ಭಾಷೆಗಳೊಳಗಿನ ವಿಸ್ತೃತ ಲೋಕ

Share Button

ಶ್ರುತಿ ಶರ್ಮಾ, ಬೆಂಗಳೂರು.

ಈಗ್ಗೆ ಸರಿಯಾಗಿ ಇಪ್ಪತ್ತೆರಡು ವರುಷ ಹಿಂದೆ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಊರಿನ ಶಾಲೆಯೊಂದರಲ್ಲಿ ಆರಂಭವಾದ ನನ್ನ ಶಾಲಾ ದಿನಗಳು ನನಗೀಗಲೂ ನೆನಪಾಗುತ್ತವೆ.

ಶಾಲೆಗೆ ಹೊರಡುವುದರಲ್ಲಿ ಶತ ಸೋಂಭೇರಿಯಾಗಿದ್ದ ನಾನು, ಬೆಳಗ್ಗೆಯಿಂದಲೇ ಮನೆಯಲ್ಲಿ ಸಾಧ್ಯವಾದಷ್ಟು ಗಲಭೆಯೆಬ್ಬಿಸಿ, ಅತ್ತೂ ಕರೆದೂ ಕಡೆಗೆ ಸೋತು ಸೊಪ್ಪಾಗಿ ಶಾಲೆ ತಲುಪಿರುತ್ತಿದ್ದೆ. ಸರಿ, ಪುಟ್ಟ ಶಾಲೆಯಲ್ಲಿನ ಮೊದಲ ತರಗತಿಯೊಳಗಿನ ದಿನಗಳು ಆರಂಭವಾದದ್ದೇ ಆದದ್ದು! ನನ್ನಂತೆಯೇ ಅತ್ಯಂತ ನಿರುತ್ಸಾಹಿಯಾಗಿ ಕುಳಿತಿರುತ್ತಿದ್ದ, ಕೆಲಬಾರಿ ಅಳುತ್ತಿದ್ದ ಇತರ ಮಕ್ಕಳ ನಡುವೆ, ಶಾಲೆಯೊಳಗೆ ವಿಶೇಷ ಆಕರ್ಷಣೆಯೇನೂ ಇಲ್ಲವೆನಿಸಿ ಮಗುಮ್ಮಾಗಿ ಕುಳಿತು ಬರುತ್ತಿದ್ದ ದಿನಗಳವು! ತರಗತಿಯೊಳಗಿನ ಅಚ್ಚರಿಗಳಲ್ಲೊಂದಾಗಿದ್ದ, ಗಲ್ಫ಼್ ನಿಂದ ತಂದಿರಬಹುದಾದಂತಹ ಸೇಬಿನ ಆಕಾರದ ಸ್ಲೇಟು ಹಿಡಿದ ಹುಡುಗನ ಸ್ಲೇಟನ್ನು ಆಗಾಗ ಕದ್ದು ನೋಡುತ್ತಾ ಕೂರುತ್ತಿದ್ದ ನನಗೆ, ಬ್ಯಾಗ್ ನ ಬದಲು ಬ್ರೀಫ್ಕೇಸಿನಂಥಹ ಪೆಟ್ಟಿಗೆಯೊಂದರೊಳಗೆ ಅದನ್ನು ಭದ್ರ ಮಾಡುತ್ತಿದ್ದ ಅವನ ರೀತಿಯೇ ಬಹಳ ವಿಶೇಷವೆನಿಸುತ್ತಿತ್ತು. ಆ ಬಾಲಕನ ಬಳಿ ಸ್ವಾರಸ್ಯಕರವೆನಿಸುತ್ತಿದ್ದ ಕೆಲ ವಸ್ತುಗಳಿದ್ದುದು ಬಿಟ್ಟರೆ ಶಾಲೆಯೊಳಗಿನ ಬೇರೇನೂ ಆಕರ್ಷಕವೆನಿಸುತ್ತಿರಲಿಲ್ಲ! ಹಾಗಿದ್ದರೂ ಇಂಥಹ ಕೆಲವು ಅಚ್ಚರಿಗಳು ಕೆಲದಿನಗಳಲ್ಲಿ ವಿಶೇಷತೆಯನ್ನು ಕಳಕೊಂಡು ಸಪ್ಪೆಯಾಗಿ ಹೋಗಿದ್ದುವು!

ನನನ್ನೂ ಸೇರಿಸಿ ಹಲವು ಮಕ್ಕಳ ಕಾದಾಟ, ಚೀರಾಟಗಳು ಒಂದು ಹದಕ್ಕೆ ಬಂದಾಗ ಮೆಲ್ಲನೆ ಭಾಷಾ ತರಗತಿಗಳು ಆರಂಭವಾದುವು. ಆ ಶಾಲೆಯಲ್ಲಿ ಅಧ್ಯಯನದ ಮೊದಲ ಭಾಷೆ ಆಂಗ್ಲ ಆಗಿದ್ದರೆ, ಪ್ರಾದೇಶಿಕ ಭಾಷೆ ಎರಡನೆಯದು. ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಅಥವಾ ಮಲಯಾಳಂ ಮಧ್ಯೆ ಒಂದನ್ನು ಆಯ್ದುಕೊಳ್ಳಬಹುದಿತ್ತು. ತುಳು, ಕೊಂಕಣಿ, ಕನ್ನಡ, ಹವ್ಯಕ ಇತ್ಯಾದಿ ಮಾತೃಭಾಷೆಯಾಗಿರುವವರು ಕನ್ನಡವನ್ನೂ ಮಲಯಾಳಂ ಮಾತೃಭಾಷೆಯಾಗಿರುವ ಮಕ್ಕಳು ಮಲಯಾಳಂ ಅನ್ನೂ ಆಯ್ಕೆ ಮಾಡಿರುತ್ತಿದ್ದುದು ಸಾಮಾನ್ಯ. (ಕೇರಳ-ಕರ್ನಾಟಕದ ಗಡಿಭಾಗವಾದ ಕಾಸರಗೋಡನ್ನು ಸಪ್ತಭಾಷಾ ನಗರಿ ಎಂದೂ ಕರೆಯುವುದುಂಟು. ಇಲ್ಲಿ ಬಹುತೇಕರಿಗೆ ಮನೆಭಾಷೆಯು ಒಂದು, ವ್ಯಾವಹಾರಿಕ ಭಾಷೆಯು ಇನ್ನೊಂದಾಗಿರುತ್ತದೆ.)

ಅದೊಂದೆರಡು ದಿನ ಮಲಯಾಳಂ ಅಧ್ಯಾಪಕಿ ಯಾಕೋ ಬಂದಿರಲಿಲ್ಲವೆನಿಸುತ್ತದೆ. ಕನ್ನಡ ಅಧ್ಯಾಪಕಿಯೇ ಆ ಅವಧಿಯಲ್ಲಿ ಎರಡೂ ತರಗತಿಗಳನ್ನು ನಿರ್ವಹಿಸಬೇಕಾಗಿತ್ತು. ಆಕೆಗೋ, ಎರಡು ಭಾಷೆಗಳೂ ಸಲೀಸು. ಆಕೆ ಬೋರ್ಡ್ ನ ಮಧ್ಯಬಾಗದಲ್ಲಿ ಉದ್ದಕ್ಕೆ ಒಂದು ಗೀಟೆಳೆದು ಬಲಭಾಗದಲ್ಲಿ ಕನ್ನಡ ವ್ಯಂಜನಾಕ್ಷರಗಳನ್ನೂ ಎಡಕ್ಕೆ ಮಲಯಾಳಂ ವ್ಯಂಜನಾಕ್ಷರಗಳನ್ನೂ ಬರೆದರು. ಹಾಗೆಯೇ ಬಲಕ್ಕೆ ಕನ್ನಡ ವಿದ್ಯಾರ್ಥಿಗಳು, ಎಡಕ್ಕೆ ಮಲಯಾಳಂ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಒಂದು ವಿಭಾಗದಲ್ಲಿ ಒಂದಷ್ಟು ಹೊತ್ತು ಪಾಠಮಾಡಿ, ಏನೋ ಕೆಲಸ ಕೊಟ್ಟು ಇನ್ನೊಂದು ಭಾಗಕ್ಕೆ ಬರುತ್ತಿದ್ದರು.

