ಬಾತುಕೋಳಿ…ಮನ್ ಕೀ ಬಾತ್
ದೂರದ ಲಂಡನ್ ನಗರದಲ್ಲಿನ ಒಬ್ಬಂಟಿ ಜೀವನ ತುಂಬಾ ಬೇಜಾರಾಗಿತ್ತು. ಕೆಲಸದ ಒತ್ತಡದ ನಡುವೆ ಹಗಲು ಕಳೆದು ಹೋಗುತ್ತಿದ್ದರೂ ರಾತ್ರ್ರಿ ಹೊತ್ತು ಯಾವುದೋ ರೀತಿಯ ಖಿನ್ನತೆ ಮನಸ್ಸನ್ನು ನೋಯಿಸುತ್ತಿತ್ತು.
ಪಕ್ಕದ ಕೋಣೆಯಲ್ಲಿ ವಾಸಮಾಡುತ್ತಿದ್ದವನು ಲೂಯಿಸ್ ದೂರದ ಸ್ಕಾಟ್ ಲ್ಯಾಂಡ್ ನವನು. ರಾತ್ರಿಯಾದರೆ ಹಾಡು ಕೇಳುತ್ತಾ ಕ್ಯಾಂಡಲ್ ಬೆಳಕಿನಲ್ಲಿ ಸ್ಕಾಚ್ ಹೀರುವ ಕೆಲಸ ಅವನದ್ದು. ಬಹುಶಃ ಅವನ ದುಡಿತ ಕುಡಿತಕ್ಕೂ ಸಾಕಾಗುತ್ತಿರಲಿಲ್ಲವೋ ಏನೋ . ಕಛೇರಿಯ ಕೆಲಸ ಮುಗಿಸಿ ಬಂದೊಡನೆ ನಾನು ನೇರವಾಗಿ ಒಂದೆರಡು ಕಿಲೋಮೀಟರ್ ವಾಕ್ ಹೋಗುತ್ತಿದ್ದೆ . ನಂತರ ಸ್ನಾನ. ಸ್ವಂತ ಅಡಿಗೆ. ಮನಸ್ಸಿಗೆ ಮುದ ನೀಡುತ್ತಿದ್ದರೂ ಒಳಗಿಂದೊಳಗೆ ಏನೋ ಕಳೆದು ಹೋದ ಭಾವ .
ಕೊನೆಗೆ ಎರಡು ಬಾತುಕೋಳಿಗಳು ಇಷ್ಟವಾಗಿತ್ತು . ಜೊತೆ ಬಾತುಕೋಳಿಗಳನ್ನು ಮೂವತ್ತು ಪೌಂಡ್ ಕೊಟ್ಟು ಖರೀದಿಸಿದೆ. ಅದಕ್ಕಾಗಿ ಮನೆಯೆದುರಿನ ಮರದ ಬುಡದಲ್ಲಿ ಒಂದು ಚಿಕ್ಕ ಪಾಂಡ್ ಮಾಡಿದೆ . ಅದರಲ್ಲಿ ಈಜಲು ಸಹಾಯವಾಗುವಂತೆ ನೀರನ್ನು ತುಂಬಿಸಿದೆ . ಮರದ ತುಂಡಿನಿಂದ ಗೂಡು ತಯಾರಿಸಿದೆ .. ಗೆಳೆಯ ಲೂಯೀಸ್ ಕೂಡ ಜೊತೆಗಿದ್ದು ಸಹಾಯ ಮಾಡಿದ್ದ. ಊರಿನಂತೆ ಬೀದಿನಾಯಿ ಕಾಟ ಇಲ್ಲದಕಾರಣ ಅವುಗಳು ಸ್ವತಂತ್ರವಾಗಿ ಅತ್ತಿತ್ತ ನಡೆದು ಸಂಭ್ರಮಿಸುತ್ತಿದ್ದುವು . ಆದರೂ ನಾನು ಮರದ ಸುತ್ತ ಅಂದರೆ ಕೃತಕ ಪಾಂಡ್ ನ ಸುತ್ತಲೂ ಬೇಲಿಯಂತೆ ನಿರ್ಮಿಸಿದ್ದೆ. ಬೆಳಗ್ಗೆ ಕಛೇರಿಗೆ ಹೋಗುವಾಗ ಹಾಗು ಸಂಜೆ ಮನೆಗೆ ಬಂದಾಗ ಅವುಗಳಿಗೆ ಫುಡ್ ಹಾಕುತ್ತಿದ್ದೆ . ಈ ನಡುವೆ ಅವುಗಳು ಅತ್ತಿತ್ತ ಓಡಾಡುತ್ತಾ, ಪಾಂಡ್ ನಲ್ಲಿ ಈಜುತ್ತಾ ಕಾಲ ಕಳೆಯುತ್ತಿತ್ತು .
ಒಂದುದಿನ ಸಂಜೆ ಮನೆಯತ್ತ ಬರುವಾಗ ನಾಲ್ಕೈದು ಚಿಕ್ಕ ಮಕ್ಕಳು ಅವುಗಳ ಜೊತೆ ಆಟವಾಡುತ್ತಿದ್ದರು. ಅಂದಿನ ವರೆಗೆ ನನ್ನ ಪಕ್ಕದ ಮನೆಯಲ್ಲಿ ಚಿಕ್ಕ ಹುಡುಗರು ಇರುವರು ಎಂಬುದು ನನಗೆ ತಿಳಿದೇ ಇರಲಿಲ್ಲ ! ನಂತರದ ದಿನಗಳಲ್ಲಿ ಆ ಮಕ್ಕಳೂ ಅವುಗಳಿಗೆ ಆಹಾರ ತಂದು ಕೊಡಲು ಪ್ರಾರಂಭಿಸಿದ್ದರು. ಈ ಬಾತುಕೋಳಿ ಸಹವಾಸದಿಂದ ನೆರೆಮನೆಯವರೂ ತುಂಬಾ ಹತ್ತಿರವಾಗಿಬಿಟ್ಟಿದ್ದರು. ದಿನಗಳು ಉರುಳುತ್ತಲೇ ಇತ್ತು.. ನಾನು ಖಿನ್ನತೆಯಿಂದ ಸ್ವಲ್ಪ ಸಾವರಿಸಿಕೊಂಡಿದ್ದೆ .
ಹೀಗಿರಲು ಒಂದು ದಿನ ನನಗೆ ದುಬಾಯಿಯ ಕಚೇರಿಯಿಂದ ಇ ಮೇಲ್ ಸಂದೇಶ ಬಂದಿತ್ತು. ಅದರಲ್ಲಿ ತಿಳಿಸಿದಂತೆ ಇನ್ನು ಕೇವಲ ಇಪ್ಪತ್ತು ದಿನ ಮಾತ್ರ ಇಲ್ಲಿರಬೇಕಿತ್ತು . ನಂತರ ವಾಪಸ್ ದುಬೈಗೆ ಹಿಂತಿರುಗಬೇಕು! ಇಲ್ಲಿನ ಬದುಕನ್ನು ಆಸ್ವಾದಿಸಲು ಪ್ರಾರಂಭಿಸಿದ್ದಷ್ಟೇ. ಬುಲಾವ್ ಬಂದಿತ್ತು. ಹೀಗೆಯೇ ಯೋಚಿಸುತ್ತಿರಲು ಮರುದಿನ ನೆರೆಮನೆಯ ಮಕ್ಕಳ ಅಮ್ಮ ಬಂದು ನನ್ನಲ್ಲಿ ಮಾತನಾಡಿಸಿದ್ದಳು. ನಾಳಿದ್ದು ಭಾನುವಾರ ನಮ್ಮ ಎರಡನೇ ಮಗನ ಹುಟ್ಟು ಹಬ್ಬ . ನೀವಿಬ್ಬರೂ (ನಾನು ಮತ್ತು ಲೂಯೀಸ್) ಬರಬೇಕೆಂದು ಆಮಂತ್ರಣ ನೀಡಿದ್ದರು . ನನಗಂತೂ ಬಿಸಿತುಪ್ಪ ಬಾಯಲ್ಲಿ ಹಾಕಿದ ಅನುಭವ. ಅತ್ತ ಇಲ್ಲ ಅನ್ನಲಾಗದು . ಹೋಗಲೂ ಸಂಕೋಚ . ಸಂಕೋಚಕ್ಕೆ ಮೊದಲ ಕಾರಣ ಅವರ ಆಹಾರ ವ್ಯವಸ್ತೆ ಅಷ್ಟೇ. ಮಧ್ಯ , ಹಂದಿ ಮಾಂಸ ಇವೆರಡೂ ಮನಸ್ಸಿನಲ್ಲಿ ಬಂದಾಗ ಹೋಗುವುದೇ ಬೇಡವೆಂದು ತೀರ್ಮಾನಿಸಿ ಸುಮ್ಮನಾದೆ.
