ಹೀಗೊಂದು ಉದ್ಯೋಗ ಪರ್ವ…
ಹತ್ತಾರು ವರ್ಷಗಳು ಮಹಾನಗರಿಗಳಲ್ಲಿಯೇ ಪ್ರಾಯೋಗಿಕ ಹಾಗೂ ಎತ್ತಂಗಡಿ ಯೋಜನೆಗಳಡಿಯಲ್ಲಿ(!) ವಲಸೆ ಹಕ್ಕಿಯಂತೆ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ ಬಡಪಾಯಿಗೆ ದಾರಿ ತಪ್ಪಿದ ಊರಿನಲ್ಲಿ ಸಿಕ್ಕ ಅರ್ಧರಾತ್ರಿಯ ಕಡೇ ಬಸ್ಸಿನಂತೆ ಮೂವತ್ನಾಲ್ಕನೇ ಹರೆಯದಲ್ಲಿ ಸರ್ಕಾರೀ ನೌಕರಿ ಸಿಕ್ಕಿಬಿಟ್ಟಿತು. ಆನಂದಕ್ಕೆ ಪಾರವಿಲ್ಲದ ಹುಚ್ಚುಖೋಡಿ ಮನಸು ನಲಿದಾಡಿಹೋಗಿತ್ತು. ಕಂಪ್ಯೂಟರಿನಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದ ಬಗೆಬಗೆಯ ರಾಜೀನಾಮೆ ಪತ್ರಗಳನ್ನೆಲ್ಲಾ ‘ಗೋವಿಂದಾ ಗೋ…ವಿಂದ’ ಎಂದು ಕಂಪ್ಯೂಟರ್ ಕಸದ ಬುಟ್ಟಿಗೆ ಹಾಕಿದೆ. ‘How to face Interview?’ ಎಂಬ ಪುಸ್ತಕವನ್ನು ರದ್ದಿ ಪೇಪರಿನೊಂದಿಗೆ ಸೇರಿಸಿ ತೂಕಕ್ಕೆ ಹಾಕಿ, ‘ಬಂದಷ್ಟುಕೊಡಪ್ಪಾ..’ ಎಂದು ಠೀವಿಯಿಂದ ಹೇಳುವ ಮೂಲಕ ನನ್ನ ಸರಕಾರೀ ಗತ್ತನ್ನು ಹಳೇ ಪೇಪರಿನವನ ಮುಂದೆ ಪ್ರದರ್ಶಿಸಿದೆ. ಅವನು ನನ್ನ ಮುಖವನ್ನೂ ನೋಡದೇ ಕಡಿಮೆ ದುಡ್ಡಿಗೆ ಸಿಕ್ಕ ಸಿಕ್ಕಾಪಟ್ಟೆ ರದ್ದಿಯನ್ನು ಹೊತ್ತು ನಲಿಯುತ್ತಾ ನಡೆದುಹೋದ. ನನ್ನ ಸಲಾಮು ಪಡೆಯುವ ಉತ್ಸಾಹಕ್ಕೆ ಸ್ವಲ್ಪ ತಣ್ಣೀರೆರಚಿದಂತಾಯ್ತು. ಕನಿಷ್ಠ ಅಮ್ಮಾವ್ರೇ.. ಅಂತ ಕೂಡಾ ಕರೆಯದ ಅವನ ಅನಾಗರಿಕತೆ ನೋಡಿ ‘ಹೋಗ್, ಕತ್ತೆಗೇನು ಗೊತ್ತು ____ ವಾಸನೆ!’ ಅಂತ ಮೂತಿ ತಿರುವಿ ರಪ್ಪನೆ ಬಾಗಿಲು ಹಾಕಿಕೊಂಡೆ.
