನೆ. ಬರಿಗೈಯಲ್ಲಿದ್ದವನೂ ಒಂದು ಮುಗುಳುನಗೆಯನ್ನೋ, ಒಳ್ಳೆಯ ಮಾತನ್ನೋ ದಾನವಿತ್ತರೆ ಅದೇ ಶ್ರೇಷ್ಠ ಎಂದು ಕೃಷ್ಣನ ಉವಾಚ.
ಸಧ್ಯದ ಪರಿಸ್ಥಿತಿಯಲ್ಲಿ ದಾನ ಎನ್ನುವುದು ಬರಿಯ ಧನ ಯಾ ಆಹಾರಗಳಿಗೆ ಸೀಮಿತವಾಗದೆ ಅಂಗಾಂಗ ದಾನ, ರಕ್ತ ದಾನ ಇತ್ಯಾದಿ ಕೂಡಾ ಪ್ರಮುಖವಾಗುತ್ತದೆ. ಅದೆಲ್ಲಾ ಒಂದು ಕಡೆಯಾದರೆ, ದಿನನಿತ್ಯ ನಾವು ಮಾಡಬಹುದಂಥಾದ ಸರಳ, ಸುಲಭ ದಾನಗಳು – ನಗು, ಒಳ್ಳೆಯ ಮಾತು ಇತ್ಯಾದಿಯಿರಬಹುದು. ಅದೆಷ್ಟೋ ಬಾರಿ ಸಣ್ಣ ಪುಟ್ಟ ಕಾರಣಕ್ಕೆ, ಹಿನ್ನೆಲೆಯಲ್ಲಿರುವ ಇನ್ನಾವುದೋ ಸಂಗತಿ ಜತೆ ಸೇರಿ ಕೋಪ ಏರಿ ಭುಸುಗುಡುತ್ತಿರುವವರಿಗೆ ಆತ್ಮೀಯರು ಮೌನವಾಗಿಯೇ ತಣ್ಣನೆಯ ಮುಗುಳು ನಗೆ ಬೀರಿದರೆ ಕೋಪವೆಲ್ಲಾ ಸ್ವಲ್ಪ ಹೊತ್ತಿನಲ್ಲಿ ತಹಬಂದಿಗೆ ಬಂದು ಕರಗಿ ಕೂರುವುದಿದೆ. ಈ ರೀತಿಯ ಧನಾತ್ಮಕ ದಾನಗಳು ನಡೆಯದೇ ಹೋದಲ್ಲಿ ಕೋಪದ ತಾಪವೇ ಇತರರಿಗೂ ಮುಫ್ತಿಯಾಗಿ ಲಭಿಸಿ ಅಲ್ಲೊಂದು ರೀತಿಯ ಋಣಾತ್ಮಕ ಜಾಯಮಾನವೇ ಪಸರಿಸುವುದಿದೆ.
ಕೃಷ್ಣನ ಉಪದೇಶದಲ್ಲಿ ಬರುವ ಅತಿ ಮುಖ್ಯ ದಾನ “ಪ್ರೋತ್ಸಾಹ”. ಒಳ್ಳೆಯ ಕೆಲಸಕ್ಕೆ, ಉತ್ತಮ ಸಾಧನೆಗೆ, ಸಾಧನೆಯ ಹೆಜ್ಜೆಯಿಡುತ್ತಿರುವವರಿಗೆ, ಹೀಗೆ ಎಲ್ಲಿ ಪ್ರೋತ್ಸಾಹ ಕೊಡಬೇಕೋ ಅಲ್ಲಿ ಕೊಡುವುದು ಕಷ್ಟವಲ್ಲ ಅಲ್ಲವೇ? ಕೆಲವೊಮ್ಮೆ ಒಂದೊಳ್ಳೆ ಮಾತು ಆ ವ್ಯಕ್ತಿಗೆ ಅಪಾರ ಶಕ್ತಿಯಾಗಿ ಹೊರಹೊಮ್ಮಲು ಸಹಾಯಕವಾಗಬಹುದು. ಇದರಲ್ಲಿ ನಷ್ಟವಂತೂ ಖಂಡಿತಾ ಇಲ್ಲ. ವ್ಯಕ್ತಿಗತವಾದ ಲೋಭ, ಸ್ವಾರ್ಥಗಳ ಹಿಡಿತಕ್ಕೆ ಬುದ್ಧಿಯನ್ನು ಕೊಟ್ಟರೆ ವ್ಯಕ್ತಿತ್ವದ ವಿಕಸನ ಅಸಾಧ್ಯ ಎಂಬುದೊಂದು ಮಾತಿದೆ. ವ್ಯಕ್ತಿತ್ವದ ಪರಿಪೂರ್ಣತೆಯೆಡೆಗೆ ತುಡಿಯುತ್ತಿರುವವರಲ್ಲಿ ಇತರರಿಗೆ ಪ್ರೋತ್ಸಾಹ ನೀಡುವುದೋ, ತನ್ನ ತಪ್ಪಿದ್ದೆಡೆ ಕ್ಷಮೆ ಕೇಳುವುದೋ ಕಷ್ಟವೆನಿಸುವುದಿಲ್ಲ ಕೂಡಾ ಹೌದು.
ವೈಯಕ್ತಿಕ ಆಸಕ್ತಿಯ ಮೇಲೆ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕುವರರಿಗೆ ಇತರರ ಅನಗತ್ಯ ಕುತೂಹಲಗಳೂ, ಕೊಂಕುಗಳೂ ಸಮಾಜದೆಲ್ಲೆಡೆ ಎಡತಾಕುವುದು ಸಾಧಾರಣ. ಗುಂಪೊಂದರ ಮಧ್ಯೆ ಕುಳಿತು ಅನಗತ್ಯ ಅವಹೇಳನೆಕಾರಿ ಮಾತುಗಳನ್ನಾಡುವ “ಅತೃಪ್ತ ಆತ್ಮಗಳೂ” ಕೆಲವೊಮ್ಮೆ ಹತ್ತಿರದವರೆನಿಸಿಕೊಂಡವರೇ ಆಗಿರಬಹುದು. ಒಳಗಿನ ಹುಳುಕನ್ನು ಹೊರಹಾಕುವಾಗ ಆ ಹುಳುಕನ್ನು ಇತರರಿಗೂ ಮುಫ್ತಿಯಾಗಿ ಪಸರಿಸುವ ಕೆಲಸವನ್ನು ಮಾಡುವ ಅಂಥಹ ವ್ಯಕ್ತಿತ್ವಗಳು ಹೊರಕಾರುವ ಕೆಡುಕು ಅಸಹ್ಯ ಹುಟ್ಟಿಸುವಂತೆಯೇ ಅದೇ ಜಾಗದಲ್ಲಿ ಪ್ರೋತ್ಸಾಹವಿಲ್ಲದಿದ್ದರೂ ಮಾತನ್ನು ಬಂಗಾರದಂತೆ ಅಳೆದು ತೂಗಿ ಮಾತಾಡುವವರ ವ್ಯಕ್ತಿತ್ವವೇ ಉನ್ನತವಾಗುತ್ತದೆ.
ಯಾರದೇ ಪ್ರೋತ್ಸಾಹವಿಲ್ಲದಿದ್ದರೂ, ನೂರಾರು ಎಡರಉ ತೊಡರುಗಳ ನಡುವೆಯೇ ಸಾಧನೆಯ ಶಿಖರವನ್ನೇರಿದ ಮಹಾನ್ ವ್ಯಕ್ತಿಗಳನ್ನು ಕಾಣುತ್ತೇವೆ. ಸಾಧನೆಗೆ ಪ್ರೋತ್ಸಾಹ ಅತ್ಯಗತ್ಯವಲ್ಲ, ಅದಿಲ್ಲದೆಯೂ ಸಾಧನೆಯ ಮೆಟ್ಟಿಲುಗಳನ್ನು ಹತ್ತಬಹುದು. ಆದರೆ ಕೆಲವು ಕೆಲಸಗಳು ಪರರಿಗೆ ಉಪಕಾರಿಯಾಗಿ ಆತ್ಮ ತೃಪ್ತಿಯನ್ನು ಕೊಡುವ ಶಕ್ತಿ ಹೊಂದಿರುತ್ತವೆ. ಅಂಥಹವಲ್ಲೊಂದು ಮಾತ್ರ, “ಪ್ರೋತ್ಸಾಹ”.
– ಶ್ರುತಿ ಶರ್ಮಾ, ಬೆಂಗಳೂರು.
‘ಆದರೆ ಕೆಲವು ಕೆಲಸಗಳು ಪರರಿಗೆ ಉಪಕಾರಿಯಾಗಿ ಆತ್ಮ ತೃಪ್ತಿಯನ್ನು ಕೊಡುವ ಶಕ್ತಿ ಹೊಂದಿರುತ್ತವೆ. ಅಂಥಹವಲ್ಲೊಂದು ಮಾತ್ರ, “ಪ್ರೋತ್ಸಾಹ”.” 100 % ನಿಜ..ಉತ್ತಮ ಬರಹ .
ಧನ್ಯವಾದಗಳು ಮಾಲಕ್ಕ 🙂
ಚೆನ್ನಾಗಿ ಮೂಡಿ ಬಂದಿದೆ ಮೇಡಮ್….
ಧನ್ಯವಾದಗಳು 🙂
ಚೆನ್ನಾಗಿದೆ ಮೇಡಂ… ಪ್ರೋತ್ಸಾಹ ಇಲ್ಲದೆಯೂ ಸಾಧನೆ ಮಾಡಬಹುದು ಅಂದ್ರಲ್ಲ…ಪ್ರೋತ್ಸಾಹ ದೊರೆಯದವರಿಗಂತೂ ಖುಷಿ ಕೊಡುವ ಮಾತು….
ಧನ್ಯವಾದಗಳು 🙂
ಒಳ್ಳೆಯ ಬರಹ , ಸೊಗಸಾಗಿ ಮೂಡಿದೆ
ಧನ್ಯವಾದಗಳು 🙂