PC: steelcase

ಶಾಲೆಗೆ ಸೇರುವ ಮೊದಲೇ ಮನೆಯಲ್ಲೇ ನನಗೆ ಕನ್ನಡ ಅಕ್ಷರಗಳ ಪರಿಚಯವಾಗಿತ್ತು. ಕನ್ನಡ ಅಕ್ಷರಮಾಲೆ ತಪ್ಪಿಲ್ಲದೆ ಓದಿ ಬರೆವಷ್ಟು ತರಬೇತಿ ಮನೆಯಲ್ಲೇ ಮುಗಿದಿತ್ತು. ಹುಟ್ಟು ಸೋಂಭೇರಿತನವಿರುವುದರಿಂದಲೋ ಏನೋ, ಮತ್ತೆ ಮತ್ತೆ ಅದನ್ನೇ ಬರೆಯುವುದು ನನಗೆ ಎಲ್ಲಿಲ್ಲದ ಉದಾಸೀನತೆಗೆ ಎಡೆ ಮಾಡುತ್ತಿತ್ತು. ಅಧ್ಯಾಪಕಿ ಬರೆಯುತ್ತಾ ಹೋದಂತೆ, ಸಹಜವಾಗಿ ಕನ್ನಡ ಅಕ್ಷರ ಮಾಲೆಗೆ ನೇರವಾಗಿ ಬರೆದಿದ್ದ ಪರ್ಯಾಯ ಮಲಯಾಳಂ ಅಕ್ಷರಗಳನ್ನೇ ಸುಮ್ಮನೇ ನೋಡಿತ್ತಾ ಕುಳಿತೆ. ನೋಡುತ್ತಾ ನೋಡುತ್ತಾ ಹೊಸತೆನಿಸಿ ಆಸಕ್ತಿ ಹುಟ್ಟಿತ್ತು. ಎರಡೂ ಕಡೆಯ ಅಕ್ಷರಗಳನ್ನು ನೋಡುತ್ತಾ ಒಂದಷ್ಟು ಮಲಯಾಳಂ ಅಕ್ಷರಗಳು ಕೂಡಾ ಮನಸ್ಸಿನಾಳದಲ್ಲಿ ಅದೆಷ್ಟು ಭದ್ರವಾಗಿ ಬೇರೂರಿದುವೆಂದರೆ, ಈಗಲೂ ಆಕೆಯ ಕೈಬರಹದಲ್ಲಿನ ಆ ದುಂಡನೆಯ ಅಕ್ಷರಗಳು ನೆನಪಿಗೆ ಬರುತ್ತವೆ. ಆ ಎರಡು ದಿನಗಳಲ್ಲಿ ನನಗೆ ಹೊಸ ಕಲಿಕೆಯ ವಸ್ತುವಾದ ಆ ಭಾಷೆಯ ಲಿಪಿ ಒಳಗೊಂದು ಹುಮ್ಮಸ್ಸು ತಂದಿತ್ತು.

