ದೀಪ ಹಚ್ಚಿಟ್ಟ ರಾತ್ರಿ: ಪ್ರಕಾಶ್ ಜಾಲಹಳ್ಳಿ ಅವರ ಗಜಲ್ ಗಳು

Share Button

Deepa Hacchitta Ratri

“ದೀಪ ಹಚ್ಚಿಟ್ಟ ರಾತ್ರಿ ಪ್ರಕಾಶ್ ಜಾಲಹಳ್ಳಿ ಅವರ ಐವತ್ತು ಗಜಲ್ ಗಳ ಸಂಗ್ರಹ. ಈಗಾಗಲೇ ಸಾಹಿತ್ಯ ಕ್ಶೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ಭರವಸೆಯ ಯುವ ಕವಿ. ಕತ್ತಲಿನ ಕಾಡಿಗೆ ಬಣ್ಣದ ನೀರವ ಮೌನದಲ್ಲಿ ಧ್ಯಾನಸ್ಠ ಹಣತೆಗಳ ಪಿಸುಮಾತಿನಂತೆಯೇ ಈ ಕವನಗಳು ತಮ್ಮ ಅನುಭವದ ಪ್ರಾಮಾಣಿಕತೆಯಿಂದ, ತಂತಿ ಮೀಟಿದ ನೋವ ತಡೆಯಲಾರದೆ ಮಿಡಿವ ವೀಣೆಯಂತೆ, ನಿಶ್ಶಬ್ದ ರಾತ್ರಿಯ ಮೆಲು ನಿಟ್ಟುಸಿರಿನ ಆರ್ತತೆಯಂತೆ ನಮ್ಮ ಮನ ತಟ್ಟುವಂತಿವೆ. ಬಹುಶ; ಕನ್ನಡ ಕಾವ್ಯ ಪ್ರಕಾರದಲ್ಲಿ ‘ಗಜಲ್’ಗಳು ಕಡಿಮೆ ಹಾಗೂ ಇದೊಂದು ಅತ್ಯುತ್ತಮ ಪ್ರಯೋಗವೇ ಅಗಿದೆ. ಅಲ್ಲಾಗಿರಿ ರಾಜ್ ತಮ್ಮ ಹಿನ್ನುಡಿಯಲ್ಲಿ ಬರೆಯುವಂತೆ,

“ಜನಾಬರಿಂದ ಗರೀಬರ ತನಕ ಜನಪ್ರಿಯ ಕಾವ್ಯ ಪರಂಪರೆಯಾಗಿ ಬೆಳೆದು ಬಂದದ್ದು ಗಜಲ್. ಆರಂಭದಲ್ಲಿ ಜನಸಾಮಾನ್ಯರ ಹಾಡುಗಾರಿಕೆಯಿಂದ ಪ್ರಾರಂಭಗೊಂಡ ಗಜಲ್ ಮೂಲ ಪರ್ಶಿಯನ್ ಗೆ ಸೇರಿದ್ದು ನಂತರ ಅದು ಕಾವ್ಯ ಕೃಷಿಯಾಗಿದ್ದು ಅರಬ್ಬಿಯಲ್ಲಿ. ಆ ಪರ್ಶಿಯನ್ ಈ ಅರಬ್ಬಿ ಭಾಷೆಯೊಂದಿಗೆ ಸಮ್ಮಿಲನಗೊಂಡು ನಂತರ ಗಜಲ್ ಕಾವ್ಯ ಭಾರತದ ನೆಲದಲ್ಲಿ ಉರ್ದು ಭಾಷೆಯಲ್ಲಿ ಜನಪ್ರಿಯವಾಯಿತು. ಆ ಮೋಡಿಯ ಜಾಡಿನಲ್ಲಿ ಗೆಳೆಯ ಪ್ರಕಾಶ್ ಬಿ. ಜಾಲಹಳ್ಳಿ ಈಗ ಕನ್ನಡ ಗಜಲ್ ಮೂಲಕ ಕಾವ್ಯ ಕ್ಶೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡದ್ದು ವಿಶೇಷ.”
ವೈಯಕ್ತಿಕವಾಗಿ ಗಜಲ್ ಗಳ ಬಗ್ಗೆ ಏನೇನೂ ಗೊತ್ತಿರದ ನನಗೆ ಈ ಕವನಗಳು ಹೊಸ ಸಂವೇದನೆಯನ್ನೇ ಉಂಟು ಮಾಡಿದವು.

‘ಬೆಳಕು ಸಾಲು ಬಿತ್ತಲು ಲೋಕದ ಕತ್ತಲೆಗೆ ಹಚ್ಚಬೇಕಿದೆ ಹಣತೆ
ಅನುಮಾನದ ಹುತ್ತಗಳಿಗೆ ನಂಬಿಕೆ ತೊಡಿಸಲು ನೆಚ್ಚಬೇಕಿದೆ ಕವಿತೆ’

ಇದು ಈ ಕವಿತೆಗಳ ಒಟ್ಟು ಆಶಯವೇ ಆಗಿದೆ. ಕವಿಯೇ ಅರಿತುಕೊಂಡಂತೆ ಅವರ ಸಿಟ್ಟು, ಆಕ್ರೋಶ, ಮೌನ, ಶಾಂತಿ, ಸಮಾಧಾನ ಎಲ್ಲವೂ ಈ ಕವಿತೆಗಳಲ್ಲಿ ಮಿಸುಕಾಡುತ್ತಿವೆ. ಮಬ್ಬು ದಾರಿಯಲ್ಲಿ ಬೆಳಕನ್ನರಸುತ್ತಿರುವ ಎಲ್ಲ ಯುವ ಮನಗಳ ಪ್ರತೀಕದಂತೆ ಈ ಕವನ ಸಂಕಲನ ಇದೆ.
ಪ್ರಕಾಶರ ಪ್ರಕಾರ ಗಜಲ್ ಅವರ ವೈಯಕ್ತಿಕ ಮತ್ತು ಸಾಮುದಾಯಿಕ ಲೋಕದ ಸಂಕಥನ ಕೂಡ. ಅಷ್ಟು ಕನಸಿನ ಬಿಸುಪು ಇಷ್ಟು ವಿರಹದ ಕಾವು ಅದರೊಂದಿಗೆ ಆಶಾ ವಾದ… ಹೀಗೆಲ್ಲ ಇರುವ ಕವಿತೆಗಳಿವು.

ಉದಾಹರಣೆಗೆ ಗಜಲ್ 2 ರಲ್ಲಿನ ಎಲ್ಲ ನೋವುಗಳಿಗೆ ಸಾವು ಮುಲಾಮಲ್ಲ ಬದುಕು ದೊಡ್ದದಿದೆ ಮುಗ್ಧ ನಗು ಮುಲಾಮಾಗಬಹುದು  ಲೋಕದೆದುರು ನೀ ಹೋದ ಮರು ದಿನ’ ಗಜಲ್ ಹತ್ತರಲ್ಲಿರುವ ‘ನೀ ನನಗೆ ಏನೆಲ್ಲ ಆಗಿದ್ದೆ ಎಂದು ನಾ ನಿನಗೆ ಹೇಗೆ ಹೇಳಿ ನಂಬಿಸಲಿ ಸಖಿ’ , ‘ಮನದಿ ಮೂಡಿದ ಮಲ್ಲೆ ಎಂದೂ ಬಾಡುವುದಿಲ್ಲ ನೆನಪಾಗಿ ಅರಳುತ್ತವೆ ಸಖಿ‘ ಈ ರೀತಿಯ ಕಂಪನದ, ಉತ್ಕಟತೆಯ ಸಾಲುಗಳು ಇಲ್ಲಿವೆ.

ಇನ್ನು ಕೆಲವು ಸಾಲುಗಳಲ್ಲಿನ ವಿಹ್ವಲತೆ ನಮ್ಮನ್ನು ಥಟ್ಟನೆ ತಾಕಿ ಬಿಡುತ್ತವೆ. ಉದಾಹರಣೆಗೆ,
‘ನಾಳೆಗಾಗಿ ಕಟ್ಟಿದ ಹರಕೆಗಳೆಲ್ಲವೂ ಹರಿದು ಹೋಗುತ್ತಿವೆ
ಉರಿದ ಬದುಕಿನ ನೋವಿಗೆ ತಂಪು ತಂದು ಕೊಡು ಸಾಕಿ’ ಈ ಸಾಲುಗಳು.

ಇಡೀ ಗಜಲ್ ಸಂಕಲನದ ಸ್ಠಾಯಿ ಭಾವ ಕಳೆದುಕೊಂಡ ಭಾವ, ಶೂನ್ಯತೆ, ದಿಕ್ಕಿಲ್ಲದ ಮೌನ ಯಾತನೆ.’ ದೀಪ ಹಚ್ಚಿಟ್ಟ ರಾತ್ರಿ’ಯ ಈ ಸಾಲುಗಳನ್ನು ನೋಡಿ;

ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿ
ನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ

ಇದೇ ಸಮಯ ಕವಿಗೆ ವಾಸ್ತವದ ಅರಿವೂ ಇದೆ. ಉದಾಹರಣೆಗೆ ‘ ಬೆಳಕಿನ ಮೈಯೊಳಗೂ ಉರಿವ ನೋವಿದೆ’ ;ಗೋಡೆಗಳನೇ ಕಟ್ಟುತ್ತಿರುವ ಲೋಕದಲ್ಲಿ ಬಯಲ ಹುಡುಕಬೇಕಿದೆ’(ಗಜಲ್ 22) .

ಕವಿಯ ಆಶಾವಾದ ಈ ಸಾಲಿನಲ್ಲಿದೆ: “ನಿರ್ಮಲ ಮನದ ಮಾತೆಂದೂ ಹುಸಿಯಾಗುವುದಿಲ್ಲ ಕಾಲಕ್ಕಾಗಿ ಕಾಯಬೇಕು ಸಿಗುವ ತನಕ‘ . ಮಾತು ಮೌನಗಳ ನಡುವಣ ಗೊಂದಲ, ದಯೆ, ಧರ್ಮ, ಕರುಣೆ, ಮಾನವೀಯ ಮೌಲ್ಯಗಳ ಬಗ್ಗೆ ಕಳವಳ, ಹೀಗೆ ಬೇರೆ ಬೇರೆ ಭಾವಗಳು ಕವಿಯಲ್ಲಿ ಸಂಚಲನ ಮೂಡಿಸಿದೆ. ಉದಾಹರಣೆಗೆ ‘ಸಮತೆಯ ಹಣೆಪಟ್ಟಿ ಹೊತ್ತ ಉದ್ಯಾನದ ಒಳಗೆ ಹೂಗಳೇ ಅರಳುತ್ತಿಲ್ಲ
ಬಂದೂಕಿನ ಬಾಯಿ‌ಒಳಗೆ ಒಸರುವ ರಕ್ತವ ಹೇಗೆ ನಿಲ್ಲಿಸಬೇಕೊ ಗೊತ್ತಿಲ್ಲ ಸಾಕಿ (ಗಜಲ್ 29)

ಪ್ರಕಾಶರ ಕವಿತೆಗಳಲ್ಲಿ ಝಗ್ಗನೆ ಬೆಳಕು ಚೆಲ್ಲುವ ಕೆಲವು ಸಾಲುಗಳು ಇಷ್ಟವಾದವು. ಮಿಂಚು ಹುಳುವಿನ ಬೆಳಕ ಕದಿವ ಕಳ್ಳರಿವರು’ , ‘ಮರುಭೂಮಿಯೊಳಗೂ ಅರಸಬೇಕು ಹನಿಯನು ‘ .. ಹೀಗೆ. ಒಂದು ಅನಂತ ನಿರೀಕ್ಶೆ, ನಾಳೆಯ ಬಗ್ಗೆ ಕನಸುಗಳು, ವಿಷಾದ, ಧರ್ಮ, ದೇವರುಗಳ ಬಗ್ಗೆ ಒಂದು ರೀತಿಯ ವೈಚಾರಿಕ ಸಿನಿಕತನ, ಹೀಗೆಲ್ಲ ಕನವರಿಕೆಗಳಿರುವ ಈ ಯುವ ಕವಿಯ ಬದುಕು ಬರಹಕ್ಕೆ ಕಾವ್ಯವೇ ಬೆಳಕಾಗಲಿ ಎಂದು ಹಾರೈಕೆ.

 

 

 – ಜಯಶ್ರೀ. ಬಿ. ಕದ್ರಿ

 

2 Responses

  1. Shivashankar says:

    ಚೆನ್ನಾಗಿವೆ ಸಾರ್ ಗಜಲ್ ಗಳು ನಾನು ಓದಿದೆ,

    ಶಿವಶಂಕರ ಕಡದಿನ್ನಿ,,

  2. ರವಿಕಿರಣ says:

    ಸೂಪರ್ ಗಜಲ್ ಸರ್..ಇನ್ನೂ ಓದಬೇಕೆನಿಸುತ್ತಿದೆ.೮೧೦೫೫೮೫೨೫೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: