ನನ್ನ ಅಪ್ಪ ಒಬ್ಬ ಕೃಷಿಕ ಆಗಿಲ್ಲದಿದ್ದರೂ ಕೃಷಿಯ ಬಗ್ಗೆ ಅದೇನೋ ನಂಟು ನನಗೆ. ಮಳೆಗಾಲದ ನಂತರ ನಮ್ಮ ಗದ್ದೆಯಲ್ಲಿ ಮೆಣಸು, ಗೆಣಸು, ಹಾಗಲಕಾಯಿ, ಬದನೆ, ದಂಟಿನ ಸೊಪ್ಪು. ಇವೆಲ್ಲಾ ಬೆಳೆದಿದ್ದೆ ಕೂಡಾ. ಅಪ್ಪ ನನ್ನ ಗೋಜಿಗೆ ಬರದಿದ್ದರೂ ಅಮ್ಮ ಮಾತ್ರ ಈ ವಿಚಾರದಲ್ಲಿ ಅಂದರೆ ತರಕಾರಿ ಬೆಳೆಯುವುದರಲ್ಲಿ ನನಗೆ ಸಹಾಯ ಮಾಡಿದ್ದರು. ಅಮ್ಮನಿಗೆ ನಾನು ಸಹಾಯ ಮಾಡುತ್ತಿದ್ದೆ ಎಂದರೂ ತಪ್ಪಾಗಲಾರದು. ನಿಮ್ಮ ಮನಸ್ಸಿಗೆ ಏನು ತೋಚುತ್ತದೋ ಗೊತ್ತಿಲ್ಲ. ಈ ಹಳ್ಳಿ ಜೀವನ ಇದೆಯಲ್ಲ . ಅದರ ಮಜಾನೇ ಬೇರೆ. ನಾನು ಮೊನ್ನೆ ಒಂದ್ಸಲ ಆ ಹಳೆಯ ನಮ್ಮೂರ ಗದ್ದೆಗಳ ಬಳಿ ಒಮ್ಮೆ ಕಣ್ಣಾಯಿಸಿದೆ.
ಹಳೆಯ ದಿನಗಳು ಮನಸ್ಸಿನೊಳಗೆ ನೃತ್ಯವಾಡಿದುವು.
ಸುಮಾರು ಇಪ್ಪತ್ತು ಇಪ್ಪತ್ತೈದು ವರುಷಗಳ ಹಿಂದೆ ಹಸಿರು ಮಾತ್ರ ಕಾಣಿಸುತ್ತಿದ್ದ ಆ ಜಾಗ. ಎತ್ತು, ಕೋಣಗಳು ..ಮಳೆ ಬಂದರಾಯಿತು. ನೊಗ ನೇಗಿಲು ಹೊತ್ತು ಗದ್ದೆಯತ್ತ ನಡೆವ ರೈತರು. ಜೊತೆಗೆ ಉಳುವಾಗ ರೈತನ ಹಿಂದೆ ಹೆಜ್ಜೆ ಹಾಕುವ ಕೊಕ್ಕರೆಗಳ ಸಾಲು. ಆ ಗದ್ದೆಯ ಕಟ್ಟೆಹುಣಿ (ಕಟ್ಟೆಪ್ಪುಣಿ)ಯಲ್ಲಿ ನಡೆವಾಗ ನಮ್ಮ ಕಾಲನ್ನು ಚೆಂದಕ್ಕೆ ತೊಳೆದು ಕೊಡುತ್ತಿದ್ದ ಹುಲ್ಲುಗಳು.. ಹುಲ್ಲುಗಳ ನಡುವಿಂದ ಜಿಗಿಯುವ ಕಪ್ಪೆ ಮರಿಗಳು. ಆ ರೈತನ ಜೀವನ ಶೈಲಿಯೇ ಬೇರೆ. ಅಂದೊಮ್ಮೆ ಆ ರೈತನ ದಿನಚರಿಯ ಬಗ್ಗೆ ಒಂದು ಕವನ ಬರೆದಿದ್ದೆ..
ಮೂಡಣದಿ
ಭಾಸ್ಕರ ಹಚ್ಚಡವ ಸರಿಸಿ
ಭುವಿಯ ನೋಡಿ ನಕ್ಕ
ಮರುಕ್ಷಣವೇ ಈತನೆದ್ದ ..
ಆಕಳಿಸಿ ಹೊರಗಡೆ ಅತ್ತಿತ್ತ
ನಡೆದಾಡುತಿರೆ
ಹಟ್ಟಿಯಲಿ ಅಂಬಾ ಎನುವ ಧ್ವನಿ ..
ಮೇಲ್ಚಾವಣಿಯಲಿರುವ ಹುಲ್ಲು ..
ಪಕ್ಕದ ಹಂಡೆಯಲಿ ತುಷೋದಕ…
ಹಸಿದ ಜೀವಗಳಿಗೆ
ಹೊಟ್ಟೆ ತುಂಬಿಸಿದ ಧನ್ಯತೆ ..
ದೂರದಲಿ ಆ ವನಿತೆ ..
ಬಿಂದಿಗೆಯ ಹಿಡಿದು
ಬರುತಿರಲು
ಛೂ ಬಿಟ್ಟ ಕರುವಿಗೆ ಮೊದಲ
ಕ್ಷೀರ ಸವಿಯುವ ಭಾಗ್ಯ
ದೂರದಲಿ ಹೊಲ ..
ಚಹಾ – ತಿಂಡಿ ಎಲ್ಲ ಮುಗಿಸಿ
ನೇಗಿಲ ಹೊತ್ತು ಹೊರಡಲು ಅಣಿಯಾಗುತಿರೆ
ನಕ್ಕು ಬೀಳ್ಕೊಡುವಳು
ಮಡದಿ ..
ಅದಾಗಲೇ ಬಿಸಿಲು ಧರೆಗಿಳಿದಿದೆ ..
ಮನೆಯಂಗಳದಿ
ಹಾರುತಿಹ ಬಾವುಟ ..
ಅಲ್ಲ ಕೌಪೀನ …
ಎಳೆದು ಕಟ್ಟಿ ಜಟ್ಟಿಯಂತೆ
ಹೊರಟವ
ತಿರುಗಿ ಬರುವುದು ಮಧ್ಯಾಹ್ನ ..
ಅನ್ನವನು ಮೊಸರಲ್ಲಿ ಕದಡಿ
ಕೊನೆಗೆ ಬೆರಳ ನೆಕ್ಕಿ
ಸವಿದ
ಸಂಭ್ರಮ…
ನಂತರ ಒಂದರ್ಧ ಗಂಟೆ
ಕುಂಭಕರ್ಣ …
ಸಂಜೆಯಾಯಿತು ..
ಹೊತ್ತು ಮುಳುಗುವ ಸಮಯ ..
ಅನತಿ ದೂರದ
ಹೆಂಡದಂಗಡಿಯ
ಕುರ್ಚಿ
ತನಗಾಗಿ ಕಾದಿದೆಯೋ ..
ಒಂದೆರಡು ಗುಟುಕು
ಹೊಟ್ಟೆಗಿಳಿಯಲು
ಮನಕೆ ಸಂಭ್ರಮ ..
ಮನೆಯತ್ತ ಹೆಜ್ಜೆ ..
ಮಡದಿ – ಮಗನ
ಸಂಧ್ಯಾ ವಂದನೆಯ
ರಾಗ .. ಮಗಳೆಲ್ಲಿ … ?
ಅತ್ತಿತ್ತ ಹುಡುಕಾಟ ..
ಹದಿ ಹರೆಯದ ಮಗಳಿರುವ
ಅಪ್ಪನ ಅನುದಿನದ ಆತಂಕ ..
‘ಹೊರ ಕೊಠಡಿಯಲಿ
ಮಲಗಿರುವಳು ..
ಉದರ ಬೇನೆ
ಮುಟ್ಟಾಗಿಹಳು .’ .ಮಡದಿಯ ಧ್ವನಿ .
ನಿಟ್ಟುಸಿರು ಬಿಟ್ಟನವನು ..
ರಾಗಿ ರೊಟ್ಟಿಯ ಹೊಟ್ಟೆಗಿಳಿಸಿ
ಹೊದ್ದು ಮಲಗಲು
ಮರುದಿನದ
ಚಿಂತೆಯಿರಲಿಲ್ಲ್ಲ ..
ಮಗದೊಮ್ಮೆ ಸೂರ್ಯೋದಯ …
ಜೊತೆಗೆ
ಪಕ್ಕದ ಮಸೀದಿಯ ಮುಲ್ಲಾ ರ
ಕರೆ ..
ಅಲ್ಲಾಹು ಅಕ್ಬರ್ …. ಅಲ್ಲಾಹು ಅಕ್ಬರ್ ..
ಇತ್ತ
ಮಂದಿರದಲ್ಲಿ
ಸುಪ್ರಭಾತ ..
ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ಥತೇ …
ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವ ಮಾಹ್ನಿಕಂ ...
ಇಷ್ಟುದ್ದ ಸಾಲುಗಳನ್ನು ಓದಿ ಬೇಜಾರಾಗಿದ್ದರೆ ಕ್ಷಮೆಯಿರಲಿ..
– ಕೆ. ಎ. ಎಂ. ಅನ್ಸಾರಿ, ಮೂಡಂಬೈಲ್.
(ಮುಂದುವರಿಯುವುದು)
ಚೆಂದದ ಬರಹ, ಆಪ್ತವಾಗಿದೆ.