ಹಿಮಾಲಯದ ಸನ್ನಿಧಿಯಲ್ಲಿ – ಚಾರ್ಧಾಮ ಪ್ರವಾಸ-ಭಾಗ 8
ತ್ರಿಯುಗಿ ನಾರಾಯಣ
ನಾವು ಬಸ್ ಏರಿ ನಮ್ಮ ಸ್ಥಳದಲ್ಲಿ ಕೂತೆವು. ನಾವು ಬಸ್ ಹತ್ತಿದ್ದೇ ಮಂಗಾರಾಮ ಒಂದು ಬೀಡಿ ಹಚ್ಚಿ ಬಸ್ ಚಲಾಯಿಸಿದರು! ಅಲ್ಲಿಂದ ಹೊರಟು ದಾರಿಯಲ್ಲಿ ತ್ರಿಯುಗಿ ನಾರಾಯಣ ಎಂಬ ಪ್ರಾಚೀನ ದೇವಾಲಯಕ್ಕೆ ೨.೩೦ಗೆ ಬಂದೆವು. ಇದು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ತ್ರಿಯುಗಿನಾರಾಯಣ ದೇವಾಲಯವು ಹಿಂದೆ ಶಿವ ಹಾಗೂ ಪಾರ್ವತಿಯರ ಮದುವೆ ನೆರವೇರಿದ ಸ್ಥಳ ಎಂಬುದು ಪ್ರತೀತಿ. ಈ ದೇವಾಲಯದ ವಿಶೇಷತೆ ಎಂದರೆ ಇಲ್ಲಿಯ ಹೋಮಕುಂಡದಲ್ಲಿ ಶಾಶ್ವತವಾಗಿ ಉರಿಯುತ್ತಿರುವ ಅಗ್ನಿ. ಈ ಅಗ್ನಿ ಸಾಕ್ಷಿಯಾಗಿ ನಾರಾಯಣನ ಸಮ್ಮುಖದಲ್ಲಿ ಶಿವ ಹಾಗೂ ಪಾರ್ವತಿಯರು ಮದುವೆಯಾಗಿದ್ದು ಎಂಬುದು ಪುರಾಣ ಕಥೆ. ಮೂರು ಯುಗಗಳಿಂದಲೂ ಅಗ್ನಿ ಆರದೆ ಇಂದಿಗೂ ಉರಿಯುತ್ತಿರುವುದರಿಂದ ಇದಕ್ಕೆ ತ್ರಿಯುಗಿ ಎಂದು ಹೆಸರು ಬಂದಿದೆ. ದೇವಾಲಯದಲ್ಲಿ ನಾರಾಯಣ ಪ್ರತಿಷ್ಠಾಪಿತವಾಗಿರುವುದರಿಂದ ನಾರಾಯಣ ಎಂಬ ಹೆಸರೂ ಕೂಡಿಕೊಂಡು ತ್ರಿಯುಗಿ ನಾರಾಯಣ ಎಂದಾಗಿದೆ. ಕೇದಾರನಾಥ ದೇವಾಲಯವನ್ನು ಹೋಲುವಂಥ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ.
ನಾವು ನೋಡಿದಾಗ ಹೋಮಕುಂಡದಲ್ಲಿ ದೊಡ್ಡ ಸೌದೆ ಉರಿಯುತ್ತಿತ್ತು. ಮದುವೆಮಂಟಪವನ್ನೂ ನೋಡಿದೆವು. ಶಿವ ಪಾರ್ವತಿಯರ ಮದುವೆ ಕಥೆ ಕೇಳಿ ದೇವಾಲಯ ನೋಡಿ ಅಲ್ಲಿಂದ ನಿರ್ಗಮನ.
ಗುಪ್ತಕಾಶಿ
ಸಂಜೆ ೪.೩೦ ಗಂಟೆಗೆ ಗುಪ್ತಕಾಶಿ ತಲಪಿದೆವು. ದೇವಾಲಯ ನೋಡಿ ಚಪಾತಿ ತಿಂದು ನಮ್ಮ ಹೊಟ್ಟೆಪೂಜೆ ನಡೆಸಿದೆವು.
ಪುರಾಣದ ಕಥೆಯ ಪ್ರಕಾರ, ಮಹಾಭಾರತದಲ್ಲಿ ಯುದ್ಧ ಮುಗಿದ ನಂತರ, ಪಾಂಡವರು ದಾಯಾದಿಗಳನ್ನು ಹತ್ಯೆ ಮಾಡಿದ ಪಾಪ ಪರಿಹಾರಕ್ಕಾಗಿ, ವ್ಯಾಸ ಮಹರ್ಷಿಗಳನ್ನು ಭೇಟಿ ಮಾಡುತ್ತಾರೆ. ವ್ಯಾಸರು ಈಶ್ವರನ ಮೊರೆ ಹೋಗಲು ಆದೇಶಿಸುತ್ತಾರೆ. ಈಶ್ವರನ ಕೃಪೆ ಇಲ್ಲದೆ, ಅವನು ಕ್ಷಮಿಸದೆ ಇದ್ದರೆ ಸ್ವರ್ಗ ಪ್ರಾಪ್ತಿ, ಮೋಕ್ಷ ಸಿಗುವುದಿಲ್ಲ ಎಂದು ಹೇಳುತ್ತಾರೆ. ಶಿವನನ್ನು ಅರಸುತ್ತಾ ಪಾಂಡವರು ಗುಪ್ತಕಾಶಿಗೆ ಬರುತ್ತಾರೆ, ಆದರೆ ಶಿವ ಇವರನ್ನು ಕ್ಷಮಿಸುವ ಮನಸ್ಸು ಮಾಡುವುದಿಲ್ಲ. ಪಾಂಡವರಿಗೆ ದರ್ಶನ ಕೊಡಲು ಮನಸ್ಸಿಲ್ಲದೆ ಅಂತರ್ಧಾನನಾಗಿ ಬಿಡುತ್ತಾನೆ. ಪಾಂಡವರು ಶಿವನನ್ನು ಹುಡುಕುತ್ತಾ, ಅವನನ್ನು ಹಿಂಬಾಲಿಸುತ್ತಾ ಬರುತ್ತಾರೆ. ಗುಪ್ತಕಾಶಿಯಲ್ಲಿ ವೇಷ ಮರೆಸಿಕೊಂಡು ಸ್ವಲ್ಪ ಕಾಲ ನೆಮ್ಮದಿಯಾಗಿರುತ್ತಾನೆ. ಆದರೆ ಛಲ ಬಿಡದ ಪಾಂಡವರು, ಹುಡುಕುತ್ತಾ ಬರುತ್ತಾರೆ. ಇಲ್ಲಿ ಶಿವ ಗುಪ್ತವಾಗಿ ಅಡಗಿಕೊಂಡಿದ್ದನೆಂಬ ಕಾರಣಕ್ಕೆ, ಈ ಜಾಗಕ್ಕೆ ಗುಪ್ತಕಾಶಿ ಎಂಬ ಹೆಸರು ಬಂತೆಂದು ಪ್ರತೀತಿ.