ಸ್ನೇಹಿತರ, ಪರಿಚಯಸ್ಥರ ‘ಕಂಗ್ರಾಟ್ಸ್..’ ಅಜೀರ್ಣವಾಗುವಷ್ಟು ಬಂದು ಬಿದ್ದಿದ್ದವು. ‘ನೀನು ಲಕ್ಕಿ ಬಿಡಮ್ಮಾ..’ ಎಂಬ ಅತ್ತೆ, ಅತ್ತಿಗೆ, ನಾದಿನಿ, ದೊಡ್ಡ/ಚಿಕ್ಕ ನೆಂಟರಿಷ್ಟರ ಅಸೂಯೆ ತುಂಬಿದ ಹೊಗಳಿಕೆ ಮತ್ತೇರಿಸುತ್ತಿತ್ತು. ‘ಅಯ್ಯೋ ಬಿಡಮ್ಮಾ, ನಿನ್ನಷ್ಟಲ್ಲ.’ ಎಂದು ತಿರುಗುಬಾಣ ಹೂಡಿ ನನ್ನ ಸಂತೋಷಕ್ಕೆ ದೃಷ್ಟಿ ತಾಗದಂತೆ ಕಾಯುತ್ತಿದ್ದೆ. ಖಾಸಗಿಯಲ್ಲಿದ್ದಾಗ ನಗುತ್ತಿದ್ದಂತೆ ಮನದುಂಬಿ ನಕ್ಕು ಇತರರೊಡನೆ ಬೆರೆಯುತ್ತಿದ್ದುದು ಯಾಕೋ ಈಗ ಸರಿಯಲ್ಲವೆನಿಸಿ ಸ್ವಲ್ಪ ಹುಸಿ ಗಾಂಭೀರ್ಯದ ಮುಖವಾಡ ತೊಡತೊಡಗಿದೆ. ಎಷ್ಟೇ ನಗಬೇಕೆನಿಸಿದರೂ ಸ್ವಲ್ಪ ತುಟಿ ಬಿರಿದು ಸುಮ್ಮನಾಗುವುದು, ಕ್ಷಣಕ್ಕೊಮ್ಮೆ ಕನ್ನಡಕವನ್ನು ತೋರುಬೆರಳ ತುದಿಯಿಂದ ಮೂಗಿಗೇರಿಸುವುದು, ಠೀವಿಯಿಂದ ನಿಧಾನವಾಗಿ ನಡೆಯುವುದು ಎಲ್ಲವನ್ನೂ ಅಭ್ಯಾಸ ಮಾಡತೊಡಗಿದೆ. ಒಟ್ಟಾರೆ ಬುದ್ಧಿಜೀವಿಯ ಔಟ್‌ಲುಕ್ ತಂದುಕೊಳ್ಳುವುದು ಇದರ ಉದ್ದೇಶವಾಗಿತ್ತು. ಸಿಕ್ಕ ಸಣ್ಣ ಟೀಚರ್ ಕೆಲಸಕ್ಕೆ ಇದೆಲ್ಲಾ ಬೇಕಾ? ಎಂದು ನನಗೇ ಅನ್ನಿಸಿದರೂ, ಛೇಛೇ, ಹಾಗಲ್ಲ. ಹೇಳಿ ಕೇಳಿ ಸರ್ಕಾರೀ ನೌಕರಿ, ನ್ಯಾಯ ಒದಗಿಸಬೇಡವೇ? ಎಂದು ನನಗೆ ನಾನೇ ಸಮಜಾಯಿಷಿ ನೀಡಿಕೊಂಡೆ.
ಕೆಲಸಕ್ಕೆ ಹಾಜರಾದ ದಿನ ಹೊಸ ವಾತಾವರಣ, ಹಿರಿಯ ಸಹೋದ್ಯೋಗಿಗಳ ಮತ್ತು ಹೊಸ ವಿದ್ಯಾರ್ಥಿಗಳ ಒಡನಾಟದಲ್ಲಿ ನನಗೆ ಯಾವುದೋ ಯಕ್ಷಲೋಕ ಪ್ರವೇಶಿಸಿದ ಅನುಭವವಾಯಿತು.