ಆದರೆ ಗೆಳೆಯ ಲೂಯೀಸ್ ಸುಮ್ಮನಾಗಲಿಲ್ಲ. ನನ್ನನ್ನು ಜೊತೆ ಸೇರಿಸಿಯೇ ಹೋಗುವುದು ಎಂಬುದನ್ನು ನಿರ್ಧರಿಸಿಯೇ ಬಿಟ್ಟಿದ್ದ! ಭಾನುವಾರ ಬಂದಿತ್ತು . ಅಂತೂ ಬರಿಗಯ್ಯಲ್ಲಿ ಹೋಗುವುದಾದರೂ ಹೇಗೆ. ಎನ್ನುವ ಪ್ರಶ್ನೆ ಮುಂದಿನದು . ಥಟ್ಟನೆ ನೆನಪಾದುದು ಬಾತುಕೋಳಿ ! ನಾನು ಇನ್ನು ಇಲ್ಲಿರುವುದು ಕೇವಲ ಎರಡು ವಾರ . ಮಕ್ಕಳಿಗಾದರೋ ಬಾತುಕೋಳಿ ಅಚ್ಚುಮೆಚ್ಚು . ಅವರೂ ಖುಷಿ ಪಡುತ್ತಾರೆ . ಎಂದು ಭಾವಿಸಿ ನಾವಿಬ್ಬರೂ ಆ ದಿನದ ಸಂಜೆ ಒಂದು ಬಾಕ್ಸ್ ನಲ್ಲಿ ಮೇಲ್ಗಡೆ ತೂತು ಮಾಡಿ ಅದರೊಳಗೆ ಈ ಬಾತುಕೋಳಿಗಳನ್ನು ತುರುಕಿಸಿ ತಯಾರಿ ನಡೆಸಿದೆವು . ರಾತ್ರಿ ಗೆಳೆಯನೊಂದಿಗೆ ಪೆಟ್ಟಿಗೆ ಹಿಡಿದು ಅವರ ಮನೆಯತ್ತ ಹೊರಟೆವು. ಅವರ ಸಂತೋಷದಲ್ಲಿ ನಾವೂ ಭಾಗಿಯಾದೆವು .ಬರ್ತ್ಡೇ ಬಾಯ್ ಅಲ್ಬರ್ಟ್ ನ ಕೈಗೆ ಬಾಕ್ಸ್ ಇತ್ತೆವು . ಅವನಿಗೋ ಖುಷಿಯೋ ಖುಷಿ . ನಮಗೂ … ಅಲ್ಲಿ ಕೇಕ್ ಮಾತ್ರ ತಿಂದು ಅವರೊಂದಿಗೆ ಕೆಲವು ಕ್ಷಣ ಕಳೆದು ನಮ್ಮ ಮನೆಯತ್ತ ಹೊರಟಿದ್ದೆವು .
– ಕೆ. ಎ. ಎಂ. ಅನ್ಸಾರಿ