ಕಮಲೆ ಕಮಲೋತ್ಪತ್ತಿ: ಕಮಲೆ ಬೀಜೋತ್ಪತ್ತಿ:?
ಚೀನಾದ ಈ ಗಿಜಿಗುಟ್ಟುವ ನಗರದ ಬೀದಿಯೊಂದರಲ್ಲಿ ಹಾದು ಹೋಗುವಾಗ ಸಿಕ್ಕಿದ್ದ ಹಣ್ಣಂಗಡಿಯತ್ತ ಸುಮ್ಮನೆ ಕುತೂಹಲಕ್ಕೆ ಕಣ್ಣು ಹಾಯಿಸಿದಾಗ ಕಂಡಿದ್ದು ಈ ಕೌತಕದ ವಸ್ತು. ಯಾವುದೋ ಅಪರೂಪದ ನಮ್ಮಲ್ಲಿ ಕಾಣ ಸಿಗದ ಹಣ್ಣೋ, ಕಾಯೋ ಇರುವಂತಿದೆಯಲ್ಲ ಎಂದು ಒಳಹೊಕ್ಕು ನೋಡಿದರೆ ನಿಜಕ್ಕೂ ವಿಶಿಷ್ಠವಾಗಿಯೆ ಇತ್ತು. ಸರಿ, ಅಲ್ಲೆ ಇದ್ದ ಅಂಗಡಿಯ ಹುಡುಗಿಯ ಜತೆ ನನ್ನ ‘ಬಟ್ಲರ್ ಚೈನೀಸ್’ ಭಾಷಾ ಪಾಂಡಿತ್ಯದೊಂದಿಗೆ ಸಂವಾದಕ್ಕಿಳಿದೆ. ಯಾವ ಹಣ್ಣು ? ಏನು ಎತ್ತ ? ಎಂದೆಲ್ಲ ಜಾತಕ ವಿಚಾರಿಸುತ್ತಾ. ನಾ ಕೇಳಿದ್ದವಳಿಗೆಷ್ಟು ಅರ್ಥವಾಯಿತೊ, ಅವಳು ಹೇಳಿದ್ದರಲ್ಲಿ ನನಗೂ ಅಷ್ಟೇಅರ್ಥವಾಗಿದ್ದು. ನಾನು ಹಣ್ಣಿನ ಬಗ್ಗೆ ಕೇಳುತ್ತಿದ್ದೇನೆ, ಅವಳು ಅದರ ಬಗ್ಗೆಯೆ ಹೇಳುತ್ತಿದ್ದಾಳೆನ್ನುವುದನ್ನು ಬಿಟ್ಟರೆ ಇಬ್ಬರದೂ ‘ ಶುದ್ಧ ಪಿಟಿಪಿಟಿ ಭೂಪ ಕೇಳೆಂದ ‘..!
ನನಗೋ ಕನಿಷ್ಠ ಅದೇನು ತಿನ್ನುವ ಹಣ್ಣೊ ಅಲ್ಲವೊ ಅಂತಾದರೂ ತಿಳಿಯುವ ಎನ್ನುವ ಹುನ್ನಾರ. ಕೊನೆಗೆ ಪರಸ್ಪರರ ಆಂಗಿಕ ಅಭಿನಯದಿಂದ ಅದೊಂದು ತಿನ್ನುವ ಪದಾರ್ಥವೆ ಹೌದೆಂದು, ಅದರಲ್ಲಿ ಎದ್ದು ಕಾಣುತ್ತಿರುವ ಬೀಜಗಳನ್ನು ತೆಗೆದೆಸೆದು ಸಿಪ್ಪೆ ಬಿಡಿಸಿದರೆ ಒಳಗಿನ ತಿರುಳು ಸೀತಾಫಲ, ರಾಮಾಫಲದ ಹಣ್ಣಿನ ಹಾಗೆ ತಿನ್ನಲು ಯೋಗ್ಯವಿರುತ್ತದೆಂದು ಅರ್ಥ ಮಾಡಿಕೊಂಡೆ (ನೈಜದಲ್ಲಿ ನಾನರಿತದ್ದು ಸತ್ಯಕ್ಕೆ ಸರಿಯಾಗಿ, ನೂರಕ್ಕೆ ನೂರು ವಿರುದ್ಧಾರ್ಥವೆಂದು ಗೊತ್ತಾಗಿದ್ದು ಖರೀದಿಸಿ, ಮನೆಗೆ ಒಯ್ದಾದ ಮೇಲಷ್ಟೇಎನ್ನುವುದು ಬೇರೆ ವಿಷಯ ಬಿಡಿ !). ಅದೆ ಹೊತ್ತಿಗೆ ಜತೆಯಲ್ಲಿದ್ದ ಮಗರಾಯ ನನ್ನ ಅಜ್ಞಾನಕ್ಕೆ ಕನಿಕರಿಸುತ್ತ, ‘ ಅಪ್ಪ ಅದು ಲೋಟಸ್ ಫ್ರೂಟ್ ಅರ್ಥಾತ್ ಕಮಲದ ಹಣ್ಣು, ನಮ್ಮ ಪಾಠದಲ್ಲಿತ್ತು ‘ ಎಂದು ಬೆಚ್ಚಿ ಬೀಳಿಸಿದ. ಕಮಲದ ಹೂವಷ್ಟೆ ನೋಡಿದ್ದ ನನಗೆ, ಅದೇ ಆಕಾರದಲ್ಲಿದ್ದರು ಸಂಪೂರ್ಣ ಘನಾಕೃತಿಯಲ್ಲಿರುವ ಅದನ್ನು ಕಮಲದ ಹಣ್ಣೆಂದು ನಂಬಲಾಗಲೆ ಇಲ್ಲ. ಅದುವರೆಗೂ ಕಮಲದ ಹಣ್ಣಿರುವುದೆಂದು ಕೇಳಿಯೂ ಇರದಿದ್ದ ನಾನು, ಕಮಲದ ಹೂವಿನ ಆಕಾರದಲ್ಲೆ ಇದ್ದರು, ಅದಿರಲಾರದು ಇದು ಬೇರೆ ಎಂದು ವಾದಿಸತೊಡಗಿದೆ. ಆದರೆ ಅವನೊಂದು ಲಾಜಿಕಲ್ ಪಾಯಿಂಟ್ ಹಾಕಿ ನನ್ನ ಬಾಯಿ ಮುಚ್ಚಿಸಿಬಿಟ್ಟ..
” ಅಪ್ಪಾ.. ಪ್ರತಿ ಗಿಡದಲ್ಲೂ ಹೂ ತಾನೆ ಕಾಯಾಗಿ ಹಣ್ಣಾಗೋದು? ಕಮಲದ ಹೂ ಕೂಡಾ ಹಾಗೆ ತಾನೆ ?”
ಸರಿ ನಾನು ಬಾಯಿ ಮುಚ್ಚಿಕೊಂಡು ಐದು ಹಣ್ಣು ಖರೀದಿಸಿದೆ ಒಟ್ಟು ಇನ್ನೂರು ರೂಪಾಯಿಯ ಸಮಾನಾರ್ಥಕ ದರ ತೆತ್ತು. ರುಚಿ ಹೇಗಿರಬಹುದೆಂಬ ಕುತೂಹಲವಿದ್ದರೂ, ಮನೆಗೆ ಹೋಗಿ ಇಂಟರ್ನೆಟ್ ಹುಡುಕಿ ತಿನ್ನುವ ಬಗೆ ಅರಿತ ಮೇಲಷ್ಟೇಸವಿಯಬೇಕೆಂದು ನಿರ್ಧರಿಸಿದ್ದು ಒಳಿತೇ ಆಯಿತು. ಯಾಕೆಂದರೆ ತಿನ್ನುವುದೇನಿದ್ದರೂ ಬರಿ ಹಸಿ ಕಡಲೆಕಾಯಿಯ ಸಮೀಪದ ರುಚಿಯಿರುವ ಬೀಜ ಮಾತ್ರವೆಂದು ಗೊತ್ತಾಗಿದ್ದು ಅದರಿಂದಲೇ ! ಪುಣ್ಯಕ್ಕೆ ಪ್ರತಿ ಹಣ್ಣಲ್ಲೂ ಎದ್ದು ಕಾಣುವ ಹತ್ತದಿನೈದು ಬೀಜಗಳಿತ್ತಾಗಿ ತೀರಾ ಏಮಾರಲಿಲ್ಲವೆಂದು ಸಮಾಧಾನವಾಯ್ತು. ಜತೆಗೆ ಅಪರೂಪದ ಪದಾರ್ಥ ತಾನೆ ಎಂದು ನನ್ನನ್ನು ನಾನೆ ಸಂತೈಸಿಕೊಂಡಿದ್ದು ಆಯ್ತು.
ಆ ಬೀಜ ಬೆರಳು ಗಾತ್ರದ ಹರಳಿನಂತಹ ಹಸಿರು ಬಣ್ಣದ ಕಾಳುಗಳು. ಹೊರಗಿನ ಹೊದಿಕೆ ಸುಳಿದರೆ ಒಳಗೆ ಬಿಳಿ ತಿರುಳು – ತಿನ್ನಲು ಯೋಗ್ಯವಾದ ಭಾಗ ಅದೇ. ಆದರೆ ಅದರ ಮಧ್ಯದಲ್ಲೊಂದು ಹಸಿರು ಚಿಗುರು ಮಾತ್ರ ತಿನ್ನಲಾಗದಷ್ಟು ಕಹಿ. ಅದನ್ನು ತಿನ್ನಬಹುದು ಎನ್ನುತ್ತಾರೆ – ರುಚಿಯನ್ನು ಮರೆತು ಸವಿಯುವ ಆಸೆಯಿದ್ದರೆ ! ಬಿಟ್ಟರೆ ಮಿಕ್ಕ ಭಾಗ ಹಸಿ ಕಡಲೆಯ ಮೃದುಲ ರೂಪವೆನ್ನಬಹುದು. ಇದರ ಆರೋಗ್ಯದ ಅನುಕೂಲಗಳ ಕುರಿತು ಚೀನಿಯರಲ್ಲಿ ದೊಡ್ಡ ನಂಬಿಕೆಯ ಪಟ್ಟಿಯೇ ಇದೆ, ಅದಕ್ಕೆ ಪೂರಕವಾಗಿ ಬೆಳೆದ ದೊಡ್ಡ ವಾಣಿಜ್ಯವೂ ಉಂಟು ! ಇನ್ನು ಹಳೆಯ ಯಾವುದೊ ಕಥೆಗಳನ್ನು ಓದಿದರೆ ಇದನ್ನು ತಿಂದು ಮನೆ ಮಠ ಮರೆತು, ಹೋದಲ್ಲೇ ಇದ್ದುಬಿಡುತ್ತಿದ್ದರು ಅಂತ ಹೆದರಿಸಿಬಿಡುತ್ತದೆ ವಿಕಿಪಿಡಿಯಾ (ಚೈನೀಯರು ಅದನ್ನು ಸಾರಾಸಗಟಾಗಿ ಅಲ್ಲಗಳೆದು ಅದರ ಹೊಗಳಿಕೆಗಿಳಿಯುತ್ತಾರೆನ್ನುವುದು ಮತ್ತೆ ಗಮನಿಸತಕ್ಕ ವಿಷಯ). ನಾನು ತಿಂದ ಮೇಲು ಏನು ಮರೆಯದೆ ಇಲ್ಲಿ ದಾಖಲಿಸುತ್ತಿರುವುದನ್ನು ಕಂಡರೆ ಚೀನಿಯರ ಮಾತೇ ನಿಜವೆನ್ನಬಹುದು…!
ನಾ ಹೇಳಿದ್ದರಲ್ಲಿ ಅದೆಷ್ಟು ಅರ್ಥವಾಗಿ ಆ ಕಾಯಿಹಣ್ಣಿನ ಚಿತ್ರ ಕಣ್ಮುಂದೆ ಬರುವುದೊ ಗೊತ್ತಿಲ್ಲವಾಗಿ ಅದರೊಂದಷ್ಟು ಚಿತ್ರಗಳನ್ನು ಹಾಕಿದ್ದೇನೆ – ನೋಡಿ ಆನಂದಿಸಿ. ಹತ್ತಿರದಲ್ಲಿ ಕಮಲದ ಕೊಳವಿದ್ದರೆ, ನೀರ ಅಥವಾ ಕೆಸರೊಳಗವಿತ ಕಾಯನ್ನು ಕುಯ್ದು ಬೀಜದ ರುಚಿ ನೋಡುವುದಿದ್ದರೆ ಇನ್ನೂ ಸೈ !
ಗುಡ್ ಲಕ್ !!
– ನಾಗೇಶ ಮೈಸೂರು
ಇದೊಂದು ಹೊಸ ವಿಷಯವೇ ಹೌದು.
ಧನ್ಯವಾದಗಳು ಅನಂತ ರಮೇಶ್. ನಾನು ಕೂಡಾ ಇದನ್ನು ಈ ರೂಪದಲ್ಲಿ ಇದೇ ಮೊದಲ ಬಾರಿಗೆ ಕಂಡಿದ್ದು. ಆದರೆ ಸಿಂಗಪುರದ ಸೂಪರ್ ಮಾರ್ಕೆಟ್ಟುಗಳಲ್ಲಿ ಸಂಸ್ಕರಿಸಿದ ಬೀಜದ ರೂಪದಲ್ಲಿ ಮಾರುತ್ತಾರೆಂದು ಪರಿಚಿತರೊಬ್ಬರು ತಿಳಿಸಿದರು.
ನಾನು ಶ್ರೀನಗರದ ದಾಲ್ ಲೇಕ್ ಬಳಿ ಈ ಹಣ್ಣನ್ನು ನೋಡಿದ್ದೇನೆ.
ಕಮಲ ಬೆಳೆವ ಕೊಳಗಳಲ್ಲಿ ನೋಡಿದರೆ ಇಲ್ಲಿಯೂ ಸಿಗಬಹುದೆಂದು ಕಾಣುತ್ತದೆ 🙂