ಗಡಿಯಾಚೆಯ ರಾಜ್ಯೋತ್ಸವ…

Share Button

Nagesh Mysoreನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು ತಲೆಯೆತ್ತಿ ಮೇಲೆ ನೋಡಿದರೆ ಅರೆ! ವಿಶಾಲ ಕರ್ನಾಟಕದ ಹೆಮ್ಮೆಯ ಹಳದಿ ಕೆಂಪಿನ ಬಣ್ಣದ ಕನ್ನಡ ಬಾವುಟ..! ಗಾಳಿಯಲ್ಲಿ ಬಿಚ್ಚಿಕೊಂಡು ಪಟಪಟನೆ ಹಾರಾಡುತ್ತ ಲಯಬದ್ದವಾಗಿ ನಲಿಯುತ್ತಿದ್ದ ರೀತಿಗೆ ಸಾಕ್ಷಾತ್ ಕನ್ನಡ ರಾಜರಾಜೇಶ್ವರಿಯೆ ಖುಷಿಯಿಂದ ನಲಿದಿರುವಂತೆ ಭಾಸವಾಯ್ತು. ಆ ಖುಷಿ ತಂದ ಹೆಮ್ಮೆಯ ಎದೆ ತುಂಬಿದ ಭಾವಕ್ಕೆ ಉಕ್ಕಿ ಜಾಗೃತವಾದ ಕನ್ನಡಾಭಿಮಾನ ನನಗರಿವಿಲ್ಲದ ಹಾಗೆ ಒಂದು ‘ಸೆಲ್ಯೂಟ್’ ಆಗಿ ಬದಲಾಗುತ್ತಿದ್ದಂತೆ ದೂರದಿಂದ ಕೇಳಿಸಿತ್ತು ಪರಿಚಿತ ದನಿಯೊಂದು..

” ಏನ್ ಸಾರ್.. ಕನ್ನಡಾಂಬೆಗೆ ಸಾಫ್ ಸೀದಾ ಸಲಾಮ್ ಮಾಡ್ತಾ ಇದೀರಾ ? ಕನ್ನಡ ರಾಜ್ಯೋತ್ಸವ ಅಂತ ನಿಮಗೂ ನೆನಪಿಗೆ ಬಂದು ಬಿಟ್ಟಿತಾ? ” ಎಂದ ಅರ್ಧ ಕನ್ನಡ ಮಿಕ್ಕರ್ಧ ನಾನ್-ಕನ್ನಡ ಬೆರೆತ ದನಿ ಕೇಳಿಸಿತು. ಬೆಂಗಳೂರಿನಲ್ಲಿ ತುಂಬಿಕೊಂಡಿರುವ ಕನ್ನಡಾ-ನಾನ್ ಕನ್ನಡ ಜನರ ಹಾಗೆ, ಎಲ್ಲಾ ಅರ್ಧಂಬರ್ಧ ಭಾಷೆ ಬೆರೆಸಿ ಕಲಸು ಮೇಲೋಗರ ಮಾಡಿ, ಕಾಕ್ ಟೈಲ್ ಮಾಡಿ ಹೇಳಬೇಕೆಂದರೆ ಅದು ಗುಬ್ಬಣ್ಣನೆ ಇರಬೇಕು ಅನಿಸಿತು. ಯಾಕೆಂದರೆ ನಾನು ಹಿಂದೊಮ್ಮೆ ಮಾತನಾಡುತ್ತ ‘ನನ್ನ ಮಗ ಸಿಂಗಪುರದಲ್ಲೆ ಬಟ್ಲರು ಕನ್ನಡ ಕಲಿಯುತ್ತಿದ್ದಾನೆ’ ಎಂದಿದ್ದಕ್ಕೆ, ನನ್ನ ಮಾತನ್ನು ತಿದ್ದಿದ ಗುಬ್ಬಣ್ಣ ‘ಅದು ಬಟ್ಲರು ಕನ್ನಡ ಅಲ್ಲಾ ಸಾರ್.. ಬೆಂಗಳೂರು ಕನ್ನಡಾ ಅನ್ನಿ..’ ಎಂದು ಜ್ಞಾನೋದಯ ಮಾಡಿಸಿದ್ದ. ನಾನು ಏನೂ ಅರ್ಥವಾಗದೆ ಮಿಕಮಿಕ ಕಣ್ಣಾಡಿಸಿದ್ದನ್ನು ನೋಡಿ,

“ಯಾಕ್ ಸಾರ್.. ಕಣ್ಕಣ್ಣು ಬಿಡ್ತೀರಾ ? ನಾನ್ ಮಾತಾಡೋ ಕನ್ನಡಾ ನೋಡಿದ್ರೆ ಗೊತ್ತಾಗಲ್ವಾ? ಬಟ್ಲರು ಕನ್ನಡಕ್ಕು ಬೆಂಗಳೂರು ಕನ್ನಡಕ್ಕೂ ಇರೊ ವ್ಯತ್ಯಾಸ? ಹೋಗ್ಲಿ ಬೆಂಗಳೂರು ವಿಷಯ ಬಿಡಿ ಸಾರು.. ಪರದೇಶದಲ್ಲಾಡೊ ಕನ್ನಡ ತಾನೆ ಏನು ಕಮ್ಮಿ ಅಂತಿರ ? ಅದಕ್ಕೆ ತಾನೆ ಅದನ್ನ ‘ಪರದೇಶಿ ಕನ್ನಡ’ ಅನ್ನೋದು…?” ಎನ್ನುತ್ತ ಹತ್ತಿರಕ್ಕೆ ಬಂದಾ ಗುಬ್ಬಣ್ಣ.

