ದೀಪಾವಳಿ… ಬಲಿಯೇಂದ್ರ…ಬಲಿಯೇಂದ್ರ ಕೂ.!!
ಹಾಂ.. ದೀಪಾವಳಿ ಹಬ್ಬ ಮತ್ತೆ ಬಂದೇ ಬಂತು..! ದೀಪಗಳ ಮಾಲೆಯಿಂದ ಝಗಝಗಿಸುವ, ಸಿಹಿತಿಂಡಿಗಳನ್ನು ಮನ:ಪೂರ್ತಿ ಹೊಟ್ಟೆಗಿಳಿಸಬಲ್ಲ ಹಬ್ಬ ಯಾರಿಗೆ ಇಷ್ಟವಿಲ್ಲ ಹೇಳಿ ? ಎಲ್ಲಾ ಹಬ್ಬಗಳಿಗಿಂತ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನ!. ಯಾಕೆಂದರೆ ಇದು ಅತೀ ಸಂಭ್ರಮದ ಹಬ್ಬ. ಹಿಂದುಗಳು ಮಾತ್ರವಲ್ಲದೆ ಸಿಖ್, ಜೈನ ಮತ್ತು ಬೌಧ್ಧ ಧರ್ಮದವರೂ ಆಚರಿಸುವರು. ಈಗೀಗಂತೂ ಅಮೇರಿಕದಂತಹ ರಾಷ್ಟ್ರಗಳಲ್ಲೂ ಸಂಭ್ರಮದಿಂದ ಆಚರಿಸುವರು. ಕತ್ತಲೆಯ ಮೇಲೆ ಬೆಳಕಿನ ಗೆಲುವು..!. ಕೆಟ್ಟದರ ಮೇಲೆ ಒಳ್ಳೆಯದರ ಗೆಲುವು..! ಪಾಪದ ಮೇಲೆ ಪುಣ್ಯದ ಗೆಲುವು…! ಇದೇ ದೀಪಾವಳಿ..!ಪಾಪ ಕಾರ್ಯಗಳನ್ನು ಮಾಡಿದ ರಾವಣನನ್ನು ಸಂಹರಿಸಿ ಸೀತಾಮಾತೆಯನ್ನು ಅಯೋಧ್ಯೆಗೆ ಕರೆತಂದಾಗಿನ ಸಂಭ್ರಮದ ಅಂಗವಾಗಿಯೇ ಈ ಬೆಳಕಿನ ಹಬ್ಬದ ಆಚರಣೆ ಎಂಬ ನಂಬಿಕೆಯೂ ಇದೆ.
ಇದೇ 17ನೇತಾರೀಕಿನ ತುಲಾ ಸಂಕ್ರಮಣ ಧನತ್ರಯೋದಶಿಯಿಂದಲೇ ದೀಪಾವಳಿ ಹಬ್ಬದ ಆರಂಭ. ಹಿಂದೆ ಪ್ರತೀ ಮನೆಗಳಲ್ಲಿ ದೊಡ್ಡದಾದ ಬಚ್ಚಲು ಮನೆ.. ದೊಡ್ಡದಾದ ಬಿಸಿನೀರ ಹಂಡೆ.. ಅದರಲ್ಲಿ ದಿನವಿಡೀ ಧಗಧಗನೆ ಬೆಂಕಿ ಹಾಕಿ ಸಿಧ್ಧವಿದ್ದ ಬಿಸಿ ಬಿಸಿ ನೀರು. ಹಾಗೆಯೇ ಇಂಚುಗಳಷ್ಟು ದಪ್ಪಕ್ಕೆ ಹಂಡೆಗೆ ಹಿಡಿದಿರುವ ಮಸಿಗೂ ಈ ದಿನ ಮುಕ್ತಿ ಸಿಕ್ಕಿದ ಹಾಗೆ. ಹಂಡೆಯನ್ನು ಚೆನ್ನಾಗಿ ತಿಕ್ಕಿ ಫಳ ಫಳ ಹೊಳೆಸುವುದೇ ಈ ದಿನದ ಸಾಧನೆ.ಆ ಬಳಿಕ ತೊಳೆದ ಹಂಡೆಗೆ ಸೇಡಿ ಹುಡಿ(ಬಿಳಿ ಮಣ್ಣು) ಯಿಂದ ಚಂದಕ್ಕೆ ಅಲಂಕಾರಿಕ ಚಿತ್ರ ಬಿಡಿಸುವುದೂ ಒಂದು ಕಲೆ. ಆಮೇಲೆ ಸೀಂಡ್ಲ ಬಳ್ಳಿಯನ್ನು ಹಂಡೆಯ ಕೊರಳಿಗೆ ಕಟ್ಟಲಾಗುವುದು. ಇದು ತುಂಬಾ ಒಳ್ಳೆಯ ಔಷಧೀಯ ಗುಣ ಹೊಂದಿದ್ದು ಅದರ ಆವಿಯು ದೇಹದ ಆರೋಗ್ಯಕ್ಕೆ ಉತ್ತಮವೆಂದು ತಿಳಿಯಲಾಗಿದೆ. ಮುಳ್ಳುಸೌತೆಯ ಬಳ್ಳಿಯಂತೆಯೇ ಕಾಣುವ ಇದು ತಾನಾಗಿ ಎಲ್ಲೆಂದರಲ್ಲಿ ಬೆಳೆಯುವಂತಹುದು. ಅದರಲ್ಲಿ ಮುಳ್ಳುಸೌತೆಯಂತೆಯೇ ಕಾಣುವ ಕಾಯಿಯೂ ಬಿಡುವುದು. ಅದು ಅತೀ ಕಹಿಯಾಗಿರುವುದಲ್ಲದೆ ಮಕ್ಕಳು ತಿಳಿಯದೆ ತಿಂದು ಬೇಸ್ತು ಬೀಳುವುದೂ ಇದೆ!. ಹಂಡೆ ಬಿಸಿಯಾದಾಗ ಬಳ್ಳಿಯೂ ಬಿಸಿಯಾಗಿ ಆರೋಗ್ಯಕ್ಕೆ ಉತ್ತಮವಾದ ಬಿಸಿ ಹಬೆಯು ಮೈಗೆ ಸೋಂಕುವುದು. ಮನೆ ಬಳಿ ಇರುವ ಬಾವಿಯ ಕಟ್ಟೆಯನ್ನು ರಂಗೋಲಿಯಿಂದ ಸಿಂಗರಿಸಿ, ಮುಸ್ಸಂಜೆಯಾಗುತ್ತಿದ್ದಂತೆಯೇ ಕಟ್ಟೆ ಮೇಲೆ ಹಣತೆಗಳನ್ನು ಬೆಳಗಿ,ತೊಳೆದ ಕೊಡದೊಂದಿಗೆ ಮನೆ ಮಹಿಳೆಯರು ಮನೆ ಬಾವಿಗೆ ಪೂಜೆ ಸಲ್ಲಿಸಿ ಕೊಡದಲ್ಲಿ ನೀರು ಸೇದಿ ತಂದು ಬಚ್ಚಲು ಹಂಡೆಗೆ ತುಂಬಿಸಿದರೆ ಮರುದಿನ ತೈಲಾಭ್ಯಂಗಕ್ಕೆ ತಯಾರಿ ಪೂರ್ಣಗೊಂಡಂತೆಯೇ ಸರಿ. ಕೊನೆಯದಾಗಿ ಹಂಡೆಯೊಳಗೆ ಒಂದು ನಾಣ್ಯವನ್ನು ಹಾಕಲಾಗುತ್ತದೆ. ಅದು ದಕ್ಕುವುದು ಕೊನೆಯದಾಗಿ ಸ್ನಾನ ಮುಗಿಸಿದವವರಿಗೆ. ಅದಕ್ಕಾಗಿ ನಾವು ಕೆಲವರು ಕೊನೆಯ ಸರದಿಗೆ ಕಾಯುತ್ತಿದ್ದೆವು.
ಈಗಂತೂ ಯಾರ ಮನೆಯಲ್ಲಿ ಬಾವಿ ಇದೆ. ಕೊಳವೆಬಾವಿಯ ಗಂಗಾಮಾತೆಗೆ ಮನದಲ್ಲೇ ಪೂಜೆಮಾಡಿ ಕೊಳವೆ ನೀರು ಹಿಡಿದು ಬಚ್ಚಲಲ್ಲಿರುವ ಬಕೆಟ್ ಗೆ ಹಾಕಿ ಅಭ್ಯಂಜನಕ್ಕೆ ತಯಾರಿ ಮಾಡಬೇಕಷ್ಟೆ.
ಎರಡನೇ ದಿನವೇ ನರಕಚತುರ್ದಶಿ. ಕೃಷ್ಣ ಪರಮಾತ್ಮನು ನರಕಾಸುರನನ್ನು ಸಂಹರಿಸಿ ಲೋಕೋಧ್ಧಾರ ಮಾಡಿದ ದಿನವೆಂದು ತಿಳಿಯಲಾಗಿದೆ. ಈ ದಿನವನ್ನು ಮಕ್ಕಳ ಹಬ್ಬವೆಂದೂ ಕರೆಯಲಾಗುವುದು..ದಿನದ ಪ್ರಮುಖರು ಅವರೇ ಅಲ್ಲವೇ..!. ಬೆಳ್ಳಂಬೆಳಗ್ಗೆಯೇ ಮಕ್ಕಳನ್ನು ಎಬ್ಬಿಸಿ, ನಿದ್ದೆ ಕಣ್ಣು ಒರಸುತ್ತಾ ಕೊಸರಾಡುವ ಮಕ್ಕಳನ್ನು ಎತ್ತಿ ತಂದು ದೀಪ ಬೆಳಗಿದ ದೇವರಕೋಣೆಯಲ್ಲಿ ದೇವರೆದುರು ಮಣೆಮೇಲೆ ಕೂರಿಸಿ ಅಲ್ಲೇ ಇರಿಸಿರುವ ಬಟ್ಟಲಿನಿಂದ ಅರಸಿನ ಮಿಶ್ರಿತ ಎಣ್ಣೆಯನ್ನು ನೆತ್ತಿ ಮೇಲೆ ಸರೀ ತಟ್ಟಿ ನೀವಿ ಬಿಟ್ಟರೆ ಮುಂದೆ ಮೈ ಇಡೀ ಉಜ್ಜಲ್ಪಡುವ ಎಣ್ಣೆಯನ್ನು ನೆನೆದೇ ಅಲ್ಲಿಂದ ಕಾಲ್ತೆಗೆಯುವ ಮಕ್ಕಳಿದ್ದಾರೆ. ಅವರನ್ನು ಹಿಡಿದಿಟ್ಟು ಸರಿಯಾಗಿ ಎಣ್ಣೆ ಹಚ್ಚಿ ಬಿಸಿ ಬಿಸಿ ನೀರಿನ ಸ್ನಾನವು ನಿಜವಾದ ಅರ್ಥದಲ್ಲಿ ತೈಲಾಭ್ಯಂಜನವಾಗುತ್ತಿತ್ತು.! ಆಮೇಲೆ ಹೊಸಬಟ್ಟೆ ತೊಟ್ಟರೆ ಮಕ್ಕಳ ಮುಖದ ನಗೆ ಹಚ್ಚಿಟ್ಟ ದೀಪಗಳಿಗಿಂತಲೂ ಪ್ರಖರವಾಗಿ ಬೆಳಗುತ್ತಿತ್ತು ನೋಡಿ. !! ಹಿರಿಯರಿಗೆಲ್ಲಾ ನಮಸ್ಕರಿಸಿ ಆಶೀರ್ವಾದದೊಂದಿಗೆ ಸಣ್ಣ ಪುಟ್ಟ ಉಡುಗೊರೆಗಳನ್ನೂ ಪಡೆದು ಸಂಭ್ರಮಿಸುವುದು ಕಿರಿಯರ ಸರದಿ..!ಸರಿಯಾಗಿ ದೀಪಾವಳಿಯಂದೇ ನಮ್ಮಲ್ಲಿ ಚಳಿಗಾಲ ಪ್ರಾರಂಭವಾಗುವುದು. ಆಗ ಚಳಿಗೆ ಚರ್ಮವು ಶುಷ್ಕವಾಗಲು ಆರಂಭವಾಗುವುದು. ಚರ್ಮದ ಆರೈಕೆಗೋಸ್ಕರ ಎಣ್ಣೆ ಹಚ್ಚಿ ಸ್ನಾನ ಮಾಡುವ ರೂಢಿ ಮಾಡಲು ನಮ್ಮ ಹಿರಿಯರು ಅನುಸರಿಸುತ್ತಿದ್ದ ಸಂಪ್ರದಾಯ ಎಷ್ಟು ಚೆನ್ನಾಗಿದೆ ಅಲ್ವಾ?. ಆಗಿನ ಆರೋಗ್ಯದ ಅರಿವು ಅಗಾಧ ಅಧ್ಭುತ.!! ಸ್ನಾನದ ನಂತರ ಮುಳ್ಳುಸೌತೆ ಸಿಹಿ ಕಡುಬು, ಸಿಹಿ ದೋಸೆ, ಉದ್ದಿನ ಕಡುಬು ಇತ್ಯಾದಿಗಳನ್ನು ಭುಂಜಿಸಿ ಪಟಾಕಿ ಸಿಡಿಸಲು ಪ್ರಾರಂಭಿಸಿದರೆ ಮಕ್ಕಳನ್ನು ಹಿಡಿಯುವವರೇ ಇಲ್ಲ ಮತ್ತೆ. !
