ಅಯ್ಯೊಯ್ಯೋ ಕಾಣೆಯಾಯಿತು!
‘ದಾರಿ ಕಾಣದಾಗಿದೆ ರಾಘವೇಂದ್ರನೇ ‘ ಸುಪ್ರಸಿದ್ಧ ಭಜನೆಯಲ್ಲಿ ಕಾಣದಾಗಿದ್ದು ದಾರಿ. ಅಂದರೆ ಅರ್ಥಾತ್ ಗುರಿ ಕಾಣದಾಗಿದೆ ಅಥವ ಇಲ್ಲವಾಗಿದೆ ಎಂಬುದಾಗಿ ಹೇಳಲಾಗಿದೆ. ದೇವರೇ ಜೀವನದಲ್ಲಿ ಕಾಣೆಯಾದ ದಾರಿಯನ್ನು ತೋರಿಸು ಎಂಬುದಾಗಿ ಇದರ ಒಳಾರ್ಥ. ಈ ಕಾಣೆಯಾಗುವುದು ಎಂಬ ವಿಚಾರ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲದೆ ನಮ್ಮ ಜೀವನದ ಅವಿಭಾಜ್ಯ ಅಂಗವೇನೋ ಎಂಬಷ್ಟರಮಟ್ಟಿಗೆ ನಮ್ಮೆಲ್ಲರ ದಿನಚರಿಯಲ್ಲಿ ಹಾಸುಹೊಕ್ಕಾಗಿದೆ, ಅಮ್ಮಾ ಸಾಕ್ಸ್ ಕಾಣ್ತಾ ಇಲ್ಲ, ಲೇ ಕೀ ಕಾಣ್ತ ಇಲ್ಲ, ರೀ ಸರ ಕಾಣ್ತ ಇಲ್ಲ , ಅಣ್ಣಾ ಅದು ಕಾಣೆಯಾಯಿತು ಇವೆಲ್ಲಾ ಸುಪ್ರಭಾತದಂತೆ ಮನೆಯಿಡೀ ರಿಂಗಣಿಸುವುದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ವಸ್ತುಗಳನ್ನು ಅದೆಷ್ಟು ಜೋಪಾನ ಮಾಡುವ ವ್ಯಕ್ತಿಯೆ ಆಗಿರಲಿ ಕೇಳಿ ನೋಡಿದರೆ ಆತನ ಕೈಯಿಂದಲೂ ಹಲವಾರು ವಸ್ತುಗಳು ಕಾಣೆಯಾಗಿಬಿಟ್ಟಿರುತ್ತವೆ. ಕಾಣೆಯಾಗುವುದರ ಜೊತೆ ಜೊತೆಗೆ ಸಾಗುವ ಪ್ರಮುಖ ಅಂಶವೆಂದರೆ ಮರೆವು. ನಮ್ಮ ಮರೆಗುಳಿತನದಿಂದ ಕೈಯಲ್ಲಿರುವ ವಸ್ತುವನ್ನೆಲ್ಲೋ ಇಟ್ಟು ಮತ್ತೆ ಹಾಗೆ ಖಾಲಿ ಕೈಯಲ್ಲಿ ಬಂದಿರುತ್ತೇವೆ. ಕೆಲವೊಮ್ಮೆ ನಮ್ಮ ವಸ್ತುಗಳನ್ನು ಇನ್ಯಾರೋ ಎಗರಿಸಿಬಿಡುತ್ತಾರೆ. ಇದಕ್ಕೆ ನಾವು ಹೊಣೆ ಆಗಿರದಿದ್ದರು ಅದರ ಪರಿಣಾಮ ಮಾತ್ರ ಸಂಪೂರ್ಣ ನಮ್ಮ ಮೇಲೆಯೆ ಆಗಿರುತ್ತದೆ. ನಾನು ಜಾಗ್ರತೆ ಮಾಡಿ ಅದನ್ನು ಎತ್ತಿಡಬೇಕಿತ್ತು ಎಂಬುದಾಗಿ ಪರಿತಪಿಸುತ್ತೇವೆ. ಕಾಣೆಯಾದ ಅಮೂಲ್ಯ ವಸ್ತುವಿನ ಬಗ್ಗೆ ಚಿಂತೆಯೆ ನಮ್ಮನ್ನು ಕೆಲವು ದಿನ ಜರ್ಝರಿತರನ್ನಾಗಿ ಮಾಡುವುದಂತು ಸತ್ಯ.
ನನ್ನ ಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಧಾವಿಸಿದಾಗ ಅಲ್ಲಿಯ ಜನಜಂಗುಳಿಯಲ್ಲಿ ಕಿಸೆಯಿಂದ ಪರ್ಸ್ ಮಾಯವಾಗಿತ್ತು . ಪಾನ್ ಕಾರ್ಡ್, ಎ ಟಿ ಎಂ, ಎರಡ್ಮೂರು ಸಾವಿರ ದುಡ್ಡು ಸೇರಿದಂತೆ ಇನ್ನು ಅನೇಕ ಅವಶ್ಯಕತೆಯಿದ್ದ ಚಿಕ್ಕ ಪುಟ್ಟವು ಅದರಲ್ಲಿತ್ತು. ಅಂತಹ ಕಾರ್ಡ್‌ಗಳನ್ನು ಮಾಡಿಸಲು ಮತ್ತೆ ನಾವೆಷ್ಟು ಪರಿಪಾಠಲು ಪಡಬೇಕು ಎಂಬ ಸಣ್ಣ ಸಾಮಾನ್ಯ ಜ್ಞಾನವು ತೆಗೆದುಕೊಂಡವರಲ್ಲಿ ಇರುವುದಿಲ್ಲ ಎಂಬುದೇ ಬೇಸರದ ಸಂಗತಿ. ಅವರ ಮೂಗಿನ ನೇರಕ್ಕೆ ಹೇಳುವುದಾದರೆ ಅವರಾದರು ಏನು ಮಾಡಲು ಸಾಧ್ಯ? ದುಡ್ಡು ಎಗರಿಸಲು ಪರ್ಸ್ ಎಗರಿಸಲೇಬೇಕು .ಅದರಲ್ಲಿ ಎಲ್ಲ ಅಮೂಲ್ಯವಾದದ್ದು ಇರುತ್ತದೆಯೆಂದು ಅವರಿಗೇನು ಗೊತ್ತು? ದುಡ್ಡು ಇಟ್ಟುಕೊಂಡು ಉಳಿದ ಅತ್ಯಮೂಲ್ಯ ದಾಖಲೆಗಳನ್ನು ಕೊಡಲು ಅವರಿಂದ ಸಾಧ್ಯವೇ? ಹೀಗಿರುವಾಗ ಹೋದರೆ ಎಲ್ಲವು ಕಾಣೆಯಾಗಬೇಕು. ಕೆಲವು ಸಂದರ್ಭದಲ್ಲಿ ಇಂತವುಗಳನ್ನು ಬೇರೆ ತೆಗೆದಿರಿಸಿಕೊಳ್ಳದೆ ನಾವೆ ಮೂರ್ಖರಾಗಿಬಿಡುತ್ತೇವೆ. ಒಮ್ಮೆ ತಮ್ಮ ಜೀವನದಲ್ಲಿ ಪರ್ಸ್ ಕಳಕೊಂಡವರು ಮತ್ತೆ ಎಲ್ಲವನ್ನು ಅದರಲ್ಲಿ ತುರುಕಿಕೊಂಡು ಹೋಗುವ ಕೆಲಸ ಮಾಡಲಾರರು.
