ಕೂವೆಯ ಹಿರಿಮೆ
‘ಕೂವೆ’ ಒಂದು ಔಷಧೀಯ ಸಸ್ಯವಾಗಿದೆ. ಉಪಯೋಗ ನೂರಾರು ಎಂದರೂ ಸುಳ್ಳಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಮನೆಮನೆಯ ಹಿತ್ತಿಲಲ್ಲಿ ನೆಟ್ಟು ಬೆಳೆಸುತ್ತಿದ್ದರು. ಇದು ಸೊಂಪಾಗಿ ಬೆಳೆಯುವ ಗಿಡ. ನೋಡಲು ಅಲಂಕಾರಿಕ ಸಸ್ಯಗಳನ್ನು ಹೋಲುತ್ತದೆ. ಇದನ್ನು ಮಳೆಗಾಲ ಮುಗಿಯುತ್ತಿದ್ದಂತೆಯೇ ಬೇರೆ ಬೇರೆ ಸಾಲು ಮಾಡಿ ನೆಟ್ಟರೆ ಎರಡು-ಮೂರು ತಿಂಗಳುಗಳಲ್ಲಿ ಗಿಡ ದೊಡ್ಡದಾಗಿ ಸಣ್ಣ ಸಣ್ಣ ಹೂ ಬಿಡಲು ಪ್ರಾರಂಭಿಸುತ್ತದೆ. ಇದಕ್ಕೆ ಹೆಚ್ಚಿನ ಆರೈಕೆಯೇನೂ ಬೇಡ. ಸಸಿ ದೊಡ್ಡದಾಗಿ ಎಲೆಗಳೆಲ್ಲಾ ಹಣ್ಣಾಗತೊಡಗುತ್ತಿದ್ದಂತೆ ಕೆಳಗೆ ನೆಲದ ಕೆಳಗೆ ಗಡ್ಡೆಗಳು ಬಲಿತಿವೆ ಎಂದರ್ಥ.
ಆ ಸಮಯದಲ್ಲಿ ಸಸಿಗಳನ್ನು ಕಿತ್ತಾಗ ಬುಡದಲ್ಲಿ ಸಣ್ಣ ಸಣ್ಣ ಉದ್ದುದ್ದ ಮೂಲಂಗಿಯಂತಿರುವ ಗಡ್ಡೆಗಳು ಒಂದೊಂದು ಬುಡದಲ್ಲಿಯೂ ಕಂಡು ಬರುತ್ತವೆ. ಅವುಗಳನ್ನು ತೊಳೆದು ಶುಚಿಗೊಳಿಸಿ , ಹೆಚ್ಚಿ ರುಬ್ಬಿ ಶುಭ್ರವಾದ ತೆಳುಬಟ್ಟೆಯಲ್ಲಿ ಸೋಸಿದಾಗ ತೆಳ್ಳನೆಯ ದೋಸೆಹಿಟ್ಟಿನಂತೆ ತಳದಲ್ಲಿ ಉಳಿಯುತ್ತದೆ. ಇದನ್ನು ಹಾಗೆಯೇ ಪಾತ್ರೆಯಲ್ಲಿಟ್ಟು, ಮರುದಿನ ಮೇಲಿರುವ ನೀರನ್ನು ತೆಗೆದು, ತಳದಲ್ಲಿ ಉಳಿದ ಹಿಟ್ಟನ್ನು ಬಟ್ಟೆಯಲ್ಲಿ ಹರವಿ ಬಿಸಿಲಿನಲ್ಲಿ ಒಣಗಿಸಿದಾಗ ’ಕೂವೆ ಹುಡಿ’ ಸಿಗುತ್ತದೆ.
ಹಿಂದೆ ಕೂವೆಮಣ್ಣಿಯನ್ನು ಸಣ್ಣಮಕ್ಕಳಿಗೆ ಬಾಲಾಹಾರವಾಗಿ ಉಪಯೋಗಿಸುತ್ತಿದ್ದರು. ಇದು ಅತ್ಯುತ್ತಮವಾದ, ನೈಸರ್ಗಿಕ ಶಿಶು ಆಹಾರ, ಆದರೆ ತಯಾರಿಸಲು ತುಸು ಶ್ರಮ ಬೇಕು.
ಉಪಯೋಗ:
- ಮಕ್ಕಳಿಗೆ ಭೇದಿಯಾಗುತ್ತಿದ್ದರೆ ಸ್ವಲ್ಪ ಕೂವೆ ಹಿಟ್ಟಿಗೆ, ಹಾಲು ಸೇರಿಸಿ ಕುದಿಸಿ ’ಮಣ್ಣಿ’ ಮಾಡಿ ತಿನ್ನಿಸುವುದು.
- ಮಲಬದ್ಧತೆಯಾದರೆ ಕೂವೆಹಿಟ್ಟನ್ನು ಹಾಲು, ನೀರು ಸೇರಿಸಿ, ಕುದಿಸಿ ತೆಳ್ಳಗೆ ಹಾಲಿನಂತೆ ಮಾಡಿ ಕುಡಿಸುವುದು.
- ದೊಡ್ಡವರಿಗೂ, ಜ್ವರದಿಂದಾಗುವ ನಿಶ್ಶಕ್ತಿಗೆ ದಿವ್ಯೌಷಧ.
- ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂವೆ ಸಹಕಾರಿ.
- ಗರ್ಭಿಣಿಯರಿಗೂ ಇದು ದೇಹಕ್ಕೆ ಬಹಳ ತಂಪು, ಶಕ್ತಿದಾಯಕ.
- ಕೂವೆಹಿಟ್ಟಿನಿಂದ ಹಪ್ಪಳ , ಸಂಡಿಗೆ, ಬಾಳಕ, ಹಲುವ, ದೋಸೆ ಮುಂತಾದುವುಗಳನ್ನು ತಯಾರಿಸುತ್ತಾರೆ.
ಆದರೆ ಇದನ್ನು ತಯಾರಿಸುವುದು ಸ್ವಲ್ಪ ಶ್ರಮದ ಕೆಲಸವೇ ಆಗಿದೆ. ಮಾರುಕಟ್ಟೆಯಲ್ಲಿಯೂ ಅರಾರೂಟ್ ಎಂಬ ಹೆಸರಿನಲ್ಲಿ ಸಿಗುವ ಪುಡಿಯು ’ ಕೂವೆಹಿಟ್ಟು’ ಎಂದು ಹೇಳುತ್ತಾರೆ.ಇದೆಲ್ಲಾ ಈಗ ಮರೆಯಾಗುತ್ತಿದೆ. ಕೂವೆಹಿಟ್ಟನ್ನು ತಯಾರಿಸಲು ಈಗ ಸಮಯವೂ, ತಾಳ್ಮೆಯೂ ಇಲ್ಲ. ಪೇಟೆಯಿಂದ ಖರೀದಿಸುವವರೇ ಅಧಿಕ ಮತ್ತು ಸಿದ್ಧ ಆಹಾರಗಳೇ ಅಮೃತ ಎಂಬಂತಾಗಿದೆ..
– ಸಾವಿತ್ರಿ ಭಟ್, ಪುತ್ತೂರು
ಉಪಯುಕ್ತ ಮಾಹಿತಿ, ಧನ್ಯವಾದಗಳು.
Good information… ಆರಾರೂಟ್ ಪದವೇ ಮರೆತು ಹೋಗಿತ್ತು. ನೀವು ನೆನಪು ಮಾಡಿದಿರಿ.
ಉತ್ತಮ ಮಾಹಿತಿ. ಹಿತ್ತಲ ಗಿಡ ಮದ್ದಲ್ಲ.
ಪ್ರಕಟಿಸಿದ ಸುರಹೊನ್ನೆ ಗೆ ಮತ್ತು ಓದಿ ಪ್ರತಿಕ್ರಿಯೆ ನೀಡಿದ ಓದುಗರಿಗೆ ಧನ್ಯವಾದಗಳು
Good one..halu bayi bari chanda
ಒಳ್ಳೆ ವಿಷಯ. ಚಿಕ್ಕಂದಿನಲ್ಲಿ ಕುವೆಹಿಟ್ಟಿನ ಮಣ್ಣಿ ತಿಂದಿದ್ದೆ..ಒಳ್ಳೆತಂಪು ಜೀವಕ್ಕೆ
ನಾವು ಮುಂಚೆ ಮನೆಯಲ್ಲಿ ನಟ್ಟು ನಾನೂ ಸೇರಿ ಗಡ್ಡೆ ತೆಗೆದು ,ಅದರ ಮೇಲಿನ ಒಣಸಿಪ್ಪೆ ತೆಗೆದು, ತೊಳೆದು ಹೋಳು ಮಾಡಿ ,ಕಡಿವ ಕಲ್ಲಲ್ಲಿ ಕಡ್ದು ,ಹಾಲು ತೆಗೆದು, ಅರಿಸಿ ,ತಂಗಲು ಇಟ್ಟು ,ಹಾಳೆಯಲ್ಲಿ ಒಣಗಲು ಇಡುತ್ಕಿದ್ದೆವು.ಬೇಕಾದಾಗ ತುಪ್ಪ ,ಬೆಲ್ಲ ಹಾಕಿ ಹಲ್ವ ತರಹ ಮಾಡಿ ತಿನ್ನೋದು.ಈ ಸಲ ಕುಂಬ್ಳೆಗೆ ಹೋದಾಗ ಅಲ್ಲಿ ಅಂಗಡಿಯಲ್ಲಿ ಕೊಳ್ಳಲು ಹೋದಾಗ ಕೂವೆ ಮತ್ತು ಆರಾರೋಟ್ಎರಡೂ ಬೇರೆ ಅಂದ ಅಂಗಡಿಯವನು.ಎರಡನ್ನೂ ಕೊಂಡೆ.ಒಂದು ಕೂವೆ ನಾವು ಮಾಡಿದ ತರಹ ಕಟ್ಟೆ ಕಟ್ಟೆ ಇದ್ದರೆ ಇನ್ನೊಂದು ನುಣ್ಣಗೆ ಮೈದಾ ತರಹ.ಕೂವೆ ತಂಪು,ಅರಾರೋಟ್ ಭೇದಿ ನಿಲ್ಲಲು ಅಂತ ಅವರೇ ವ್ಯತ್ಯಾಸ ತಿಳಿಸಿದರು! ಇಲ್ಲಿ ಮಲಯಾಳಿಗಳಿಗೆ ಧನು ಮಾಸದ ಆರ್ದ ನಕ್ಷತ್ರದಂದು ಕೂವೆ ಹಲ್ವ ತರಹ ಮಾಡಿ ತೆಂಗಿನ ತುರಿ ಸೇರಿಸಿ ತಿನ್ನುವ ಕ್ರಮ ಇದೆ.
ಮೊದಲಿನ ಕಾಲದಲ್ಲಿ ಕೂವೆ ಹುಡಿ ಎಲ್ಲರ ಮನೆಗಳಲ್ಲಿ ಇಡೀ ವರ್ಷ ಇರುತ್ತಿತ್ತು…ಮನೆಗಳಲ್ಲಿ ಪ್ರಥಮ ಚಿಕಿತ್ಸೆಯಾಗಿ ಬಳಕೆಯಾಗುತ್ತಿತ್ತು…ಈಗೆಲ್ಲಿದೆ??
ಸಾವಿತ್ರಿ ಅಕ್ಕ ಬರಹ ಚೆನ್ನಾಗಿದೆ..
ಕೂವೆ ಉಪಯುಕ್ತ ಮಾಹಿತಿ ಸಾವಿತ್ರಿ ಭಟ್. ನಾವೂ ಅದನ್ನು ನೆಟ್ಟು ಬೆಳೆಸುತ್ತೇವೆ. ಅದನ್ನು ತೊಳೆದು ಅರೆದು ಹಾಲು ತೆಗೆಯುವ ಕಷ್ಟ ಬಿಟ್ಟರೆ; ಹಿಟ್ಟು ಬೇಗನೆ ತಳಕೂರುವುದು. ಇದನ್ನು ಎರಡು-ಮೂರು ಬಾರಿ ಕರಡಿಸಿ ಒಣಗಿಸಿದರೆ ಅಚ್ಚ ಬಿಳಿ ಹುಡಿಯಾಗುವುದು. ಒಂದೇ ಬಾರಿ ತಳಕೂರಿಸಿ ಒಣಗಿಸಿದಲ್ಲಿ ಶುಭ್ರ ಬಿಳಿ ಬರದು.
ಬಿಳಿ ಬಣ್ಣಕ್ಕಿಳಿಯಬೇಕಾದಲ್ಲಿ ಅನೇಕ ಸಾರಿ ತೊಳೆದು ಸೋಸಬೇಕು.
ಕೂವೆಯ ಹಿರಿಮೆ ಯನ್ನು ಮತ್ತೂ ಹಿರಿದಾಗಿಸಿದ ಸಂಪಾದಕಿಯವರಿಗೆ ಧನ್ಯವಾದಗಳು
ಮಾಹಿತಿಪೂರ್ಣ ಬರಹ.
ದೇಹಕ್ಕೆ ಉಷ್ಣ ಆದಾಗೆಲ್ಲ ಅಮ್ಮ ಮಾಡಿಕೊಡುವ ಕೂವೆ ಪಾನಕ(?) ಸವಿದು ಗೊತ್ತಿತ್ತಷ್ಟೆ, ನಿಮ್ಮ ಲೇಖನ ಕೂವೆ ಬಗ್ಗೆ ಸಮಗ್ರ ಮಾಹಿತಿ ಕೊಟ್ಟಿದೆ. ಪ್ರತಿಕ್ರಿಯೆಗಳೂ ಲೇಖನಕ್ಕೆ ಇನ್ನಷ್ಟು ವಿಷಯಗಳನ್ನು ಸೇರಿಸಿವೆ. ಕೂವೆ ಒಂದೇ ಮಲಬದ್ಧತೆ ಹಾಗೂ ಭೇದಿ ಎರಡಕ್ಕೂ ಔಷಧಿ ಆಗಿರುವುದು ಅಚ್ಚರಿಯ ಸಂಗತಿ! ಸಂಗ್ರಹಯೋಗ್ಯ ಲೇಖನಕ್ಕೆ ಧನ್ಯವಾದಗಳು.
ಉತ್ತಮ ಲೇಖನ..ಹಿಂದೆ ತೋಟದಲ್ಲಿ ಬೆಳೆಯುತ್ತಿದ್ದ ಕೂವೆ ಗಿಡಗಳ ನೆನಪಾಯಿತು…