ನಮ್ಮ ಜಿಲ್ಲೆಯ ಬಸ್ಸುಗಳ ಬೋರ್ಡುಗಳಿಗೊಂದು ವಿಶೇಷತೆಯಿದೆ. ಮೂರು ಭಾಷೆಗಳಲ್ಲಿ ಬೋರ್ಡು ಬರೆದಿರುತ್ತಾರೆ. ಕನ್ನಡ, ಮಲಯಾಳಂ ಜೊತೆ ಸ್ಥಳಾವಕಾಶವಿದ್ದಲ್ಲಿ ಇಂಗ್ಲಿಷ್ನಲ್ಲೂ ಬೋರ್ಡ್ ಹಾಕಿರುತ್ತಾರೆ. ಅಂಗಡಿಗಳ ಬೋರ್ಡುಗಳೂ ಹೊರತಲ್ಲ. ಶಾಲೆಯಲ್ಲಿ ಎರಡೂ ಅಕ್ಷರಮಾಲೆಯನ್ನು ಹೋಲಿಸಿ ಓದಿದ ಪ್ರಭಾವ ಈ ಬೋರ್ಡುಗಳನ್ನು ಕಂಡಾಗ ಕಾಣಿಸುತ್ತಿತ್ತು. ಕನ್ನಡದ ಬರಹವನ್ನು ಓದಿದ ಬಳಿಕ ಪಕ್ಕದಲ್ಲಿರುವ ಮಲಯಾಳಂ ಅಕ್ಷರಗಳನ್ನು ಓದಿ ನೋಡುವುದು ತಂತಾನೇ ಅಭ್ಯಾಸವಾಗಿತ್ತು. ಆಗ ನಾ ಇನ್ನೂ ಕಲಿತಿಲ್ಲವಾಗಿದ್ದ ಅಕ್ಷರಗಳ ಕಲಿಕೆ ನನಗೇ ಗೊತ್ತಿಲ್ಲದಂತೆ ಆಗುತ್ತಿತ್ತು. ಒತ್ತಕ್ಷರಗಳನ್ನು ಬರೆಯುವಾಗ ಮಲಯಾಳಂನಲ್ಲಿ ಅದು ಹೇಗೆ ಅಕ್ಷರಗಳ ರೂಪವನ್ನೇ ಬದಲಯಿಸಿಬಿಡುತ್ತದೆಂಬುದನ್ನೂ ತೋರಿಸುತ್ತಿತ್ತು. ಹೀಗೆ ಮೌನವಾಗಿ ಬೋರ್ಡು ಓದುತ್ತಾ ಓದುತ್ತಾ ಅಕ್ಷರಗಳನ್ನು ಹೆಚ್ಚೂಕಡಿಮೆ ಅರಿತು ನಿಧಾನಕ್ಕೆ ವಾಕ್ಯಗಳನ್ನು ಓದಲು ಆರಂಭಿಸಿದಾಗ ನಿಜಕ್ಕೂ ಖುಷಿಯಾಗಿತ್ತು. ಕನ್ನಡದಷ್ಟು ವೇಗವಾಗಲ್ಲದಿದ್ದರೂ ನಿಧಾನವಾಗಿಯಾದರೂ ಮಲಯಾಳಂ ಅನ್ನೂ ಓದುವಲ್ಲಿಗೆ ಈ ಅಭ್ಯಾಸ ತಂದು ನಿಲ್ಲಿಸಿತು.