ಪಾರ್ವತಿಯ ಪ್ರೀತಿಗೆ ಮನಸೋತ ಶಿವನು ಪಾರ್ವತಿಯಲ್ಲಿ ಮೊದಲ ಬಾರಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿದ ಸ್ಥಳವಂತೆ ಗುಪ್ತಕಾಶಿ. ಈ ದೇವಾಲಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸರಿಸಮನಾದದ್ದು ಎಂದೂ ಪ್ರತೀತಿಯಲ್ಲಿದೆ. ಇಲ್ಲಿ ಪುರಾತನ ವಿಶ್ವನಾಥ ದೇವಾಲಯ ಹಾಗೂ ಮಣಿಕರ್ಣಿಕ ಕುಂಡ ಇವೆ. ಇಲ್ಲಿಯ ಅರ್ಧನಾರೀಶ್ವರ ದೇವಸ್ಥಾನ, ಕೇದಾರನಾಥನ ದೇವಸ್ಥಾನದಂತೆಯೇ ೫೦೦೦ ವರ್ಷಗಳಷ್ಟು ಹಳೆಯದಾದದ್ದು. ಇಲ್ಲಿ ಗಂಗಾ ಮತ್ತು ಯಮುನಾ ನದಿಗಳೆರಡೂ ಶಿವಲಿಂಗದ ಕೆಳಗಡೆಯಿಂದ ಹರಿಯುತ್ತದೆ ಮತ್ತು ಮಣಿಕರ್ಣಿಕ ಕುಂಡದಲ್ಲಿ ಸೇರುತ್ತವೆ. ದೇವಸ್ಥಾನದ ಹೊರಗೆ, ಎರಡು ಜಲಧಾರೆಗಳು, ಭೂಮಿಯ ಒಳಗಡೆಯಿಂದ ಬಂದು, ಕುಂಡದಲ್ಲಿ ಬೀಳುವುದನ್ನು ಕಾಣಬಹುದು. ಇದು ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಂದಾಕಿನಿ ನದಿಯ ತಟದ ಮೇಲೆ ಸ್ಥಾಪಿತವಾಗಿದೆ.
ಊಖೀಮಠ (ಉಷಾ ಮಠ)
ಗುಪ್ತಕಾಶಿಯಿಂದ ಸಂಜೆ ೫.೩೦ಗೆ ಹೊರಟು ಆರು ಗಂಟೆಗೆ ಊಖೀಮಠ ತಲಪಿದೆವು. ಅಲ್ಲೇ ತಂಗುದಾಣ. ಊಖೀಮಠದಲ್ಲಿ ಲಗೇಜು ಹಾಕಿ, ಪಕ್ಕದಲ್ಲೇ ಇರುವ ಓಂಕಾರೇಶ್ವರ ದೇವಾಲಯಕ್ಕೆ ಬಂದೆವು. ಅಲ್ಲಿ ಮಹಾಮಂಗಳಾರತಿ ನೋಡಿದೆವು. ಅಲ್ಲಿಯ ಅರ್ಚಕರ ಹೆಸರು ವಾಗೀಶಲಿಂಗ ಪುರೋಹಿತ. ಕರ್ನಾಟಕದ ವೀರಶೈವ ಸಮುದಾಯಕ್ಕೆ ಸೇರಿದ ದಾವಣಗೆರೆಯವರು. ಅಲ್ಲಿ ಪೂಜೆ ಸಲ್ಲಿಸುವ ಅವಕಾಶ ಅವರ ಕುಟುಂಬಕ್ಕೆ ತಲೆತಲಾಂತರದಿಂದ ಬಂದಿದೆಯಂತೆ. ೨೦೧೩ರಲ್ಲಿ ಪ್ರವಾಹ ಬಂದಾಗ ಕೇದಾರನಾಥ ದೇವಾಲಯದೊಳಗೆ ಇದ್ದವರವರು. ಒಂದು ವರ್ಷ ವಾಗೀಶಲಿಂಗ ಅವರಾದರೆ ಮರು ವರ್ಷ ಶಂಕರಲಿಂಗಲಿಂಗ ಅವರು ಕೇದಾರನಾಥನ ಪೂಜಾ ಕೈಂಕರ್ಯ ಮಾಡುವುದಂತೆ. ಹೀಗೆ ಸರದಿ ಪ್ರಕಾರ ಬದಲಾವಣೆ. ಪೂಜೆ ಮುಗಿಸಿದ ವಾಗೀಶರು ಪ್ರವಾಹಬಂದಾಗ ದೇವಾಲಯದೊಳಗೆ ಇದ್ದ ತಮ್ಮ ಅಂದಿನ ಅನುಭವವನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ಅನುಭವವವು ಸವಿಯಲ್ಲ, ಅದರ ನೆನಪೇ ಸವಿಯು!
“ಅಂದು ತಾರೀಕು ೧೭-೬-೨೦೧೩ರಂದು ಬೆಳಗ್ಗೆ ಉತ್ತರಾಖಂಡದ ಕೇದಾರದಲ್ಲಿಯ ಸುತ್ತಮುತ್ತ ಹಿಮಾಲಯ ಪರ್ವತ ಭಾಗದಲ್ಲಿ ಮೇಘಸ್ಫೋಟವೇ ಆಯಿತು. ನನಗೆ ತಿಳಿದಂತೆ ಹಿಮಾಲಯದಲ್ಲಿ ಜೋರಾದ ಮಳೆ ಬರುವುದಿಲ್ಲ. ೨೦೧೩ರಲ್ಲಿ ಜೂನ್ ೧೩ರಿಂದಲೇ ಜೋರು ಮಳೆ ಬರುತ್ತಿತ್ತು. ಚಳಿ ಸಾಕಷ್ಟಿತ್ತು. ಪ್ರವಾಹ ಬಂದದ್ದು ಹದಿನೈದು ನಿಮಿಷವಾದರೂ ಅದರಿಂದ ಎಷ್ಟೋ ಮಂದಿ ಅಸುನೀಗಿದರು. ಜೂನ್ ೧೬ ರಂದು ರಾತ್ರಿ ಮಳೆ ಜೋರಾಗಿತ್ತು. ಪರ್ವತದ ಕಡೆಯಿಂದ ಕಲ್ಲುಗಳುರುಳುವ ಸದ್ದು ಕೇಳುತ್ತಲಿತ್ತು. ಏನೋ ಅನಾಹುತ ಆಗುತ್ತದೆ ಎಂದು ನಾವೆಲ್ಲ ಭೀತಿಗೊಳಗಾದೆವು. ಆ ಸಮಯದಲ್ಲಿ ಕೇದಾರದಲ್ಲಿ ತುಂಬಾ ಜನ ಪ್ರವಾಸಿಗರು ಇದ್ದರು. ಸದ್ಯ ರಾತ್ರಿ ಪ್ರವಾಹ ಬರಲಿಲ್ಲ. ಹಾಗಾಗಿ ಸಾವುನೋವುಗಳು ಹೆಚ್ಚಾಗಲಿಲ್ಲ. ರಾತ್ರಿ ಪ್ರವಾಹ ಬಂದಿದ್ದರೆ ಪ್ರಾಣಹಾನಿ ಜಾಸ್ತಿಯಾಗಿರುತ್ತಿತ್ತು.
೧೭ ಜೂನ್೨೦೧೩ ಬೆಳಗ್ಗೆ ೬.೩೦ ಗಂಟೆಗೆ ನಾನು ದೇವಾಲಯದೊಳಗೆ ಇದ್ದೆ. ದೇವಾಲಯದ ಕೈಂಕರ್ಯಕ್ಕೆ ನಾವು ೫ ಮಂದಿ ಇದ್ದೇವೆ. ಪರ್ವತದಿಂದ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಉರುಳಿಕೊಂಡು ಕಾಲು ಗಂಟೆ ಭೀಕರ ಪ್ರವಾಹ ಬಂದಿತ್ತು. ಪೂರ್ವ ಬಾಗಿಲಿನಿಂದ ಪ್ರವಾಹದ ನೀರು ದೇವಾಲಯದೊಳಗೆ ಹರಿದು ಬರುತ್ತಿತ್ತು. ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲಿತ್ತು. ನನ್ನ ಕಥೆ ಇಲ್ಲಿಗೆ ಮುಗಿಯಿತು ಎಂದು ಭಯಭೀತನಾಗಿ ಮೃತ್ಯುಂಜಯ ಜಪ ಮಾಡಲಾರಂಭಿಸಿದೆ. ನನ್ನ ಕಂಠಮಟ್ಟದವರೆಗೂ ನೀರು ಬಂದಿತ್ತು. ಉಟ್ಟ ಬಟ್ಟೆ ತೊಪ್ಪೆಯಾಗಿತ್ತು. ನೀರು ತಂಪಾಗಿದ್ದು ಅಸಾಧ್ಯ ಚಳಿಯಿಂದ ನಡುಗುತ್ತಿದ್ದೆ. ವಿದ್ಯುತ್ ಹೋಗಿ ಒಳಗೆಲ್ಲ ಕತ್ತಲೆ ಕವಿದಿತ್ತು. ಏನೂ ಕಾಣಿಸುತ್ತಿರಲಿಲ್ಲ. ಇನ್ನೇನು ಅರ್ಧ ಅಡಿಗೂ ಮೇಲೆ ನೀರು ಬಂದಿದ್ದರೆ ನಾನು ಅಲ್ಲೇ ಜಲಸಮಾಧಿಯಾಗಿರುತ್ತಿದ್ದೆ. ಕಾಣಿಕೆ ಡಬ್ಬಿಯ ಮೇಲೆ ಹತ್ತಿ ಮೇಲಿದ್ದ ಘಂಟೆಯನ್ನು ಆಧಾರಕ್ಕೆ ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಸ್ವಲ್ಪ ಹೊತ್ತಿನಲ್ಲಿ ನೀರು ಕಡಿಮೆಯಾಗಲಾರಂಭಿಸಿತು. ಕತ್ತಲೆಯಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಬಂದ ನೀರು ಎಲ್ಲಿಂದ ಹೊರಗೆ ಹೋಗುತ್ತಿದೆ ಗೊತ್ತಾಗಲಿಲ್ಲ. ನೀರು ಸಂಪೂರ್ಣ ಇಳಿದ ಮೇಲೆ ಕೆಳಗೆ ಬಂದು ಹೊರಗೆ ನೋಡಿದಾಗ ಗೊತ್ತಾದದ್ದು, ಮುಚ್ಚಿದ್ದ ಪಶ್ಚಿಮ ಬಾಗಿಲು ತಾನಾಗಿಯೇ ತೆರೆದುಕೊಂಡು ನೀರು ಅಲ್ಲಿಂದ ಹೊರ ಹರಿಯುತ್ತಲಿತ್ತು. ಇದಲ್ಲವೆ ಕೇದಾರನಾಥನ ಲೀಲೆ! ದೇವಾಲಯದ ಒಳಗೆ ಮಣ್ಣು, ಮರಳು ತುಂಬಿತ್ತು. ಆಹಾರವಿರಲಿ, ಕುಡಿಯಲು ಸ್ವಚ್ಛ ನೀರೂ ಸಿಗದ ಪರಿಸ್ಥಿತಿಯಲ್ಲಿ ಎರಡು-ಮೂರು ದಿನ ಕಳೆದಿದ್ದೆವು.