ನಾನೂ ಒಮ್ಮೆ ನನ್ನ ಪುಟ್ಟ ಪರ್ಸ್ ಕಾಣೆಮಾಡಿಕೊಂಡಿದ್ದೆ. ನನ್ನ ರೂಮ್‌ಮೇಟ್ ಹತ್ತಿರ ಚಿಕ್ಕದಾದ ,ಮೃದುವಾದ, ಅಂದವಾದ ಪರ್ಸ್ ಇತ್ತು. ನನಗದು ತುಂಬಾ ಇಷ್ಟವಾಗಿ ಅದೇ ತರಹದ ಪರ್ಸ್ ಬೇಕೆಂದು ಅಂಗಡಿಗಳಲ್ಲಿ ಹುಡುಕಿಯು ಸಿಗಲಿಲ್ಲ. ಕೊನೆಗೆ ತರಗತಿಗಳು ಮುಗಿದು ಖಾಯಂ ಮನೆಗೆ ಹೋಗುವ ಸಂಧರ್ಭ ಬಂದಾಗ ಪ್ರೀತಿಯಿಂದ ಅದನ್ನವಳು ನಂಗೆ ಕೊಟ್ಟಳು. ಊರಿಗೆ ಬಂದೊಡನೆ ಅದನ್ನೇ ಹಿಡಿದು ಓಡಾಡುತ್ತಿದ್ದೆ. ಒಮ್ಮೆ ರಿಕ್ಷಾದಲ್ಲಿ ಬೇರೆಲ್ಲ ವಸ್ತುಗಳು ಕೈಯಲ್ಲಿ ಇದ್ದುದರಿಂದ ಮೊದಲೇ ಕೈಯಲ್ಲಿ ದುಡ್ಡು ತೆಗೆದಿಟ್ಟುಕೊಂಡು ಇಳಿಯುವಾಗ ಪರ್ಸ್‌ನ್ನು ಅಲ್ಲೇ ಬಿಟ್ಟು ಇಳಿದದ್ದು ತಿಳಿಯಲೇ ಇಲ್ಲ. ಹಣ ನೂರೋ ಇನ್ನೂರೋ ಇತ್ತಷ್ಟೆ. ಆದರೆ ಪರ್ಸ್ ಕಳೆದುಹೋದ ದು:ಖ ಸಣ್ಣದಾಗಿ ಈಗಲೂ ಇದೆ. ಈ ವಿಷಯವನ್ನು ಪರ್ಸ್ ಕೊಟ್ಟಿರುವ ನನ್ನ ಗೆಳತಿಗೆ ಇಂದಿನವರೆಗೆ ತಿಳಿಸಲೇ ಇಲ್ಲ. ನಾವು ಯಾವ ವಸ್ತುವನ್ನು ಹೆಚ್ಚು ಇಷ್ಟಪಡುತ್ತೇವೆಯೋ ಅಥವ ಜೋಪಾನ ಮಾಡುತ್ತೇವೆಯೋ ಅದೇ ವಸ್ತು ಕಳೆದುಹೋಗುವುದು ಎಲ್ಲರಲ್ಲಿಯು ಹೆಚ್ಚು.
ಈಗಿನ ಮೊಬೈಲ್ ಯುಗದಲ್ಲಿ ಮೊಬೈಲ್ ಕಳೆದುಕೊಳ್ಳುವವರ ಸಂಖ್ಯೆ ಅಷ್ಟಿಷ್ಟಲ್ಲ.ಯಾವಗಲೂ ಕೈಯಲ್ಲಿಯೆ ಇರುವ ವಸ್ತುವನ್ನು ಬಿಟ್ಟುಬಿಡುವುದು ಭಾರಿ ಸುಲಭ ನೋಡಿ! ಹಾಗೆ ಅಚಾನಕ್ಕಾಗಿ ಸಿಕ್ಕಿದ ಮೊಬೈಲನ್ನು ಹಿಂದಿರಿಗಿಸುವವರು ತುಂಬಾ ಜನ ಇರುತ್ತಾರೆ. ಹಾಗೆಯೇ ಸಿಮ್ ಕಳಚಿಟ್ಟು ತಾವೇ ಉಪಯೋಗಿಸುವುದಕ್ಕೋ , ಮಾರುವುದಕ್ಕೋ ಇಟ್ಟುಕೊಳ್ಳುವವರು ಅಷ್ಟೇ ಜನ ಇದ್ದಾರೆ. ಕೆಲವೊಮ್ಮೆ ಜನರಿಗೆ ಇತರರ ಕೆಲವೊಂದು ವಸ್ತುಗಳು ಬಿದ್ದು ಸಿಕ್ಕಿದಾಗ ಕೊಡುವ ಅವಕಾಶ ಇರುವುದಿಲ್ಲ. ಆದರೆ ಮೊಬೈಲ್ ಹಾಗಲ್ಲವಲ್ಲ. ಸಿಕ್ಕಿದ್ದವರಿಗೆ ಮನಸಿದ್ದರೆ ಖಂಡಿತಾ ಹಿಂದಿರುಗಿಸಬಹುದು. ನಮ್ಮೂರಿನಂತಹ ಹಳ್ಳಿಗಳಲ್ಲಿ ಬಹುತೇಕರು ಮೊಬೈಲ್ ಸಿಕ್ಕಿದರೆ ಅದನ್ನು ವಾಪಾಸು ಕೊಡುತ್ತಾರೆ. ನಾನು ಎರಡು ಸಲ ಹೀಗೆ ಮೊಬೈಲ್ ಕಾಣೆಮಾಡಿಕೊಂಡಿದ್ದೆ. ಹಾಗೆಯೇ ಅದನ್ನು ಪಡಕೊಂಡದ್ದು ನನ್ನ ಅದೃಷ್ಟ.
ಮೊನ್ನೆಯಷ್ಟೆ ಜೀಪ್‌ನಲ್ಲಿ ಕಲ್ಲುಗುಂಡಿಯಿಂದ ಹೊರಟು ಮನೆಗೆ ಬರುವ ದಾರಿಯಲ್ಲಿ ಅದು ಹೇಗೋ ನನಗೆ ತಿಳಿಯದಂತೆ ಮೊಬೈಲ್ ಜೀಪ್‌ನಿಂದ ಕೆಳಗೆ ರಸ್ತೆಗೆ ಬಿದ್ದುಬಿಟ್ಟಿತು. ಮನೆಗೆ ಬಂದು ನೋಡಿದರೆ ಮೊಬೈಲ್ ಇಲ್ಲ. ಮಗಳ ಹತ್ತಿರ ಕೇಳಿ ನೋಡಿದೆ ಅವಳಿಗು ಗೊತ್ತಿಲ್ಲ. ಕಲ್ಲುಗುಂಡಿಯಲ್ಲಿ ಹೋಗಿದ್ದ ದಿನಸಿ ಅಂಗಡಿಯಲ್ಲೂ ಪೋನ್ ಮಾಡಿ ವಿಚಾರಿಸಿಯಾಯಿತು . ಅಲ್ಲೂ ಇಲ್ಲ. ಮೊಬೈಲ್ ಗೆ ಕರೆ ಮಾಡಿದರೆ ನಾಟ್ ರೀಚೆಬಲ್ . ಬರುವ ದಾರಿಯಲ್ಲಿ ಬಿದ್ದಿರಬಹುದು ಎಂಬುದಾಗಿ ಯೋಚಿಸಿದೆ. ಸಿಕ್ಕಿದವರು ಕೊಡಲಿ ಎಂಬುದಾಗಿಯು ಆಶಿಸಿದೆ. ಸುಮಾರು ಸಮಯದ ಬಳಿಕ ಈಗ ನಂಬರ್ ಎವೈಲೇಬಲ್ ಅನ್ನುವ ಸಂದೇಶ ನಮ್ಮ ಬೇರೆ ಮೊಬೈಲ್ ಗೆ ಬಂತು. ಕೂಡಲೇ ಫೋನ್ ಮಾಡಿದ್ದೆವು. ರಸ್ತೆಯಲ್ಲಿ ಬಿದ್ದಿದ್ದ ಮೊಬೈಲನ್ನು ಅದರ ಬ್ಯಾಟರಿ, ಇತರ ಭಾಗಗಳನ್ನೆಲ್ಲಾ ಜೋಡಿಸಿ ಸ್ವಿಚ್ ಆನ್ ಮಾಡಿ ನಮ್ಮೂರಿನ ವ್ಯಕ್ತಿಯೆ ನಮಗದನ್ನು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದರು. ರಸ್ತೆ ಮೇಲೆ ಸುಮಾರು ಹೊತ್ತು ಬಿದ್ದಿರುವಾಗ ಬೇರೆ ವಾಹನ ಹೋಗದೇ ಇದ್ದದು ನನ್ನ ಮೊಬೈಲ್‌ನ ಅದೃಷ್ಟವಷ್ಟೆ! ನಿಜ ಹೇಳಬೇಕೆಂದರೆ ಹಾಗೆ ಕಳೆದುಹೋದ ಮೊಬೈಲ್ ದಕ್ಕಿದಾಗ ಜೀವವೇ ಬಂದತಾಗುತ್ತದೆ. ಏಕೆಂದರೆ ಅದರಲ್ಲಿ ನಮ್ಮ ಎಲ್ಲಾ ಸಂಗ್ರಹಗಳು ಇರುತ್ತವೆ. ಮತ್ತೆ ಅದನ್ನು ಪುನಹ ಸಂಗ್ರಹಿಸಲು ಕಷ್ಟಸಾಧ್ಯ. ಮೊಬೈಲ್ ಕಳೆದು ಹೋದವರು ಬಹಳವಾಗಿ ಪರಿತಪಿಸಿದ್ದನ್ನು ನಾನು ನೋಡಿದ್ದೇನೆ. ಯಾವುದೇ ವಸ್ತು ಅಥವಾ ಮನುಷ್ಯರೇ ಆಗಿರಲಿ ಕಳೆದು ಹೋದಾಗಲೇ ಅದರ ಬೆಲೆ ಏನೆಂದು ನಮಗೆ ಅರ್ಥವಾಗುತ್ತದೆ. ಕಳೆದು ಹೋದ ವಸ್ತುವಿನ ಅಗತ್ಯ ನಮಗಿರದೆ ಹೋದರು ನಮ್ಮದು ಎಂದಾದ ಮೇಲೆ ಕಾಣೆಯಾದಾಗ ಅತೀವ ಕಳವಳಗೊಳ್ಳುತ್ತೇವೆ. ವಸ್ತು ಸಿಕ್ಕಿದರೆ ಆಗುವ ಖುಷಿ ಅಷ್ಟಿಷ್ಟಲ್ಲ.
ನನ್ನ ಅವ್ವನಿಗೆ ಪ್ರಾಯ ಆದ ಮರೆವಿನಲ್ಲಿ ಆಗಾಗ್ಗೆ ಅವರ ಕಪಾಟುವಿನ ಬೀಗದ ಕೈ ಇಟ್ಟಿರುವ ಜಾಗ ಮರೆತುಹೋಗುವುದು ಅಭ್ಯಾಸವಾಗಿಬಿಟ್ಟಿತು. ಬೇರೆ ಬೇರೆ ಸ್ಥಳದಲ್ಲಿ ಎತ್ತಿಟ್ಟು ಕೊನೆಗದು ನೆನಪಿಗೆ ಬಾರದೆ ಇರುವುದು ಸಾಮಾನ್ಯವಾಗಿತ್ತು. ನನ್ನ ಬೀಗದ ಕೀ ಕಾಣೆಯಾಯಿತು ಎಂಬುದಾಗಿ ಮನೆಯಿಡೀ ಜಾಲಾಡುತ್ತಿರುತ್ತಾರೆ. ನಮ್ಮನ್ನೂ ಹುಡುಕಲು ಹುರಿದುಂಬಿಸುತ್ತಿದ್ದರು. ನನ್ನ ಅವ್ವನಿಗೆ, ಊರಿನ ಅಜ್ಜಿಯೊಬ್ಬರಿಗೆ ಎಲೆ ಅಡಿಕೆ ತಿನ್ನಲು ಕೊಟ್ಟರೆ ಕಳೆದು ಹೋದ ವಸ್ತು ಸಿಗುತ್ತದೆ ಎಂಬ ನಂಬಿಕೆ ಬಲವಾಗಿತ್ತು. ಹಾಗೆ ಮನಸ್ಸಿನಲ್ಲಿ ಅಂದುಕೊಂಡರೆ ಕಾಣೆಯಾದ ವಸ್ತು ಕೂಡ ಅವರಿಗೆ ಸಿಗುತ್ತಿತ್ತು.! ಅದನ್ನು ಮನಸ್ಸಿನಲ್ಲಿ ಯೋಚಿಸಿದ ಕೂಡಲೇ ಪಾರ್ಥೇನಿಯಂ ಎಲೆಯೊಂದಕ್ಕೆ ಕಲ್ಲನಿಟ್ಟು ಕಾಣೆಯಾದ ವಸ್ತು ಸಿಗಲಿ ಎಂಬುದಾಗಿ ಪ್ರಾರ್ಥಿಸಬೇಕು. ಕಳೆದುಹೋದ ವಸ್ತು ಸಿಕ್ಕಿದ ನಂತರ ನಿಜವಾದ ವೀಳ್ಯದೆಲೆ ಅಡಿಕೆಯನ್ನು ಸಂಬಂಧಪಟ್ಟ ಅಜ್ಜಿಗೆ ನೀಡಿದರೆ ನಮ್ಮ ಹರಕೆ ಈಡೇರಿದಂತೆ. ಪ್ರತಿ ಸಲ ಅವ್ವ ಕೀ ಅಥವ ಏನೇ ಕಾಣೆಯಾಗಲಿ ಹೀಗೆ ಎಲೆಅಡಿಕೆ ಸಲ್ಲಿಸುತ್ತಿದ್ದರು. ಅವ್ವನಿಂದ ಅದು ಬಳುವಳಿಯಾಗಿ ನನಗೂ ಬಂದುಬಿಟ್ಟಿದೆ. ನನ್ನ ವಸ್ತುಗಳು ಕಾಣೆಯಾದಾಗ ಹೀಗೆ ಮಾಡುತ್ತೇನೆ. ಬಹುತೇಕ ಸಂಧರ್ಭದಲ್ಲಿ ನನ್ನ ವಸ್ತುಗಳು ಯಾವುದೋ ಮಾಯಕದಲ್ಲಿ ನನಗೆ ಸಿಕ್ಕಿದೆ!
ನಾನು ಹಾಸ್ಟೆಲ್‌ನಲ್ಲಿದ್ದಾಗ ಅಲ್ಲೊಂದು ಪ್ರಸಂಗ ಸದೆದಿತ್ತು. ಪ್ರತಿದಿನ ಒಗೆದು ಹಾಕಿದ ತಂತಿಯಿಂದ ಬಟ್ಟೆಗಳು ಕಾಣೆಯಾಗತೊಡಗಿದ್ದವು. ಚೂಡಿದಾರದ ಶಾಲು ಇದ್ದರೆ ಉಳಿದ ಡ್ರೆಸ್ ಮಂಗಮಾಯ. ಟವೆಲ್ , ಬೆಡ್ ಶೀಟ್ ಎಲ್ಲಾ ಕಾಣೆ. ಎಲ್ಲ ಕೋಣೆಗಳಿಂದ ವಸ್ತುಗಳು ಮಾಯವಾಗುವ ಸುದ್ದಿ ಬರತೊಡಗಿದವು. ಎಲ್ಲರೂ ಚಿಂತಾಕ್ರಾಂತರಾದರು. ಸುಮಾರು ಒಂದು ತಿಂಗಳವರೆಗೆ ವಾರ್ಡನ್‌ಗೆ ದೂರು ಸಲ್ಲಿಸುವುದೇ ಹೊರತು ಯಾರು ತೆಗೆಯುತ್ತಿದ್ದಾರೆ ಎಂಬುದಾಗಿ ಕಂಡುಹಿಡಿಯಲು ಯಾರಿಂದಲೂ ಆಗಲಿಲ್ಲ. .ಅಚಾನಕ್ಕಾಗಿ ಒಂದು ಹುಡುಗಿ ಬೇರೆಯವರ ಬಟ್ಟೆ ಎತ್ತಿಕೊಳ್ಳುವಾಗಲೇ ಸಿಕ್ಕಿಬಿದ್ದಳು. ಆಕೆಯ ಕೋಣೆಗೆ ಹೋಗಿ ಜಾಲಾಡಿದಾಗ ಸಿಕ್ಕಿದ ವಸ್ತುಗಳನ್ನು ಕಂಡು ಎಲ್ಲರು ಬೆರಗಾದರು. ಒಂದು ತಿಂಗಳಿನಿಂದ ಕಾಣೆಯಾಗುತ್ತಿದ್ದ ಚಪ್ಪಲಿನಿಂದ ಹಿಡಿದು ಒಳುಡುಪುಗಳವರೆಗೆ ಅದೆಷ್ಟೋ ಸಾಮಾನುಗಳು ಅಲ್ಲಿದ್ದವು. ಕೋಣೆಯ ಇತರರಿಗೆ ಅದು ತಿಳಿಯದಿರುವುದೇ ಆಶ್ಚರ್ಯ . ಎಲ್ಲರು ಬಂದು ತಮ್ಮ ತಮ್ಮ ವಸ್ತುಗಳನ್ನು ಸಂಭ್ರಮದಿಂದಲೇ ಎತ್ತಿಕೊಡರು. ಅವಳನ್ನು ಅಲ್ಲೇ ಉಳಿಸಿಕೊಂಡಿದ್ದಾರೋ ಕಳುಹಿಸಿದ್ದಾರೋ ಸರಿಯಾಗಿ ನನಗೆ ನೆನಪಿಲ್ಲ. ಮರುದಿನವೇ ನಾವೆಲ್ಲ ಹಾಸ್ಟೆಲ್ ತೊರೆಯುವವರಿದ್ದೆವು. ಈ ತರಹ ಕಾಣೆಯಾದರೆ ನಮ್ಮದೇನೂ ತಪ್ಪಿರುವುದಿಲ್ಲ ಆದರೆ ವಸ್ತು ಹೋಯಿತೆಂದು ಪರಿತಪಿಸುವ ಕೆಲಸ ಮಾತ್ರ ನಮಗೆ ಬಿಟ್ಟದ್ದು. ಕಾಣೆಯಾಗುವುದೆಂದರೆ ನಮ್ಮ ಮರೆವಿನಿಂದಲೇ ವಸ್ತುಗಳನ್ನೆಲ್ಲೋ ಒಂದು ಕಡೆ ಬಿಟ್ಟು ಬರುವುದೆಂದೆ ಅರ್ಥ. ಆದರೆ ಆ ವಸ್ತು ಸಿಕ್ಕಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ.