ಎಲ್ಲಾ ಗಡಿಭಾಗಗಳಂತೆ, ಕಾಸರಗೋಡಿನ ಬಹುತೇಕ ಕನ್ನಡಿಗರಿಗೆ ಹೀಗೆ ಎರಡುಮೂರು ಭಾಷೆಗಳನ್ನಾದರೂ ಮಾತನಾಡುವ, ವ್ಯಾಕರಣಬದ್ಧವಾಗಿ ಕಲಿಯದಿದ್ದರೂ ಎರಡೂ ಪ್ರಾದೇಶಿಕ ಭಾಷೆಗಳನ್ನು ಓದಿ, ಬರೆಯುವ ಸಾಮರ್ಥ್ಯ ಇರುತ್ತದೆ. ಬಹುಭಾಷೆಗಳ ತಿಳುವಳಿಕೆ ಮನುಷ್ಯನ ಆಲೋಚನಾ ಮಟ್ಟವನ್ನು ಉತ್ತಮವಾಗಿಸುತ್ತದೆಯೆಂದೂ ಮಕ್ಕಳ ಬುದ್ಧಿ ಬೆಳವಣಿಗೆಗೆ ಉಪಯುಕ್ತವೆಂದೂ ಸಂಶೋಧನೆಗಳು ಹೇಳಿದ್ದರೆ, ಬಹುಭಾಷೆಗಳ ಅಲ್ಪ ಮಟ್ಟಿನ ಅರಿವು ಜೀವನದಲ್ಲಿ ಒಂದಲ್ಲಾ ಒಂದು ಕಡೆ ಉಪಯೋಗಕ್ಕೆ ಬರುವುದಂತೂ ನನ್ನ ಅನುಭವಕ್ಕೆ ಬಹಳಷ್ಟು ಬಾರಿ ಬಂದಿದ್ದುಂಟು. ಅಕ್ಷರ ಪ್ರೇಮಿಗಳಿಗೆ ಇತರೇ ಭಾಷೆಗಳ ಶ್ರೇಷ್ಠ ಕೃತಿಗಳನ್ನು ಅದರ ಮೂಲಭಾಷೆಯಲ್ಲೇ ಓದುವ ಅವಕಾಶವಾದರೆ, ಇನ್ನಾವುದೋ ಸಂದರ್ಭದಲ್ಲಿ ಹೋಲಿಕೆಯಿರುವ ಇನ್ನೊಂದ್ಯಾವುದೋ ಭಾಷೆಯನ್ನು ಅಲ್ಪಸಲ್ಪ ಓದುವ, ಅರ್ಥಮಾಡಿಕೊಳ್ಳುವ ಮಟ್ಟಿಗೂ ಸಹಕಾರಿಯಾಗುವುದಂತೂ ನಿಜ.

ಬೆಂಗಳೂರಿನ ಕನ್ನಡ ಬೋರ್ಡುಗಳನ್ನು ನೋಡಿ ಇಲ್ಲಿನ ಪರಭಾಷಿಕರು ಮೂಗು ಮುರಿದು ತಮ್ಮತಮ್ಮೊಳಗೇ ಪಿಸಿ ಪಿಸಿ ಮಾತಾಡಿ ಅಸಹನೆ ವ್ಯಕ್ತಪಡಿಸುವುದನ್ನು ನೋಡಿದಾಗಲೆಲ್ಲಾ ಯೋಚಿಸುತ್ತೇನೆ, ಇವರಿಗೆ ಹೊಸದೇನೋ ಒಂದನ್ನು ಕಲಿವ ಆಶೆಯೇ ಇಲ್ಲವೆ? ಅಥವಾ ಅಂಥಹ ಉತ್ಸಾಹ ಬತ್ತಿ ಹೋಗಿದೆಯೇ? ಇಲ್ಲಾ ಎಲ್ಲವೂ ನಮ್ಮ ಮೂಗಿನ ನೇರಕ್ಕಿರಬೇಕೆಂಬ ದರ್ಪವೇ?! ಬೆಂಗಳೂರು ಮಹಾನಗರಿಯ ಬಹುತೇಕ ಬೋರ್ಡುಗಳೂ ಕನ್ನಡ, ಇಂಗ್ಲಿಷ್ ಎರಡರಲ್ಲೂ ಇರುವುದರಿಂದ ಏನಿಲ್ಲವೆಂದರೂ ಕೆಲವು ಅಕ್ಷರಗಳ ಪರಿಚಯ ಮಾಡಿಕೊಳ್ಳುವುದು ಕಷ್ಟವಲ್ಲ. ಅಲ್ಪ ಸ್ವಲ್ಪವಾದರೂ ಮಾತಾಡಲು ಕಲಿಯುವುದೂ ಮನಸ್ಸು ಮಾಡಿದರೆ ಸಾಧ್ಯ. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿರುವ ದಿಲ್ಲಿ ಮೂಲದ ಗೆಳತಿ ಪ್ರಪಂಚದ ಎಲ್ಲ ಸಮಸ್ಯೆಗಳ ಬಗ್ಗೆಯೂ ಮಾತಾಡುತ್ತಾಳೆ, ತನ್ನ ತಿಳುವಳಿಕೆಯನ್ನು ಆಗಾಗ ತೋರ್ಪಡಿಸುತ್ತಾಳೆ, ಆದರೆ ಈ ನೆಲದ ಭಾಷೆ ಕಲಿಯುವ ಮನಸ್ಸು ಮಾತ್ರ ಆಕೆಗಿಲ್ಲ. ಇದನ್ನು ಆಕೆಯ ಬಳಿಯೂ ನಾನು ಹೇಳಿದ್ದಿದೆ. ಈ ವಿಷಯದಲ್ಲಿ ಹೆಚ್ಚಿನ ಉತ್ಸಾಹ ಅವಳು ಯಾವತ್ತೂ ತೋರಿಸಲಿಲ್ಲ. ಕನ್ನಡಿಗರಾಗಿದ್ದುಕೊಂಡೇ ಮಾತೃಭಾಷೆಯ ಮೇಲಿನ ನಿರಾದರಣೆಯುಳ್ಳ ಸಾಕಷ್ಟು ಉದಾಹರಣೆಗಳಿರುವ ನಮ್ಮಲ್ಲಿ ಪರಭಾಷಿಗರ ಅಲಕ್ಷ್ಯದೆಡೆಗೆ ಬೆಟ್ಟುಮಾಡುವುದೂ ಅರ್ಥಹೀನ.