ಸಂಜೆಗೆ ಬಲಿಯೇಂದ್ರ ಪೂಜೆಗೆ ತಯಾರಿ. ಸಾಂಕೇತಿಕವಾಗಿ ಬಲಿಯೇಂದ್ರನನ್ನು ಬಾಳೆದಿಂಡು ಅಥವಾ ಪಾಲೆ ಮರದ ರೆಂಬೆಯನ್ನು ಮನುಷ್ಯನ ಆಕಾರದಲ್ಲಿ ತುಳಸಿ ಕಟ್ಟೆಯ ಬಳಿಯಲ್ಲಿ ನೆಟ್ಟು ಹೂಗಳಿಂದ ಅಲಂಕರಿಸಿ ರಾತ್ರಿ ಹೊತ್ತಿನಲ್ಲಿ ಪೂಜಿಸಲಾಗುತ್ತದೆ. ಬಾಳೆದಿಂಡಿನಿಂದ ಮಾಡಿದರೆ ಅದರ ಅಲಂಕಾರ ಭರ್ಜರಿಯಾಗಿರುತ್ತದೆ. ದಿಂಡಿನಿಂದಲೇ ಮಾಡಿದ ಕಿವಿ ಮಸಿ ಬಳಿದ ಕಣ್ಣು ಮೂಗು ಬಾಯಿ ಮೀಸೆಗಳು.. ಮಕ್ಕಳು ಕಣ್ಣು ಬಾಯಿ ಬಿಟ್ಟು ನೋಡಿದಲ್ಲೇ ಬಾಕಿ.
ಮಹಾವಿಷ್ಣು ವಾಮನ ರೂಪದಲ್ಲಿ ಬಂದು ಬಲಿ ಚಕ್ರವರ್ತಿಯಲ್ಲಿ ಮೂರು ಪಾದದಷ್ಟು ಜಾಗವನ್ನು ಕೇಳುವ ಕಥೆ ಎಲ್ಲರಿಗೂ ಗೊತ್ತು. ಮೂರನೇ ಪಾದವನ್ನು ಚಕ್ರವರ್ತಿಯ ತಲೆಯ ಮೇಲಿರಿಸಿ ಆತನನ್ನು ಪಾತಾಳಕ್ಕೆ ತಳ್ಳುತ್ತಾನಷ್ಟೆ. ಆತನು ರಾಕ್ಷಸನಾದರೂ ತುಂಬಾ ದೈವಭಕ್ತನಾಗಿದ್ದರಿಂದ ವರ್ಷಕ್ಕೊಮ್ಮೆ ಭೂಮಿ ಮೇಲೆ ಬರುವ ಹಾಗೂ ಎಲ್ಲರಿಂದಲೂ ಪೂಜಿಸಲ್ಪಡುವ ವರವನ್ನು ವಿಷ್ಣುವಿನಿಂದ ಪಡೆಯುತ್ತಾನೆ. ಅದುವೇ ಬಲಿಯೇಂದ್ರ ಪೂಜೆಯಾಗಿ ಆಚರಿಸಲ್ಪಡುತ್ತದೆ. ಬಲಿಯೇಂದ್ರನಿಗೆ ಪೂಜೆಯಾದ ಮೇಲೆ ಕೊನೆಯಲ್ಲಿ ಬಿಡಿ ಅವಲಕ್ಕಿಯನ್ನು ಬಲಿಯೇಂದ್ರನ ಮೇಲೆ ಹಾಕುತ್ತಾ.. ಬಲಿಯೇಂದ್ರ.. ಬಲಿಯೇಂದ್ರ ಕೂ…ಬರುವ ವರ್ಷ ಬೇಗ ಬಾ… ಎಂದು ಗಟ್ಟಿಯಾಗಿ ಕೂಗುತ್ತಾ ಮೂರು ಸುತ್ತು ಬರುವುದು ವಾಡಿಕೆ.! ಅಂದರೆ ದೀಪಾವಳಿ ಹಬ್ಬ ಬೇಗನೆ ಬರಲೆಂದೇ ಅರ್ಥವಷ್ಟೆ.!
ನಂತರದ ದಿನವೇ ಧನಲಕ್ಷ್ಮಿ ಪೂಜೆ. ಮನೆಗಳಲ್ಲಿ ಸಂಪ್ರದಾಯ ಬದ್ಧವಾಗಿ ಲಕ್ಷೀ ಪೂಜೆ ಮಾಡುವರು. ಸಮುದ್ರ ಮಂಥನದಲ್ಲಿ ಉದ್ಧವಿಸಿದ ಲಕ್ಷ್ಮಿ ದೇವಿಯನ್ನು ಮಹಾವಿಷ್ಣು ವರಿಸಿದ ದಿನವಿದೆಂದೂ ತಿಳಿಯಲಾಗುತ್ತದೆ. ನಾಲ್ಕನೇ ಹಾಗೂ ಕೊನೆಯ ದಿನದಲ್ಲಿ ಗೋಪೂಜೆ. ಅಂಗಡಿ ಪೂಜೆಗಳು ನಡೆಯುವುವು.. ನಮ್ಮ ದೈನಂದಿನ ಜೀವನದಲ್ಲಿ ಗೋವಿನ ಮಹತ್ವ ಎಲ್ಲರಿಗೂ ಗೊತ್ತೇ ಇದೆ. ನಮ್ಮ ಪೂರ್ವಜರು ಗೋವಿಗೆ ಅತ್ಯುನ್ನತ ದೈವಿಕ ಸ್ಥಾನವನ್ನು ಕಲ್ಪಿಸಿರುವರು. ಅದ್ದರಿಂದ ಗೋಪೂಜೆ ದಿನ ಅವುಗಳನ್ನು ಚೆನ್ನಾಗಿ ಸ್ನಾನಮಾಡಿಸಿ ಹೂಗಳಿಂದ ಸಿಂಗರಿಸಿ ರಾತ್ರಿಯಾಗುತ್ತಿದ್ದಂತೆ ಅವುಗಳಿಗಾಗಿ ತಯಾರಿಸಿದ ಮುಳ್ಳುಸೌತೆ ಕೊಟ್ಟಿಗೆ, ದೋಸೆಗಳನ್ನು ಹೊಟ್ಟೆ ತುಂಬಾ ತಿನ್ನಿಸಿ ಅವುಗಳಿಗೆ ಆರತಿ ಬೆಳಗಿ ಗೌರವಿಸುವೆವು. ಅಂಗಡಿ ಮುಂಗಟ್ಟುಗಳು ಇರುವವರು ಅಂಗಡಿಗಳಲ್ಲಿ ಲಕ್ಮೀಪೂಜೆ ಮಾಡಿ ಅವರ ಆತ್ಮೀಯರಿಗೆ ಹಾಗೂ ಬಂಧು ಬಾಂಧವರಿಗೆ ಸಿಹಿ ತಿಂಡಿ ಮತ್ತು ಉಡುಗೊರೆಗಳನ್ನು ಹಂಚುವರು. ದೀಪಾವಳಿಯ ಈನಾಲ್ಕೂದಿನಗಳಲ್ಲಿ, ಮನೆಗಳಲ್ಲಿ ಹಣತೆಗಳನ್ನು ಬೆಳಗಿ ,ಪಟಾಕಿ ಸಿಡಿಸಿ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಎಲ್ಲರ ಮನಸ್ಸಿನ ಹಬ್ಬವೂ ಆಗಿದೆ!!
– ಶಂಕರಿ ಶರ್ಮ, ಪುತ್ತೂರು.
ಬಾಲ್ಯದ ದೀಪಾವಳಿ ನೆನಪಾಯಿತು. ಲೇಖನ ಚೆನ್ನಾಗಿ ಮೂಡಿಬಂದಿದೆ
ನನ್ನ ಬಾಲ್ಯದ ನೆನಪುಗಳು ಬಂದುವು. ಚೆಂದದ ಬರಹ 🙂
ಧನ್ಯವಾದಗಳು ಸಾವಿತ್ರಿ ಅಕ್ಕ…