ಯಾವಾಗಲೂ ‘ಹಲೋ ಕಿಡ್ಸ್..’ ‘ಹಾಯ್ ಗಯ್ಸ್..’ ಎಂದೇ ಮಕ್ಕಳನ್ನು ಮಾತಾಡಿಸಿ ಅಭ್ಯಾಸವಿದ್ದ ನನಗೆ ಈಗ ‘ಏಯ್, ಬಾ ಇಲ್ಲಿ..’ ‘ನಡೀ ತರಗತಿಯೊಳಗೆ, ಭಡವಾ..’ ಎಂದೆಲ್ಲಾ ಸಂಬೋಧಿಸಲು ಭಯವಾಗುತ್ತಿತ್ತು. ಯಾಕೆಂದರೆ ಇಲ್ಲಿ ವಿದ್ಯಾರ್ಥಿಗಳು ತೆಳ್ಳಗೆ ಬೆಳ್ಳಗೆ ಸೋಡಾಬುಡ್ಡಿ ಹಾಕಿಕೊಂಡು, ಕೈಗೆ ತಮ್ಮ ತಲೆಗಿಂತಲೂ ದಪ್ಪನಾದ ಇಂಪೋರ್ಟೆಡ್ ಗಡಿಯಾರ ಕಟ್ಟಿಕೊಂಡು, ಸ್ಪೈಕೀ ಬಾಚಿಕೊಂಡು, ಲಂಚ್ ಬ್ರೇಕ್‌ಅಲ್ಲಿ ರ್ಗರ್ ತಿನ್ನುವವರಾಗಿರಲಿಲ್ಲ. ಮಿಲ್ಟ್ರೀ ಕಟಿಂಗಿನ, ಬೆಳ್ಳಂಬೆಳಗೇ ಮುದ್ದೆ ಉಣ್ಣುವ, ನನಗಿಂತಲೂ ಎತ್ತರದ, ಮಾತೆತ್ತಿದರೆ ‘ಸಾ..’ ‘ಮೀಸ್.. ನಮ್ಮವ್ವಾ ಅಟ್ಟೀಲಿಲ್ಲ’ ಎಂದೇ ಮಾತು ಪ್ರಾರಂಭಿಸುವ ಸೊರಗಿದ ಉಕ್ಕಿನ ಪ್ರತಿಮೆಗಳಂತಿದ್ದವರು! ಇಂಗ್ಲೀಷಿನಲ್ಲಿ ಮಾತಾಡಿಸಿದರೆ ಪಿಳಿಪಿಳಿ ನೋಟದ ಹೊರತು ಇನ್ನಾವ ಪ್ರತಿಕ್ರಿಯೆಯೂ ಬಾರದ ತರಗತಿಗಳು ನನ್ನವು. ಯೂ ನೋ, ವ್ಹಾಟ್ ಹ್ಯಾವ್ ಐ ಡನ್ ಟುಡೇ.. ಎಂದು ಮಾತಿಗೆಳೆದರೆ ಓಕೆ ಓಕೆ ಎಂದು ಮೆಲ್ಲಗೆ ಜಾರಿಕೊಳ್ಳುವ ಸಹೋದ್ಯೋಗಿಗಳು. ‘ಗೂಡ್ ಮಾರನಿಂಗ್, ಗೂಡ್ ಈವನಿಂಗ್’ಗಳ ಹೊರತು ಮತ್ತೊಂದು ಇಂಗ್ಲೀಷ್ ಪದ ಕೇಳಲು ದಿನಗಳೇ ಕಳೆಯಬೇಕಾಗಿ ಬಂತು. ಆದರೂ ನಾನು ತರಗತಿಗೆ ಹೋದರೆ ದೇವತೆಯನ್ನು ಎದುರುಗೊಂಡಂತೆ ನಲಿಯುವ ಚಿಣ್ಣರ ಸಂಗ ಮುದ ನೀಡಹತ್ತಿತು. ದೇವರೇ… ಹುಟ್ಟಾರಭ್ಯ ನಗರಗಳೇ ತವರೂರಾಗಿದ್ದ ನನಗೆ ಬೆಳಗಿನ ಜಾವದ ಕನಸಿನಂತೆ ಇಡೀ ಸುತ್ತಲಿನ ಲೋಕವೇ ಬದಲಾಗಿಹೋದಂತೆನಿಸಿತ್ತು.