ಹುಟ್ಟಿನಿಂದ ಹಿಡಿದು ಕೆಲವರುಷಗಳವರೆಗೆ ಇದ್ದೇ ಇರುವ ಹೊಸದನ್ನು ತಿಳಿಯುವ ಕುತೂಹಲಿ ಗುಣ, ಔಪಚಾರಿಕವಾಗಿ ಶಾಲಾ ಕಾಲೇಜುಗಳಲ್ಲಿ ವರ್ಷಾಂತ್ಯದ ಪರೀಕ್ಷೆಯನ್ನೇ ಗಮನದಲ್ಲಿಟ್ಟುಕೊಂಡು ಓದಿ ಅಂಕಗಳ ಆಟದಲ್ಲಿ ವರ್ಷಾನುಗಟ್ಟಲೆ ಭಾಗಿಯಾಗುವಾಗ ಅದೆಲ್ಲೋ ಮಾಯವಾಗಿ ಹೋಗುತ್ತದೆಯೇನೋ ಎಂದೆನಿಸುವುದು. ಅದೇನೇ ಇರಲಿ, ಹೊಸ ಭಾಷೆಯೊಂದನ್ನು ಕಲಿಯುವ ಅವಕಾಶವಿದ್ದೂ ಅದನ್ನು ಉಪಯೋಗಿಸಿಕೊಳ್ಳದಿರುವುದು ವ್ಯಕ್ತಿತ್ವದ ಬೆಳವಣಿಗೆಯಾಗುವ ಅವಕಾಶವಿದ್ದೂ ಅದನ್ನು ಪಡೆಯದಂತೆ ಎಂಬುದರಲ್ಲಿ ಎರಡು ಮಾತಿಲ್ಲ. “ದ ಲಿಮಿಟ್ಸ್ ಆಫ಼್ ಮೈ ಲಾಂಗ್ವೇಗ್ ಇಸ್ ದ ಲಿಮಿಟ್ಸ್ ಆಫ಼್ ಮೈ ವರ್ಲ್ಡ್” ಎಂದಿರುವ ಪ್ರಸಿದ್ಧ ತತ್ವಶಾಸ್ತ್ರಜ್ನ ಲುಡ್ವಿಗ್ ವಿಟ್ಗೆನ್ಸ್ಟೈನ್ ನ ಹೇಳಿಕೆಯೊಂದು ಇಲ್ಲಿ ಹಲವಾರು ಕೋನಗಳಲ್ಲಿ ಆಳದ ಅರ್ಥವನ್ನೀಯುತ್ತದೆ.

– ಶ್ರುತಿ ಶರ್ಮಾ.