ಮಳೆ ಜೋರಾಗಿ ಎಡೆಬಿಡದೆ ಸುರಿಯಿತು. ಮಳೆನೀರಿನ ಜೊತೆ ಹಿಮ ಕರಗಿ ಮಂದಾಕಿನಿ ನದಿ ಸೇರಿತು. ಅದರಿಂದ ಬಲುದೊಡ್ಡ ಪ್ರವಾಹವೇ ಉಂಟಾಯಿತು. ನೀರು ರೌದ್ರಾವತಾರದಿಂದ ಉಕ್ಕಿ ಹರಿದು ದೇವಾಲಯದ ಸುತ್ತಮುತ್ತ ಇದ್ದ ಕಟ್ಟಡಗಳು ಜಲಾವೃತಗೊಂಡು ಕುಸಿದುಬಿದ್ದುವು. ಯಾತ್ರಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋದ ಘಟನೆಯೂ ನಡೆಯಿತು. ಸೇನಾ ಕಾರ್ಯಾಚರಣೆಯಿಂದ ಸಾವಿರಾರು ಮಂದಿಯ ಜೀವ ಉಳಿಯಿತು.
ದೇವಾಲಯದ ಹಿಂದೆ ತುಸು ದೂರದಲ್ಲಿ ದೊಡ್ಡ ಗಾತ್ರದ ಬಂಡೆಗಲ್ಲನ್ನು ಯಾರೋ ತಂದು ಹಾಕಿದಂತೆ ಇದ್ದುದನ್ನು ನೀವೆಲ್ಲ ನಿನ್ನೆ ನೋಡಿದ್ದೀರಲ್ಲ. ಅದೇನಾದಾರೂ ಮತ್ತೂ ಮುಂದೆ ಉರುಳಿ ದೇವಾಲಯದ ಹಿಂಬದಿ ಗೋಡೆಗೆ ಡಿಕ್ಕಿ ಹೊಡೆದಿದ್ದರೆ ದೇವಾಲಯ ನಿರ್ನಾಮಗೊಳ್ಳುತ್ತಿತ್ತು. ಆದರೆ ದೇವರು ದೊಡ್ಡವನು. ಇದೇ ಬಂಡೆಯಿಂದಾಗಿ ಪ್ರವಾಹದ ನೀರು ಎರಡು ಕವಲಾಗಿ ಹರಿದು ದೇವಾಲಯಕ್ಕೆ ಏನೂ ಹಾನಿಯಾಗಲಿಲ್ಲ ಎಲ್ಲ ಶಿವನಿಚ್ಛೆಯಂತೆಯೇ ನಡೆಯುತ್ತದೆ’’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ನಾವೆಲ್ಲ ಮಂತ್ರಮುಗ್ಧರಾಗಿ ಅವರ ಮಾತು ಆಲಿಸಿದೆವು. ಕೆಲವರೆಲ್ಲ ಅವರ ಕಾಲಿಗೆ ನಮಸ್ಕರಿಸಿದರು.
ಉಷಾ ಅನಿರುದ್ಧರ ವಿವಾಹವಾದ ಸ್ಥಳವೇ ಉಷಾಮಠವೆಂದು ಪ್ರಸಿದ್ಧಿ ಪಡೆಯಿತು. ಊರವರ ಬಾಯಲ್ಲಿ ಅಪಭ್ರಂಶವಾಗಿ ಕ್ರಮೇಣ ಊಖೀ ಮಠವೆಂದು ರೂಢಿಗೆ ಬಂತು. ಉಷಾ ಅನಿರುದ್ಧರ ವಿವಾಹಮಂಟಪವೂ ಅಲ್ಲಿದೆ. ಆರು ತಿಂಗಳು ಕೇದಾರನಾಥ ದೇಗುಲ ಬಾಗಿಲು ಮುಚ್ಚಿದಾಗ ಕೇದಾರನಾಥನ ಉತ್ಸವಮೂರ್ತಿಗೆ ಇಲ್ಲಿ ಓಂಕಾರೇಶ್ವರ ದೇವಾಲಯದಲ್ಲಿ ಆರು ತಿಂಗಳು ಪೂಜೆ ನಡೆಯುತ್ತದೆ. ಮೇ ತಿಂಗಳಲ್ಲಿಆ ಉತ್ಸವಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಕೇದಾರನಾಥ ತಲಪುವುದಂತೆ. ಅದರಲ್ಲಿ ನೂರಾರು ಭಕ್ತರು ಮೂರ್ತಿ ಹೊತ್ತು ಸಾಗಲು ಭಾಗಿಯಾಗುತ್ತಾರಂತೆ. ಉಷಾಮಠವೆಂದು ಕನ್ನಡದಲ್ಲಿ ಬರೆದ ಫಲಕವಿದೆ ಅಲ್ಲಿ. ಕನ್ನಡ ಅಕ್ಷರ ನೋಡಿ ಬಲು ಖುಷಿಯಾಯಿತು.
ಊಟದ ತಯಾರಿ
ಮಠದ ಅಡುಗೆಮನೆಯಲ್ಲಿ ಶಶಿಕಲಾ ಸರಸ್ವತಿಯವರು ಅನ್ನ, ಸಾಂಬಾರು ತಯಾರಿಸಿದರು. ಸ್ನಾನಾದಿ ಮುಗಿಸಿ, ಮಾಡಿದ ಅಡುಗೆಗೆ ನ್ಯಾಯ ಸಲ್ಲಿಸಿದೆವು.
ಓಂಕಾರೇಶ್ವರನ ಪೂಜೆ
ಬೆಳಗ್ಗೆ (೧೯-೯-೨೦೧೬) ೫.೩೦ಗೆ ಎದ್ದು ತಯಾರಾಗಿ ಆರು ಗಂಟೆಗೆ ದೇವಾಲಯಕ್ಕೆ ಹೋದೆವು. ಅಲ್ಲಿ ಒಂದು ಗಂಟೆ ಕುಳಿತು ಅರ್ಚನೆ, ಅಭಿಷೇಕ, ಮಹಾಮಂಗಳಾರತಿ ನೋಡಿದೆವು. ಮಂತ್ರ ಹೇಳಲು ಮೈಕ್ ಮುಂದೆ ಒಬ್ಬರು ಇರುತ್ತಾರೆ. ಅರ್ಚಕರೂ ಒಳಗೆ ಮಂತ್ರ ಹೇಳುತ್ತಾರೆ.
ಊಖೀಮಠಕ್ಕೆ ವಿದಾಯ
ಬೆಳಗ್ಗೆ ಬೇಗ ಎದ್ದು ಉಪ್ಪಿಟ್ಟು, ಹುಳಿಅನ್ನ ಮಾಡಿಟ್ಟಿದ್ದರು ಅನ್ನಪೂರ್ಣೆಯರು. ಸರೋಜ ಎಲ್ಲರಿಗೂ ಕಾಫಿ ಚಹಾ ಮಾಡಿ ಕೊಟ್ಟರು. ೯ ಗಂಟೆಗೆ ಉಪ್ಪಿಟ್ಟು ತಿಂದು ೯.೩೦ಕ್ಕೆ ಊಖೀಮಠಕ್ಕೆ ವಿದಾಯ ಹೇಳಿ ಬಸ್ ಹತ್ತಿದೆವು.
ತುಂಗಾನಾಥದೆಡೆಗೆ
ಪಂಚಕೇದಾರದಲ್ಲಿ ಮೂರನೆಯದಾದ ತುಂಗಾನಾಥ ಬೆಟ್ಟಕ್ಕೆ ಹೋಗುವ. ಅದು ಬದರಿಗೆ ಹೋಗುವ ದಾರಿಯಲ್ಲೇ ಸಿಗುತ್ತದೆ. ಆದರೆ ಎಲ್ಲರೂ ಕುದುರೆಯಲ್ಲೇ ಹೋಗಿ ಕುದುರೆಯಲ್ಲೇ ಬರತಕ್ಕದ್ದು. ನಡೆಯುವಷ್ಟು ಸಮಯ ಇಲ್ಲ. ಮೊದಲೇ ನಿಗದಿಪಡಿಸಿದ ನಮ್ಮ ಪ್ರವಾಸದ ಪಟ್ಟಿಯಲ್ಲಿಲ್ಲ ಇದು. ಈ ಜಾಗ ನೋಡುವುದು ಬೋನಸ್ ಎಂದು ವಿಠಲರಾಜು ಹೇಳಿದ್ದರು. ಊಖೀಮಠದಿಂದ ಚೊಪತಾಕ್ಕೆ ಹೋದೆವು. ಚೊಪತಾದಿಂದ ತುಂಗಾನಾಥಕ್ಕೆ ಸುಮಾರು ೫ಕಿಮೀ ಬೆಟ್ಟ ಹತ್ತಬೇಕು. ಕುದುರೆಯಲ್ಲಿ ಕೂರಲು ಭಯವಿರುವ ಮೂರು ಮಂದಿ ಬರದೆ ಬಸ್ಸಲ್ಲೇ ಕೂತರು.
ಕುದುರೇಯ ತಂದಿವ್ನಿ ಜೀನಾವ ಬಿಗಿದಿವ್ನಿ
ಕುದುರೇಯಾ ತಂದಿವ್ನಿ ಜೀನಾವ ಬಿಗಿದಿವ್ನಿ ಬರಬೇಕು ತಂಗೀ ತುಂಗಾನಾಥಕ್ಕೆ ಎಂದು ಮಾಬೀರ್ ಸಿಂಗ್ ಅಣ್ಣ ಕುದುರೆಯೊಂದಿಗೆ ತಯಾರಾಗಿ ನಿಂತಿದ್ದ! ಬೆಳಗ್ಗೆ ೧೧.೩೦ಗೆ ಕುದುರೆ ಏರಿದೆವು. ನಾನೇರಿದ ಕುದುರೆಯ ಹೆಸರು ಗೋಲು. ಐದು ವರ್ಷದವ. ಅದರ ಮಾಲೀಕ ಮಾಬೀರ್ ಸಿಂಗ್. ತಂಗಿ ಸವಿತಳ ಕುದುರೆಯೂ ಗೋಲು. ಅದಕ್ಕೆ ನಾಲ್ಕು ವರ್ಷ. ಅಣ್ಣತಮ್ಮನಂತೆ ಅವು. ಅಣ್ಣತಮ್ಮ ಎರಡಕ್ಕೂ ಅದೇಗೆ ಒಂದೇ ತರಹದ ಹೆಸರಿಟ್ಟರು ಎಂದು ನಾನಂದಾಗ, ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿರಬಹುದು ಎಂದಳು ಸವಿತ! ನಾವಿಬ್ಬರೂ ಅಕ್ಕತಂಗಿಯರು ಅವರ ಅಣ್ಣತಮ್ಮ ಕುದುರೆ ಏರಿದ್ದು ಕುದುರೆವಾಲಾಗಳಿಗೆ ಖುಷಿಯೋ ಖುಷಿ. ತುಂಬ ಚೆನ್ನಾಗಿ ನಮ್ಮನ್ನು ಕರೆದೊಯ್ದರು.
ತುಂಗಾನಾಥ ಬೆಟ್ಟ ಹತ್ತುವಾಗಿನ ನೋಟ ಅದೆಷ್ಟು ಚಂದ. ಒಮ್ಮೆ ಹಿಮದಿಂದಾವೃತ ಬೆಟ್ಟ, ದಾರಿಯ ಮುಂದೆ ಏನೊಂದೂ ಕಾಣದು. ಎಲ್ಲ ಒಮ್ಮೆಗೇ ಮಾಯವಾದಂತೆ ಅನಿಸುತ್ತದೆ. ಎಲ್ಲ ಮಾಯ, ನಾವು ಮಾಯ, ಬೆಟ್ಟ ಮಾಯ, ಹಿಂದೆ ಬರುವವರೂ ಮಾಯ. ಸ್ವಲ್ಪ ಹೊತ್ತಲ್ಲಿ ಎಲ್ಲ ಕಣ್ಣೆದುರು ಗೋಚರ. ಇದುವೆ ಪ್ರಕೃತಿಯ ವೈಚಿತ್ರ್ಯ. ಹಸಿರುಹೊದ್ದ ಹಿಮಮಣಿಯ ಸಾಲು. ನಿಸರ್ಗದ ಈ ಬೆಟ್ಟಗಳ ಸೌಂದರ್ಯವನ್ನು ವಿವರಿಸಲು ಶಬ್ದಗಳ ಕೊರತೆ ಕಾಡುತ್ತದೆ! ಕುದುರೆಮೇಲೆ ಸವಾರಿ ಮಾಡುತ್ತಲೇ ಬೆಟ್ಟಗಳ ಸೌಂದರ್ಯ ನೋಡುತ್ತ ಸಾಗಿದೆವು. ಕುದುರೆಯಿಂದ ಬೀಳದಂತೆ ಒಂದು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಒಂದೇ ಕೈಯಲ್ಲಿ ಮೊಬೈಲು ಹಿಡಿದು ಫೋಟೋ ತೆಗೆಯುವ ಸಾಹಸ ಮಾಡಿದೆ. ದಾರಿಯಲ್ಲಿ ಒಮ್ಮೆ ಮಾತ್ರ ಕುದುರೆಯಿಂದ ಇಳಿದು ಕುದುರೆಗೆ ವಿಶ್ರಾಂತಿ. ಅಲ್ಲಿ ಚಹಾ ಕುಡಿಯುವವರು ಕುಡಿದರು.
ನಮ್ಮ ಕುದುರೆಗೆ ಬೆಲ್ಲ ತಿನ್ನಿಸಲು ಭಕ್ಷೀಸು ಕೊಡಿ ಎಂದು ಮಾಬೀರ್ ಸಿಂಗ್ ಕೇಳಿದ. ಹಾಗೆ ರೂ.೧೦೦ ಕೊಟ್ಟೆವು. ಅವನು ಸಂಪ್ರೀತನಾದ. ಅವನು ತೃಪ್ತಿ ಹೊಂದಿದರೆ ಕುದುರೆಯನ್ನೂ ಚೆನ್ನಾಗಿ ನೋಡಿಕೊಂಡಂತೆಯೇ ಲೆಕ್ಕ! ಬೆಟ್ಟ ಹತ್ತುತ್ತ ಮೆಟ್ಟಲು ಹತ್ತುವಾಗ ನಾವು ಕುದುರೆಯಲ್ಲಿ ಕುಳಿತಿರುವಾಗ ಮುಂದೆ ಬಾಗಬೇಕು. ಇಳಿಯುವಾಗ ಹಿಂದೆ ಬಾಗಬೇಕು. ಆಗ ಕುದುರೆಗೆ ನಮ್ಮ ಭಾರ ಸಮತೋಲವಾಗಿ ಕಷ್ಟವೆನಿಸುವುದಿಲ್ಲ. ನಾವು ಅಕ್ಕ ತಂಗಿ ಅದನ್ನು ಸರಿಯಾಗಿ ಪಾಲಿಸಿದೆವು.
ತುಂಗಾನಾಥ ದೇವಾಲಯ
ಸುಮಾರು ೧೨.೩೦ ಅಂದಾಜು ನಾವು ದೇವಾಲಯ ತಲಪಿದೆವು. ದೇವರ ದರ್ಶನ ಮಾಡಿದೆವು. ಒಳಗೆ ಹೋದೊಡನೆ ಅಲ್ಲಿರುವ ಪಂಡಿತರು, ‘ಪಂಡಿತರಿಗೆ ತಟ್ಟೆಗೆ ದಕ್ಷಿಣೆ ಹಾಕಿ’ ಎಂದು ಬಾಯಿಬಿಟ್ಟೇ ತಟ್ಟೆಗೆ ಎಂಬುದನ್ನು ಒತ್ತಿ ಕೇಳುತ್ತಾರೆ. ತಟ್ಟೆಗೆ ದೊಡ್ಡನೋಟು ಹಾಕಿದರೆ ಮುಖ ಇಷ್ಟಗಲವಾಗಿ ನಗು ಮೂಡುತ್ತದೆ. ಹುಂಡಿಗೆ ಹಾಕಿದರೆ ಮುಖ ಸಿಂಡರಿಸುತ್ತಾರೆ.
ತುಂಗಾನಾಥ ಬೆಟ್ಟ ೧೨೭೭೨ ಅಡಿ ಎತ್ತರದಲ್ಲಿದೆ. ನಾವು ಹೋದ ಸಮಯದಲ್ಲಿ ಸ್ವಲ್ಪ ಚಳಿಯಿದ್ದು ಆಗಾಗ ಹಿಮದಿಂದ ಕೂಡಿತ್ತು. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥ ದೇವಸ್ಥಾನ ವಿಶ್ವದ ಅತಿ ಎತ್ತರದಲ್ಲಿ ನೆಲೆಸಿರುವ ಶಿವನ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ. ಸುತ್ತಲೂ ಹಸಿರಿನಿಂದ ಆವೃತವಾಗಿದ್ದು ಬೆಟ್ಟಗಳಿಂದ ಕೂಡಿದ ಭೂಮಟ್ಟದಿಂದ ಇಷ್ಟೊಂದು ಎತ್ತರದಲ್ಲಿರುವ ಶಿವನ ದೇವಸ್ಥಾನ ಪ್ರಪಂಚದ ಬೇರೆಲ್ಲೂ ಇಲ್ಲ.
ದೇವಾಲಯದ ಹೊರಗೆ ಕೂತು ಸುತ್ತಲೂ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಸಿಕೊಂಡೆವು. ಇಲಿಯೊಂದು ಪಕ್ಕದಲ್ಲೇ ಒಂದೆಲಗ ನಮೂನೆಯ ಎಲೆಯನ್ನು ತಿನ್ನುತ್ತಿದ್ದುದನ್ನು ನೋಡಿದೆವು.
ಚಂದ್ರಕಾಂತ ಶಿಲಾಮಂದಿರ
ದೇವಾಲಯದಿಂದ ಮುಂದೆ ಪುಟ್ಟಬೆಟ್ಟ ಏರಿದರೆ ಚಂದ್ರಕಾಂತ ಶಿಲಾಮಂದಿರ ಎಂಬ ಪುಟ್ಟ ದೇವಾಲಯವಿದೆ. ಅಲ್ಲಿಗೆ ತೆರಳಲು ೩ಕಿಮೀ ನಡೆಯಬೇಕು. ಒಂದು ಗಂಟೆಗೆ ನಾವು ಉತ್ಸಾಹವಿರುವ ಏಳೆಂಟು ಮಂದಿ ಹೊರಟೆವು. ಅಲ್ಲಿಯೂ ಒಮ್ಮೆ ಹಿಮ, ಮಂಜು ಕಣ್ಣಾಮುಚ್ಚಾಲೆಯಾಟ ಆಡುತ್ತಲೇ ಇತ್ತು. ಈ ಕಣ್ಣಾಮುಚ್ಚಾಲೆಯಾಟ ನೋಡಲು ಬಲು ಸೊಗಸು. ದಾರಿಯಲ್ಲಿ ಕಾಡು ಹೂಗಳು ಬಂಡೆ ಎಡೆಯಲ್ಲಿ ಸಂದುಗೊಂದುಗಳಲ್ಲಿ ಅರಳಿ ಸೊಗಸಾಗಿ ಕಾಣುತ್ತಿತ್ತು. ಬೆಟ್ಟ ಏರಲು ಸಾಕಷ್ಟು ಸುಸ್ತು ಆಗುತ್ತದೆ. ಅಲ್ಲಲ್ಲಿ ನಿಂತು ಉಸಿರು ಬಿಟ್ಟು ಉಸಿರೆಳೆದು ಅಂತೂ ಬೆಟ್ಟ ಏರಿದೆವು. ಅಲ್ಲಿ ಕೂತು ತುಸು ವಿರಮಿಸಿ ಹಿಮ ಕಡಿಮೆಯಾಗುವ ಸಮಯ ಕಾದು ಭಾವಚಿತ್ರ ತೆಗೆಸಿಕೊಂಡು ಕೆಳಗೆ ಇಳಿಯಲು ತೊಡಗಿದೆವು. ಕಾಡು ಹೂಗಳು ಕಾಣಿಸಿದುವು. ಪ್ರವಾಸಿಗರು ತಿಂದು ಬೀಸಾಡಿದ ಚಾಕಲೇಟು ಕವರು ಇತ್ಯಾದಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರೋಜ ಹೆಕ್ಕಿ ಪರಿಸರ ಕಾಪಾಡುವಲ್ಲಿ ಅಳಿಲು ಸೇವೆ ಸಲ್ಲಿಸಿದರು. ಕೆಳಗೆ ಕುದುರೆ ಬಳಿ ತಲಪುವಾಗ ೨.೪೫ ಆಗಿತ್ತು. ಹೊಟ್ಟೆ ತಾಳ ಹಾಕಲು ಸುರುವಾಗಿತ್ತು. ಎಲ್ಲರಿಗೂ ದ್ರಾಕ್ಷೆ ಹಂಚಿದೆ. ಒಮ್ಮೆ ಕುದುರೆ ಏರಿದ ಮೇಲೆ ಇಳಿದದ್ದು ಗಮ್ಯ ಸ್ಥಳ ಬಂದಾಗಲೇ. ಇಳಿಯುವಾಗ ಗಂಟೆ ೩.೩೦. ಮಾಬೀರ್ ಸಿಂಗ್‌ಗೆ ರೂ. ೫೦೦ ಕೊಟ್ಟೆ. ಕುದುರೆ ಏರುವ ಮೊದಲೇ ಹೋಗಿ ಬರಲು ರೂ.೫೦೦ ಎಂದು ನಿಗದಿಪಡಿಸಿದ್ದರು.
ತುಂಗಾನಾಥದಿಂದ ನಿರ್ಗಮನ
ಬಸ್ಸು ಹತ್ತಿ, ಬೆಳಗ್ಗೆ ಬರುವಾಗ ಮಾಡಿ ತಂದಿದ್ದ ಪುಳಿಯೋಗರೆ ತಿಂದು ನಾಲ್ಕು ಗಂಟೆಗೆ ಅಲ್ಲಿಂದ ಹೊರಟೆವು. ಬಸ್ಸಲ್ಲಿದ್ದವರಿಗೆ ಬೆಂಗಳೂರಿನಿಂದ ಬಂದ ಪ್ರವಾಸಿಗರು ಮಾತಾಡಲು ಸಿಕ್ಕಿದಾಗ, ಅವರ ಗುಂಪಿನಲ್ಲೊಬ್ಬ ಹೆಂಗಸು ೫೧ ವರ್ಷದಾಕೆ ಕೇದಾರದಲ್ಲಿ ಹೃದಯಾಘಾತದಿಂದ ತೀರಿಹೋದ ವಿಚಾರ ಹೇಳಿದರಂತೆ. ಸುದ್ದಿ ಕೇಳಿ ಮರುಗಿದೆವು.
ಗೋಪೇಶ್ವರ
ಗೋಪೇಶ್ವರ ದೇವಾಲಯಕ್ಕೆ ಸಂಜೆ ಆರು ಗಂಟೆಗೆ ತಲಪಿದೆವು. ಚಮೋಲಿ ಜಿಲ್ಲೆಯಲ್ಲಿರುವ ದೊಡ್ಡ ಪಟ್ಟಣ. ಪ್ರಾಚೀನ ಶಿವಮಂದಿರ. ಈಶ್ವರ ತಪಸ್ಸಿಗೆ ಕೂತಾಗ ಭಂಗಮಾಡಲು ಬಂದ ಕಾಮನನ್ನು ದಹನ ಮಾಡಿದ ಸ್ಥಳವಿದು. ದೊಡ್ಡದಾದ ತ್ರಿಶೂಲವಿದೆ ಇಲ್ಲಿ. ಪಂಚಕೇದಾರಗಳಲ್ಲಿ ಎರಡನೆಯದಾದ ರುದ್ರನಾಥನ ಉತ್ಸವಮೂರ್ತಿಗೆ ಇಲ್ಲಿ ಆರು ತಿಂಗಳು ಪೂಜೆ ಸಲ್ಲುತ್ತದೆ. ಗೋಪೇಶ್ವರ ದೇವಾಲಯದ ಹಿಂಬದಿ ಸುಂದರವಾದ ಮನೆ ಇದೆ.
ಸರೋಜ ನಮಗೆ ಗೋಲ್ಗೊಪ್ಪ ಕೊಡಿಸಿದರು. ರೂ. ೧೦ಕ್ಕೆ ಆರು ಗೋಲ್‌ಗೊಪ್ಪ ಕೊಡುತ್ತಾರೆ. ಖಾರವಾಗಿ ಚೆನ್ನಾಗಿತ್ತು.
ಮಾಯಾಪುರ
ಅಲ್ಲಿಂದ ಹೊರಟು ಮಾಯಾಪುರ ಎಂಬ ಊರು ಸಂಜೆ ಏಳು ಗಂಟೆಗೆ ತಲಪಿದೆವು. ಅಲ್ಲಿ ಹಿಮಆನಂದ ಎಂಬ ವಸತಿಗೃಹದಲ್ಲಿ ತಂಗಿದೆವು. ಅಲ್ಲಿ ಚಪಾತಿ, ಅನ್ನ ಸಾರು ಊಟ ಮಾಡಿದೆವು. ಊಟವಾಗಿ ಹೊಟೇಲಿನಿಂದ ಹೊರ ಬರುವಾಗ ಹೇಮ ಎಡವಿ ಬಿದ್ದರು. ಅದೇಗೆ ಬಿದ್ದಿರಿ ಎಂದು ಯಾರೋ ಕೇಳಿದಾಗ ಅವರು ಇದು ಮಾಯಾಪುರ ಅದಕ್ಕೆ ಎಂದು ಉತ್ತರ ಕೊಟ್ಟರು! ಅಲ್ಲಿ ರೂ. ೩೦ಕ್ಕೆ ಒಂದು ಬಾಲ್ದಿ ಬಿಸಿನೀರು ಪಡೆದು ಸ್ನಾನ ಮಾಡಿದೆ.
ಜೋಷಿಮಠ
ಬೆಳಗ್ಗೆ (೨೦-೯-೧೬) ೬.೨೦ಕ್ಕೆ ಹೊರಟು ಜೋಶಿಮಠಕ್ಕೆ ಹೋದೆವು. ಜ್ಯೋತಿರ್ಮಠ ಎಂದಿದ್ದದ್ದು ಈಗ ಜೋಷಿಮಠವಾಗಿದೆ. ಶಂಕರಾಚಾರ್ಯರ ನಾಲ್ಕು ಮಠಗಳಲ್ಲಿ ಇದೂ ಒಂದು. ಜೋಷಿಮಠ ಅಥವಾ ಜ್ಯೋತಿರ್ಮಠವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಜೋಷಿಮಠ ಕ್ಷೇತ್ರವು ಪ್ರಮುಖವಾಗಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಒಂದೆನಿಸಿದೆ. ಶೃಂಗೇರಿ, ಪುರಿ ಮತ್ತು ದ್ವಾರಕಾ ಉಳಿದ ಮೂರು ಪೀಠಗಳು. ಆದಿ ಗುರು ಶಂಕರಾಚಾರ್ಯರು ಜ್ಯೋತಿರ್ಮಠದ ಪೀಠಕ್ಕೆ ಅಥರ್ವವೇದದ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರೆನ್ನಲಾಗಿದೆ. ಇಲ್ಲಿ ಶಂಕರಾಚಾರ್ಯರ ಗದ್ದುಗೆ ಇದೆ. ಇಲ್ಲಿಯೇ ಅವರು ಸೌಂದರ್ಯಲಹರಿ ಬಾಷ್ಯ ಬರೆದದ್ದಂತೆ. ಅಲ್ಲಿ ಹೊಸ ದೇವಾಲಯ ಕಟ್ಟಲು ಭರದಿಂದ ಕೆಲಸ ನಡೆಯುತ್ತಲಿತ್ತು.
ಅಲ್ಲೇ ಹತ್ತಿರವಿದ್ದ ಹೊಟೇಲಿನಲ್ಲಿ ಪರೋಟ ತಿಂದು ೯.೩೦ಗೆ ಬಸ್ ಹತ್ತಿದೆವು. ಅಲ್ಲಿ ರೂ. ೧೦೦ಕ್ಕೆ ಶಾಲು ವ್ಯಾಪಾರ ಮಾಡಿದೆವು.
…………………..ಮುಂದುವರಿಯುವುದು
ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 7 : http://52.55.167.220/?p=13220
– ರುಕ್ಮಿಣಿಮಾಲಾ, ಮೈಸೂರು