” ಸಾಕ್ ಸುಮ್ನಿರೊ ಗುಬ್ಬಣ್ಣ.. ಹಾಗೆಲ್ಲ ಹೊರನಾಡು, ಹೊರದೇಶದ ಕನ್ನಡಿಗರ ಬಗ್ಗೆ ಕಳಪೆ ಮಾತಾಡಬೇಡ.. ಹಾಗೆ ಉದಾಹರಣೆಗೆ ನೋಡೊದಾದ್ರೆ ನಮ್ಮ ಸಿಂಗಪುರದ ಕನ್ನಡಿಗರ ಕನ್ನಡಾಭಿಮಾನನೆ ನಾಡಿನ ಅಚ್ಚಗನ್ನಡಿಗರ ಅಭಿಮಾನಕ್ಕಿಂತ ಒಂದು ತೂಕ ಜಾಸ್ತಿ, ಗೊತ್ತಾ? ಊರು ದೇಶ ಬಿಟ್ಟು ಹೊರಗೆ ಬಂದಿದ್ರೂ ನಮ್ಮ, ನಾಡು, ನಮ್ಮ ಭಾಷೆ, ನಮ್ಮೂರು, ನಮ್ಮ ಜನ ಅಂತಾ ಒದ್ದಾಡ್ತಾ ರಾಜ್ಯೋತ್ಸವ, ದೀಪಾವಳಿ ಅಂತೆಲ್ಲ ಹಬ್ಬ ಮಾಡ್ಕೊಂಡು ಕನ್ನಡಾಭಿಮಾನ ತೋರಿಸ್ತಾರೆ ಗೊತ್ತಾ? ಅಷ್ಟೇ ಯಾಕೆ ಸಿಂಗನ್ನಡಿಗ ಎಂದ್ರೆ ‘ಸಿಂಹ – ಕನ್ನಡಿಗ’ ಅರ್ಥಾತ್ ಸಿಂಹದೆದೆಯ ಕನ್ನಡಿಗರು ಅಂತರ್ಥ ಗೊತ್ತಾ? ” ಎಂದೆ, ಅವನನ್ನೆ ಲೇವಡಿ ಮಾಡುತ್ತ.

Kannada-flag

” ಏನ್ ಸಿಂಗವೊ, ಏನೊ ಬಿಡಿ ಸಾರ್.. ನೀವು ಹೇಳಿದ ಹಾಗೆ ‘ಕನ್ನಡ ಕಲಿ’, ‘ಬನ್ನಿ ಮಾತಾಡೋಣ’ ಅಂತೆಲ್ಲ ಕನ್ನಡದ ಬಗ್ಗೆ ಏನಾದ್ರೂ ಮಾಡ್ತಾನೆ ಇರ್ತಾರೆ ಅನ್ನೋದು ನಿಜವೆ.. ಆದ್ರೆ ನಾನು ಈ ಮಾತು ಹೇಳೋಕ್ ಒಂದು ಕಾರಣ ಇದೆ ಸಾರ್..” ಬಡಪೆಟ್ಟಿಗೆ ಬಗ್ಗದವನಂತೆ ತನ್ನ ಪಟ್ಟು ಹಿಡಿದೆ ನುಡಿದ ಗುಬ್ಬಣ್ಣ.

” ಏನಪ್ಪಾ ಅಂತಾ ಮಹಾನ್ ಕಾರಣ…? ಈ ತರ ಪ್ರೋಗ್ರಾಮ್ಸ್ ಇನ್ಯಾವ್ ದೇಶದ ಕನ್ನಡ ಸಂಘದವರು ಅರೆಂಜ್ ಮಾಡ್ತಾರೆ ತೋರ್ಸು ನೋಡೋಣ..? ದುನಿಯಾದಲ್ಲೆ ಯುನಿಕ್ಕೂ ಗೊತ್ತಾ ಈ ಪ್ರೋಗ್ರಾಮು..?” ”

” ಅದು ಮಾತ್ರ ‘ಏಕ್ ಮಾರ್.. ದೋ ತುಕಡಾ’ ತರ ಮಾತು ಬಿಲ್ಕುಲ್ ನಿಜ ಬಿಡಿ ಸಾರ್.. ಆದರೆ ನಾನು ಹೇಳೋಕೆ ಹೊರಟಿದ್ದು ಮತ್ತೊಂದು ವಿಷಯ..”

” ಅದೇನಪ್ಪಾ ಅಂಥಾ ವಿಷಯ ?”

” ಸಾರ್ ಹೀಗೆ ಮೊನ್ನೆ ನಮ್ ಏರಿಯಾದಲ್ಲಿದ್ದ ಕನ್ನಡ ಮಾತಾಡೊ ಫ್ಯಾಮಿಲಿಗಳ್ದೆಲ್ಲ ಒಂದು ‘ಗೆಟ್ ಟುಗೆದರ್’ ಪ್ರೋಗ್ರಾಮ್ ಅಟೆಂಡ್ ಮಾಡೋಕೆ ಹೋಗಿದ್ದೆ ಸಾರ್..”

“ಸರೀ..? ಹೋಗಿ ಕನ್ನಡ ಪ್ರಾಕ್ಟೀಸ್ ಮಾಡ್ಕೊಳಕ್ ಅದು ಪರ್ಫೆಕ್ಟ್ ಛಾನ್ಸ್ ಅಲ್ವಾ..? ”

” ನಾನು ಹಾಗೇ ಅನ್ಕೊಂಡು ಪ್ರೋಗ್ರಾಮ್ಗೇನೊ ಹೋದೆ ಸಾರ.. ಹೋದದ್ದಕ್ಕೆ ಸರಿಯಾಗಿ ಒಳ್ಳೆ ತಿಂಡಿ, ಕಾಫಿ, ಸ್ವೀಟು ಎಲ್ಲಾನು ಬೊಂಬೊಟಾಗೆ ಅರೇಂಜ್ ಮಾಡಿದ್ರೂನ್ನಿ..” ಆ ತಿಂಡಿ ತೀರ್ಥಗಳಲ್ಲೆ ಅರ್ಧ ಹೋದ ಕೆಲಸ ಆದಂತೆ ಎನ್ನುವವನಂತೆ ರಾಗವೆಳೆದ ಗುಬ್ಬಣ್ಣ.

” ಅಯ್ಯೊ..ಇನ್ನೇನ್ ಮತ್ತೆ ? ತಿಂಡೀನು ಅರೆಂಜ್ ಮಾಡಿದ್ರೂ ಅಂದ್ಮೇಲೆ ನಿನ್ನದಿನ್ನೇನಪ್ಪ ಕಂಪ್ಲೈಂಟೂ..?”

” ಅದೇ ಸಾರ್.. ಬೇಜಾರು ಆಗಿದ್ದು..ತಿಂದು ಮುಗಿಸಿ ಎಲ್ಲಾ ಸ್ವಲ್ಪ ಕನ್ನಡದಲ್ಲಿ ಮಾತಾಡ್ತಾರೆ, ಆನಂದವಾಗಿ ಕೇಳೋಣ ಅಂದ್ರೆ – ಶುರುಲೇನೊ ಎಲ್ಲಾ ‘ನಮಸ್ಕಾರಾ, ಚೆನ್ನಾಗಿದೀರಾ? ‘ ಅಂತ್ಲೆ ಶುರು ಹಚ್ಕೊಂಡ್ರು..”

“ಮತ್ತೆ?”

” ಮತ್ತಿನ್ನೇನು ? ಒಂದೆರಡು ವಾಕ್ಯ ಆಡೋಕಿಲ್ಲ… ಇರೋ ಬರೊ ಕನ್ನಡವೆಲ್ಲ ಡ್ರೈ ಆದವರಂಗೆ ಎಲ್ಲಾ ಇಂಗ್ಲಿಷು, ಹಿಂದಿ, ಗಿಂದಿ ಅಂತ ‘ವಾಟ್ ಯಾರ್ ? ಯೂ ನೋ ವಾಟ್?’ ಅಂತೆಲ್ಲಾ ಏನೇನೊ ವರ್ಶನ್ ಶುರು ಮಾಡಿಬಿಡೋದಾ? ನನಗೆ ಅದನ್ನು ನೋಡಿ ಯಾವ ಕನ್ನಡ ಅಂತ ಹೇಳ್ಬೇಕೂಂತ್ಲೆ ಗೊತ್ತಾಗ್ಲಿಲ್ಲ.. ಅದಕ್ಕೇನು ಬಟ್ಲರ ಕನ್ನಡಾ ಅನ್ಬೇಕೊ, ಬೆಂಗ್ಳೂರು ಕನ್ನಡ ಅನ್ಬೇಕೊ, ಪರದೇಶಿ ಕನ್ನಡ ಅನ್ಬೇಕೊ ಗೊತ್ತಾಗದೆ ಕನ್ಫ್ಯೂಸ್ ಆಗಿ ಪುಲ್ ಡೌಟಾಗೋಯ್ತು ಸಾರ್..” ಎನ್ನುತ್ತಲೆ ತನ್ನ ಕನ್ನಡಾಂಗ್ಲ ಭಾಷಾ ಸಾಮರ್ಥ್ಯವನ್ನು ತನ್ನರಿವಿಲ್ಲದವನಂತೆ ಬಿಚ್ಚಿಕೊಂಡ ಗುಬ್ಬಣ್ಣ..

ನಾನು ಒಂದು ನಿಮಿಷ ಮಾತಾಡಲಿಲ್ಲ. ಗುಬ್ಬಣ್ಣ ಹೇಳೊದರಲ್ಲೂ ಸ್ವಲ್ಪ ಸತ್ಯವೇನೊ ಇದೆ ಅನಿಸಿದರು, ಅದು ಬರಿ ‘ಅರ್ಧಸತ್ಯ’ ಮಾತ್ರ ಅನಿಸಿತು..

“ಗುಬ್ಬಣ್ಣ.. ಈ ವಿಷಯದಲ್ಲಿ ಮಾತ್ರ ನೀನು ಹೇಳೋದು ಪೂರ್ತೀ ನಿಜವಲ್ಲಾ ಬಿಡೋ.. ವಿದೇಶಗಳಲ್ಲಿರೊ ಜನರೆಲ್ಲಾ ವರ್ಷಾನುಗಟ್ಲೆಯಿಂದ ಊರು, ಕೇರಿ, ದೇಶ ಬಿಟ್ಟು ಬಂದು ಸೇರ್ಕೊಂಡಿರೋರು ತಾನೆ?”

” ಹೌದು..?”

” ಅಂದ್ಮೇಲೆ.. ಅವರ ಮಕ್ಕಳು ಮರಿಯೆಲ್ಲ ಇಲ್ಲೆ ಹುಟ್ಟಿ, ಇಲ್ಲೆ ಬೆಳೆದು, ಇಲ್ಲೆ ಸ್ಕೂಲಿಗೆ ಹೋಗ್ತಾ ಇರ್ತಾರೆ ತಾನೆ ?”

” ನಾನು ಇಲ್ಲಾಂದ್ನಾ ಸಾರ್..?”

” ಅಂದ್ಮೇಲೆ ಅವರೆಲ್ಲ ಊರಲ್ಲಿರೋರ ತರ ಕನ್ನಡ ಕಲಿಯೋಕಾಗ್ಲಿ, ಮಾತಾಡೋಕಾಗ್ಲಿ ಆಗುತ್ತಾ ಗುಬ್ಬಣ್ಣಾ..?”

” ಇಲ್ಲಾ ಅನ್ನೋದೇನೊ ನಿಜಾ ಸಾರ್.. ಆದ್ರೆ ಊರಲ್ಲಿರೋರು ಏನು ಕಮ್ಮಿಯಿಲ್ಲಾ ಬಿಡಿ, ಟುಸುಪುಸ್ ಇಂಗ್ಲೀಷ್ ಬರ್ಲಿ ಅಂತ ಕಾನ್ವೆಂಟಿಗೆ ತಗೊಂಡು ಹೋಗಿ ಹಾಕ್ತಾರೆ.. ಅಲ್ ಕಲಿಯೊ ಕನ್ನಡಾನೂ ಅಷ್ಟರಲ್ಲೆ ಇದೆ..”

” ಅಲ್ಲಿ ಮಾತಿರ್ಲಿ..ಇಲ್ಲಿದನ್ನ ಕೇಳೊ ಗುಬ್ಬಣ್ಣಾ.. ಆ ಮಕ್ಕಳ ಜತೆ ಮಾತಾಡ್ಬೇಕಂದ್ರೆ ಇಂಗ್ಲೀಷಲ್ ತಾನೆ ಮಾತಾಡ್ಬೇಕು ? ಅವುಕ್ಕು ಎಲ್ಲಾ ಚೆನ್ನಾಗಿ ಅರ್ಥ ಆಗ್ಲೀ ಅಂತ ಗಂಡ ಹೆಂಡ್ತೀನು ಇಂಗ್ಲಿಷಲ್ಲೆ ಮಾತಾಡ್ಕೋಬೇಕು ಅಲ್ವಾ ?..”

“ಹೌದು ಸಾರ್..ಅದೇನೊ ನಿಜಾ..” ತನ್ನ ಮನೆಯ ಸ್ವಂತ ಅನುಭವವನ್ನೆ ನೆನೆಸಿಕೊಳ್ಳುತ್ತ ಅದನ್ನೆ ಮೆಲುಕು ಹಾಕುವವನಂತೆ ಕಣ್ಣು ಮಾಡಿ ನುಡಿದ ಗುಬ್ಬಣ್ಣಾ.

” ಅಂದ್ಮೇಲೆ..ದಿನಾ ಆಡಿ ಆಡಿ ಪ್ರಾಕ್ಟೀಸ್ ಇರದ ಭಾಷೇನಾ ಯಾವಾಗಲೊ ಪ್ರೋಗ್ರಾಮ್, ಮೀಟಿಂಗಲ್ಲಿ ಹುಣ್ಣಿಮೆ ಅಮಾವಾಸೆಗೊಂದ್ಸಲ ಸೇರ್ಕೊಂಡಾಗ ಫ್ಲೂಯೆಂಟಾಗಿ ಆಡೋಕ್ ಆಗ್ಬಿಡುತ್ತಾ? ಬೀ ರೀಸನಬಲ್ ಗುಬ್ಬಣ್ಣಾ.. ಈ ತರ ಫಂಕ್ಷನ್ ಗೆ ಬಂದು ಹೋಗಿ ಮಾಡಿ ಅಭ್ಯಾಸ ಆದ್ರೆ ತಾನೆ ಸ್ವಲ್ಪ ಭಾಷೆ ಬಳಸೋಕ್ ಛಾನ್ಸ್ ಸಿಗೋದು..?” ಎಂದೆ ಅಂತಹ ಕನ್ನಡಿಗರ ಬಗೆ ಕಾಳಜಿಯುತ ‘ಸಿಂಪಥಿ’ ತೋರಿಸುತ್ತಾ..

” ನೀವು ಹೇಳಿದ್ದೆ ನಿಜವಾಗಿದ್ರೆ ಅಡ್ಡಿಯಿಲ್ಲ ಸಾರ್.. ಆದ್ರೆ ಸುಮಾರು ಜನಕ್ಕೆ ಕನ್ನಡ ಕಲಿಯೊ ಇಂಟ್ರೆಸ್ಟೆ ಇಲ್ಲಾ ಸಾರ್..ಕೆಲವರಿಗಂತೂ ಕಲಿಯೋದು ಅಂದ್ರೆ ಕೇವಲ… ಕಲ್ತೇನುಪಯೋಗ ? ಇಂಗ್ಲೀಷಾದ್ರೆ ಎಲ್ಲಾ ಕಡೆ ಕೆಲಸಕ್ಕೆ ಬರುತ್ತೆ ಅಂತಾರೆ..”

” ಇಲ್ಲಾ ಗುಬ್ಬಣ್ಣ ಅಂತಾ ಫೀಲಿಂಗ್ ಇರೋರು ಬೆಂಗಳೂರಂಥಾ ಕಡೆ ಇರ್ಬೋದೇನೊ.. ಆದ್ರೆ ಇಲ್ಲಿ ಕಲೀಬೇಕೂಂತ, ಕಲಿಸಬೇಕೂಂತ ಜಿನೈನ್ ಇಂಟ್ರೆಸ್ಟ್ ಇರೋರೆ ಜಾಸ್ತಿ.. ಅವರ ಪ್ರಯತ್ನನೂ ಫಲ ಕೊಡಕೆ ಟೈಮ್ ಹಿಡಿಯುತ್ತೆ ಗುಬ್ಬಣ್ಣ, ಇಂಥ ವಾತಾವರಣದಲ್ಲೂ ಹೆಣಗಾಡ್ಕೊಂಡು ಅಷ್ಟಿಷ್ಟು ಉಳಿಸಿ ಬೆಳೆಸೋಕ್ ನೋಡ್ತಾರಲ್ಲ, ಅದು ದೊಡ್ಡದು ಅಲ್ವಾ ?.”

ಯಾಕೊ ಗುಬ್ಬಣ್ಣನಿಗೆ ನಾನು ಹೇಳಿದ್ದು ನಂಬಿಕೆ ಬಂದಂತೆ ಕಾಣಲಿಲ್ಲ..

” ನೀವೇನೊ ಹಾಗಂತಿರಾಂತ ನಾನು ನಂಬ್ತೀನಿ ಅಂತ್ಲೆ ಇಟ್ಕೊಳ್ಳಿ ಸಾರ್.. ಆದ್ರೆ ಅದು ನಿಜಾ ಅನ್ನೋಕೆ ಸಾಕ್ಷಿ ಬೇಕಲ್ಲಾ ? ಇಂಥಾ ಕಡೆ ಪ್ರೋಗ್ರಾಮಲ್ಲಿ ಸೇರಿ ಮಾತಾಡ್ದಾಗ ತಾನೆ ಉಳಿಸಿ, ಬೆಳೆಸೊ ಅವಕಾಶ ಆಗೋದು? ದೊಡ್ಡವರ ಕಥೆಯೆ ಹೀಗಾದ್ರೆ, ಇನ್ನು ಮಕ್ಕಳ ಕಥೆಯಂತೂ ಹೇಳೊ ಹಾಗೆ ಇಲ್ಲಾ…. ಈಗಲೆ ಹೀಗಾದ್ರೆ ಇನ್ನು ಮುಂದಕ್ಕೆ ದೇವರೆ ಗತಿ!” ಎಂದ.

” ಗುಬ್ಬಣ್ಣಾ.. ನೀನು ಅಷ್ಟೊಂದು ಡಿಸಪಾಯಿಂಟ್ ಆಗ್ಬೇಡಾ.. ಇನ್ ಫ್ಯಾಕ್ಟ್ ಫೂಚರ್ ಜೆನರೇಶನ್ ಈಸ್ ಬೆಟರ್ ದೆನ್ ದಿ ಕರೆಂಟ್ ಗೊತ್ತಾ?”

” ಅದು ಹೇಗೆ ಹೇಳ್ತಿರಾ ಸಾರ್, ಅಷ್ಟು ಗ್ಯಾರಂಟಿಯಾಗಿ ?”

” ಈಗ ನನ್ ಮಗನ್ ಉದಾಹರಣೆ ತಗೊಂಡ್ ನೋಡೋಣ.. ನಾನು ಯಾವತ್ತು ಅವನಿಗೆ ಕನ್ನಡ ಕಲ್ತುಕೊ ಅಂತ ಬಲವಂತ ಮಾಡ್ದೋನೆ ಅಲ್ಲಾ..ಅವನೇನ್ ಮಾಡ್ತಾ ಇದಾನೆ ಗೊತ್ತಾ?”

” ಏನ್ ಮಾಡ್ತಾ ಇದಾನೆ?”

“ಇದ್ದಕ್ಕಿದ್ದಂಗೆ ಅವ್ನೆ ಕನ್ನಡ ಕಲಿಯೋಕ್ ಶುರು ಮಾಡ್ಕೊಂಡ್ಬಿಟ್ಟಿದಾನೆ..!”

” ಆಹ್..?”

” ಹೂ ಗುಬ್ಬಣ್ಣ.. ಸಾಲದ್ದಕ್ಕೆ ಈಗ ಸಿಕ್ಸಿಕ್ಕಿದ್ದಕ್ಕೆಲ್ಲ ಕನ್ನಡದಲ್ಲಿ ಅರ್ಥ ಹುಡುಕಿ ಹೇಳೊ ಅಭ್ಯಾಸ ಬೇರೆ ಶುರುವಾಗ್ಬಿಟ್ಟಿದೆ…”

” ಅಂದ್ರೆ?”

” ಅವನಿಗೆ ಬಟರ್ ಚಿಕನ್ ಅಂದ್ರೆ ಪಂಚ ಪ್ರಾಣ ಅಂತಾ ಗೊತ್ತಲ್ಲ್ವಾ?”

“ಹೂಂ..ಗೊತ್ತೂ”

” ಈಗ ಅವನಿಗೆ ಬೇಕಾದಾಗೆಲ್ಲ ಬಟರು ಚಿಕನ್ನು ಅಂತಿದ್ದೊನು, ಈಗ ಇದ್ದಕ್ಕಿದ್ದ ಹಾಗೆ ‘ಬೆಣ್ಣೆ ಕೋಳಿ” ಅಂತ ಶುರು ಮಾಡ್ಕೊಂಡಿದಾನೆ..!”

” ಬಟರ್ ಚಿಕನ್ನಿಗೆ, ಬೆಣ್ಣೆ ಕೋಳಿನಾ ?!”

” ಅಷ್ಟು ಮಾತ್ರವಲ್ಲ ..ಆಡೊ ಪ್ರತಿಯೊಂದು ಪದಕ್ಕು ಕನ್ನಡ ಪದ ಯಾವುದು ಅಂತ ತಲೆ ತಿನ್ನೋಕ್ ಶುರು ಮಾಡ್ಬಿಟ್ಟಿದ್ದಾನೆ.. ಫ್ರೈಯ್ಡ್ ರೈಸಿಗೆ ಹುರಿದನ್ನ ಅಂತೆ, ಬ್ರೇಕ್ಫಾಸ್ಟಿಗೆ ಮುರಿದ ಉಪವಾಸ – ಅಂತೆಲ್ಲ ಶುರು ಮಾಡ್ಕೊಂಡಿದಾನೆ..”

“ಶಿವ..ಶಿವಾ..”

” ಅವನ್ ಆಡಿದ್ ಸರಿಯೊ ತಪ್ಪೊ, ಆದ್ರೆ ನಮಗಿಂತ ಜಾಸ್ತಿ ಕನ್ನಡ ಪ್ರಜ್ಞೆ ಅವನಿಗಿದೆಂತಾ ಖುಷಿ ಪಡ್ಬೇಕು.. ನೆಕ್ಸ್ಟ್ ಜೆನರೇಷನ್ ನಾವು ಅನ್ಕೊಂಡಷ್ಟು ಗಬ್ಬೆದ್ದೋಗಿಲ್ಲ ಬಿಡೊ..ಗುಬ್ಬಣ ್ಣ” ಎನ್ನುತ್ತಲೆ ಮಾತಿನ ಟ್ರಾಕ್ ಮುಗಿಸಿ, ” ಅದಿರ್ಲಿ ಗುಬ್ಬಣ್ಣಾ.. ನೀನೇನು ಇಲ್ಲಿ.. ಇದ್ಯಾವ ಜಾಗಾಂತನೂ ಗೊತ್ತಿಲ್ಲ… ನೀನ್ಯಾವಾಗ ಬಂದೆ..?” ಎಂದೆ.

” ಅಯ್ಯೋ ಬಿಡಿ ಸಾರ್.. ನಾನು ಡ್ಯೂಟಿ ಮೇಲೆ ಬಂದಿದೀನಿ.. ಬಂದಿದ್ದುಕ್ ಸರಿಯಾಗಿ ಸ್ವಾಮಿ ಕಾರ್ಯಾನು ಆಯ್ತು, ಸ್ವಕಾರ್ಯಾನು ಆಯ್ತು..ಇಲ್ಲೆ ಫಸ್ಟ್ ಕ್ಲಾಸಾಗಿ ರಾಜ್ಯೋತ್ಸವ ಸೆಲೆಬ್ರೇಷನ್ನು ಆಯ್ತು.. ಬರೋದ್ ಬಂದ್ರಿ..ಒಂದರ್ಧ ಗಂಟೆ ಮೊದಲೆ ಬರೋದಲ್ವಾ?.. ಎಲ್ಲಾ ರಾಜ್ಯೋತ್ಸವದ ಬಾವುಟ ಹಾರಿಸಿ, ನಿತ್ಯೋತ್ಸವ, ಜಯ ಕರ್ನಾಟಕ ಮಾತೆಗಳನ್ನೆಲ್ಲಾ ಹಾಡಿ ಸ್ವೀಟ್ ಹಂಚಿಬಿಟ್ ಹೋದ್ಮೇಲೆ ಬಂದಿದೀರಲ್ಲಾ ? ಮೊದಲೆ ಬಂದಿದ್ರೆ ಎಲ್ಲಾ ಸುಪರ್ ಸ್ಟಾರ್ ಗೆಸ್ಟುಗಳನ್ನೆಲ್ಲಾ ನೋಡ್ಬೋದಾಗಿತ್ತು..”