6 Responses

  1. Hema says:

    “ಹೊಸ ಭಾಷೆಯೊಂದನ್ನು ಕಲಿಯುವ ಅವಕಾಶವಿದ್ದೂ ಅದನ್ನು ಉಪಯೋಗಿಸಿಕೊಳ್ಳದಿರುವುದು ವ್ಯಕ್ತಿತ್ವದ ಬೆಳವಣಿಗೆಯಾಗುವ ಅವಕಾಶವಿದ್ದೂ ಅದನ್ನು ಪಡೆಯದಂತೆ ಎಂಬುದರಲ್ಲಿ ಎರಡು ಮಾತಿಲ್ಲ “. This is Super line.. ಬಹಳ ಸೊಗಸಾಗಿ ಮೂಡಿದ ಬರಹ.

  2. Raghunath Krishnamachar says:

    ಚಂದದ ಗ್ರಹಿಕೆಯ ಅಭಿವ್ಯಕ್ತಿ.

  3. Shruthi N Bhat says:

    Very well written.. even i think the same way… ಅದು ಹೇಗೆ ನಮ್ಮ ಯೋಚನೆಗಳು ಇಷ್ಟು ತಾಳೆಯಾಗುತ್ತವೆ!!!?

  4. Mahalakshmi GS says:

    ಹೌದು .ಕಲಿಯುವ ಆಸಕ್ತಿ ಇರುವಲ್ಲಿ ಬಹಳಷ್ಟನ್ನು ಕಲಿಯಬಹುದು. ನಾನು ೨೩ ವರ್ಷಗಳಿಂದ ಹೊರ ರಾಜ್ಯಗಳಲ್ಲಿ ಇರುವುದರಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪಮಟ್ಟಿಗೆ ಬೆಂಗಾಲಿ, ಮರಾಠಿ, ತಮಿಳು, ಹಿಂದಿ, ಅವಧ್, ಭೋಜಪುರಿ, ಒರಿಯಾ ಕಳಿತಿಲ್ಲಿದ್ದೇನೆ ಮತ್ತು ಹಾಗೆಯೇ ಅಲ್ಲಿಯ ತಿಂಡಿಗಳನ್ನು ಕೂಡ .ಇದನ್ನು ಜಂಭದಿಂದ ಹೇಳಿಕೊಳ್ಳುತ್ತಿಲ್ಲ, ಆಸಕ್ತಿ ಅಷ್ಟೇ.

  5. ಕನ್ನಡ ಕಲಿತ ನಾವೇ ಬೇರೆ ಭಾಷಾ ಪ್ರಾಂತ್ಯದವರಿಗೆ ಅವರವರ ಭಾಷೆಯನ್ನು ಮಾತಾಡಿ ಅವರ ಕೆಲಸ ಸುಲಭ ಮಾಡಿಕೊಡುವುದರಿಂದಲೋ ??? ಅನ್ನೋ ಗ್ರಹಿಕೆ ಸಾಕಷ್ಟು ಸಾರಿ ನನ್ನ ಮನಸ್ಸಲ್ಲಿ ಕಂಡದ್ದಿದೆ. ಹಿಂದೊಮ್ಮೆ,ನಮಗೆ ಹೈದ್ರಾಬಾದ್ ನಲ್ಲಿ ಮನೆ ಮಾಡಬೇಕಾಗಿ ಬಂದಾಗ, ಅಲ್ಲಿನ ಜನ ನನ್ನನ್ನು ತೆಲುಗು ಬಾರದವಳು ಎಂದು ದೂರವಿಟ್ಟಾಗ, ನಾನೇ ತೆಲುಗು ಅಲ್ಪ ಸ್ವಲ್ಪ ಕಲಿತು ಅವರೊಂದಿಗೆ ಬೆರೆಯಲು ಸಾಹಸಪಟ್ಟಿದ್ದು ಇದೆ.

  6. Shankari Sharma says:

    ವಿವಿಧ ಭಾಷಾ ಕಲಿಕೆಗಳ ಬಗ್ಗೆ ಲೇಖನ ಚೆನ್ನಾಗಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: