ಕೃಷಿ ಎಂಬ ತತ್ವ ಜ್ಞಾನ
‘ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ ದೇವರಿತ್ತ ಗಾಳಿ ನೀರು ಹಂಗೆಲ್ಲಿದೆ ಸ್ವಾಮಿ” ಇದು ನಾವು ಮಕ್ಕಳಿದ್ದಾಗ ರಾಗವಾಗಿ ಹಾಡುತ್ತಿದ್ದ ಸಮೂಹ ಗೀತೆಯೊಂದರ ಸೊಲ್ಲು. ಸ್ವಚ್ಛ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಣ್ಣು ಹಂಪಲು, ನಡೆಯಲು ವಿಸ್ತಾರವಾದ ಹುಲ್ಲುಗಾವಲು, ಬಯಲು.. ಹೀಗೆ ಅಪ್ಪಟ ಹಳ್ಳಿಯಲ್ಲಿದ್ದುಕೊಂಡು ತೆಂಗು, ಕಂಗು, ಬಾಳೆ, ವೀಳ್ಯದೆಲೆ, ಅಡಿಕೆ ಎಂದೆಲ್ಲ ಕೃಷಿಕ ವರ್ಗದ ಬದುಕು. ಅಂಗಳದ ತೊಂಡೆ , ಬಸಳೆ, ಕಾಡು ಮಾವು, ನೇರಲ, ಕೇಪಳ ಎಂದೆಲ್ಲ ಸಂಪೂರ್ಣ ಸಾವಯವ ಆಹಾರ. ಇದೀಗ ಸಿಟಿಗಳ ಇಕ್ಕಟ್ಟಾದ ಬಾಡಿಗೆ ಮನೆಗಳಲ್ಲಿ, ಸ್ವಂತದ್ದೋ ಬಾಡಿಗೆಯದ್ದೋ ಎಂದೆಲ್ಲ ಬದುಕುತ್ತಿರುವಾಗ ಕೃಷಿ ಎನ್ನುವ ‘ಬದುಕು’ ಆಗೀಗ ಕಾಡುತ್ತಿರುತ್ತದೆ.
ಈಗ ಸಿಟಿಯಲ್ಲಿರುವ ಹೆಚ್ಚಿನವರೂ ಒಂದುಕಾಲದಲ್ಲಿ ಹಳ್ಳಿಯಲ್ಲಿದ್ದವರೇ. (ಕೆಲವರು ಭೂಮಿಯನ್ನು ಈಗಲೂ ಉಳಿಸಿಕೊಂಡಿದ್ದಾರೆ) ಅಪರೂಪಕ್ಕೊಮ್ಮೆ ಊರಿಗೆ ಹೋದಾಗ ಸಿಗುವ ಗುಜ್ಜೆ, ಬಾಳೆಕಾಯಿ, ತಿಮರೆ ಎಂದೆಲ್ಲ ಖುಶಿ ಪಡುತ್ತ, ಅಡಿಕೆ ಹೂವಿನ ಘಮಲಿಗೆ, ಕಾಡು ಮಾವಿನ ಪರಿಮಳಕ್ಕೆ ನಾಸ್ಟಾಲ್ಜಿಯಾ ಪಡುತ್ತ.. ಆ ಒಂದು ಕಳೆದು ಹೋದ ಜೀವನ ವಿಧಾನ ನಮ್ಮನ್ನೆಲ್ಲ ಕಾಡದಿರದು. ಈ ಧಾವಂತ, ಗಡಿಬಿಡಿಯ ಬದುಕಿನಲ್ಲಿ ಒಂದು ಹೂವು ಅದರದೇ ಸಮಯ ತೆಗೆದುಕೊಂಡು ಮೌನವಾಗಿ ಅರಳಿ ನಗುತ್ತಿರುವಾಗ, ಮರವೊಂದು ಹಳದಿ, ಕೆಂಪು ಎಲೆಗಳನ್ನುದುರಿಸಿ ತತ್ವ ಜ್ಞಾನಿಯಂತೆ ಮರಳಿ ಚಿಗುರೊಡೆಯುತ್ತಿರುವಾಗ ಕೃಷಿಯೆಂದರೆ ಬದುಕಿನ ಪಾಠವೇ ಸರಿ; ಅದೊಂದು ತತ್ವ ಜ್ಞಾನ.