“ಹೌದಾ.. ಯಾರಾರು ಬಂದಿದ್ರೊ ಗುಬ್ಬಣ್ಣಾ? ಮೊದ್ಲೆ ಹೇಳ್ಬಾರದಾಗಿತ್ತ.. ನಾನು ಬರ್ತಿದ್ದ ಟೈಮ್ ಅಡ್ಜಸ್ಟ್ ಮಾಡ್ಕೊಂಡ್ ಬರ್ತಿದ್ದೆ… ಹೇಳ್ದೆ ಕೇಳ್ದೆ ಬನ್ಬಿಟ್ಟು ಈಗ ನನಗೆ ಕಿಚಾಯಿಸ್ತಿಯಲ್ಲಾ?”

” ನಾನೇನ್ ಮಾಡ್ಲಿ ಸಾರ್..? ಇದು ಅಫಿಶಿಯಲ್ ಪ್ರಾಜೆಕ್ಟ್ ಕೆಲಸ.. ವರ್ಷ ವರ್ಷ ರಾಜ್ಯೋತ್ಸವದ ಆಚರಣೆ ಆಗೋದು ಆಟೋಮ್ಯಾಟಿಕ್ಕಾಗಿ ನಡೆಯೊ ತರಹ ಒಂದು ಸಾಫ್ಟ್ ವೇರ್ ಇಂಪ್ಲಿಮೆಂಟ್ ಮಾಡೋಕೆ ಆರ್ಡರು ಬಂದಿತ್ತು ಈ ಕಂಪನೀದು.. ಅದಕ್ಕೆ ಅಂತ ಬಂದ್ರೆ ಇಲ್ಲಿ ಸೆಲಬ್ರೇಟ್ ಮಾಡೋದು ಗೊತ್ತಾಯ್ತು.. ಎಲ್ಲಾರನ್ನ ಮೀಟ್ ಮಾಡೊ ಛಾನ್ಸ್ ಸಿಕ್ಕಿತು..”

” ಅದೇನು ಗುಬ್ಬಣ್ಣಾ, ಆಚರಣೇನಾ ಅಟೋಮೇಟ್ ಮಾಡೋಕ್ ಹೊರಟಿರೋದು ನಮ್ ರಾಜ್ಯ ಸರ್ಕಾರಾನಾ? ಅಂದ್ಮೇಲೆ ದೊಡ್ಡ ಪ್ರಾಜೆಕ್ಟೆ ಅಲ್ವಾ? ಎಲ್ಲಾ ದೊಡ್ಡ ದೊಡ್ಡ ಹೆಸರುಗಳೇ ಬಂದಿರಬೇಕಲ್ಲಾ?”

ಅದನ್ನು ಕೇಳಿ ಪಕಪಕ ನಕ್ಕ ಗುಬ್ಬಣ್ಣ, ” ಅಯ್ಯೊ ಬಿಡೀ ಸಾರ್..ನಮ್ಮ ಸರ್ಕಾರದವರೆಲ್ಲ ಕನ್ನಡಕ್ಕೋಸ್ಕರ ಇಷ್ಟೆಲ್ಲಾ ಮಾಡ್ತಾರ..? ಅದೂ ಇಲ್ಲಿಗೆ ಬಂದ್ ಸೇರ್ಕೊಂಡಿರೊ ಮಹಾನುಭಾವರ ದಯೆಯಿಂದ ಏನೊ ಅಷ್ಟೊ ಇಷ್ಟೊ ನಡೀತಾ ಇದೆ ಇಲ್ಲೂನುವೆ ಅಷ್ಟೆ..”

” ಏನು ಬರಿ ಒಗಟಲ್ಲೆ ಮಾತಾಡ್ತಿಯಲ್ಲೊ ಗುಬ್ಬಣ್ಣಾ..? ಹೋಗ್ಲೀ ಅದ್ಯಾವ ಕಂಪನಿ, ಅದ್ಯಾವ ಮಹಾನುಭಾವರು ಬಂದಿದ್ದವರು ಅಂತ ಹೇಳೊ..?”

” ಬೇರೆ ಯಾರಿಗೆ ಇಂತಹ ಶಕ್ತಿ, ಆಸಕ್ತಿ, ಶ್ರದ್ದೆ ಇರುತ್ತೆ ಸಾರ್? ಬಂದಿದ್ದವರೆಲ್ಲಾ ಮಹಾನ್ ಘಟಾನುಘಟಿಗಳೆ..ಕಂಪನಿ ಹೆಸರು ಅಮರಾವತಿ ಅಂಡ್ ಕೋ.., ಕೇರಾಫ್ ಸ್ವರ್ಗ ಲೋಕಾ ಸಾರ್.. ವರನಟ ಡಾಕ್ಟರ ರಾಜಕುಮಾರ್, ವಿಷ್ಣುವರ್ಧನ್, ನರಸಿಂಹರಾಜು, ಅಶ್ವಥ್, ಬಾಲಕೃಷ್ಣ, ನಾಗೇಂದ್ರರಾಯರು, ಬಿ.ಆರ್. ಪಂತುಲು, ಚಿ.ಉದಯಶಂಕರ್ ಹೀಗೆ ಸಾಲು ಸಾಲಾಗಿ ಇಡೀ ಕನ್ನಡ ಚಿತ್ರರಂಗವೆ ಬಂದು ಸೇರಿತ್ತು ಸಾರ್.. ಅವರೆಲ್ಲಾ ಲಾಬಿ ಮಾಡಿ ಕರ್ನಾಟಕದಲ್ಲಂತೂ ಕನ್ನಡಿಗರು ಸರಿಯಾಗಿ ರಾಜ್ಯೋತ್ಸವಾ ಮಾಡ್ತಾ ಇಲ್ಲಾ, ಇಲ್ಲಾದರು ಅದರ ಆಚರಣೆ ಆಗ್ಲೆ ಬೇಕೂಂತ ದೇವರಾಜ ಇಂದ್ರನ ಹತ್ತಿರ ಹಠ ಹಿಡಿದು ಈ ಬಾವುಟ ಹಾರಿಸಿದಾರೆ ನೋಡಿ ಸಾರ್.. ಇದಲ್ಲವೆ ನಿಜವಾದ ಕನ್ನಡಾಭಿಮಾನ..?”

kannada flag

ನನಗೆ ಎಲ್ಲಿಲ್ಲದ ಹಾಗೆ ರೇಗಿಹೋಯ್ತು.. ‘ಬೆಳಬೆಳಗ್ಗೆಯೆ ಎದ್ದು ನನಗೆ ಓಳು ಬಿಡುತ್ತಿದ್ದಾನಲ್ಲಾ?’ ಎಂದು. ಅದೂ ಎಲ್ಲಾ ಬಿಟ್ಟು ನನ್ನ ಕಿವಿಗೆ ಹೂ ಇಡಲು ಬರುತ್ತಿದ್ದಾನಲ್ಲಾ ಅಂತ ಭಾರಿ ಕೋಪವೂ ಬಂತು.. ನನ್ನನ್ನೇನು ಗುಗ್ಗು, ಬುದ್ಧು ಅಂದುಕೊಂಡು ಏಮಾರಿಸುತ್ತಿದ್ದಾನ? ಅನಿಸಿ ಅದೇ ಕೋಪದಲ್ಲಿ “ಗುಬ್ಬಣ್ಣಾ..” ಎಂದು ಜೋರಾಗಿ ಅರಚಿ ಅವನತ್ತ ಬಲವಾಗಿ ಕೈ ಬೀಸಿದೆ. ಅಪಘಾತದ ಮುನ್ನೆಚ್ಚರಿಕೆ ಸಿಕ್ಕಿ ತಟ್ಟಕ್ಕನೆ ಪಕ್ಕಕ್ಕೆ ಸರಿದು ಬಚಾವಾಗಲಿಕ್ಕೆ ಯತ್ನಿಸಿದ ಗುಬ್ಬಣ್ಣ.. ಅದೇನು ಯಶಸ್ವಿಯಾಯಿತೊ ಇಲ್ಲವೊ ‘ಫಳೀರ್’ ಎಂದ ಸದ್ದು ಮಾತ್ರ ಕೇಳಿಸಿತು..ಜತೆಗೆ ಹೊಡೆದ ರಭಸಕ್ಕೊ ಏನೊ ಹೈ ವೋಲ್ಟೇಜ್ ಶಾಖ ಹುಟ್ಟಿಕೊಂಡಂತೆ ಏನೊ ಬಿಸಿ ಬಿಸಿ ಚೆಲ್ಲಿಕೊಂಡ ಭಾವ..

………………….

” ಥೂ ಏನ್ರೀ ಇದು… ಈಗ ತಾನೆ ಇಟ್ಟು ಹೋಗಿದ್ದ ಬಿಸಿ ಕಾಫೀನ ಒದ್ದು ಬೀಳಿಸಿದ್ದು ಅಲ್ದೆ ಇಡೀ ರಗ್ಗಿನ ಮೇಲೆಲ್ಲಾ ಚೆಲ್ಲಿಕೊಂಡಿದ್ದಿರಲ್ಲಾ..? ನಿಮಗೆ ಅದ್ಯಾವ ನಿದ್ದೆಗಣ್ಣೊ, ಅದ್ಯಾವ ಕನಸೊ? ಹಾಳು ರಾಜ್ಯೋತ್ಸವದ ದಿನವಾದರು ನೆಟ್ಟಗೆ ಎಳಬಾರದಾ” ಎನ್ನುತ್ತ ಕೂಗುತ್ತಿದ್ದ ನನ್ನ ನೈಂಟಿ ಕೇಜಿ ತಾಜಮಹಲಿನ ದನಿ ಕಿವಿಗೆ ಬೀಳುತ್ತಿದ್ದಂತೆ ಬೆಚ್ಚಿ ಬಿದ್ದು ಮೇಲೆದ್ದು ಕುಳಿತೆ..

ಬಿಸಿ ಕಾಫಿ ಚೆಲ್ಲಿಕೊಂಡು ಇನ್ನು ಚುರುಗುಡುತ್ತಿದ್ದ ಕಾಲನ್ನು ಸವರಿಕೊಳ್ಳುತ್ತಾ, ” ಜೈ ಕರ್ನಾಟಕ ಮಾತೆ, ಜೈ ಭುವನೇಶ್ವರಿ, ಜೈ ಕನ್ನಡಾಂಬೆ” ಎನ್ನುತ್ತ ಮೇಲೆದ್ದು ನಡೆದೆ, ಕನಸಿನಲ್ಲು ಬಂದು ಕಾಡುವ ಗುಬ್ಬಣ್ಣ ಕೈಗೆ ಸಿಕ್ಕಿದರೆ ಹಾಗೆ ಸೀಳಿ ಹಾಕುವ ಕೋಪದಲ್ಲಿ…!

ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು…!

 

(2015, ನವೆಂಬರ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ ಸಿಂಚನದಲ್ಲಿ ಪ್ರಕಟಿತ)

 

 – ನಾಗೇಶ, ಮೈಸೂರು

 

6 Responses

  1. Hema says:

    ಹಾಸ್ಯ ಬರಹ ಚೆನ್ನಾಗಿದೆ 😀 ವಿದೇಶದಲ್ಲಿ ನೆಲೆಸಿದ್ದರೂ ಕನ್ನಡದೊಂದಿಗೆ ಆತ್ಮೀಯ ನಂಟನ್ನು ಹೊಂದಿರುವ ನಿಮಗೆ ಅಭಿನಂದನೆಗಳು.

    • ತಮ್ಮ ಮೆಚ್ಚುಗೆಗೆ ಮತ್ತು ಅಭಿನಂದನೆಗೆ ಧನ್ಯವಾದಗಳು ಹೇಮಾರವರೆ

      ಆದರೆ ಮೂಲತಃ ಇದರಲ್ಲಿ ಹೆಚ್ಚುಗಾರಿಕೆಯೇನು ಇಲ್ಲ..ದೇಶದಿಂದ ಹೊರಗಿದ್ದಾಗ ಹೆಚ್ಚಾಗಿ ಕಾಡುವ ಮೂಲ ತುಡಿತದ ಮಿಡಿತಕ್ಕೊಂದು ದಾರಿ ಬೇಕು ಅನಿಸಿದಾಗ ಕಂಡುಕೊಂಡಿದ್ದು ಈ ಮಾರ್ಗ – ಬ್ಲಾಗಿನ ಅವತಾರದಲ್ಲಿ. ಸುದೈವಕ್ಕೆ ಸ್ಮಾರ್ಟ್ಪೋನ್, ಪ್ಯಾಡುಗಳಂತಹ ಸಲಕರಣೆಗಳು ಒದಗಿಸಿದ ವೇದಿಕೆಗಳಿಂದ, ದೇಶದಿಂದ ಹೊರಗಿದ್ದರೂ ಈ ಹಾದಿಯಲ್ಲಿ ಮುನ್ನಡೆಯುವುದು ಸ್ವಲ್ಪ ಹೆಚ್ಚು ಸುಗಮವಾಗಿ, ಈಗ ದೈನಂದಿನದ ಅವಿಭಾಜ್ಯ ಅಂಗವೆ ಆಗಿಹೋಯ್ತು.. ಇನ್ನು ಸುರಗಿಯಂತಹ ವೇದಿಕೆಗಳ ದೆಸೆಯಿಂದ ಎಲ್ಲಕ್ಕು ಒಂದು ಅಭಿವ್ಯಕ್ತಿ ಮಾಧ್ಯಮವು ದೊರಕಿ, ನಂಟಿನ ಕೊಂಡಿ ಕಳಚಿಹೋಗದ ಹಾಗೆ ಒಂದು ಭದ್ರ ಸೇತುವೆ ನಿರ್ಮಾಣವಾದಂತಾಗಿದೆ. ಹೀಗಾಗಿ ಈಗ ಬರವಣಿಗೆಯೆ ಆಪ್ತ ಮಿತ್ರ ಎನ್ನುವ ಸನ್ನಿವೇಶ

      – ನಾಗೇಶ ಮೈಸೂರು

  2. Shruthi Sharma says:

    ಹ್ಹ ಹ್ಹ ಹ್ಹ..! ನಕ್ಕು ಹಗುರಾದೆ.. ಜೊತೆಗೆ ಉತ್ತಮ ಚಿಂತನೆಗೆ ಹಚ್ಚಿದ್ದೀರಾ.. 🙂

    • ಶ್ರುತಿ ಶರ್ಮರವರೆ, ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಅಂದ ಹಾಗೆ ಗುಬ್ಬಣ್ಣನನ್ನು ನಾನು 2013 ರಲ್ಲಿ ಸೃಜಿಸಿದ್ದು.. ಆಗ ಸುಮ್ಮನೆ ತಮಾಷೆಗೆಂದು ಬರೆದ ಮೊದಲ ಬರಹದ ಹಾಸ್ಯದ ಹರಟೆ ಸುಮಾರು ಓದುಗರಿಗೆ ಹಿಡಿಸಿದ್ದು ಕಂಡು ಆ ಸರಣಿಯನ್ನು ಹಾಗೆ ಮುಂದುವರೆಸಿಕೊಂಡು ಬಂದೆ. ಇದುವರೆಗು ಸುಮಾರು ಹತ್ತದಿನೈದು ಗುಬ್ಬಣ್ಣ ಪ್ರಹಸನಗಳು ಹೊರಬಂದಿವೆ. ಸುರಗಿ ಬಳಗದ ಓದುಗರಿಗೆ ಈ ತರದ ಹಾಸ್ಯ ಹಿಡಿಸುವುದೆಂದಾದರೆ, ಮಿಕ್ಕವನ್ನು ಒಂದೊಂದಾಗಿ ಸರಣಿಯ ರೂಪದಲ್ಲಿ ಕಳಿಸುತ್ತೇನೆ. ಬರಹಗಳು ಸ್ವಲ್ಪ ಉದ್ದವಾದರು ಹಾಸ್ಯದ ದೆಸೆಯಿಂದ ಓದಿಸಿಕೊಂಡು ಹೋಗುತ್ತವೆಂದು ನನ್ನ ಅನಿಸಿಕೆ.

      (ಅಂದ ಹಾಗೆ ತೀರ ಈಚೆಗೆ ಗುಬ್ಬಣ್ಣನ ಇನ್ನೊಂದು ಪ್ರಹಸನ ನಿಲುಮೆ.ನೆಟ್ ನಲ್ಲಿ ಪ್ರಕಟವಾಗಿದೆ – ಅದು ಈ ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ, ನೋಡಿ…
      http://nilume.net/2015/12/02/%e0%b2%85%e0%b2%b8%e0%b2%b9%e0%b2%bf%e0%b2%b7%e0%b3%8d%e0%b2%a3%e0%b3%81%e0%b2%a4%e0%b3%86-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%95%e0%b2%a5%e0%b3%86/ )

      ಧನ್ಯವಾದಗಳೊಂದಿಗೆ,
      ನಾಗೇಶ ಮೈಸೂರು

  3. Sneha Prasanna says:

    Utthama lekhana… Sogasaada nirupana… namma naadu nudi sada chandana… dhanyavaadagalu sir…

    • ನಮಸ್ಕಾರ ಮತ್ತು ಧನ್ಯವಾದಗಳು ಸ್ನೇಹ ಪ್ರಸನ್ನರವರೆ… ಕನ್ನಡದ ಮೋಡಿಯೆ ಅಂತಹದ್ದು ನೋಡಿ, ಓದಲು, ಕೇಳಲು, ಹಾಡಲು – ಎಲ್ಲಕ್ಕೂ ಚಂದ… ಗುಬ್ಬಣ್ಣನ ದೆಸೆಯಿಂದ ನನಗೂ ಸ್ವಲ್ಪ ಕನ್ನಡಮ್ಮನ ಸೇವೆ ಮಾಡುವ ಭಾಗ್ಯ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: