ಆರಿದ್ರ ಆವರಿಸಿದಾಗಲೆಲ್ಲಾ…
ಉಂಡಾಡಿಗುಂಡನಂತೆ ತಿರುಗಿಕೊಂಡು ಬೆಳ್ಳಂಬೆಳಗ್ಗೆ ಚಳಿ ಕಾಯುತ್ತಾ ಒಲೆ ಮುಂದೆ ಕುಳಿತರೆ ಮುಗಿಯಿತು, ಒಂದು ಕಡ್ಡಿಯನ್ನೂ ಎತ್ತಿಡುವ ಹಾಗಿಲ್ಲ. ಆ ತೋಡು ಕರೆಯಿಂದ ಕೆಸದೆಲೆ ತರಲು ಎಷ್ಟು ಸಲ ಹೇಳಿದರೂ ಏನು ಪ್ರಯೋಜನ? ಬೇಯಿಸಿದರೆ ಪೂರ್ತಿ ಒಬ್ಬನಿಗೆ ಬೇಕು. ಅಜ್ಜಿಯ ನಿಯತ ತಪ್ಪದೆ ಅಜ್ಜನ ಮೇಲಿನ ಅಸಹನೆಗಳೆಲ್ಲಾ ಟಿಸಿಲೊಡೆಯುತ್ತಾ ಪಿರಿಪಿರಿ ಮುಂದುವರೆದೇ ಇತ್ತು. ಈ ಚಡಪಡಿಕೆಯ ವದರುವಿಕೆ ತನಗೆ ಅನ್ವಯಿಸುವುದೇ ಇಲ್ಲ ಎಂಬ ಹುಂಬತನ ಅಜ್ಜನದು. ಇವರಿಬ್ಬರ ಈ ಪರಿ ನಮಗೆ ಮಾಮೂಲಿ. ಅದೇನೇ ಆದರೂ ಈಗ ಅಜ್ಜ ಅಲ್ಲಿಂದ ಎದ್ದೇಳಲೇ ಬೇಕು. ನಡು ನೀರೆ ಉಳಿಯುತ್ತಿದ್ದ ತೋಡು ಆರಿದ್ರದ ಆರಂಭದಲ್ಲೇ ತುಂಬಿ ಹರಿಯುತ್ತದೆ. ಬಿರುಸಿನ ಹರಿವಿಗೆ ಸಿಕ್ಕಿ ನಾವು ಕೊಚ್ಚಿ ಹೋಗುವ ಭಯದಲ್ಲಿ ಅಜ್ಜ ನಮ್ಮನ್ನು ತೋಡು ದಾಟಿಸಬೇಕು. ಗದ್ದೆ ಬದುವನ್ನು ಹಾದು ತೋಡು ದಾಟಿ ಮೂರು-ನಾಲ್ಕು ಮೈಲಿ ಕ್ರಮಿಸಿ, ಬಸ್ಸೇರಿ ಶಾಲೆ ತಲುಪಬೇಕು. ಶಾಲೆ ಮುಟ್ಟುವಷ್ಟರಲ್ಲಿ ಬ್ಯಾಗು, ಉಡುಪು, ತಲೆಗೂದಲು ಸಾಕಷ್ಟು ನೀರು ಕುಡಿದು ಅರಗಿಸಲಾಗದೆ ಕಕ್ಕಲಾರಂಭಿಸಿತಿತ್ತು. ಚಳಿಗೆ ತುಟಿಗಳು ಗಡಗಡ ನಡುಗಿ ಮಳೆಯ ಮಜವನ್ನು ಸಾಕ್ಷೀಕರಿಸುತ್ತಾ ಹೇಗೇಗೋ ತರಗತಿಯೊಳಗೆ ಸಜೀವ. ಮಧ್ಯಾಹ್ನದ ಹೊತ್ತಿಗೆ ಹಸಿವು ಬೆನ್ನೆತ್ತಿ ಬುತ್ತಿ ತೆರೆದರೆ ತಣ್ಣಗಾದ ಅದೇ ಅನ್ನ, ಚಟ್ನಿ…. ಪ್ರತಿ ದಿನ ಉಪ್ಪು, ಹುಳಿ, ಖಾರದ ಚಟ್ನಿಯಿಂದ ಅಲ್ಯುಮಿನಿಯಂ ಪಾತ್ರೆಯ ಮುಚ್ಚಳದ ಮಧ್ಯೆ ವೃತ್ತದಂತೆ ತೂತಗಳು ಆಗಿ ಯಾರೂ ಕಾಣಬಾರದೆಂದು ಎಡಗೈಯಿಂದ ಮರೆಮಾಡಿ ಗಬಗಬ ನುಂಗಿ ಅಲ್ಲಿಂದ ಎಸ್ಕೇಪ್ ಆದ ಕ್ಷಣ ಇಂದು ಶಾಲಾ ಮಕ್ಕಳು ಬಿಸಿಯೂಟ ಚಪ್ಪರಿಸುವಾಗಲೆಲ್ಲಾ ಅಪ್ಪಣೆ ಇಲ್ಲದೆ ನುಗ್ಗಿ ಬರುತ್ತಿದೆ.
ಸಂಜೆ ಶಾಲೆಯ ಗಂಟೆ ಬಾರಿಸುವ ವೇಳೆಗೆ ಸಮವಸ್ತ್ರ ನೀರಾರಿ ಬೆಚ್ಚಗೆ ನಿರಾಳವಾಗಬೇಕೆನ್ನುವಷ್ಟರಲ್ಲೇ ಬಸ್ಸತ್ತುವ ಪರದಾಟ. ಸುತ್ತಮುತ್ತಲ ಹಳ್ಳಿಗಳಿಂದ ಹಿಂಡು ಹಿಂಡಾಗಿ ಬರುವ ಮಕ್ಕಳಿಗೆಲ್ಲಾ ಅದೊಂದೇ ಬಸ್ಸು. ಶಾಲೆಯಲ್ಲಿ ಟೀಚರ್‌ನ ಏಟು, ಬಸ್ಸ್ ಕಂಡೆಕ್ಟರ್ ಗದರಿಸುವ ಪದಗಳ ಚಮತ್ಕಾರಗಳೆಲ್ಲವೂ ಒಗ್ಗಿಹೋಗಿತ್ತು. ಮನೆಗಳಲ್ಲಿ ಮಳೆಗಾಲಕ್ಕೆಂದು ಒಪ್ಪವಾಗಿ ಜೋಡಿಸಿದ್ದ ತುಂಡು ಸೌದೆಗಳ ಹಾಗೆ ಒತ್ತಾತ್ತಾಗಿ ತಳ್ಳಿ ನಿಲ್ಲಿಸಿ ಆರ್ಭಟಿಸುತ್ತಿದ್ದ ಕಂಡೆಕ್ಟರ್ ಕೆಂಗಣ್ಣು ಈಗಲೂ ನೆನದರೆ ಭಯವಾಗುತ್ತದೆ. ಯಾರದೋ ಬ್ಯಾಗಿನ ಜೊತೆ ಎಳೆದುಕೊಂಡು ಹೋಗುವ ಲಂಗ ಒಂದೆಡೆ, ಮತ್ತೊಂದೆಡೆ ಹೆಗಲಿನ ಬಟ್ಟೆಬ್ಯಾಗು ನಮ್ಮಿಂದ ದೂರ ಹೋಗಿ ಎಳೆದರೂ ಸಿಗದೆ ಯಾಮಾರಿಸುತಿತ್ತು. ಹೆಣ್ಣು ಮಕ್ಕಳನ್ನು ಎಳೆದು ಮುಂದೆ ಮುಂದೆ ನಿಲ್ಲಿಸುವಾಗಲೆಲ್ಲಾ ಕಂಡೆಕ್ಟರ್ ತನಗೆ ಸಿಗುವ ಅವಕಾಶವನ್ನು ಚೆನ್ನಾಗೆ ಬಳಸಿಕೊಂಡಿದ್ದ. ಇದರಿಂದ ರೋಸಿ ಅಸಹಾಯಕರಾಗುತ್ತಿದ್ದ ನಾವು ಬಟ್ಟೆ ಪಿನ್ನನ್ನು ಸರಳಾದಿಕಕೋನ ಮಾಡಿ ಗೊತ್ತಾಗದ ಹಾಗೆ ಕಂಡಕ್ಟರ್ ಕೈಗೆ ಸರಿಯಾಗೆ ಚುಚ್ಚಿಬಿಡುತ್ತಿದ್ದೆವು. ಒಮ್ಮೆ ನಾವು ಸ್ನೇಹಿತೆಯರೆಲ್ಲಾ ಸೇರಿ ಮೊದಲೇ ಮಾಡಿದ ಯೋಜನೆಯಂತೆ ಕಂಡಕ್ಟರ್ ನೂಕುನುಗ್ಗಲಿನೊಳಗಿಂದ ದಾಟುವಾಗ ಮರದ ಕೊಕ್ಕೆಕಾಲಿನ ಕೊಡೆಯನ್ನು ಒಂದು ಕಾಲಿಗೆ ಸಿಕ್ಕಿಸಿ ಜೋರಾಗಿ ಎಳೆದು ಬೀಳುವಂತೆ ಮಾಡಿ ನಮಗೇನೂ ಗೊತ್ತಿಲ್ಲವೆಂಬಂತೆ ತೆಪ್ಪಗೆ ನಿಂತಿದ್ದೆವು. ಇದರಿಂದ ಕೆರಳಿ ಅಬ್ಬರಿಸಿ ಬೈಯುತ್ತಾ ಕೈಗೆ ಸಿಕ್ಕವರನ್ನು ದೂಡಿ ಮುಂದಕ್ಕೆ ಸಾಗಿದ. ಬಸ್ಸಿಳಿದ ತಕ್ಷಣ ಆವರೆಗೂ ತಡೆದಿದ್ದ ನಾವು ಹೊಟ್ಟೆ ಕಿವುಚಿಕೊಂಡು ನಕ್ಕು ಸೇಡು ತೀರಿಸಿಕೊಂಡೆವು.
ದೈತ್ಯ ಕಾಫಿತೋಟಗಳಿಗಂಟಿಕೊಂಡಿರುವ ಅಂಕುಡೊಂಕಿನ ಗುಂಡಿ ಕವಲು ದಾರಿಗಳಲ್ಲಿ ಮಳೆ ನೀರು ತೋಡುಗಳಾಗಿ ಹರಿಯುವ ವೇಗಕ್ಕೆ ಕಾಲುಗಳನ್ನು ಎಳೆದುಕೊಂಡು ಹರಿಯುತ್ತಿತ್ತು. ಎದ್ದು ಬಿದ್ದು ಕೆಸರು ಮಿಶ್ರಿತ ನೀರಿನಲ್ಲಿ ಮಿಂದು ಸಾಗುವಾಗ ಬಾರ್ ಸೋಪಿನ ತುಂಡೊಂದು ಕಾಲಿಗೆ ಒಡರಿ ನಿಧಿ ಸಿಕ್ಕಷ್ಟು ಸಂತೋಷದಿಂದ ಅಮ್ಮನ ಕೈಗಿಡುವಾಗ ಏನೋ ಸಂಪಾದಿಸಿ ತಂದ ಸಂಭ್ರಮ! ಇಬ್ಬರಿಗೂ ಸೇರಿ ಒಂದು ತೂತು ಕೊಡೆ, ಅದರೊಳಗಿಂದ ಬೀಳುವ ದಪ್ಪ ಹನಿಗಳು ಮೂಗಿಗೆ ಬಡಿದು ಕೆಳಮುಖವಾಗಿ ತೊಟ್ಟಿಕ್ಕುತಿತ್ತು. ಪುಟ್ಟ ತಂಗಿಯ ಕೈಹಿಡಿದು ಎಳೆದುಕೊಂಡು ಓಡುವ ರಭಸಕ್ಕೆ ಅವಳ ಸಡಿಲಗೊಂಡ ಇಲಾಸ್ಟಿಕ್ ಪುಟಾಣಿ ಚಡ್ಡಿ ಜಾರಿ ಕೆಸರುಮಯವಾಗಿ ಸೂರು ಸೇರೋ ಹೊತ್ತಿಗೆ ಅನುಭವಿಸಿದ ಆವಾಂತರ ಅಷ್ಟಿಷ್ಟಲ್ಲ.
ಮನೆ ಸೇರಿದೊಡನೆ ನಮ್ಮೆಲ್ಲೆರ ಉಡುಪನ್ನು ಹಿಂಡಿ ಒಲೆಯ ಪಕ್ಕದಲ್ಲಿ ಒಟ್ಟಿದ ಸೌದೆಯ ಮೇಲೆ ಹರವಿ, ಒದ್ದೆಯಾದ ಪುಸ್ತಕಗಳನ್ನು ಸೆಗಣಿ ಸಾರಿಸಿದ ಮೊರದೊಳಗೆ ಹರಡಿ ಒಲೆಯ ಮುಂದಿಟ್ಟು ಬೆಳಗ್ಗಿನ ಹೊತ್ತಿಗೆ ಹಪ್ಪಳದಂತೆ ಗರಿಗರಿಯಾದ ಪುಸ್ತಕಗಳನ್ನು ಕೈಗಿತ್ತ ಅಮ್ಮನ ಬಳೆಯಿಲ್ಲದ ಕಾಳಜಿಯ ಕೈಗಳು ಇಂದಿಗೂ ಕಣ್ಣಂಚಿನಲಿ ಮಿಂಚುತ್ತಿದೆ. ಮಳೆಗಾಲಕ್ಕೆಂದು ಬೇಸಿಗೆಯಲ್ಲೆ ಮಣ್ಣು ಮೆತ್ತಿ ಒಣಗಿದ ಹಲಸಿನ ಬೀಜ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿ ಬಟ್ಟೆಯಿಂದ ಅದರ ಬಾಯಿ ಕಟ್ಟಿಡುತ್ತಿದ್ದರು. ಹಸಿವಿನ ಸಂಜೆಗಳಿಗೆಲ್ಲಾ ಗರಂಗರಂ ಹುರಿದ ಹಲಸಿನ ಬೀಜದೊಡನೆ ಕರಿಕಾಫಿ ಸೇರಿ ಚೈತನ್ಯ ತುಂಬಿದ ಮೆಲುಕು ಇಂದಿಗೂ ಹೃದ್ಯ.
ಏನೂ ದಕ್ಕದ ಸಂಜೆ ಹಸಿವಿನ ಹೋರಿ ತಿವಿದು ಹಿತ್ತಲ ಕಡೆ ಅಟ್ಟಿಸಿಕೊಂಡು ಹೋಗುತಿತ್ತು. ಅಲ್ಲೂ ಹಲಸಿನ ಹಣ್ಣು ಕಾಣದಾಗ ಕಣ್ಣೀರ ಧಾರೆ ಸುರಿಯುತಿತ್ತು. ನಮ್ಮನ್ನು ಆಟವಾಡಿಸಲೆಂದೇ ಒಮ್ಮೊಮ್ಮೆ ಅಜ್ಜಿ ಹಲಸಿನ ಹಣ್ಣನ್ನು ಬಚ್ಚಿಟ್ಟು ಮತ್ತೆ ಮುಂದಿಡುತ್ತಿದ್ದರು. ಕರಿ ಕಾಫಿಯಲ್ಲೂ ಒಂದು ಮಜಾ ಇತ್ತು. ವಾರದ ಮೊದಲೆರಡು ದಿನ ಸಿಹಿ ಕಾಫಿ, ಮತ್ತೆರೆಡು ದಿನ ಬೆಲ್ಲದ ತುಂಡನ್ನು ಚಪ್ಪರಿಸಿ ಕುಡಿದರೆ, ಕೊನೆಯ ದಿನಗಳು ಸಪ್ಪೆ ಕಾಫಿ ನಮ್ಮ ಪಾಲಿನದು. ಇಂದು ಸಕ್ಕರೆ ಕಾಯಿಲೆಯವರು ಸಪ್ಪೆ ಕಾಫಿಯನ್ನು ಮಂಕು ಮೋರೆಯಲ್ಲಿ ಕುಡಿಯುವಾಗಲೆಲ್ಲಾ ನನ್ನ ಬಾಲ್ಯದ ಕರಿ ಕಾಫಿ ಆವರಿಸಿಬಿಡುತ್ತದೆ.
ಬುಸುಗುಟ್ಟುವ ಗಾಳಿಗೆ ಒಳನುಗ್ಗುವ ಮಳೆ ಹನಿಗಳು ಮಸಿಗೋಡೆಯನ್ನು ತೋಯಿಸಿ ಬಿಡುತ್ತಿದ್ದವು. ಒದ್ದೆ ನೆಲದಲ್ಲಿ ಗೋಣಿ ಚೀಲ ಹಾಸಿ ಹರಕಲು ಹೊದಿಕೆಯ ಮೇಲೆ ಗೋಣಿ ಚೀಲವನ್ನು ಹೊದ್ದು ಚಳಿಯನ್ನು ಆಸ್ವಾದಿಸುತ್ತಿದ್ದೆವು. ನನ್ನ ತುಂಟ ತಂಗಿ ಸುಜಾ ಗೋಣಿ ಚೀಲದೊಳಗೆ ಕಾಲು ತೂರಿ ಎದೆವರೆಗೂ ಎಳೆದು ಮಜಾ ತಂದುಕೊಳ್ಳುತ್ತಿದ್ದಳು. ರಾತ್ರಿ ಅದೆಷ್ಟೋ ಹೊತ್ತಿಗೆ ತಿಗಣೆಗಳ ಮುತ್ತಿಗೆಗೆ ಎಚ್ಚರವಾಗಿ ನಿದ್ದೆಗೆಡಿಸಿದ ಸಿಟ್ಟಿಗೆ ಅವುಗಳನ್ನು ಸಾಮೂಹಿಕ ಹತ್ಯೆ ಮಾಡುವಾಗ ಕೈಯ್ಯಲ್ಲಿನ ಸೀಮೆಎಣ್ಣೆ ದೀಪಕ್ಕೆ ಮುಂಗೂದಲು ಸುಟ್ಟ ವಾಸನೆಯೂ, ತಿಗಣೆಯ ರಕ್ತದ ವಾಸನೆಯೂ ತಾಮುಂದು, ನಾಮುಂದು ಎಂಬ ಸ್ಪರ್ಧೆಯಲಿ ನಾಸಿಕವ ನುಗ್ಗಿದ ಪರಿ ಇಂದಿಗೂ ಮನದಾಳದಲ್ಲಿದೆ.
ಯಾರ ಮನೆ ಕೋಳಿ ಕೂಗಿದರೂ ನಮಗದು ಏಳುವ ಸಮಯ. ರಾತ್ರಿಯ ಗಾಳಿ, ಮಳೆಗೆ ಉದುರಿದ ಮಾವಿನ ಹಣ್ನನ್ನು ಆಯಲು ಓಡಬೇಕು. ಬ್ಯಾಗು ತುಂಬಿ ಉಳಿದರೆ ಉಡುಪನ್ನು ತುಂಬಿ ಮರಳುವಾಗ ಜಿಗಣೆ ಕಾಲಿಗಂಟಿ ಬಿಡಿಸಲಾಗದೆ ಅಜ್ಜಿಯ ಎಲೆ ಚೀಲದ ಸುಣ್ಣ ಹಾಕಿ ಒದರುವಷ್ಟರಲ್ಲಿ ಜಿಗಣೆ ಡುಮ್ಮಣ್ಣವಾಗಿರುತಿತ್ತು. ಹಣ್ಣು ಆಯಲು ತಡ ಮಾಡಿ ಪಕ್ಕದ ಮನೆಯವರಿಗೇನಾದರೂ ಅವಕಾಶವಾದರೆ ನಮಗಂದು ಅಮ್ಮನಲ್ಲಿ ಅವಿತಿರುವ ಅಸೂಯೆ, ಅತ್ಯಾಗ್ರಹದ ಮುಖ ವೇದ್ಯ.
ಕೊಡಗೆಂಬ ಸ್ವರ್ಗದಲ್ಲಿ ಬಾಲ್ಯದ ವಿಶ್ವವಿದ್ಯಾನಿಲಯ ಮೆಲುಕಿಸಿ ನನ್ನೊಳಗೆ ಹೃದ್ಯವಾಗಿ ಪುಟಿಯುತ್ತಲೇ ಇವೆ. ಮಳೆಯ ಜಳಕದಲ್ಲಿ ಪುಳಕಗೊಂಡು ಸುಂದರಿಯಾಗುವ ಆರ್ಕಿಡ್‌ಗಳನ್ನು ಎಣಿಸುವುದೂ ವಿಶ್ವವಿದ್ಯಾನಿಲಯದ ಒಂದು ಸಬ್ಜೆಕ್ಟ್ ಆಗಿತ್ತು. ಜಿಗಣೆ-ತಿಗಣೆಗಳು ರಕ್ತ ಹೀರುತ್ತಿಲ್ಲವಾದರೂ ಮರದಲ್ಲಿನ ಜೊಂಪೆ ಜೊಂಪೆ ಹಲಸನ್ನು ಕಂಡಾಗಲೆಲ್ಲಾ ಮಳೆ ಹನಿಯೊಂದಿಗೆ ಕಣ್ಣಹನಿಯೂ ಸೇರಿ ಧಾವಿಸಿ ಅಪ್ಪಿ ಕೃತಜ್ಞತೆ ಸಲ್ಲಿಸಬೇಕೆನಿಸುತ್ತದೆ. ಬಾಲ್ಯದ ಹಸಿವೆಂಬ ಹೋರಿಯನ್ನು ಅಟ್ಟಿಸಿದ ಮೃಷ್ಟಾನ್ನ!
ತೋಡ ಬದಿಗಳನ್ನು ತುಂಬುವ ಕೆಸ ಗುಡ್ಡೆಗಳಲೆಲ್ಲಾ ಅಜ್ಜಿಯ ಪಿರಿಪಿರಿ ನಿನಾದಿಸುತ್ತಲೇ ಇವೆ. ಬಾಲ್ಯದಲ್ಲಿ ದಕ್ಕಿದ ಅನುಭವಗಳೆಲ್ಲಾ ವಿಶ್ವವಿದ್ಯಾಲಯವೇ ನಿಜ! ಅದರ ಒಂದು ತುಣುಕಷ್ಟೇ ಈ ಆರಿದ್ರ ಮಳೆ. ಕಳೆದ ದಿನಗಳ ಸೊಬಗು ಅಂದಿಗೂ ಇಂದಿಗೂ ಎಂದೆಂದಿಗೂ ಸೊಬಗೆ!
– ಸುನೀತಾ, ಕುಶಾಲನಗರ
Very nice Sunita Madam. It is a beautiful reverie with dexterity of sentences and attention to details.