ಕೃಷಿಯನ್ನು ಗಂಭೀರವಾಗಿ ಪರಿಗಣಿಸಿ ಸಂತರಂತೆ ಬದುಕುತ್ತಿರುವ ಅನೇಕ ಅನಾಮಿಕ ಕೃಷಿ ಯೋಗಿಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಖ್ಯಾತ ಕೃಷಿ ಚಿಂತಕರ ಪ್ರಕಾರ ಸ್ವಾತಂತ್ರ್ಯಾನಂತರದ ಎಪ್ಪತ್ತು ವರ್ಷಗಳಲ್ಲಿಯೂ ಶ್ರಮತತ್ವಕ್ಕೆ ಆದ್ಯತೆ ದೊರೆಯಲಿಲ. ಅದೂ ಅಲ್ಲದೆ ಧರ್ಮ ಶಾಸ್ತ್ರಗಳು, ರಾಜ್ಯ ಶಾಸ್ತ್ರಗಳೂ ಕೃಷಿಯನ್ನು ಮುನ್ನೆಲೆಗೆ ತರಲಿಲ್ಲ. ಈ ನಿಟ್ಟಿನಲ್ಲಿ ಕೃಷಿಯನ್ನೊಂದು ತಾತ್ವಿಕತೆ ಎಂದುಕೊಂಡರೆ ಕೃಷಿಕರು ಯಾರು ಎನ್ನುವ ಪ್ರಶ್ನೆ. ರೈತರೇ, ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವವರೇ, ಹೊಲ ಗೆದ್ದೆಗಳಲ್ಲಿ ದುಡಿಯುತ್ತಿರುವವರೇ, ಭಾರಿ ಪ್ರಮಾಣದಲ್ಲಿ ಇಳುವರಿಯನ್ನು ಪಡೆಯುತ್ತಿರುವ ಭೂ ಮಾಲಿಕರೇ ಹೀಗೆಲ್ಲ. ನಮಗೆ ಗೊತ್ತಿರುವಂತೆ ಕೃಷಿಗೆ ಹೇಳಿಕೊಳ್ಳುವಂತಹ ಉದ್ಯೋಗ ಭದ್ರತೆ ಇಲ್ಲ. ಅದು ನೀರು, ಬೆಲೆ, ಬೆಳೆ, ಅಂತರ್ಜಲ ಹೀಗೆ ಹಲವಾರು ವಿಷಯಗಳನ್ನು ಆಧರಿಸಿದೆ. ಅದೂ ಅಲ್ಲದೆ ಅಗ್ರಿಕಲ್ಚರ್ ಯುನಿವರ್ಸಿಟಿಗಳನ್ನು ಹೊರತು ಪಡಿಸಿದರೆ ‘ಕೃಷಿ’ ಎನ್ನುವುದು ಪಠ್ಯವಾಗಿ ಸ್ಕೂಲು ಕಾಲೇಜುಗಳಲ್ಲಿ ಇಲ್ಲ. (ಪ್ರಕೃತಿಯ ವರ್ಣನೆ ಕತೆ, ಕಾವ್ಯಗಳಲ್ಲಿ ಇವೆಯಾದರೂ ಅವು ಇರುವುದು ವೈಚಾರಿಕ, ಸಾಹಿತ್ಯಕ ನೆಲೆಗಳಲ್ಲಿ). ಎನ್ನೆಸ್ಸೆಸ್, ಎನ್ ಸಿ ಸಿ ಎಂದು ಒಂದಷ್ಟು ಕೃಷಿಯ ಬದುಕನ್ನು ವಿದ್ಯಾರ್ಥಿಗಳು ಕಾಣಬಹುದೇನೋ.
ಕೃಷಿಯಿಂದ ಬದುಕು ಕಟ್ಟಿಕೊಳ್ಳಬಹುದೇ ಎನ್ನುವುದೂ ಒಂದು ಗಂಭೀರ ಪ್ರಶ್ನೆ. ಕಾಲೇಜು ಹಂತದಲ್ಲಿ ಮಣ್ಣು, ನೀರು, ಸಸ್ಯ, ಆದರ್ಶಗಳ ಬಗ್ಗೆ ಕುತೂಹಲ, ಬೆರಗು ನಮ್ಮ ಯುವ ಜನತೆಯಲ್ಲಿ ಮೂಡಿ ಬಂದರೆ, ಕೃಷಿಯೂ ಒಂದು ಆದಾಯದ ಮೂಲವಾದರೆ ಅದರಷ್ಟು ಶ್ರೇಷ್ಠ ವಿಚಾರ ಇನ್ನೊಂದಿಲ್ಲ. ಅದೇ ರೀತಿ ಕೃಷಿಯಲ್ಲಿ ಯಶಸ್ವಿಯಾದ ಮಾದರಿಗಳೂ ಅವರ ಮುಂದೆ ಇದ್ದರೆ ಮಾತ್ರ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವ ಪರಿಸ್ಥಿತಿ ಬದಲಾಗಬಹುದು; ಯುವಕರು ಹಳ್ಳಿಗಳಲ್ಲಿ ಉಳಿಯಬಹುದು.
ಯಾವುದೇ ಪ್ರಚಾರ ಬಯಸದೆ ತಮ್ಮ ಪಾಡಿಗೆ ಅನ್ನ ಬೆಳೆಯುತ್ತಿರುವ ರೈತರು, ತಮ್ಮ ದೈನಂದಿನ ಜೀವನದಲ್ಲಿ, ಹಕ್ಕಿಯ ಕೂಗಿನಲ್ಲಿ, ಹೂವಿನ ಅರಳುವಿಕೆಯಲ್ಲಿ, ತಮಗೆ ಸಿಗುವ ವರಮಾನದಲ್ಲಿ ಸಂತೃಪ್ತಿಯಿಂದ, ಲವಲವಿಕೆಯ ಆರೋಗ್ಯದಿಂದಿರುವ ಕೃಷಿಕರನ್ನು ಕಂಡಾಗ ಕೃಷಿಯೊಂದು ತತ್ವಜ್ಞಾನ ಎಂದು ಬಲವಾಗಿ ಅನಿಸುವುದು. ತಲೆಮಾರಿನಿಂದ ತಲೆಮಾರಿಗೆ ಆಗುತ್ತಿರುವ ಪಲ್ಲಟಗಳನ್ನು ಅಂಟಿಯೂ ಅಂಟಿಸಿಕೊಳ್ಳದೆ ಇರುವ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳುವ ಧೀಮಂತರಿದ್ದರೆ, ಇನ್ನು ಕೆಲವರಿಗೆ ಕೃಷಿಯೆಂದರೆ ಒಂದು ಜೀವನ ವಿಧಾನ, ತಪಸ್ಸು. ತೀರ ಲಾಭವೇ ಬೇಕಿಲ್ಲ ಎನ್ನದಿದ್ದರೂ ಅತಿ ಆಸೆ ಅವರಿಗಿಲ್ಲ. ಹನಿ ನೀರಾವರಿ, ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಮಿಶ್ರ ಬೆಳೆ, ಹವಾಮಾನ, ಮಣ್ಣಿಗೆ ಸೂಕ್ತವಾದ ಬೆಳೆಗಳು, ಎಲ್ಲಕ್ಕಿಂತ ಮುಖ್ಯವಾಗಿ ನೀರಿನ ಲಭ್ಯತೆ ಕೃಷಿಯನ್ನು ಪ್ರಭಾವಿಸುವ ಅಂಶಗಳು ಹಲವು. ಹಾಗೆಂದು ಕೃಷಿಯ ಸೌಭಾಗ್ಯವನ್ನು , ಅದು ನೀಡುವ ಆಂತರಿಕ ಶಾಂತಿಯನು ಮಾತುಗಳಿಂದ ತಿಳಿಸಲು, ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. (ಬರದಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಅಳಲು, ಆರ್ತತೆ, ದೈನ್ಯವನ್ನೂ ಸಾರ್ವಜನಿಕರು ಮೊದಲುಗೊಂಡು ಸರಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಈಗಿದೆ. ) ಫುಕುವೋಕಾರ ಸಹಜ ಕೃಷಿ, ಕೃಷಿ ವಿದ್ಯಾಲಯಗಳ ಸುಧಾರಿತ ಕೃಷಿ, ರಾಸಾಯನಿಕಗಳ ವಿರುದ್ಧ ಆಂದೋಲನ, ರೈತರಿಗೆ ಸಬ್ಸಿಡಿ, ಬೆಂಬಲ ಬೆಲೆ, ಹೀಗೆ ಕೃಷಿ ಜಗತ್ತಿನ ಪಲ್ಲಟಗಳು, ಬೆಳವಣಿಗೆಗಳು ಒಂದು ದೃಢವಾದ ತಾತ್ವಿಕ, ಸಾಮಾಜಿಕ ನೆಲೆಯ ದರ್ಶನದಿಂದಷ್ಟೇ ಸಾಧ್ಯ. ರೈತ ಯಾವತ್ತೂ ಬಡವಾಗಬಾರದು; ರೈತ ಬಡವನಾದರೆ ದೇಶ ಬಡವಾದಂತೆ.
ಈ ಉರುಟು ಗೋಲದ ಮೇಲೆ ಇಷ್ಟು ಸುವ್ಯವಸ್ಥಿತವಾಗಿ ಜೀವ ಜಾಲ ಸೃಷ್ಟಿಸಿದ ದೇವರನ್ನು ಯಾವ ರೀತಿ ಮರೆಯುತ್ತೇವೆಯೋ ಅದೇ ರೀತಿ ಅನ್ನ ಕೊಡುವ ರೈತನ ತ್ಯಾಗ, ಸದ್ದಿಲ್ಲದೆ ಬೆಳೆ ತೆಗೆದು ಜಗವ ಪೊರೆಯುವ ಕೃಷಿ ಸಂಸ್ಕೃತಿ ನಮ್ಮ ಅರಿವಿಗೆ ಬಾರದಿರುವುದೇ ಹೆಚ್ಚು. ಕಾಳಿಲ್ಲದೆ, ಹಸಿರಿಲ್ಲದೆ ರುಚಿ ರುಚಿಯಾದ ಆಡುಗೆ, ಪಾನೀಯಗಳು, ನಾಟಿ ಔಷಧಿ ಎಲ್ಲಿಂದ ಬರಬೇಕು? ಯಾವ ರೀತಿ ಜೀವ ಜಾಲಗಳು ಈ ಜಗತ್ತಿನಲ್ಲಿ ಬೆಸೆದುಕೊಂಡಿವೆಯೋ ಒಬ್ಬ ಜಾಗೃತ ರೈತನ ಹೊಲ, ಮನೆಗಳಲ್ಲಿ ಎರೆಹುಳುವಿನಿಂದ ಹಿಡಿದು ಕುರಿ, ಹಸು, ಹಾಲು ಹೈನ ಎಂದೆಲ್ಲ ಒಂದು ಸೂಕ್ಷ್ಮಾನುಸೂಕ್ಷ್ಮ ಸಾವಯವ ಸಂಬಂಧವಿರುತ್ತದೆ.
ಮಣ್ಣಿನೊಡಲ ಸೆಲೆಯಂತ ರೈತ, ಬಿರುಕು ಬಿಟ್ಟ ಹೊಲದಲ್ಲಿ ನಿಂತು ಆಗಸ ದಿಟ್ಟಿಸುತ್ತಿರುವ ರೈತ, ಹೊಲ ಹಸನು ಮಾಡುತ್ತ, ಭತ್ತ ಬಡಿಯುವ, ತೆನೆ ಬಿಡಿಸುವ, ರಾಗಿ ಕಣ ಒಟ್ಟುವ… ಹೀಗೆ ರೈತಾಪಿ ವರ್ಗದ ಬದುಕಿಗೂ ಮಣ್ಣಿಗೂ ನಿಕಟ ಸಂಬಂಧ. ಹೀಗಾಗಿಯೇ ರೈತರಷ್ಟು ಇಕಾಲಜಿಯನ್ನು ಅರಿತವರಿಲ್ಲ. ಕೃಷಿಯ ತಾತ್ವಿಕತೆ ಅದರಲ್ಲಿರುವ ಧ್ಯಾನದಲ್ಲಿದೆ, ಕಾಯುವಿಕೆಯಲ್ಲಿದೆ. ಮಣ್ಣಿನೊಡಲಿನಿಂದ ಬೀಜ ಮೊಳಕೆಯೊಡೆದು ಮರವಾಗಿ ಹೂ ಕಾಯಿ ಹಣ್ಣು ಬಿಡುವವರೆಗೆ ವರ್ಷಗಟ್ಟಲೆ ಕಾಯುವ ತಾಳ್ಮೆ, ಬರದ ನಾಡಲ್ಲಿ ಜಿನುಗು ನೀರಿನ ತಪನೆಯಿಂದ ಗಿಡಗಳನ್ನು ಹೇಗೋ ಉಳಿಸಿಕೊಂಡು ಮಳೆ ಬಂದಾಗ ಚಿಗಿತುಕೊಳ್ಳುವ ಆಶಾವಾದ, ಚಪ್ಪಲಿಯಿಲ್ಲದ ಕಾಲಲ್ಲೂ ನಡೆಯುವ ನಿರ್ಲಿಪ್ತತೆ.. ಹೀಗೆ. ( ರೈತರ ಮಕ್ಕಳು ರೈತರಾಗದೇ ಸಿಟಿಗೆ ಗುಳೆ ಹೋಗುವ, ರಸ್ತೆ ಸಂಪರ್ಕವಾದಂತೆ ಊರೇ ಖಾಲಿಯಾಗುವ ವಿದ್ಯಮಾನವೂ ಇಲ್ಲಿದೆ. ಗ್ರಾಮ್ಯ ಭಾರತಕ್ಕೆ ಸೌಲಭ್ಯಗಳು ಸಿಗದಿದ್ದರೆ ಇದು ಹಾಗೆಯೇ ಮುಂದುವರಿಯುತ್ತದೆ). ಬನ್ನಿ, ನೇಗಿಲ ಯೋಗಿಗೆ ನಮಿಸೋಣ.
– ಜಯಶ್ರೀ ಬಿ. ಕದ್ರಿ
ಚೆನ್ನಾಗಿದೆ ಬರಹ
ಜಯಕ್ಕ ಸುಪರ್ಬ್ ಲೇಖನ
ಅಪ್ಪಟ ಸತ್ಯದ ಮೇಲೆ ಬೆಳಕು ಚೆಲ್ಲುವ ಲೇಖನ ಚೆನ್ನಾಗಿದೆ ಜಯಶ್ರೇ…
Thank you Smitha .
Thank you ಪ್ರಮೋದ್