ಗಿಡ ಹಚ್ಚುವ ಕನಸು ಚಿಗುರಿದಾಗ …
ಬೇಸಿಗೆ ರಜೆಯ ನಿಮಿತ್ಯ ಊರಿಗೆ ಹೋದಾಗ ಮಲಪ್ರಭಾ ನದಿ ನೋಡಿದೆ. ಕಳೆದ ಮೂರು ದಶಕಗಳ ಹಿಂದೆ ಬೇಸಿಗೆ ಕಾಲದಲ್ಲೂ ನನ್ನೂರ ನದಿ ತಣ್ಣಗೆ ಹರಿಯುತ್ತಿತ್ತು. ಅದೊಂದು ಸಾರಿ ಬರಗಾಲ ಬಿದ್ದಾಗ ಆ ನದಿಯಲ್ಲಿಯೇ ಒಂದು ಸಣ್ಣ ಗುಂಡಿತೋಡಿ ವರತೆಯ ನೀರನ್ನು ಕುಡಿಯಲು ತಂದ ನೆನಪಿದೆ. ಆದರೀಗ ನದಿಯ ತುಂಬಾ ಗುಂಡಿತೋಡಿ ಮರಳು ದೋಚಿದ್ದಾರೆ. ಆದರೂ ಆ ಗುಂಡಿಗಳಲ್ಲಿ ಹನಿ ನೀರಿಲ್ಲ. ಮನುಷ್ಯನ ಸ್ವಾರ್ಥಕ್ಕೆ ಜೀವಸೆಲೆ ಬಲಿಯಾಗಿದೆ.
ಬಯಲುಸೀಮೆಯಲ್ಲಿ ಬಿಸಿಲಿನ ಧಗೆ ಅದೇಷ್ಟು ಪ್ರಖರ ಅಂದ್ರೆ ಸೂರ್ಯ ಕೆಂಡವನ್ನೆ ಉಗುಳುತ್ತಿದ್ದಾನೆ, ಒಂದು ಅರ್ಥದಲ್ಲಿ ಪ್ರೆಶರ್ ಕುಕ್ಕರ್‌ನಲ್ಲಿ ನಾವೇ ಕತಕತ ಕುದಿಯುತ್ತಿರುವ ಅನುಭವವಾಯಿತು. ಸೆಕೆಯ ಹೊಡೆತಕ್ಕೆ ಮಗು ನಿದ್ದೆಗೆ ಜಾರದೆ ಜೋಳಿಗೆಯಲ್ಲಿ ಅಳುತ್ತಿದೆ. ಫ್ಯಾನು, ಏಸಿ, ಕೂಲರ್ ಇದ್ದವರು ಮಾತ್ರ ಮನೆಯೊಳಗೆ ಮಲಗುತ್ತಾರೆ, ಉಳಿದವರು ಮಾಳಿಗೆ, ಅಂಗಳ, ಕಟ್ಟೆಯ ಮೇಲೆ ಪವಡಿಸುತ್ತಾರೆ, ಹೀಗೆ ಪವಡಿಸಿದವರು ಹಾವು, ಚೇಳು, ಸೊಳ್ಳೆ ಕಚ್ಚಿಸಿಕೊಂಡು ಆಮೇಲೆ ಆಸ್ಪತ್ರೆಗೆ ಅಲೆದಾಡಿ ಹೈರಾಣಾಗುತ್ತಾರೆ.
ರಸ್ತೆಯ ಅಗಲಿಕರಣಕ್ಕಾಗಿ ಸಾಲುಸಾಲು ಮರಗಳನ್ನು ಕತ್ತರಿಸಿದೆವು, ಅಭಿವೃದ್ದಿಯ ಹೆಸರಿನಲ್ಲಿ ಕಾಂಕ್ರಿಟ್ ರಸ್ತೆ, ಕಟ್ಟಡಗಳನ್ನು ನಿರ್ಮಿಸಲು ನದಿ, ಹಳ್ಳ-ಕೊಳ್ಳಗಳ ಒಡಲುಗಳನ್ನೆಲ್ಲಾ ಬರಿದಾಗಿಸಿದೆವು, ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಯಿಸಿ ಹೆಕ್ಕಿಹೆಕ್ಕಿ ನೀರನ್ನು ಮೇಲೆತ್ತಿದೆವು, ಹೊಲಗಳಲ್ಲಿಯ ಬದು/ವಡ್ಡುಗಳನ್ನೆಲ್ಲಾ ಹರಿದು ಸಮ ಮಾಡಿದೆವು, ಇಂಗುಬಚ್ಚಲುಗಳೆಲ್ಲಾ ಮಾಯವಾದವು ಈ ಎಲ್ಲ ಕಾರಣಕ್ಕಾಗಿಯೇ ವಾತವರಣ ಇಷ್ಟೊಂದು ಹದಗೆಟ್ಟಿದೆ ಎಂದು ಶರ್ಟ ಬಿಚ್ಚಿ ಗಾಳಿಹೊಡೆದುಕೊಳ್ಳುತ್ತಿದ್ದ ಮಗನಿಗೆ ವಿವರಿಸಿದೆ.
‘ಅಪ್ಪ, ನೀನು ಶಾಲೆಯಲ್ಲಿ ಪಾಠ ಮಾಡ್ತಿ ಸರಕಾರ ಸಂಬಳ ಕೊಡತ್ತೆ, ಆದರೆ ನಾನು ಮುಂದೆ ಗಿಡ ಹಚ್ಚಬೇಕಂತ ಮಾಡಿನಿ ಸರಕಾರ ನನಗ ಸಂಬಳ ಕೊಡತ್ತಾ?’ ಮಗನ ಪ್ರಶ್ನೆಗೆ ತಕ್ಷಣಕ್ಕೆ ಉತ್ತರಿಸಲಾಗದೆ ಕೊಂಚ ಆಲೋಚನೆಗಿಳಿದೆ. ಕಚೇರಿಯ ಕಸಗೂಡಿಸುವವರಿಗೂ ಸರಕಾರ ಸಂಬಳ ಕೊಡ್ತಿರುವಾಗ, ಗಿಡ ಹಚ್ಚುವವರಿಗೆ ಸಂಬಳ ಕೊಟ್ರು ತಪ್ಪಿಲ್ಲ ಅಂತಾ ಅನ್ನಿಸಿತು. ಊರಿಗೊಬ್ಬ ಗ್ರಾಮಲೆಕ್ಕಾಧಿಕಾರಿ, ಗ್ರಾಮಸೇವಕ, ಗ್ರಂಥಪಾಲಕ ಇರುವಂತೆ ಗಿಡನೆಡುವವರು ಇದ್ದರೆ ಬಿಸಿಲಿನ ಧಗೆ ಪ್ರಾಯಶಃ ಕಡೆಮೆಯಾಗುತ್ತದೆ. ಸಾವಿರಾರು ಗಿಡಹಚ್ಚಿದ ಸಾಲುಮರದ ತಿಮ್ಮಕ್ಕ ತನ್ನ ಬದುಕಿಗೊಂದು ಭದ್ರತೆಯಿಲ್ಲದೆ ಇರುವುದನ್ನು ನೋಡಿದರೆ ಮಗನ ಪ್ರಶ್ನೆ ನಿಜಕ್ಕೂ ನನ್ನೊಳಗೀಗ ಕಾಡುತ್ತಿದೆ. ಡಾಕ್ಟರ್, ಎಂಜಿನಿಯರ್ ಇನ್ನು ಏನೇನೊ ಆಗ್ಬೇಕಂತ ದೊಡ್ಡದೊಡ್ಡ ಗುರಿ ಇಟ್ಕೊಂಡಿರೊ ಇಂದಿನ ಹುಡ್ಗುರ ಮಧ್ಯೆ ಮಗ ಗಿಡ ಹಚ್ಚುವ ಕನಸಿರಿಸಿಕೊಂಡಿರುವುದು ಹೆಮ್ಮೆಯ ವಿಷಯ ಅನ್ನಿಸಿತು.
– ಕೆ.ಬಿ.ವೀರಲಿಂಗನಗೌಡ್ರ, ಸಿದ್ದಾಪುರ
ಉತ್ತಮ ಬರಹ. ಮಗುವಿನ ಉದಾತ್ತ ಕನಸು ನನಸಾಗಿ, ‘ಗಿಡ ಹಚ್ಚುವ’ ಉದ್ಯೋಗ ಸೃಷ್ಟಿಯಾದರೆ ನಿಜಕ್ಕೂ ಭೂಮಿ ಸಸ್ಯಶ್ಯಾಮಲೆಯಾದಾಳು.
ಥ್ಯಾಂಕ್ಸ್ ಮೇಡಂ