ತುಳಸಿಪೂಜೆ ಸಂಭ್ರಮ
ಉತ್ಥಾನದ್ವಾದಶಿಯಲ್ಲಿ ತುಳಸಿಪೂಜೆ ಸಂಭ್ರಮ ಚೆನ್ನಾಗಿಯೇ ಇದ್ದಿರಬೇಕಲ್ಲವೇ..? ನಿಜ..ಆದರೆ ಇಂದಿನ ಗಡಿಬಿಡಿಯ ನಾಗಾಲೋಟದ ಜೀವನ ಕ್ರಮದಿಂದಾಗಿ ಈ ತರಹದ ಹಬ್ಬಗಳ ಸಂಭ್ರಮವನ್ನು ಅನುಭವಿಸಲು..ಆಸ್ವಾದಿಸಲು ಸಮಯವೇ ಇಲ್ಲದಂತಾಗಿದೆ ಅನಿಸುತ್ತದೆ ನನಗೆ. ಈಗಂತೂ ಹೆಚ್ಚಿನ ಮನೆಗಳಲ್ಲಿ ಹಬ್ಬಗಳ ಆಚರಣೆಯೇ ಇಲ್ಲವಾಗಿದೆ..! ಇರಲಿ…ಕಾಲಾಯ ತಸ್ಮೈನಮ:…ಇದನ್ನೆಲ್ಲಾ ಯೋಚಿಸುವಾಗ ನನ್ನ ಮನಸ್ಸು ಬಾಲ್ಯದಲ್ಲಿನ ತುಳಸಿಪೂಜೆಯ ಗಮ್ಮತ್ತನ್ನು ಮೆಲುಕು ಹಾಕತೊಡಗುತ್ತದೆ…
ಆ ದಿನಗಳಲ್ಲಿ ಅದರ ಬಗ್ಗೆ ಜಾಸ್ತಿ ಏನೂ ತಿಳಿಯದಿರಲಿಲ್ಲ ಬಿಡಿ…ಹಬ್ಬದ ವಾತಾವರಣ..ಅದರಲ್ಲಿ ನಮ್ಮ ಪಾಲೂ ಸ್ವಲ್ಪ ಜಾಸ್ತಿಯೇ ಇತ್ತೆನ್ನಬಹುದೇನೋ..ಹಿಂದೆಲ್ಲಾ ಈಗಿನಂತೆ ರೆದಿಮೇಡ್ ಕಾಂಕ್ರೀಟ್ ತುಳಸಿಕಟ್ಟೆ ಅಲ್ವಲ್ಲಾ… ಮಣ್ಣಿನ ತುಳಸಿಕಟ್ಟೆ..ಅದೇನೋ ಇಡೀ ವರ್ಷದ ಮಳೆ ಗಾಳಿಗೆ ಅಲ್ಲಲ್ಲಿ ಜರಿದಿರುತ್ತಿತ್ತು.ವಾರ ಮೊದಲೇ ಅದರ ರಿಪೇರಿ ಕೆಲಸ ನಡೆಯುತ್ತಿತ್ತು.ಪೂಜೆಯ ಹಿಂದಿನ ದಿನ ಕಟ್ಟೆ ಹಾಗೂ ಅದರ ಸುತ್ತಲೂ ಚೆನ್ನಾಗಿ ಸೆಗಣಿಯಿಂದ ಸಾರಿಸಲಾಗುತ್ತಿತ್ತು.ಇದೆಲ್ಲಾ ಕೆಲಸ ಮನೆಯ ಹಿರಿಯರ ಲೆಕ್ಕಕ್ಕೆ…!ಸರಿ..ಇನ್ನು ಅದರ ಅಲಂಕಾರಕ್ಕೆ ಬೇಕಾದ ಸಾಮಾಗ್ರಿಗಳ ಸಂಗ್ರಹಣೆ ಕೆಲಸ ಮಕ್ಕಳ ಲೆಕ್ಕಕ್ಕೆ..!
ಪೂಜೆ ದಿನ ಸಂಜೆಗೆ ಸುರುವಾಗುತ್ತದೆ ಗುಡ್ಡದಲ್ಲೆಲ್ಲ ಅಲೆದಾಟ..ಒಬ್ಬಳೇ ಇಡೀ ಗುಡ್ಡ ಸುತ್ತುತ್ತಿದ್ದೆ..ಏನೂ ಭಯವಿಲ್ಲದೆ..ಹಾಂ..ಪಾರೆ ಹೂ ಬೇಕಲ್ಲವೇ..ಅಗಲವಾದ ಕಪ್ಪು ಪಾರೆ ಮೇಲೆ ತುಂಬಾ ನಗುತ್ತಿತ್ತು ನೋಡಿ ಬಿಳಿ ಬಿಳಿಯಾದ ಪಾರೆ ಹೂ…ಈಗಂತೂ ಪಾರೆಯೇ ಇಲ್ಲ..ಇದ್ದರೂ ಅದರ ಮೇಲೆ ಹೂವೇ ಇಲ್ಲ.ಇತ್ತೀಚೆಗೆ ಓದಿದ ಲೇಖನವೊಂದರಲ್ಲಿ ತಿಳಿಸಿದಂತೆ,ಪಾರೆ ಹೂ ಕಲುಷಿತ ವಾತಾವರಣದಲ್ಲಿ ಬಿಡುವುದಿಲ್ಲ..ಹೂ ಬಿಟ್ಟಲ್ಲಿ ಅಲ್ಲಿಯ ವಾತಾವರಣ ಚೆನ್ನಾಗಿದೆ ಎಂದು ತಿಳಿಯಬಹುದು.ಈಗ ನಾವಿರುವ ಮನೆ ಹಿಂದಿನ ಗುಡ್ಡದಲ್ಲಿ ೩ವರ್ಷಗಳ ಹಿಂದೆ ಪಾರೆ ಹೂ ಸಿಗುತ್ತಿತ್ತು..ನಮ್ಮ ತುಳಸೀ ಪೂಜೆ ಸಾಂಗವಾಗುತ್ತಿತ್ತು..ಆದರೆ ಈಗಿಲ್ಲ.ಮಾಡಿದ್ದುಣ್ಣೋ ಮಹಾರಾಯ …ಅಲ್ಲವೇ..??
ಸರಿ…ಕೈ ತುಂಬಾ ಪಾರೆ ಹೂ ಸಿಕ್ಕಿದ ಮೇಲೆ ಇನ್ನು ಕೇಪುಳ ಹೂವಿನ ಸರದಿ.ಎಲ್ಲಿ ನೋಡಿದರೂ ಪೊದೆ ಇಡೀ ಕೇಪುಳ ಹೂವು ಮತ್ತು ಹಣ್ಣೂಗಳಿಂದ ತುಂಬಿ ಕೆಂಪಾಗಿ ಕಾಣುತ್ತುತ್ತು.ಗೊಂಚಲು ಗೊಂಚಲು ಹೂ ಕೊಯಿದು ಹಾಕಿಕೊಂಡಿದ್ದ ಲಂದಲ್ಲೇ ಜಾಗ್ರತೆಯಾಗಿ ಕಟ್ಟಿಕೊಂಡು ಮನೆಗೆ ಬಂದರೆ ಖುಷಿಯೋ ಖುಷಿ..ಕೇಪುಳ ಹೂವಲ್ಲಿ ಸಾಧಾರಣವಾಗಿ 4 ಎಸಳುಗಳಿರುತ್ತವೆ. ಎಲ್ಲಾದರೂ 3 ಎಸಳು ಅಥವಾ 5 ಎಸಳಿನ ಹೂ ಸಿಕ್ಕರೆ ಅದೃಷ್ಟ ಎಂದು ನಮ್ಮ ನಂಬಿಕೆ…ಹಾಗೇನಾದರೂ ಸಿಕ್ಕರೆ ಎಲ್ಲರರೊಡನೆ ಹೇಳಿಕೊಂಡು ಬೀಗುತ್ತಿದ್ದೆವು.
ಕೇಪುಳ ಹೂವನ್ನು ಮಾಲೆ ಕಟ್ಟುವುದೆಂದರೆ ಬೇರೆ ಹೂವನ್ನು ಕಟ್ಟಿದಂತೆ ಹಗ್ಗದಲ್ಲಿ ಕತ್ತುವುದಲ್ಲ.. ಹೂವಿನ ಮೃದುವಾದ ತೊಟ್ಟನ್ನು ಮಧ್ಯದಲ್ಲಿ ಸಣ್ಣಕ್ಕೆ ಸೀಳಿ ಅದರೊಳಗೆ ಇನ್ನೊಂದು ಹೂವಿನ ತೊಟ್ಟನ್ನು ತೂರಿಸಬೇಕು.ಹಾಗೆಯೇ ಮುಂದುವರೆದರೆ ಸೊಗಸಾದ ಮಾಲೆ ಸಿಧ್ಧ.ಇನ್ನು ಉಳಿದಂತೆ, ಮನೆ ಸುತ್ತುಮುತ್ತಲು ಇರುತ್ತಿದ್ದ ಗೋರಂಟೆ, ಮಂದಾರ,ಮಂಜೆಟ್ಟಿ,ರತ್ನಗಂಧಿ,ಶಂಖಪುಷ್ಪ ಇತ್ಯಾದಿ ಎಲ್ಲಾ ತರಹದ ಹೂಗಳನ್ನು ಸೇರಿಸಿ ಒಂದು ದೊಡ್ಡದಾದ ಮಾಲೆ,ಪಾರೆ ಹೂವಿನ ಮಾಲೆ ತಯಾರಿಸಿ ಇಟ್ಟರೆ ನನ್ನ ಕೆಲಸ ಮುಗಿದಂತೆ..!
ಇನ್ನು ಉಳಿದಂತೆ, ಕಬ್ಬಿನ ಕೋಲು, ಹುಳಿ ಮರದ ಮತ್ತು ಬೆಟ್ಟದ ನೆಲ್ಲಿಕಾಯಿಯ ಮರದ ಸಣ್ಣ ರೆಂಬೆಗಳು ರಾಶಿ ಬಿದ್ದಿರುತ್ತಿತ್ತು. ಮನೆ ಯ ಹಿರಿಯರು ಅವುಗಳನ್ನು ಕಟ್ಟೆ ಮೇಲೆ ಅಲಂಕಾರಿಕವಾಗಿ ಊರಿ ಹೂವಿನ ಮಾಲೆಗಳಿಂದ ಅಲಂಕರಿಸಿದರೆ ತುಳಸಿಕಟ್ಟೆ ಪೂಜೆಗೆ ಸಿಧ್ಧತೆ ಪೂರ್ಣಗೊಂಡಂತೆ..ರಾತ್ರಿಯಾಗುತ್ತಿದ್ದಂತೆ ಕಟ್ಟೆ ಎದುರು ದೀಪ ಹಚ್ಚಿ ಶಂಖ, ಜಾಗಟೆಗಳೊಂದಿಗೆ ಭರ್ಜರಿ ಪೂಜೆ ನಡೆಯುತ್ತಿತ್ತು.ಆಗೆಲ್ಲಾ ಈಗಿನಂತೆ ಹಣತೆಗಳು ನಮ್ಮಲ್ಲಿರಲಿಲ್ಲ ನೋಡಿ..ಒಂದೆರಡು ದೀಪ ಇಟ್ಟರೆ ಮುಗಿಯಿತು.ಪೂಜೆ ಮುಗಿಯುತ್ತಿದ್ದರೆ ಪ್ರಸಾದದ ಸಿಹಿ ಅವಲಕ್ಕಿಗೆ ಆಸೆಗಣ್ಣಿನಿಂದ ಕಾಯುವ ನಮಗೆ ಅದರ ಭಕ್ಷಣೆಯೊಂದಿಗೆ ತುಳಸೀಪೂಜೆ ಸಂಪನ್ನಗೊಂಡಂತೆಯೇ ಸರಿ..!!
– ಶಂಕರಿ ಶರ್ಮ, ಪುತ್ತೂರು
ಪಾರೆ ಹೂ ಸ್ವಚ್ಛ ಪ್ರದೇಶದಲ್ಲಿ ಮಾತ್ರ ಬೆಳೆವುದೆಂಬ ಅರಿವಿರಲಿಲ್ಲ. ತಿಳಿಸಿ ಕೊಟ್ಟಿದ್ದಕ್ಕೆ ವಂದನೆಗಳು. ಕೇಪುಳ ಹೂವಿನ ಹಾರ ಕಟ್ಟುವ ಸಂಭ್ರಮ ನೆನಪಿಸಿದುದಕ್ಕೆ ತುಂಬಾ ಧನ್ಯವಾದಗಳು. ಚೆಂದದ ಬರಹ.. 🙂
ಶ್ರುತಿಯವರೆ,ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..
ಬಾಲ್ಯದ ನೆನಪುಗಳು ಬಲುಸುಂದರ. ಅದನ್ನು ಸೊಗಸಾಗಿ ಹೇಳಿದ್ದೀರ.
ಕೇಪುಳ ಹೂವಿನ ಮಾಲೆಯನ್ನ ದಾರ ಇಲ್ಲದೆ ಹೀಗೆ ನಾವು ಕಟ್ಟಿಕೊಂಡಿದ್ದೆವು.ಹಳೆ ನನಪು ಮಾಡಿದ್ದಕ್ಕೆ ಧನ್ಯವಾದಗಳು. ಹಾಗೆಯೇ ಇನ್ನೊಂದು ತರದಲ್ಲಿ ಅಂದ್ರೆ ದಾರ ಇಲ್ಲದೆಯೇ ಚೆಂಡಿನಾಕೃತಿಗೆ ತರುವುದು.ಅದನ್ನ ಪ್ರಾಕ್ಟಿಕಲ್ಲಾಗಿ ಹೇಳಿಕೊಡದೆ ಮನದಟ್ಟಾಗದು.(ಅಂಗ್ಯೈಯನ್ನು ಮುಷ್ಟಿ ಹಿಡಿಯುವ ತೆರನಾಗಿ ಮಾಡಿಕೊಂಡು ಮೇಲಿನ ತೂತಿನಲ್ಲಿ ತುಂಬಿಸಿ ಆಕಾರಕ್ಕೆ ಬರಲು ಪ್ರಾಕ್ಟಿಕಲ್ ಬೇಕು)