ಗಣೇಶನ ಹಬ್ಬದ ಭರ್ಜರಿ!

Share Button

Nagesh Mysore

ವರ್ಷಕೊಮ್ಮೆ ಅಮ್ಮನ ಜತೆ ತಪ್ಪದೆ ಬಂದು ಭೇಟಿಯಿತ್ತು ಹೋಗುವ ಗಣಪನೆಂದರೆ ನಮಗೆಲ್ಲ ಎಂತದೊ ಪ್ರೀತಿ. ಬೇರೆ ಹಬ್ಬಗಳಲ್ಲಿ ಬಂದು ಹೋಗುವ ನೂರೆಂಟು ದೇವರುಗಳಿಗು ಮಿಗಿಲಾದ ವಿಶೇಷ ಪ್ರೀತಿ ಗಣಪನ ಮೇಲೆ. ಮಿಕ್ಕವರದು ಬಹುತೇಕ ಮನೆಯಲ್ಲಿರುವ ಪೋಟೊ ಅಥವಾ ವಿಗ್ರಹಕ್ಕೆ ಮಾಡುವ ಅಲಂಕಾರ ಪೂಜೆಯಾದರೆ ಗಣಪನ ಪೂಜೆಗೆ ಮಾತ್ರ ಹೊಸದಾಗಿ ಮಾಡಿದ ಮಣ್ಣಿನ ವಿಗ್ರಹ ತಂದು, ಮಂಟಪದಲ್ಲಿರಿಸಿ, ಅಲಂಕರಿಸಿ ಪೂಜಿಸುವ ಹುಮ್ಮಸ್ಸು. ಸಾಲದೆಂಬಂತೆ ಒಂದು ದಿನದ ಬದಲು ಹಲವಾರು ದಿನ ಇಟ್ಟುಕೊಂಡು ಬಗೆ ಬಗೆಯ ಭಕ್ಷ್ಯ ಭೋಜ್ಯ ನೈವೇದ್ಯಗಳಿಟ್ಟು ಪೂಜಿಸುವ ಪ್ರೀತಿ – ಕೊನೆಗೆ ನೀರಿಗೆ ಒಯ್ದು ಮುಳುಗಿಸುವ ತನಕ..

ಅವನ ಸುತ್ತಲು ಕಟ್ಟಿದ ಕಥೆಗಳಿಗೆ ಲೆಕ್ಕವಿಲ್ಲ.. ಆನೆಯ ತಲೆ ಬಂದ ಕಥೆಯಿಂದ ಹಿಡಿದು, ಕೈಯಲ್ಲಿ ಮುರಿದ ದಂತ ಹಿಡಿದು ಏಕದಂತನಾದ ಕಥೆ, ಉದರದ ಉರಗಾಭರಣ ನೋಡಿ ನಕ್ಕ ಚಂದ್ರಣ್ಣನಿಗೆ ವೃದ್ಧಿ-ಕ್ಷಯದ ರಾಹು ಬಡಿಸಿ ಮಂಕು ಹಿಡಿಸಿದ ಕಥೆ, ‘ನಾಳೆ ಬಾ’ ಎಂದು ಶನಿದೇವನನ್ನು ಚಾತುರ್ಯದಿಂದ ಕಟ್ಟಿ ಹಾಕಿದ ಕತೆ, ಸೋದರ ಸುಬ್ರಮಣ್ಯನ ಜತೆಯ ಮೂರು ಲೋಕ ಸುತ್ತುವ ಸ್ಪರ್ಧೆಯಲ್ಲಿ ಚಾಣಾಕ್ಷತನದಿಂದ ಗೆಲುವು ಸಾಧಿಸಿದ ಕಥೆ, ರಾವಣನಿಂದ ಆತ್ಮ ಲಿಂಗ ಭೂಸ್ಥಾಪಿತವಾಗಿಸಲು ಹೂಡಿದ ಆಟದ ಕಥೆ, ಚೌತಿಯ ಚಂದ್ರನ ದರ್ಶನದಿಂದ ಶ್ರೀ ಕೃಷನೂ ಆರೋಪ ಅನುಭವಿಸಬೇಕಾಗಿ ಬಂದ ಶಮಂತಕ ಮಣಿಯ ಕಥೆ.. ಹೀಗೆ ಅಗಣಿತ ಬಗೆಯಲ್ಲಿ ನಮ್ಮ ಸ್ಮೃತಿಯಲ್ಲಿ ನೆಲೆಸಿ ಸದಾ ಸ್ಮರಣೆಯಲ್ಲಿರುವ ಬಗೆಯೆ ಅನನ್ಯ.. ಬಹುಶಃ ಅದರಿಂದಲೆ ಏನೊ, ಮೊದಲ ಪೂಜೆ ಅವನದೆಂಬ ಹೆಸರಿನಲ್ಲಿ ಅವನನ್ನು ಒಂದಿಲ್ಲೊಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೆ ಇರುವುದು.

ಈ ಆಧುನಿಕ ಯುಗದಲ್ಲು, ಅವನ ಒಂದೊಂದು ಅಂಗಕ್ಕು ಒಂದೊಂದು ವಿಶೇಷ ಸಾಂಕೇತಿಕ ವಿವರಣೆಯನ್ನೀವ ವಿಶ್ಲೇಷಣೆಗಳಿಗೇನು ಕೊರತೆಯಿಲ್ಲ. ಆಧುನಿಕ ಜೀವನದ ಪರಿ ಎಷ್ಟೆ ಮುಂದುವರೆದಂತಿದ್ದರು, ವಿಜ್ಞಾನ-ತಂತ್ರಜ್ಞಾನದ ಪರಿ ಎಷ್ಟೆ ಪ್ರಗತಿ ಸಾಧಿಸಿದರೂ – ಆ ಸಾಧನೆಯ ಅಡಿಗಲ್ಲಾಗಿಸುವಂತೆ ಗಣೇಶ ಪೂಜೆಯಿಂದಲೆ ಕಾರ್ಯ ಆರಂಭಿಸುವ ವೈವಿಧ್ಯಮಯ ಮನಸ್ಥಿತಿಯೆ ಹೇಳುತ್ತದೆ ಗಣಪನೆಷ್ಟು ಹಾಸುಹೊಕ್ಕಾಗಿದ್ದಾನೆ ನಮ್ಮಗಳ ಮನದಲ್ಲಿ ಎಂದು.

ಅವನ ಬರುವಿಕೆಯ ದಾರಿ ಕಾಯುತ್ತ, ವೈಭವಾದಿ ಸಂಭ್ರಮಗಳಿಂದ ಅವನ ಚತುರ್ಥಿಯನ್ನು ಆಚರಿಸಲು ಕಾತುರದಿಂದಿರುವ ಹಿರಿಯ, ಕಿರಿಯರೆಲ್ಲರಿಗು ಈ ಮೂಲಕ ವಿನಾಯಕ ಚತುರ್ಥಿಯ ಶುಭಾಶಯಗಳನ್ನು ಕೋರುತ್ತೇನೆ – ಈ ಪದ್ಯದ ಸ್ತುತಿಯ ಮೂಲಕ.

Ganesha festival

ಗಣೇಶ ಹಬ್ಬ ಭರ್ಜರಿ
ಮಾಡೋಣ ಬನ್ನಿ ಅದ್ದೂರಿ
ಗೌರಿಯ ಜತೆ ಗಣೇಶ ಗತ್ತೆ
ಜೊತೆಯಾಗೆ ತಾಯ್ಮಗ ಸಂತೆ ||

ತರಬೇಕಿಬ್ಬರ ಪ್ರತಿಮೆ
ಚಿಕ್ಕದೊ ದೊಡ್ಡದೊ ಭ್ರಮೆ
ಅವರಿವರಿಗಿಂತ ದೊಡ್ಡದಿರೆ ಸರಿ
ಸರೀಕರಲ್ಲಿ ಎದೆಯುಬ್ಬಿಸೊ ಪರಿ ||

ಇಡಲೊಂದು ಮಂಟಪ ಕಟ್ಟಿ
ಹೂಗಳ ಜತೆ ಸಿಂಗಾರ ಗಟ್ಟಿ
ನೇತು ಬಿಟ್ಟ ಫಳ ಫಳ ಫಳ
ಫಲಹಾರ ತೂಗಿತೇನೊ ಜಳ ||

ಕುಟ್ಟಿದ ಭತ್ತದಕ್ಕಿಯ ಹಾಸಿ
ಮೆತ್ತಗಿರಿಸೆ ಅಲುಗದ ಋಷಿ
ಕಟ್ಟಿ ಹಾರ ವಡೆ ಕಡುಬಲೆ ತಿದ್ದಿ
ಕಂಡ ಮೇಲು ಕೊಡದಿಹನೆ ಸಿದ್ದಿ? ||

ಅರಿಶಿನ ಕುಂಕುಮ ಗಂಧ ದೀಪ
ಮೂಷಿಕನ ಜತೆ ಕುಳಿತ ಗಣಪ
ವಿಚಾರಿಸಿಕೊಳುವನಂತೆ ಶಶಿಯ
ಉದರ ಬಿಗಿಯೆ ಉರಗಾಭರಣ ||

ವರ್ಷವೊಂದರ ಬಾಕಿ ಸಾಲ
ತೀರಿಸಲಂತೆ ಚತುರ್ಥಿ ಸಕಲ
ಮಾಡೆಲ್ಲ ಭಕ್ಷ್ಯ, ಭಕ್ತಿಯ ಲಕ್ಷ್ಯ
ನಮಿಸುತಲೆ ಆಸ್ವಾದಿಸುತವಶ್ಯ ||

ತುಟ್ಟಿಕಾಲದಲೆಷ್ಟು ದಿನ ಲೆಕ್ಕ
ಪಾಪ ಗಣಪಗು ಮನೆ ಜ್ಞಾಪಕ
ಮುಗಿಸಿ ಮುಳುಗಿಸಲೆಲ್ಲ ಮುಕ್ತಾಯ
ಪ್ರಸ್ತುತ ವರ್ಷದ ಸುಂಕ ಸಂದಾಯ ||


 – ನಾಗೇಶ, ಮೈಸೂರು

.

Follow

Get every new post on this blog delivered to your Inbox.

Join other followers: