ಮೊಸರನ್ನು ನಂಬಿದವರಿಗೆ ಮೋಸವಿಲ್ಲ
ಮಾನವ ಪುರತನ ಕಾಲದಿಂದ ಮೊಸರು ಬಳಸುತ್ತಿದ್ದಾನೆ. ಐದುಸಾವಿರ ವರ್ಷ ಹಿಂದೆ ಯುರೋಪ್, ಏಷ್ಯಾ, ಆಫ್ರಿಕಾ, ಫ್ರಾನ್ಸ್, ಅಮೇರಿಕದಲ್ಲಿ ಮೊಸರು ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಭಾರತದಲ್ಲಿ ವೇದ ಕಾಲದಲ್ಲೇ ಮೊಸರನ್ನು ಬಳಸಲಾಗುತ್ತಿತ್ತು. ಶುಭ ಸಮಾರಂಭಗಳಲ್ಲಿ ಮೊಸರಿಗೆ ಮುಖ್ಯಸ್ಥಾನ. ಪಂಚಾಮೃತದಲ್ಲಿ ಮೊಸರೂ ಒಂದು. ಮೊಸರು ಬದುಕಿನ ಅವಿಭಾಜ್ಯ ಆಹಾರವಾಗಿತ್ತಲ್ಲದೆ, ಭೂಲೋಕದ ಅಮೃತ ಎಂಬ ಖ್ಯಾತಿಗಳಿಸಿತ್ತು. ಈಗಲೂ ಇದೇ ಪರಿಸ್ಥಿತಿ.
ವೈಜ್ಙಾನಿಕವಾಗಿ ಮೊಸರನ್ನು ಬ್ಯಾಕ್ಟೀರಿಯ ರಾಶಿ ಎನ್ನಬಹುದು. ಹಾಲಿಗೆ ಹೆಪ್ಪು ಹಾಕಿದಾಗ, ಹೆಪ್ಪಿನ ಉಪಕಾರಿ ಬ್ಯಾಕ್ಟೀರಿಯ ಲ್ಯಾಕ್ಟೋಬ್ಯಾಸಿಲಸ್ ಪುಃಖಾನುಪುಃಖವಾಗಿ ವೃದ್ಧಿಗೊಳ್ಳುತ್ತದೆ. ಬ್ಯಾಕ್ಟೀರಿಯ ಹೊರಹಾಕುವ ಲ್ಯಾಕ್ಟೋಸ್ ಕಿಣ್ವ, ಹಾಲಿನಲ್ಲಿನ ಸಕ್ಕರೆ ಅಂಶ ಲ್ಯಾಕ್ಟೋಸ್ ಮೇಲೆ ವರ್ತಿಸಿ, ಸಕ್ಕರೆಯನ್ನು ಹುದುಗುಬರಿಸಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿ ಮಾಡುತ್ತದೆ. ಈ ಆಮ್ಲ ಮೊಸರಿಗೆ ವಿಶಿಷ್ಟ ಹುಳಿ, ಪರಿಮಳ ಕೊಡುತ್ತದೆ. ಭರತದಲ್ಲಿ ಉತ್ಪನ್ನವಾಗುವ ಹಾಲಿನ ಶೇ.೫೦ ರಷ್ಟು ಮೊಸರಾಗಿ ಮಾರ್ಪಡುತ್ತದೆ.