ಮನೆ ಬದಲಾಯಿಸುವಾಗ ವಸ್ತುಗಳನ್ನು ಕಳಕೊಂಡೆ ಎಂದು ಹೇಳುವುದು ಸಾಮಾನ್ಯ. ಇದಕ್ಕೆಲ್ಲಾ ನಮ್ಮ ಅಜಾಗರೂಕತೆಯೆ ಕಾರಣ . ನಮ್ಮ ಅಮೂಲ್ಯ ವಸ್ತು ಕಾಣೆಯಾದಾಗ ಅದನ್ನು ಮನೆಯವರಿಗೆ ತಿಳಿಸುವುದು ಇನ್ನೂ ಕಷ್ಟದ ವಿಚಾರ . ನನ್ನ ಗೆಳತಿಯೊಬ್ಬಳು ಆಕೆಯ ಹಾಸ್ಟೆಲ್‌ನಲ್ಲಿ ಚಿನ್ನದ ಎರಡು ಬಳೆಗಳಲ್ಲಿ ಒಂದನ್ನು ಕಾಣೆಮಾಡಿಕೊಂಡಳು. ಎಷ್ಟು ಹುಡುಕಾಡಿದರು ಸಿಗಲಿಲ್ಲ . ಮನೆಯಲ್ಲಿ ತಿಳಿಸಿದರೆ ಸಿಗುವ ಸಹಸ್ರ ನಾಮಾರ್ಚನೆಯನ್ನು ಯೋಚಿಸಿಯೆ ಆಕೆಗೆ ಭಯವಾಗತೊಡಗಿತ್ತು. ಅದೃಷ್ಟವಶಾತ್ ಆಕೆಗೆ ಎಂ.ಎ ಆದ ಕೂಡಲೇ ಸರಕಾರಿ ಉಪನ್ಯಾಸಕಿ ಹುದ್ದೆಯು ಸಿಕ್ಕಿತು. ತನ್ನ ಸಂಬಳದಲ್ಲಿ ಕೊಂಚ ಕೊಂಚವೇ ಉಳಿಸಿ ಅದೇ ತರಹದ ಬಳೆ ಮಾಡಿಸಿಕೊಂಡು ವಿಷಯವನ್ನು ಮನೆಯಲ್ಲಿ ಯಾರಿಗು ಹೇಳಲಿಲ್ಲ. ನೀವು ಯಾವುದೇ ವ್ಯಕ್ತಿಯನ್ನು ಕೇಳಿ ನೋಡಿ ಒಂದು ಅತ್ಯಮೂಲ್ಯ ವಸ್ತುವನ್ನು ಕಾಣೆಮಾಡಿಕೊಂಡ ವಿಷಯ ಅವರಲ್ಲಿ ಇಲ್ಲದೆ ಇರುವುದಿಲ್ಲ. ಕಾಣೆಯಾಗುವುದೆಂಬ ವಿಚಾರ ಅಷ್ಟರಮಟ್ಟಿಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬಿಟ್ಟಿದೆ. ಕೆಲವರು ಅತೀ ಹೆಚ್ಚು ತಲೆಕೆಡಿಸಿಕೊಂಡರೆ ,ಇನ್ನು ಕೆಲವರು ಅದರ ಬಗ್ಗೆ ಉದಾಸೀನ ತಾಳುತ್ತಾರೆ.
ಕೇವಲ ವಸ್ತುಗಳು ಮಾತ್ರ ಕಾಣೆಯಾಗುವುದೆಂದು ಭಾವಿಸಿದರೆ ಅದು ತಪ್ಪಾದೀತು . ನಾವು ಸಾಕುವಂತಹ ದನ, ನಾಯಿ ,ಬೆಕ್ಕು ಕೋಳಿಗಳಂತಹ ಪ್ರಾಣಿಗಳು ಒಮ್ಮೊಮ್ಮೆ ಕಾಣೆಯಾಗಿಬಿಡುತ್ತವೆ. ಕಾಡಿನ ಅಂಚಿನಲ್ಲಿರುವ ನನ್ನ ಚಿಕ್ಕಪ್ಪನ ಮನೆಯಿಂದ ನಾಯಿ ಮತ್ತು ಹಸುಗಳು ಆಗಾಗ್ಗೆ ಕಾಣೆಯಾಗುವುದು ಸಾಮಾನ್ಯವಾಗಿಬಿಟ್ಟಿದೆ. ಕಾಡಿನಲ್ಲಿ ಎಷ್ಟು ಹುಡುಕಿದರು ಸಿಗುತ್ತಿರಲಿಲ್ಲ. ಒಂದು ದಿನ ಕಂಡು ಬಂದ ದೃಶ್ಯ ನೋಡಿ ಹೌಹಾರಿದರು. ಚಿರತೆಯೊಂದು ರಾತ್ರೋರಾತ್ರಿ ಬಂದು ನಾಯಿಯನ್ನು ಎಳೆದೊಯ್ಯುತಿತ್ತು. ಅವರಿಗೆ ಸಾಕುಪ್ರಾಣಿಗಳು ಕಾಣೆಯಾಗುತ್ತಿದ್ದ ರಹಸ್ಯ ತಿಳಿಯಿತು. ಆ ಸಣ್ಣ ಚಿರತೆಯನ್ನು ಹಿಡಿಯಲು ಸಾವಿರಾರು ರೂಪಾಯಿ ಖರ್ಚುಮಾಡಿ ಡೊಡ್ಡ ಪಂಜರವನ್ನು ಸಿದ್ಧಪಡಿಸಿದರು. ಅದರ ಒಂದು ಕಡೆಯಲ್ಲಿ ಕೋಳಿಯನ್ನೋ , ನಾಯಿಯನ್ನೋ ಇಡುವಂತಹ ಸ್ಥಳದ ವ್ಯವಸ್ಥೆ ಮಾಡಿದರು .ಒಳಗೆ ಹೋದ ಕೂಡಲೇ ಅದರ ಬಾಗಿಲು ಮುಚ್ಚಿ ಹೋಗುವಂತಹ ರೀತಿಯ ಈ ಪಂಜರ ಅದ್ಭುತವಾಗಿ ಸಿದ್ಧವಾಯಿತು. ಆದರೆ ಪಂಜರಕ್ಕೆ ಚಿರತೆ ಮಾತ್ರ ಸಿಗಲಿಲ್ಲ. ಈಗಲೂ ಕಾಡಿನ ಕಡೆಗೆ ಹೋದ ಸಾಕುಪ್ರಾಣಿಗಳು ಆಗೊಮ್ಮೆ ಈಗೊಮ್ಮೆ ಕಾಣೆಯಾಗುತ್ತವೆ.
ತಾವು ಸಾಕಿದ ಪ್ರೀತಿಯ ನಾಯಿ ಮರಿಗಳು ಕಾಣೆಯಾದಾಗ ಪತ್ರಿಕೆಯಲ್ಲಿ ಜಾಹಿರಾತು ಕೊಡುವವರು ಹಲವರಿದ್ದಾರೆ. ಹಣಖರ್ಚಾಗುವ ಬಗ್ಗೆ ಚಿಂತಿಸದೆ ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸುತ್ತಾರೆ. ಒಟ್ಟಿನಲ್ಲಿ ಕಾಣೆಯಾದುದು ಸಿಕ್ಕಿದರೆ ಸಾಕೆಂಬ ಮನೋಭಾವ ಒಂದೇ ಆಗಿರುತ್ತದೆ. ಕಾಣೆಯಾದ ವಸ್ತುವನ್ನು ಹಿಂದಿರಿಗಿಸುವವರಿಗೆ ಬಹುತೇಕ ಎಲ್ಲರು ಬಹುಮಾನ ಕೊಡುತ್ತಾರೆ.ಪತ್ರಿಕೆಗಳಲ್ಲಿ ಕಾಣೆಯಾದ ವಸ್ತುಗಳ ಬಗ್ಗೆ ಜಾಹೀರಾತು ಇರುವುದು ಪ್ರತಿದಿನವು ಸಾಮಾನ್ಯವಾಗಿಬಿಟ್ಟಿದೆ. ದಾಖಲೆ ಪತ್ರಗಳು, ಅಂಕಪಟ್ಟಿ , ಪಾಸ್‌ಪೋರ್ಟ್ ಇತ್ಯಾದಿಗಳು ಕಾಣೆಯಾದಾಗ ಖುದ್ದಾಗಿ ಎಲ್ಲರು ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಾರೆ.. ಯಾಕೆಂದರೆ ಅದನ್ನು ವಾಪಾಸು ಮಾಡಿಸಲು ಪಡಬೇಕಾದ ಕಷ್ಟದ ಅರಿವು ಅವರಿಗೆ ತಿಳಿದಿರುತ್ತದೆ. ಕೆಲವೊಂದನ್ನು ವಾಪಾಸು ಮಾಡಿಸಲೂ ಆಗುವುದು ಇಲ್ಲ. ಅಂತವುಗಳನ್ನು ಸಿಕ್ಕಿದವರು ಆಸ್ಥೆ ವಹಿಸಿ ಹಿಂತಿರುಗಿಸಬಹುದು. ಆದರೆ ಆಸ್ಥೆ ವಹಿಸಲು ಸೋಮಾರಿತನ ಮಾಡಿದರೆ ಕಳಕೊಂಡವರಿಗೆ ತೀರಾ ಅನ್ಯಾಯವಾಗುತ್ತದೆ.
ಸಿಕ್ಕಿದ್ದನ್ನು ಮರುಕಳಿಸುವ ಪ್ರಾಮಾಣಿಕ ವ್ಯಕ್ತಿಗಳಿಗೆ ,ಅವರ ವಸ್ತುವೆ ಕಳೆದು ಹೋದರೆ ಆಗುವ ಬೇಸರದ ಅರಿವು ಇರುತ್ತದೆ. ವಸ್ತು ಎಷ್ಟೇ ಚಿಕ್ಕದಾಗಿರಲಿ, ಅಪ್ರಸ್ತುತವೇ ಆಗಿರಲಿ ನಮ್ಮದು ಎಂದ ಮೇಲೆ ಅದರ ಮೇಲೆ ಕೊಂಚ ಜಾಸ್ತಿ ಪ್ರೀತಿಯೆ ಇರುತ್ತದೆ. ಕೆಲವೊಮ್ಮೆ ವಸ್ತುಗಳು ಎಷ್ಟೊಂದು ಕಾಣೆಯಾಗುವ ಪರಮಾವಧಿಯನ್ನು ತಲುಪುತ್ತದೆಯೆಂದರೆ ದೇವಸ್ಥಾನದಲ್ಲಿಟ್ಟ ಚಪ್ಪಲು ಹೊರಗಡೆ ಬಂದಾಗ ಕಾಣೆಯಾಗಿಬಿಟ್ಟಿರುತ್ತದೆ, ಮಳೆಗಾಲದಲ್ಲಿ ಅಚಾನಕ್ಕಾಗಿ ಕೊಡೆ ಇಲ್ಲದಂತಾಗುತ್ತದೆ, ಸೌದೆಗೆ ತೆಗೆದುಕೊಂಡು ಹೋದ ಕತ್ತಿ ಕಾಡಿನಲ್ಲಿ ಕಳೆದುಹೋಗುತ್ತದೆ, ಕಾರಿನ ಕೀ ಕಾಣೆಯಾಗುತ್ತದೆ, ಪ್ರವಾಸ ಹೋಗಲು ತಿಂಗಳು ಮುಂಚೆ ಮಾಡಿಸಿಟ್ಟ ಟಿಕೆಟ್ ಕಾಣೆಯಾಗಿ ಪ್ರವಾಸವೇ ರದ್ದಾಗುತ್ತದೆ, ಎಲ್ಲೋ ಹೋಗಿ ಬಂದಾಗ ಕಾಲ್ಗೆಜ್ಜೆ ಬಿದ್ದು ಹೋಗಿರುತ್ತದೆ ಹೀಗೆ ಹೇಳಿದರೆ ಮುಗಿಯದ ಪ್ರಸಂಗಳೆ ಸಿಗುತ್ತವೆ. ನನ್ನ ಮಗಳಿಗೆ ಪೆನ್ಸಿಲ್ ,ರಬ್ಬರ್ ಮತ್ತು ಕರ್ಚೀಫ್ ತರಗತಿಗಳಿಗೆ ಕೊಟ್ಟು ಕಳುಹಿಸುವುದೆಂದರೆ ಕಳವಳದ ಸಂಗತಿಯಾಗಿದೆ. ಹೆಚ್ಚೆಂದರೆ ಹದಿನೈದು ದಿನಗಳಿಗೊಮ್ಮೆ ಕಾಣೆ ಮಾಡಿಕೊಂಡಿರುತ್ತಾಳೆ. ಹೆಚ್ಚಿನವರು ಜಂಗಮವಾಣಿಯನ್ನು ಕುತ್ತಿಗೆಯಲ್ಲಿ ನೇತುಹಾಕಿ ಕಿಸೆಯಲ್ಲಿ ಇಳಿಬಿಟ್ಟಿರುತ್ತಾರೆ. ಎಲ್ಲಾದರು ಕಾಣೆಯಾಗಿಬಿಟ್ಟರೆ ಎಂಬ ಭಯ ಇರುವುದರಿಂದಲೇ ಹೀಗೆ ಮಾಡುತ್ತಾರೆ. ಹೊರಗಿಟ್ಟು ಹೋದ ವಾಹನಗಳೇ ಕಾಣೆಯಾದ ಪ್ರಸಂಗಗಳು ನಡೆದಿವೆ. ಇದು ಮಹಾ ಕಳ್ಳತನದ ಆರೋಪಕ್ಕೆ ಸೇರಿದರು ನಮಗೆ ನಮ್ಮ ವಸ್ತು ಕಾಣೆಯಾದಂತೆ ಅಲ್ಲವೇ? ಈ ಕಾಣೆಯಾಗುವುದರೊಂದಿಗೆ ಇನ್ನೊಂದು ಚಮತ್ಕಾರ ನಡೆಯುತ್ತದೆ. ಸ್ನಾನ ಮಾಡುವಾಗ ಕಳೆದು ಹೋದ ಚಿನ್ನದ ಓಲೆ ವರ್ಷ ಕಳೆದ ಮೇಲೆ ಕೊಳಚೆ ಹೋಗುವ ಸ್ಥಳದಲ್ಲೆಲ್ಲೋ ಸಿಗುತ್ತದೆ, ಎಲ್ಲೋ ಇಟ್ಟು ಕಾಣೆಯಾದ ದುಡ್ಡು ಸುಮಾರು ಸಮಯ ಕಳೆದು ಅಲ್ಲೇ ಬಟ್ಟೆ ಮಧ್ಯೆ ಸಿಗುತ್ತದೆ, ತೋಟದಲ್ಲಿ ಬಿದ್ದು ಹೋದ ಸರ ತಿಂಗಳಾನುಗಟ್ಟಲೇ ಕಳೆದ ಮೇಲೆ ನಮಗೇ ಸಿಗುತ್ತದೆ. ನನ್ನ ಗೆಳತಿಯೊಬ್ಬಳ ಮನೆಯಲ್ಲಿ ಶೌಚಾಲಯದಲ್ಲಿ ಬಿದ್ದು ಕಾಣೆಯಾದ ಉಂಗುರವನ್ನು ಶೌಚಾಲಯದ ಗುಂಡಿ ತೋಡಿ ಹುಡುಕಿಸಿದ ಪ್ರಸಂಗ ನಡೆದಿದೆ. ಉಂಗುರ ಸಿಕ್ಕಿದುದರ ಬಗ್ಗೆ ನನಗೆ ನೆನಪಿಲ್ಲ. ನಾನು ಚಿಕ್ಕವಳಿದ್ದಾಗ ಹೋಗುತ್ತಿದ್ದ ಅಜ್ಜಿ ಮನೆಯ ದಾರಿಗಳೇ ಈಗ ಕಾಣೆಯಾಗಿಬಿಟ್ಟಿವೆ. ಅಂದರೆ ಏನೇನೋ ಕಟ್ಟಡಗಳು ಅದರ ಮೇಲೆ ಎದ್ದು ಆ ಜಾಗವೇ ಅಲ್ಲದಂತಾಗಿಬಿಟ್ಟಿದೆ. ಅಂತಹ ದಾರಿಗಳು ಇನ್ನು ಹುಡುಕಿದರು ಸಿಗುವುದಿಲ್ಲವೆನ್ನಿ!
ನಮ್ಮ ಆತ್ಮೀಯರೊಬ್ಬರು ಇನ್ನೇನು ನಾಲ್ಕೇ ದಿನದಲ್ಲಿ ಅಮೆರಿಕಾಕ್ಕೆ ಹೊರಡುವವರಿದ್ದರು. ನಾಲ್ಕು ದಿನದ ಮೊದಲು ಬೆಂಗಳೂರಿಗೂ ಧಾವಿಸಿದರು. ಬೆಂಗಳೂರಿನಲ್ಲಿ ಅವರ ವೀಸಾ ಮತ್ತು ಪಾಸ್ ಪೋರ್ಟ್ ಇದ್ದ ಪರ್ಸ್‌ನ್ನು ಕಾರೊಳಗೆ ಇಟ್ಟು ಅಂಗಡಿಯೊಂದಕ್ಕೆ ಹೋಗಿದ್ದರು. ಬಂದು ನೋಡಿದಾಗ ಕಾರಿನ ಕನ್ನಡಿ ಒಡೆದು ಅಲ್ಲಿದ್ದ ಪರ್ಸ್‌ನ್ನು ಯಾರೋ ಎಗರಿಸಿದ್ದರು. ದುಡ್ಡು ಸಿಗಬಹುದೆಂದು ಎಗರಿಸಿದವರಿಗೆ ಅಲ್ಲಿ ಸಿಕ್ಕಿದ್ದು ಕೇವಲ ಪಾಸ್ ಪೋರ್ಟ್ ಮತ್ತು ವೀಸಾ ಮಾತ್ರ. ಆ ಪುಣ್ಯಾತ್ಮರು ಅದರಲ್ಲಿ ಏನಿದೆ ಅಂತ ನೋಡಿದ್ದಾರೋ ಇಲ್ಲವೋ ತಿಳಿದಿಲ್ಲ ಅದನ್ನು ಬೆಂಗಳೂರಿನ ಅಶೋಕ ಹೋಟೆಲ್ ಎದುರು ಕಳೆದುಕೊಂಡವರ ಬಗ್ಗೆ ಕ್ಷಣವು ಚಿಂತಿಸದೆ ಎಸೆದಿದ್ದರು. ಬೆಂಗಳೂರಿನ ಪ್ರತಿಷ್ಠಿತ ಟಿ ವಿ ಚಾನೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೋರ್ವರಿಗೆ ಅದು ಸಿಕ್ಕಿತು. ನಮ್ಮ ದುರಾದೃಷ್ಟಕ್ಕೆ ವೀಸಾ ಪಾಸ್ ಪೋರ್ಟ್‌ನಲ್ಲಿ ಮೊಬೈಲ್ ಸಂಖ್ಯೆ ಇರಲಿಲ್ಲ ಮತ್ತು ಇರುವುದು ಇಲ್ಲ. ಅಲ್ಲಿರುವುದು ಕೇವಲ ವಿಳಾಸ ಮಾತ್ರ. ಆದರೆ ಅದು ಸಿಕ್ಕಿದ ಪ್ರಾಮಾಣಿಕ ವ್ಯಕ್ತಿಗೆ ವೀಸಾದಲ್ಲಿದ್ದ ದಿನಾಂಕ ನೋಡಿ ವಾರಸುದಾರರಿಗೆ ತಲುಪಿಸಬೇಕೆಂಬ ತುಡಿತ ಹೆಚ್ಚಾಯಿತು. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಳಾಸದಲ್ಲಿದ್ದ ಚೆಂಬು ಗ್ರಾಮದ ಹೆಸರೇ ಕೇಳಿರದ ಅವರು ನಂತರ ಸನಿಹದ ಊರಾದ ಸುಳ್ಯದವರೊಬ್ಬರನ್ನು ಸಂಪರ್ಕಿಸಿ, ಆ ಸಂಪರ್ಕದ ಕೊಂಡಿ ಬೆಸೆದು ಕೊನೆಯ ದಿನದ ಕೊನೆಯ ಗಂಟೆಗೆ ವಾರಸುದಾರರಿಗೆ ತಲುಪುವಂತಾಯಿತು.
ವೀಸಾ ಕಳಕೊಂಡವರು ಮಗಳ ಮನೆಗೆ ಅಮೆರಿಕಾಕ್ಕೆ ಹೊರಟಿದ್ದರು. ಅದನ್ನು ರದ್ದುಪಡಿಸುವಂತೆ ಸಂಬಂಧಪಟ್ಟ ಕಛೇರಿಗೆ ತೆರಳುತ್ತಿದ್ದಾಗ ಅವರ ಊರಿಂದಲೇ ಕರೆಯೊಂದು ಬಂತು. ನಿಮ್ಮ ಕಳೆದುಹೋದ ವೀಸಾ ಮತ್ತು ಪಾಸ್ ಪೋರ್ಟ್ ಸಿಕ್ಕಿರುವ ವ್ಯಕ್ಕಿ ಪೋನ್ ಮಾಡಿದ್ದಾರೆ. ಅವರರ ವಿಳಾಸಕ್ಕೆ ಹೋಗಿ ಅದನ್ನು ಪಡೆದುಕೊಳ್ಳಬೇಕೆಂದು ವಿಳಾಸ ನೀಡಿದ್ದಾರೆ ಎಂಬ ವಿಷಯ ತಿಳಿಸಿದರು. ಅವರಿಗೆ ಹೋದ ಜೀವವೇ ಬಂದತಾಯಿತು. ಕೂಡಲೇ ಆ ಟಿವಿ ಸಿಬ್ಬಂದಿಯ ಮನೆ ಹುಡುಕಿ ಹೋದರು. ಚಚ್ಚೌಕದ ಚಿಕ್ಕ ಮನೆಯಲ್ಲಿ ವಾಸವಾಗಿದ್ದ ಗಂಡ , ಹೆಂಡತಿ , ಮಗುವನ್ನು ನೋಡಿ ಅಭಿಮಾನದಿಂದ ಕೃತಜ್ಙತೆ ಹೇಳಿದರು. ಅವರ ಉಪಕಾರಕ್ಕೆ ಏನು ಬೇಕಾದರು ಸಹಾಯ ಮಾಡಲು ಸಿದ್ಧರಿದ್ದರು ಇವರು. ದೊಡ್ಡ ಮೊತ್ತದ ಹಣವನ್ನು ಅವರಿಗೆ ನೀಡಲು ಹೋದರು ಅದನ್ನು ಪಡೆದುಕೊಳ್ಳಲು ಅವರು ನಿರಾಕರಿಸಿದರು. ಆದರು ಇವರಿಗೆ ಹಾಗೆಯೆ ಹಿಂದಿರುಗಲು ಮನಸ್ಸು ಬಾರದೆ ಮಗುವಿನ ಕೈಯಲ್ಲಿ ಹಣ ನೀಡಿ ತುಂಬು ಕೃತಜ್ಙತೆ ಹೇಳಿ ವಾಪಾಸಾಗಿ ಕೂಡಲೇ ಏರ್ ಪೋರ್ಟ್‌ಗೆ ತೆರಳಿದರು. ಕಳೆದುಹೋದ ವಸ್ತು ಸಿಕ್ಕಿದಾಗಿನ ಆ ನಿಟ್ಟುಸಿರು ನೋಡಿದಾಗ ಅದನ್ನು ಹಿಂದಿರುಗಿಸುವನ ಜೀವನವು ಸಾರ್ಥಕವಾದಂತೆ ಎಂಬುದಾಗಿ ಈ ಕಥೆ ಕೇಳಿದಾಗ ನನಗನಿಸಿತು. ಇಂತಹ ಕುತೂಹಲಕಾರಿ , ರೋಮಾಂಚನಕಾರಿ ಸಂಗತಿಗಳು ನಿಮ್ಮ ಜೀವನದಲ್ಲು ನಡೆದಿರಬಹುದು ಅಲ್ಲವೇ?
ಇನ್ನೊಂದು ಲಕ್ಷಾಂತರ ಮೌಲ್ಯದ ಸೊತ್ತು ಕಳೆದುಹೋದ ಪ್ರಸಂಗವನ್ನು ಹೇಳುತ್ತೇನೆ. ಇದು ಸುಮಾರು 1980 ರ ಇಸವಿಯಲ್ಲಿ ನಡೆದ ಘಟನೆ. ನನ್ನ ಅತ್ತೆ ಹೇಳಿದ ಈ ಘಟನೆಯನ್ನು ಕೇಳಿ ಮೂಕವಿಸ್ಮಿತಳಾಗಿದ್ದೆ. ಮಡಿಕೇರಿ ಮತ್ತು ದಕ್ಷಿಣಕನ್ನಡದ ಗಡಿಭಾಗದಲ್ಲಿರುವ ನಮ್ಮ ಹಳ್ಳಿ ಚೆಂಬು ಆಗಿನ ಕಾಲದಲ್ಲಿ ತೀರಾ ಕುಗ್ರಾಮವಾಗಿತ್ತು. ನನ್ನ ಮಾವನವರು ಸೋಮವಾರಪೇಟೆಯಲ್ಲಿ ಉದ್ಯೋಗಿಯಾಗಿದ್ದ ಕಾರಣ ಆಗಾಗ್ಗೆ ಊರಿಗೆ ಬಂದು ಹೋಗುವುದು ಸಾಮಾನ್ಯವಾಗಿತ್ತು. ಹಾಗೆ ಬರುವಾಗ ಚಿಕ್ಕ ಮಕ್ಕಳೊಂದಿಗೆ ,ದೊಡ್ಡ ಬ್ಯಾಗ್ ಗಳೊಂದಿಗೆ ಎಷ್ಟೋ ಕಿಲೋಮೀಟರ್ ನಡೆದು ಮೂರು ನದಿಗಳನ್ನು ದಾಟಿ ಬರುತ್ತಿದ್ದರು. ತೀವ್ರ ಮಳೆಗಾಲದ ಒಂದು ದಿನ ಮನೆಯ ಹತ್ತಿರದಲ್ಲೇ ಹರಿಯುವ ಪಯಸ್ವಿನಿ ನದಿ ತುಂಬಿ ಹರಿಯುತ್ತಿತ್ತು. ಅತ್ತೆ ಮಾವನವರು ಮಕ್ಕಳೊಂದಿಗೆ , ಎರಡ್ಮೂರು ಚೀಲಗಳೊಂದಿಗೆ ಅಂದು ಮನೆಯಿಂದ ಸೋಮವಾರಪೇಟೆಗೆ ಹೊರಟಿದ್ದರು. ಅದನ್ನು ದಾಟದೆ ಹೋಗಲು ಬೇರೆ ದಾರಿಯು ಇಲ್ಲ. ಆಗಿನ ಕಾಲದಲ್ಲಿ ತೆಪ್ಪವನ್ನು (ಬಿದಿರಿನಿಂದ ತಯಾರಿಸಿದ ನದಿ ದಾಟುವ ಸಾಧನ) ಬಳಸಿ ನದಿ ದಾಟುತ್ತಿದ್ದರು. ಅವರವರಿಗೆ ಬೇಕಾದ ತೆಪ್ಪವನ್ನು ಆಯಾ ಮನೆಯವರು ನಿರ್ಮಿಸಿ ಇಟ್ಟುಕೊಳ್ಳುತ್ತಿದ್ದರು. ಅತ್ತೆ ಮಾವನವರು ಬೆಳ್ಳಂಬೆಳಗೆ ಮಕ್ಕಳೊಂದಿಗೆ ,ಬ್ಯಾಗ್‌ಗಳೊಂದಿಗೆ ಬಂದು ತೆಪ್ಪ ಏರಿದರು. ಮಾವ ಮತ್ತು ಮಾವನ ತಮ್ಮ ಇಬ್ಬರು ಹುಟ್ಟು ಹಾಕುತ್ತಿದ್ದರು. ಮನೆಯಲ್ಲಿದ್ದ ಇತರರು ಅವರನ್ನು ಬೀಳ್ಗೊಡಲು ಬಂದಿದ್ದವರು ದಡದಲ್ಲಿದ್ದರು. ತೆಪ್ಪ ಚಲಿಸುತ್ತಿದ್ದಂತೆ ತುಂಬಿ ಹರಿಯುತ್ತಿದ್ದ ನದಿಯಲ್ಲಿ ದೊಡ್ಡ ಮರದ ದಿಮ್ಮಿಯೊಂದು ತೇಲಿ ಬರುತ್ತಿದ್ದುದು ಯಾರಿಗು ಕಾಣಿಸಲಿಲ್ಲ. ನೋಡನೋಡುತ್ತಿದ್ದಂತೆ ದಿಮ್ಮಿ ಬಡಿದ ರಭಸಕ್ಕೆ ತೆಪ್ಪ ಡೋಲಾಯಾಮಾನವಾಗಿ ಎಲ್ಲರು ನೀರಿಗೆ ಬಿದ್ದರು. ಅದಾಗಲೇ ಎರಡು ಬ್ಯಾಗ್ ಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದದ್ದನ್ನು ನೋಡಿ ದಡದಲ್ಲಿದ್ದವರು ಮನುಷ್ಯರೇ ಹೋಗುತ್ತಿದ್ದಾರೆ ಎಂದೇ ಭಾವಿಸಿದ್ದರಂತೆ. ಅದೃಷ್ಟವಶಾತ್ ಯಾರಿಗು ಪ್ರಾಣಕ್ಕೆ ಹಾನಿ ಆಗಲಿಲ್ಲ. ಹೇಗೆಂದರೆ ಮಾವನಿಗೆ ಮತ್ತು ಅವರ ತಮ್ಮನಿಗೆ ಈಜು ಬರುತ್ತಿದ್ದದರಿಂದ ಅವರಿಬ್ಬರು ಎಲ್ಲರನ್ನು ಕಷ್ಪಪಟ್ಟು ರಕ್ಷಿಸಿದರು. ಆದರೆ ಮನುಷ್ಯ ಉಳಿಯುವುದೇ ಪವಾಡದಂತಹ ಈ ಅಪಘಾತದಲ್ಲಿ ಅತ್ಯಮೂಲ್ಯ ವಸ್ತುಗಳಿರುವ ಬ್ಯಾಗ್ ನೀರುಪಾಲಾಯಿತು.
ನನ್ನತ್ತೆ ಸುರಕ್ಷತೆಯ ದೃಷ್ಟಿಯಿಂದ ಊರಿಗೆ ಬಂದು ಹೋಗುವಾಗ ಅವರೊಡನೆ ಇದ್ದ ಚಿನ್ನವನ್ನು , ಬೆಳ್ಳಿ ಸಾಮಾನುಗಳನ್ನು ತರುತ್ತಿದ್ದರು . ಹತ್ತು ಪವನ್‌ಗಿಂತಲೂ ಹೆಚ್ಚು ಚಿನ್ನ, ಸಾವಿರಾರು ಮೌಲ್ಯದ ಬೆಳ್ಳಿ, ಮನೆ ಮತ್ತು ಬೀರುವಿನ ಕೀ, ಇನ್ನು ಏನೇನೋ ಅಮೂಲ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋದವು. ಘಟನೆಯಿಂದ ಸಾವರಿಸಿಕೊಂಡ ನಂತರ ಮನೆಯವರು , ಮನೆಯ ಆಸುಪಾಸಿನ ಜನರೆಲ್ಲಾ ಸೇರಿ ಅದೆಷ್ಟೋ ಕಿಲೋಮೀಟರ್ ದೂರದವರೆಗೆ ನದಿಯಲ್ಲಿ ಆಳ ಅಗಲ ಹುಡುಕಾಡಿದರು ಕಳೆದು ಹೋದ ಬಂಗಾರ ಸಿಗಲಿಲ್ಲ. ಪ್ರಾಣ ಉಳಿದ ಸಂತೃಪ್ತಿಯಲ್ಲಿ ಮರೆತೆನೆಂದರು ಮರೆಯಲಾಗದ ಈ ಘಟನೆಯನ್ನು ಅತ್ತೆ ಮಾವನವರು ಈಗಲೂ ನೆನಪಿಸಿಕೊಳ್ಳುತ್ತಾರೆ. ನಮ್ಮ ಜೀವನವೇ ಶಾಶ್ವತವಲ್ಲ ಎಂದ ಮೇಲೆ ಕಾಣೆಯಾಗುವ ನಮ್ಮ ವಸ್ತುಗಳ ಮೇಲೆ ಅತಿಯಾದ ಮೋಹ ಏಕೆ ಬೇಕಲ್ಲವೇ?
ಕೇವಲ ವಸ್ತುಗಳು ಮತ್ತು ಪ್ರಾಣಿಗಳು ಮಾತ್ರವೇ ಕಾಣೆಯಾಗುವ ವಿಷಯ ಸಾಮಾನ್ಯವಾದರು ಒಟ್ಟೊಟ್ಟಿಗೆ ಇದೇ ದಾರಿಯಲ್ಲಿ ಮನುಷ್ಯರು ಕೂಡ ಕಾಣೆಯಾಗುವ ವಿಚಾರ ನಿಮಗೆ ತಿಳಿದಿರಬಹುದು.. ಟಿವಿನಲ್ಲಿ ,ರೇಡಿಯೋದಲ್ಲಿ, ಪೇಪರ್ ನಲ್ಲಿ ಕಾಣೆಯಾಗಿದ್ದಾರೆ ಜಾಹೀರಾತು ಇದ್ದೇ ಇರುತ್ತದೆ.ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು. ದೂರದೂರಿಗೆ ಪ್ರವಾಸ ಹೋದಾಗ ಅಲ್ಲಾಗುವ ಅವಘಡದಲ್ಲಿ ಹಲವಾರು ಜನ ಕಾಣೆಯಾಗುತ್ತಾರೆ. ಕಾರಣ ಏನೆ ಇರಲಿ ಕಾಣೆಯಾದವರು ಜೀವಂತವಾಗಿ ಸಿಗಲಿ ಎಂಬುದಷ್ಟೆ ನಮ್ಮ ಹಾರೈಕೆಯಾಗಿರಲಿ. ಇನ್ನು ಹೇಳುವುದಾದರೆ ವಿಶ್ವವನ್ನೇ ಗಮನ ಸೆಳೆದಂತಹ ಕೊಹಿನೂರು ವಜ್ರವೇ ಒಮ್ಮೆ ಕಾಣೆಯಾಗಿತ್ತು. ಮಗದೊಮ್ಮೆ ಜ್ಞಾನಪೀಠ ಪ್ರಶಸ್ತಿಯ ಸ್ಮರಣಿಕೆಯೆ ಕಾಣೆಯಾಗಿತ್ತು. ಈ ಎಲ್ಲಾ ಕಾಣೆಯಾಗುವುದರಲ್ಲಿ ಮನುಷ್ಯರೇ ಮನುಷ್ಯರಿಗೆ ಮಾಡುವ ಮೋಸವೇ ಹೆಚ್ಚಾಗಿ ಎದ್ದು ಕಾಣುತ್ತದೆ. ಮನುಷ್ಯರು ನಾವೆಲ್ಲರು ಒಂದೇ ,ಎಲ್ಲರಿಗು ಅವರವರ ಜೀವನವೇ ಶ್ರೇಷ್ಠ ಕಲ್ಪನೆ ಬಂದು ಕುವೆಂಪುರವರ ವಿಶ್ವಮಾನವ ಸಂದೇಶ ಅರ್ಥವಾಗಿದ್ದರೆ ಜೀವನ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ಲವೇ? ಇನ್ನೂ ಮನಸ್ಸಿನಿಂದಲೇ ವ್ಯಕ್ತಿಗಳನ್ನು ಸ್ವಂತ ತಾವಾಗಿಯೇ ಕಾಣೆಮಾಡಿಕೊಳ್ಳುತ್ತಾರೆ. ಇದಕ್ಕೆ ನಾವೆ ಹೊಣೆ. ಜಗಳವಾಗಿಯೋ ,ಮನಸ್ತಾಪವಾಗಿಯೋ ಮನಸ್ಸಿನಿಂದ ಕಳೆದುಕೊಂಡು ಮತ್ತೆ ದು:ಖಿಸುತ್ತಾರೆ. ಕಳೆದುದನ್ನು ಪಡೆದುಕೊಳ್ಳಲು ಕೆಲವರು ಮುಂದೆ ಬಂದರೆ , ಕೆಲವರಿಗೆ ಬಿಗುಮಾನ ಅಡ್ಡ ಬರುತ್ತದೆ. ಕಾಣೆಯಾದುದನ್ನು ಪಡೆದುಕೊಳ್ಳುವ ಅವಕಾಶವಿರುವ ಈ ವಿಚಾರದಲ್ಲಿ ಕೊಂಚ ನಾವೇ ರಾಜಿಯಾಗಿ ಕಳಕೊಂಡದ್ದನ್ನು ವಾಪಾಸು ಪಡೆದುಕೊಂಡು ಖುಷಿಯಾದ ಬದುಕನ್ನು ಆಹ್ವಾನಿಸಿಕೊಳ್ಳಬಹುದು ಇನ್ನು ಭೂಮಿಯನ್ನೆ ಬಿಟ್ಟು ಹೋಗಿ ಶಾಶ್ವತವಾಗಿ ಕಾಣೆಯಾದವರನ್ನು ಮಾತ್ರ ಎಂದಿಗೂ ಪಡೆದುಕೊಳ್ಳಲಾಗುವುದಿಲ್ಲ ಎಂಬುದು ಜೀವನದ ಕಹಿ ಸತ್ಯ..
ದಕ್ಕದ್ದನ್ನು ಕಲ್ಪಿಸಿಕೊಳ್ಳುವುದಕ್ಕಿಂತ ದಕ್ಕುವುದನ್ನು ಹುಡುಕಿ ನಾಲ್ಕು ದಿನದ ಜೀವನವನ್ನು ಸಂತೋಷದಿಂದ ಕಳೆಯವುದೇ ಜೀವನ. ಕಾಣೆಯಾಗಲಿ, ಸಿಗುತ್ತಲೇ ಇರಲಿ ಪ್ರತಿ ಮನುಷ್ಯನ ಮನಸ್ಸಿಗೆ ಸಮಾಧಾನವಾಗುತ್ತಿರಲಿ.
,
– ಸಂಗೀತ ರವಿರಾಜ್ , ಮಡಿಕೇರಿ .
ಲೇಖನ ಚೆನ್ನಾಗಿದೆ..ನನಗೂ ಕಳೆದುದು..ಸಿಕ್ಕಿದುದು..ಎಲ್ಲಾ ನೆನಪಾಗ್ಥಾ ಇದೆ..!! ಧನ್ಯವಾದಗಳು..