ದಿನ ಕಳೆದಂತೆ ನನ್ನ ಮಾತು, ನಡವಳಿಕೆಗಳಿಗೆ ಇಂಗ್ಲೀಷಿನ ಬಂಗಾರದ ಲೇಪನ ಮಾಸಿಹೋಗಿ ಕನ್ನಡದ ತಾಮ್ರದ ಹೊಳಪಿನ ಗಟ್ಟಿಬಣ್ಣ ಮಿಣಗುಟ್ಟಹತ್ತಿತು. ನಗರಜೀವನದ ಕೃತಕತೆಯ ರೋಬೋಟ್‌ತನ ಕಣ್ಮರೆಯಾಗಿ ಸ್ಕೂಲುದಾರಿಯ ಕಬ್ಬಿನಗದ್ದೆಯ ಮೇಲೆ ಬೀಸಿಬರುವ ತಂಗಾಳಿಯಂತೆ ಹಿತವಾದ ಆಪ್ಯಾಯಮಾನ ಹಳ್ಳಿಯ ಜೀವನಶೈಲಿಯ ಪ್ರಭಾವದ ಛಾಪು ಮೂಡತೊಡಗಿತು. ಬೆಳಗ್ಗೆ ನನ್ನೊಡನೆಯೇ ಬಸ್ಸು ಹತ್ತಿದ ರಾಚಪ್ಪ ‘ಗೂಡ್ ಮಾರನೀಂಗ್ ಮೀಸ್..’ ಎಂದಾಗ ಬಿಚ್ಚಿಟ್ಟ ನೆನಪಿನ ಬುತ್ತಿ ಕಟ್ಟಿಟ್ಟು ಮುದ್ದೆ ಉಂಡೇನ್ಲಾ..? ಎಲ್ಲಿ ನಿನ್ ತರಗತಿ ಗಂಡೈಕ್ಳು? ಎಂದೆ. ಬತ್ತಾವೆ ಮೀಸ್, ಯೆಣ್ಣೈಕ್ಳು ಬರಾಕುಲ್ಲ, ಊರಬ್ಬಕ್ಕೆ ಎಡೆ ಮಡ್ಗಕ್ ವೋಗವೆ. ಅಂದ. ಮೀಸ್, ನೀವೇಳಿದ್ ನಾಲಕ್‌ಗೆರೆ ಬೈಂಡು ನಮ್ಮ ಕುರುಬಗೇರೀಲಿ ಸಿಗಾಕಿಲ್ಲ, ಏನ್ ಮಾಡನ? ಅಂದ ಹಾಲುಮತದ ಹಾಲಿನಂಥಾ ನಗುವಿನ ಮಹೇಶನನ್ನು ಸಂತೈಸಿ, ಬುಡ್ಲಾ, ನಾಳೆ ಬತ್ತಾ ನಾನೇ ತಕ್ಕಬತ್ತಿನಿ, ಆಮ್ಯಾಕೆ ಕಾಸು ಕೊಟ್ರೆ ಆದ್ದು.. ಅಂದೆ. ಸಂತಸದಿಂದ ಉಬ್ಬಿಹೋದ. ‘ಓಪನ್ ಯುವರ್ ಬುಕ್ಸ್..’ ನನ್ನ ತರಗತಿ ಪ್ರಾರಂಭವಾಯ್ತು.
ಪಕ್ಕದ ತರಗತಿಯ ‘ಗುರುಬ್ರಹ್ಮಾ..ಗುರುವಿಷ್ಣು..’ ಕೇಳುತ್ತಿದ್ದವಳಿಗೆ, ನನ್ನ ಖಾಸಗಿ ಉದ್ಯೋಗದ ದಿನಗಳ ‘ಓ ಮೈ ಗಾಡ್, ಬ್ಲೆಸ್ ಮೈ ಫ಼ಾದರ್…’ ನೆನಪಾಗಿ ತುಟಿಯಂಚಿನಲ್ಲಿ ತೃಪ್ತಿಯ ನಗೆಯೊಂದು ಮಿಂಚಿ ಮಾಯವಾಯಿತು.
– ಮಧುರಾಣಿ ಎಚ್ . ಎಸ್.
ಬರಹ ಆಪ್ತವಾಗಿದೆ, ಇಷ್ಟವಾಯಿತು..
ವಾಹ್! ಸೊಗಸಾದ ಶೈಲಿ. ಬರಹ ತುಂಬಾ ಇಷ್ಟವಾಯಿತು 🙂