ಲ್ಯಾಕ್ಟೋಬ್ಯಾಸಿಲಸ್‌ಗಳಲ್ಲಿ ಜಾತಿ, ಉಪಜಾತಿ ಇದೆ. ಹೀಗಾಗಿ ಒಬ್ಬೊಬ್ಬರ ಮನೆ ಮೊಸರು ಒಂದೊಂದು ರೀತಿ. ಒಂದೊಂದು ಮನೆ ಮೊಸರಿನಲ್ಲಿ ಪ್ರತ್ಯೇಕ ಜಾತಿ ಲ್ಯಾಕ್ಟೋಬ್ಯಾಸಿಲೆ ಸೇರಿಕೊಂಡಿರಬಹುದು. ಲ್ಯಾಕ್ಟೋಬ್ಯಾಸಿಲಸ್, ಬಲ್ಗೇರಿಆಯಾಸ್, ಲಾ-ಬಯ್ ಫಿಡಸ್, ಲ್ಯಾ-ಅಸಿಡೊಫಿಲಸ್ ತಳಿಗಳು ಉತ್ತಮೋತ್ತಮ ಗುಣಗಳವು. ಈಚಿನ ದಿನಗಳಲ್ಲಿ ಆಹಾರ ತಜ್ಞರು ಮೊಸರಿನ ವಿಶಿಷ್ಟ ಗುಣಗಳನ್ನು ಹೆಕ್ಕಿ ತೋರುತ್ತಾರೆ. ಪ್ರಾಣಿ ಹಾಗೂ ಮಾನವನ ಮೇಲೆ ನಡೆದಿರುವ ಪ್ರಯೋಗಗಳಿಂದ ಮೊಸರಿನಲ್ಲಿ ಆರೋಗ್ಯ, ಆಯುಷ್ಯ, ಸೌಂದರ್ಯ ಪಾಲಿಸುವ ವಿಶಿಷ್ಟ ಗುಣಗಳಿರುವುದು ಬೆಳಕಿಗೆ ಬಂದಿದೆ.
ಅತ್ಯುತ್ತಮ ಆಹಾರ : ಮೊಸರಲ್ಲಿ ಉತ್ತಮ ಗುಣಮಟ್ಟದ ಪೋಷಕಾಂಶಗಳು ಇವೆ. ಮೊಸರಲ್ಲಿ ಉತ್ಕೃಷ್ಟ ದರ್ಜೆಯ ಪ್ರೋಟಿನ್ ಲಭ್ಯ. ಜೀವಸತ್ವಗಳು ಹಾಗೂ ಲವಣಗಳಿಂದ ಮೊಸರು ಸಮೃದ್ಧ; ಸುಲಭವಾಗಿ ಜೀರ್ಣವಾಗುತ್ತದೆ, ಮೈಗೂಡುತ್ತದೆ. ಆಹಾರ ಪೋಷಕಾಂಶಗಳನ್ನು ಕರುಳು ಹೀರಿಕೊಳ್ಳುವುದಕ್ಕೆ ಉತ್ತೇಜನ ನೀಡುತ್ತದೆ. ಕೆಲವರಿಗೆ ಹಾಲು ಒಗ್ಗುವುದಿಲ್ಲ ; ಮೊಸರು ಎಲ್ಲರಿಗೂ ಒಗ್ಗುತ್ತದೆ. ಆರೋಗ್ಯವಂತರಿಗೂ, ರೋಗಿಗಳಿಗೂ, ಸ್ಥೂಲಕಾಯದವರಿಗೂ, ಹೃದಯರೋಗಿಗಳಿಗೂ, ಬಿ.ಪಿ , ಸಕ್ಕರೆ ಕಾಯಿಲೆ ಇರುವವರಿಗೂ ಮೊಸರು ವರದಾನ.
ಕರುಳಿನ ರಕ್ಷಾಕವಚ : ಕರುಳಿಗೆ ಅನೇಕ ರೀತಿ ರೋಗಣುಗಳು ಲಗ್ಗೆ ಹಾಕುತ್ತದೆ. ಕರುಳಿನ ಒಳಗೋಡೆಯಲ್ಲಿ ಉಪಯುಕ್ತ ಸೂಕ್ಷ್ಮಜೀವಿಗಳ ದಂಡೇ ಮೇಳೈಸಿರುತ್ತದೆ. ಈ ಜೀವಿಗಳು ರೋಗಕಾರಕ ಬ್ಯಾಕ್ಟೀರಿಯಗಳನ್ನು ಬಗ್ಗುಬಡಿಯಲು ಹೋರಾಟ ನಡೆಸುತ್ತಿರುತ್ತವೆ. ಮೊಸರಿನ ಆಮ್ಲೀಯತೆ, ಕರುಳಿನಲ್ಲಿ ಸೇರುವ ಬ್ಯಾಕ್ಟೀರಿಯಾಗಳಿಗೆ ಯಮಪಾಶ. ಕರುಳಿನಲ್ಲಿ ನಡೆವ ಸಮರದಲ್ಲಿ ರೋಗಾಣು ಸೇನೆಗೆ ವಿಜಯ ದೊರಕಿದರೆ ಭೇದಿ ಮುತಾಂದ ಕಾಯಿಲೆ ಬೇರೂರುತ್ತದೆ. ಮಕ್ಕಳ , ವಯಸ್ಕರ ಮಾಮೂಲು ಭೇದಿಗೆ ‘ಇ ಕೊಲೆ’ ರೋಗಾಣು ಮುಖ್ಯ ಕಾರಣ. ಮೊಸರಿನ ಉಪಯುಕ್ತ ಸೂಕ್ಷ್ಮ ಜೀವಿಗಳು ‘ಇ ಕೊಲೆ’ ರೋಗಾಣುಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಮೊಸರು ಉಪಯೋಗಿಸುವವರಲ್ಲಿ ಭೇದಿ ಅಪರೂಪ.
ಸೋಂಕು ರೋಗಗಳಿಗೆ ಉಪಯೋಗಿಸುವ ಆಚಿಟಿಬಯೋಟಿಕ್ ಔಷಧಿಗಳು ಕರುಳಿನ ಉಪಯುಕ್ತ ಸೂಕ್ಷ್ಮಜೀವಿಗಳನ್ನೂ ಧ್ವಂಸಗೊಳಿಸುತ್ತದೆ. ಇಂಥ ಸಮಯದಲ್ಲಿ ಪುನರ್ ಮೊಸರು ಸೇವಿಸಿ ಕರುಳಿನ ಸೂಕ್ಷ್ಮಜೀವಿಗಳನ್ನು ಪುನರ್ ಪ್ರತಿಷ್ಠಾಪಿಸಬಹುದು. ಇದೇ ಕಾರಣದಿಂದಾಗಿ ಆಚಿಟಿಬಯೋಟಿಕ್ಸ್ ಜೊತೆಗೆ ಲ್ಯಾಕ್ಟೋಬ್ಯಾಸಿಲಸ್ ಔಷಧಿಯನ್ನೂ ಬರೆದುಕೊಡುತ್ತಾರೆ. ಇಲ್ಲವೆ ಸಾಕಷ್ಟು ಮೊಸರು ಸೇವಿಸಲು ಸಲಹೆ ಮಾಡುತ್ತಾರೆ.
ಆರೋಗ್ಯವರ್ಧಕ : ಮೊಸರು ಆರೋಗ್ಯವನ್ನು ರಕ್ಷಿಸುವುದಷ್ಟೇ ಅಲ್ಲ ; ಮುಪ್ಪನ್ನು , ಮುಪ್ಪಿನ ಲಕ್ಷಣಗಳನ್ನೂ ಮುಂದೂಡುತ್ತದೆ. ಬಲ್ಗೇರಿಯನ್ನರ ದೀರ್ಘಯುಷ್ಯದ ಹಾಗೂ ದೀರ್ಘಯೌವನದ ಗುಟ್ಟು ಮೊಸರೇ. ಮೊಸರಿಂದ ಉಪಕೃತಗೊಳ್ಳದ ಜೀವಕೋಶ ಮಾನವ ದೇಹದಲ್ಲೇ ಇಲ್ಲ. ಮೊಸರು ಆರೋಗ್ಯಕ್ಕೆ ಆಯುಷ್ಯವರ್ಧನೆಗೂ, ಮಲಬದ್ಧತೆ, ಭೇದಿಗೆ, ನಿದ್ರಾಹೀನತೆಗೆ, ಕಾಮಾಲೆಗೆ, ಮದ್ದು. ಯಾವ ಕಾಯಿಲೆ ಇರದಿದ್ದರೂ ಮೊಸರು ಆರೋಗ್ಯ ರಕ್ಷಿಪ ಆಹಾರ.
– ಸುರೇಂದ್ರ ಪೈ. ಸಿದ್ಧಾಪುರ